ತುಮಕೂರು : ಮತದಾನ ಒಂದು ಪವಿತ್ರ ಕಾರ್ಯವಾಗಿದ್ದು, ಅರ್ಹ ಮತದಾರರೆಲ್ಲರೂ ಏಪ್ರಿಲ್ 26ರಂದು ತಪ್ಪದೇ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬೇಕೆಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್. ವಸ್ತ್ರದ್ ಅವರು ಕರೆ ನೀಡಿದರು.
ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯದಲ್ಲಿಂದು ಜಿಲ್ಲಾಡಳಿತ, ಸ್ವೀಪ್ ಸಮಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕೆಯುಡಬ್ಲ್ಯೂಜೆ ತುಮಕೂರು ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಚುನಾವಣಾ ಅರಿವು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಾ, ಮತದಾನದ ದಿನ ಮತಗಟ್ಟೆಗೆ ಹೋಗುವ ಮುನ್ನ ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಚುನಾವಣಾ ಆಯೋಗ ಗುರುತಿಸಿರುವ ಗುರುತಿನ ಚೀಟಿಯನ್ನು ತೋರಿಸಿ ಮತದಾನ ಮಾಡಬಹುದಾಗಿದೆ ಎಂದು ತಿಳಿಸಿದರು.
ಏಪ್ರಿಲ್ 26ರಂದು ಬೆಳಿಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ಮತಗಟ್ಟೆಗಳಲ್ಲಿ ಮತದಾರರಿಗೆ ಅನುಕೂಲ ಆಗುವ ರೀತಿಯಲ್ಲಿ ಮತಗಟ್ಟೆಗಳನ್ನು ನಿರ್ಮಾಣ ಮಾಡಲಾಗಿದ್ದು, ಸಕಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಚುನಾವಣಾ ಸಂಬಂಧಿತ ಯಾವುದೇ ದೂರನ್ನು 1950ಗೆ ಕರೆ ಮಾಡುವ ಮೂಲಕ ಸಲ್ಲಿಸಬಹುದು ಮತ್ತು ಸಮಸ್ಯೆ ನಿವಾರಿಸಿಕೊಳ್ಳಬಹುದು ಎಂದು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಕಳೆದ ಬಾರಿ ಶೇ.79ರಷ್ಟು ಮತದಾನವಾಗಿದ್ದು, ಈ ಬಾರಿ ಶೇ.85ಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗುವ ರೀತಿಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಕೋರಿದರು.
ಜಿಲ್ಲಾ ಪಂಚಾಯತ್ ಸಿಇಓ ಪ್ರಭು ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಅತಿ ಮುಖ್ಯವಾಗಿದ್ದು, ಸದೃಢ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮತದಾನ ಮಾಡುವಂತೆ ಕರೆ ನೀಡಿದರು.
ಅರ್ಥಪೂರ್ಣ ಚುನಾವಣೆ ಹಾಗೂ ಚುನಾವಣಾ ಸಂದರ್ಭದಲ್ಲಿ ಮಾಧ್ಯಮಗಳ ಹೊಣೆಗಾರಿಕೆ ಕುರಿತು ಪತ್ರಕರ್ತರಿಗೆ ಅರಿವು ಮೂಡಿಸುವ ಸಲುವಾಗಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಮ್ಮ ಜಿಲ್ಲೆಯಲ್ಲಿ ಮತದಾನ ಪ್ರಮಾಣವನ್ನು ಶೇ.85ಕ್ಕೂ ಹೆಚ್ಚಿಗೆ ಆಗುವ ರೀತಿಯಲ್ಲಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಲಾಗುತ್ತಿದೆ. ಸ್ವೀಪ್ ವತಿಯಿಂದ ಜಿಲ್ಲೆಯಲ್ಲಿ ನಿರಂತರವಾಗಿ ಅರಿವು, ಜಾಥಾ, ಟ್ಯಾಬ್ಲೋ ಪ್ರದರ್ಶನ, ವಿವಿಧ ಇಲಾಖೆಗಳಿಂದ ಸ್ವೀಪ್ ಚಟುವಟಿಕೆ ನಡೆಸಲಾಗುತ್ತಿದ್ದು, 4 ಹಂತದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಜಿಲ್ಲೆಯ ನಾಲ್ಕೂವರೆ ಲಕ್ಷ ಮಕ್ಕಳು ತಪ್ಪದೇ ಮತದಾನ ಮಾಡುವಂತೆ ಕೋರಿ ತಮ್ಮ ಪೋಷಕರಿಗೆ ಪತ್ರವನ್ನು ಬರೆದಿರುತ್ತಾರೆ. ಜಿಲ್ಲೆಯ ಅಂದಾಜು 22.77 ಲಕ್ಷ ಮತದಾರರು ಮತ ಚಲಾಯಿಸಲು ಅನುವಾಗುವಂತೆ 2618 ಮತಗಟ್ಟೆಗಳ ನಿರ್ಮಾಣ ಮಾಡಲಾಗಿದ್ದು, ಮತದಾರ ಸ್ನೇಹಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದರು.
ಪಾಲಿಕೆ ಆಯುಕ್ತೆ ಅಶ್ವಿಜ ಅವರು ಮಾತನಾಡಿ, ನಮ್ಮ ದೇಶದಲ್ಲಿ ಮಹಿಳೆಯರಿಗೂ ಸಹ ಮತದಾನದ ಹಕ್ಕನ್ನು ನೀಡಲಾಗಿದೆ. ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ಬಂದು ಮತ ಚಲಾಯಿಸಬೇಕು. ಏಪ್ರಿಲ್ 26ರಂದು ಹಬ್ಬದ ರೀತಿಯಲ್ಲಿ ಮತದಾರರು ಮತದಾನ ಮಾಡಬೇಕು ಎಂದು ಕರೆ ನೀಡಿದರು.
ನಮ್ಮ ಜಿಲ್ಲೆಯಲ್ಲಿ ಏಪ್ರಿಲ್ 21ರಂದು “ನಮ್ಮ ನಡೆ-ಮತಗಟ್ಟೆ ಕಡೆ” ಹಾಗೂ ಏಪ್ರಿಲ್ 24ರಂದು “ನನ್ನ ಮತಗಟ್ಟೆ ಸುಂದರ ಮತಗಟ್ಟೆ”ಎನ್ನುವ ಮತಗಟ್ಟೆಗಳನ್ನು ಸೌಂದರ್ಯೀಕರಣಗೊಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಕೆಯುಡಬ್ಲ್ಯೂಜೆ ತುಮಕೂರು ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಹಿರಿಯ ಪತ್ರಕರ್ತರಾದ ಚಿ.ನಿ.ಪುರುಷೋತ್ತಮ್ ಅವರು ಮಾತನಾಡಿ, ಮತದಾನ ಒಂದು ಪವಿತ್ರ ಕಾರ್ಯಕ್ರಮ. ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರಾದ ನಮ್ಮ ಮೇಲೆ ಹೆಚ್ಚಿನ ಹೊಣೆಗಾರಿಕೆ ಇರುತ್ತದೆ. ಪ್ರತಿಯೊಬ್ಬರು ಮನೆಯಿಂದ ಹೊರಬಂದು ಮತಚಲಾಯಿಸಬೇಕು. ನಮ್ಮ ಜಿಲ್ಲೆಯಲ್ಲಿ ಶೇ.100ರಷ್ಟು ಮತದಾನದ ಗುರಿಯನ್ನು ಸ್ವೀಪ್ ಸಮಿತಿ ಹೊಂದಿದ್ದು, ಪತ್ರಕರ್ತರಾದ ನಾವು ಮತದಾನದ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭ ತುಮಕೂರು ಲೋಕಸಭಾ ಚುನಾವಣಾ-2024 ಲಾಂಛನ ‘ಕಲ್ಪ’ವನ್ನು ಬಿಡುಗಡೆ ಮಾಡಲಾಯಿತು. ನಂತರ ನಡೆದ ಕಾರ್ಯಾಗಾರದಲ್ಲಿ ನುರಿತ ಚುನಾವಣಾ ತರಬೇತುದಾರರಿಂದ ಎಂಸಿಎಂಸಿ ಸಮಿತಿ, ಪೇಯ್ಡ್ ನ್ಯೂಸ್, ಮಾದರಿ ನೀತಿ ಸಂಹಿತೆ ಕುರಿತಂತೆ ಪತ್ರಕರ್ತರಿಗೆ ಸಮಗ್ರವಾಗಿ ಮಾಹಿತಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ವಾರ್ತಾಧಿಕಾರಿ ಎಂ.ಆರ್.ಮಮತ, ಪತ್ರಕರ್ತರಾದ ರಘುರಾಮ್, ಕೃಷಿ ಇಲಾಖೆ ಉಪನಿರ್ದೇಶಕ ಅಶೋಕ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.