ಕಾನೂನು ಅರಿವಿದ್ದವರಿಂದಲೇ ಕಾನೂನು ಉಲ್ಲಂಘನೆ -ನ್ಯಾ: ಜಯಂತ ಕುಮಾರ್ ಬೇಸರ

ತುಮಕೂರು ಃ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಜಿಲ್ಲೆಯ ಹಳ್ಳಿ-ಹಳ್ಳಿಗಳಿಗೆ ಭೇಟಿ ನೀಡಿ ಜನರಲ್ಲಿ ಕಾನೂನು ಅರಿವು ಮೂಡಿಸಲಾಗುತ್ತಿದೆಯಾದರೂ ಜನರಲ್ಲಿ ಇನ್ನೂ ಕಾನೂನು ಪ್ರಜ್ಞೆ ಬಂದಿಲ್ಲ. ಆದರೆ ಕಾನೂನು ಅರಿವಿದ್ದವರು ಕಾನೂನು ಉಲ್ಲಂಘನೆಯಲ್ಲಿ ತೊಡಗಿಕೊಳ್ಳುವುದು ಹೆಚ್ಚಾಗುತ್ತಿರುವುದು ಬೇಸರದ ಸಂಗತಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ಜಯಂತ ಕುಮಾರ್ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಕಾನೂನು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಾನೂನು ವಿದ್ಯಾರ್ಥಿಗಳು ತರಗತಿಯಲ್ಲಿ ಕಲಿಯುವ ಜೊತೆ ಜೊತೆಗೆ ಅನುಭವಾತ್ಮಕ ಕಲಿಕೆಯನ್ನೂ ಹೊಂದಬೇಕು. ಕಾನೂನಿನ ವ್ಯಾಖ್ಯಾನವನ್ನು ಅರ್ಥಮಾಡಿಕೊಂಡಾಗ ಮಾತ್ರ ತಮ್ಮ ಕಕ್ಷಿದಾರರಿಗೆ ನ್ಯಾಯ ದೊರೆಕಿಸಿಕೊಡಲು ಸಾಧ್ಯ. ನ್ಯಾಯಾಲಯದಲ್ಲಿ ವಾದ ಮಂಡಿಸುವ ಮುನ್ನ ವ್ಯಾಜ್ಯ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ, ಪುರಾವೆಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಬೇಕು. ಪೂರ್ವಸಿದ್ಧತೆಗಳಿಲ್ಲದೆ ವಾದ ಮಂಡಿಸಲು ಸಾಧ್ಯವಿಲ್ಲವೆಂದರಲ್ಲದೆ ವಿದ್ಯಾರ್ಥಿ ಜೀವನದಲ್ಲಿ ಪಠ್ಯದೊಂದಿಗೆ ಆಧ್ಯಾತ್ಮಿಕತೆಯನ್ನು ರೂಢಿಸಿಕೊಳ್ಳಬೇಕು. ಇದರಿಂದ ತಾಳ್ಮೆ, ಸಹನೆ, ಕ್ರಿಯಾಶೀಲತೆ ಹೆಚ್ಚುತ್ತದೆ. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಈ ನಿಟ್ಟಿನಲ್ಲಿ ಶ್ರದ್ಧೆಯಿಂದ ಕಲಿತು ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡುವ ಕಾರ್ಯ ಮಾಡಬೇಕು ಎಂದು ಭಾವಿ ವಕೀಲರಿಗೆ ಕಿವಿ ಮಾತು ಹೇಳಿದರು.

ಕಕ್ಷಿದಾರರ ವ್ಯಾಜ್ಯಗಳಿಗೆ ಕಾರಣಗಳನ್ನು ತಿಳಿದಾಗ ಮಾತ್ರ ಪ್ರಕರಣಗಳ ಇತ್ಯರ್ಥಕ್ಕೆ ಸುಲಭವಾಗುತ್ತದೆ. ಎಲ್ಲ ವ್ಯಾಜ್ಯ ಪ್ರಕರಣಗಳನ್ನು ಒಂದೇ ರೀತಿಯಲ್ಲಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ವಕೀಲರು ವ್ಯಾಜ್ಯಗಳ ಹಿನ್ನೆಲೆ, ಕಾರಣಗಳನ್ನು ಅರ್ಥ ಮಾಡಿಕೊಂಡು ಪ್ರಕರಣಗಳನ್ನು ನಡೆಸಬೇಕು. ಹಣದಾಸೆಗೆ ಕೆಲವೊಮ್ಮೆ ದಾಖಲೆಗಳು ಕಕ್ಷಿದಾರರ ವಿರುದ್ಧವಿದ್ದರೂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತದೆ. ವಕೀಲರು ತನ್ನ ಕಕ್ಷಿದಾರನಿಗೆ ನ್ಯಾಯ ದೊರಕಿಸಿಕೊಟ್ಟಾಗ ಮಾತ್ರ ಕಾನೂನು ಕಲಿಕೆ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ರಾಜ್ಯದಲ್ಲಿ 1995ರ ನವೆಂಬರ್ 9ರಂದು ಕಾನೂನು ಸೇವಾ ಪ್ರಾಧಿಕಾರ ಜಾರಿಗೆ ಬಂದಿದ್ದು, ಪ್ರಾಧಿಕಾರದಿಂದ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಲಾಗುತ್ತಿದೆ. ಹಲವಾರು ವರ್ಷಗಳಿಂದ ಇತ್ಯರ್ಥವಾಗದ ವ್ಯಾಜ್ಯ ಪ್ರಕರಣಗಳನ್ನು ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ ಎಂದು ಕಾನೂನು ಸೇವಾ ಪ್ರಾಧಿಕಾರದ ಕಾರ್ಯವಿಧಾನಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕಾನೂನು ಸೇವೆ ಸಿಗಬೇಕು. ಕಾನೂನು ಅರಿವಿನ ಕೊರತೆಯಿಂದ ಅಮಾಯಕರು ಬಲಿಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಕಾನೂನು ಅರಿವಿನ ಅಗತ್ಯವಿದೆ ಎಂದು ತಿಳಿಸಿದರು.

ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಎನ್. ಮುನಿರಾಜು ಮಾತನಾಡಿ, ಕಾನೂನು ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು. ಭಾರತದ ಪ್ರತಿಯೊಬ್ಬ ಪ್ರಜೆಗೂ ಕಾನೂನು ಅರಿವು ಮೂಡಿಸುವುದು ಕಾನೂನು ಸೇವಾ ಪ್ರಾಧಿಕಾರದ ಉದ್ದೇಶವೆಂದು ಹೇಳಿದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಮಾತನಾಡಿ 1780ರಲ್ಲಿ ಸ್ವಾತಂತ್ರ್ಯ ಪೂರ್ವ ಬ್ರಿಟಿμï ಆಡಳಿತದಲ್ಲಿ ಲಾರ್ಡ್ ಕಾರ್ನ್‍ವಾಲಿಸ್ ಅವರ ನೇತೃತ್ವದಲ್ಲಿ ಕ್ರಿಮಿನಲ್ ಕೇಸ್‍ಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಆರೋಪಿಗಳಿಗೆ ಉಚಿತ ಕಾನೂನು ನೆರವು ನೀಡುವ, 1949ರ ಬಾಂಬೆ ಕಮಿಟಿ, 1949ರ ಪಶ್ಚಿಮ ಬಂಗಾಳದ ಟ್ರೇವರ್ ಹ್ಯಾರಿಸ್ ಸಮಿತಿ, 1958ರ ಬಡವರಿಗೆ ಕೇರಳ ಕಾನೂನು ನೆರವು ನಿಯಮಗಳು, 1960ರ ಕೇಂದ್ರ ಸರ್ಕಾರದ ಯೋಜನೆ, 1962ರ ಮೂರನೇ ಭಾರತೀಯ ವಕೀಲರ ಸಮಾವೇಶ, 1987ರಲ್ಲಿ ಸವೋಚ್ಛ ನ್ಯಾಯಾಲಯ ಜಾರಿಗೆ ತಂದ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ 2ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್. ಅನಂತ, ವಿವಿಧ ಕಾನೂನು ಕಾಲೇಜುಗಳ ಪ್ರಾಂಶುಪಾಲರು/ಉಪಪ್ರಾಂಶುಪಾಲರು, ಹಿರಿಯ ವಕೀಲರು, ಕಾನೂನು ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *