ತುಮಕೂರು: ಮಲಗಿದ್ದ ಭಾರತವನ್ನು ಬಡಿದೆಬ್ಬಿಸಲು, ವಿವೇಕ-ವಿವೇಚನೆಯನ್ನು ಕಲಿಸಲು, ತ್ಯಾಗದ ಮೌಲ್ಯವನ್ನು ಎತ್ತಿ ತೋರಿಸಲು, ಯುವಶಕ್ತಿಯನ್ನು ಪ್ರಯತ್ನಶೀಲರನ್ನಾಗಿಸಲು ವಿವೇಕಾನಂದರು ಪ್ರೇರೇಪಿಸಿದರು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತೀ ಸ್ವಾಮೀಜಿ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಪೀಠ ಶುಕ್ರವಾರ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವಶಕ್ತಿ ತಮ್ಮ ಆಲೋಚನೆಗಳನ್ನು ಸಕಾರಾತ್ಮಕವಾಗಿ, ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳುವ ಛಲವಿರಬೇಕು. ಯುವಕರಿಗೆ ವರವೆಂದರೆ ಬೇಗನೆ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಶಕ್ತಿ. ಶಾಪವೆಂದರೆ ಒಳ್ಳೆಯ ವಿಚಾರಗಳಿಗೆ ಕಿವಿಮುಚ್ಚಿ ಕೂರುವುದು. ಯುವಕರು ಭವಿಷ್ಯ ಭಾರತದ ಮಾನವ ಸಂಪನ್ಮೂಲವಾಗಬೇಕು. ಜೀವನಾನುಭವಗಳನ್ನು ಪುಸ್ತಕದಲ್ಲಿ ಬರೆದಿಟ್ಟಾಗ ನಿಮ್ಮ ಬದುಕಿಗೆ ನೀವೇ ಸ್ಫೂರ್ತಿಯಾಗುತ್ತೀರಿ ಎಂದರು.
ಹಸಿದವನಿಗೆ ಮೀನು ಕೊಡುವ ಬದಲು ಮೀನು ಹಿಡಿಯುವ ನೈತಿಕ ಶಕ್ತಿಯನ್ನು, ಮೌಲ್ಯವನ್ನು ಕಲಿಸಿದಾಗ ಮಾನವ ಮಿತ್ರರಾಗಬಹುದು. ವಿವೇಕಾನಂದರು ಹೇಳುವ ಹಾಗೆ, ‘ಆತ್ಮಶಕ್ತಿ, ಆತ್ಮವಿಶ್ವಾಸ, ಆತ್ಮಗೌರವ, ಸ್ವಾಭಿಮಾನ, ಸ್ವಾವಲಂಬನೆ, ವ್ಯಕ್ತಿತ್ವಶಕ್ತಿಯನ್ನು ಬೆಳೆಸಿಕೊಂಡ ಯುವಕ ಯಾವ ದುಷ್ಟ ಶಕ್ತಿಗೂ ಎದೆಗುಂದಲಾರ’. ವಿವೇಕಾನಂದರು ಕೊಟ್ಟ ರಾಷ್ಟ್ರೀಯತೆಯು ಉತ್ಕøಷ್ಟವಾದ ಅಂತಾರಾಷ್ಟ್ರೀಯತೆಯಾಯಿತು ಎಂದು ತಿಳಿಸಿದರು.
ವಿವಿ ಕುಲಸಚಿವೆ ನಾಹಿದಾ ಜûಮ್ ಜûಮ್ ಮಾತನಾಡಿ, ತನ್ನನ್ನು ತಾನು ದುರ್ಬಲ ಎಂದುಕೊಳ್ಳಬಾರದು. ಸೋಲಿಗೆ ಅಂಜಬಾರದು. ಯುವಶಕ್ತಿಯ ನಡೆ ಆದರ್ಶಗಳ ಕಡೆಗಿರಬೇಕು. ಏಕಾಗ್ರತೆಯೊಂದಿದ್ದರೆ ಮಾಡುವ ಕಾರ್ಯದಲ್ಲಿ ಯಶಸ್ಸು ನಮ್ಮದಾಗುತ್ತದೆ. ಸಿಂಹದಂತ ಗಾಂಭೀರ್ಯವಿರಬೇಕು. ಗುರಿ ಮುಟ್ಟುವ ಹಸಿವಿರಬೇಕು. ಶಕ್ತಿಯೇ ಬದುಕು, ದುರ್ಬಲತೆಯೇ ಸಾವು ಎಂದು ಹೇಳಿದರು.
ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚರಣೆ ಹಾಗೂ ರಾಷ್ಟ್ರೀಯ ಯುವದಿನಾಚರಣೆ ಅಂಗವಾಗಿ ವಿವಿಯ ಸ್ನಾತಕ, ಸ್ನಾತಕೋತ್ತರ ವಿಭಾಗಗಳ ವಿದ್ಯಾರ್ಥಿಗಳಿಗೆ ‘ಸದೃಢ ಭಾರತ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ – ಸ್ವಾಮಿ ವಿವೇಕಾನಂದರ ಚಿಂತನೆಯ ಬೆಳಕಿನಲ್ಲಿ’ ಕುರಿತ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯನ್ನು ಆಯೋಜಿಸಿಲಾಗಿತ್ತು.
ಸ್ನಾತಕೋತ್ತರ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ತುಮಕೂರು ವಿವಿಯ ಜಯರಾಮ್ ಪ್ರಥಮ ಸ್ಥಾನ, ಅರ್ಥಶಾಸ್ತ್ರ ವಿಭಾಗದ ದೀಪಿಕ ದ್ವಿತೀಯ ಸ್ಥಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸುಪ್ರೀತ ಎಸ್. ಕೆ. ತೃತೀಯ ಸ್ಥಾನ ಪಡೆದರು.
ಸ್ನಾತಕೋತ್ತರ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ವಿವಿ ಜೀವತಂತ್ರಜ್ಞಾನ ವಿಭಾಗದ ದರ್ಶನ್ ಪ್ರಥಮ ಸ್ಥಾನ, ಕಂಪ್ಯೂಟರ್ ಸೈನ್ಸ್ ವಿಭಾಗದ ಲಾವಣ್ಯ ದ್ವಿತೀಯ ಸ್ಥಾನ, ಪ್ರಾಣಿಶಾಸ್ತ್ರ ವಿಭಾಗದ ಅರ್ಪಿತ ತೃತೀಯ ಸ್ಥಾನ ಪಡೆದರು.
ಸ್ನಾತಕ ವಿಭಾಗದ ಭಾಷಣ ಸ್ಪರ್ಧೆಯಲ್ಲಿ ಪಾವಗಡ ಸರ್ಕಾರಿ ಕಾಲೇಜಿನ ಅಬೂಬಕ್ಕರ್ ಸಿದ್ದೀಕಿ ಪ್ರಥಮ ಸ್ಥಾನ, ವಿವಿ ಕಲಾ ಕಾಲೇಜಿನ ಸವಿತಾ ಎಂ. ದ್ವಿತೀಯ ಸ್ಥಾನ, ವಿವಿ ವಿಜ್ಞಾನ ಕಾಲೇಜಿನ ಲಿಖಿತಾ ಬಿ. ಎಸ್. ತೃತೀಯ ಸ್ಥಾನ ಪಡೆದರು.
ಸ್ನಾತಕ ವಿಭಾಗದ ಪ್ರಬಂಧ ಸ್ಪರ್ಧೆಯಲ್ಲಿ ಪಾವಗಡ ಸರ್ಕಾರಿ ಕಾಲೇಜಿನ ರಾಹುಲ್ ನಾಯ್ಕ್ ಪ್ರಥಮ ಸ್ಥಾನ, ತಿಪಟೂರಿನ ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನ ಚರಣ್ ರಾಜ್ ದ್ವಿತೀಯ ಸ್ಥಾನ, ಕುಣಿಗಲ್ ಸರ್ಕಾರಿ ಕಾಲೇಜಿನ ಸಮೀನಾ ಬಾನು ತೃತೀಯ ಸ್ಥಾನ ಪಡೆದರು.
ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್ ಕೆ., ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಂಯೋಜಕ ಡಾ. ಚೇತನ್ ಪ್ರತಾಪ್ ಕೆ. ಎನ್. ಉಪಸ್ಥಿತರಿದ್ದರು.