ಬುದ್ಧನ ಬಗ್ಗೆ ಓದಬಹುದು; ಮಾತನಾಡಬಹುದು; ಬರೆಯಬಹುದು; ಬುದ್ಧ ಮಾರ್ಗದಲ್ಲಿ ನಡೆಯುವುದಿದೆಯಲ್ಲಾ ಅದು ಬಹಳ ಕಷ್ಟದ ಕೆಲಸ.
ಬುದ್ಧನ ಬಗ್ಗೆ ಓದಿ,ಬರೆದು,ಭಾಷಣ ಮಾಡುವ ವ್ಯಕ್ತಿಗಳು ಪುಣ್ಯಾತ್ಮರು, ಬುದ್ಧ ಇವರಲ್ಲಿ ಮೈ ತಳೆದಿರಬಹುದು ಎಂದುಕೊಂಡಿದ್ದೆ. ಅಂತವರಲ್ಲಿ ಅನೇಕರನ್ನು ಹತ್ತಿರದಲ್ಲಿ ನೋಡಿದಾಗ ಹೇಳುವುದೇ ಬೇರೆ, ಬರೆಯುವುದೇ ಬೇರೆ ಎನ್ನುವುದು ಅನುಭವಕ್ಕೆ ಬಂದಿದೆ. ಇದನ್ನು ತಪ್ಪು ಎನ್ನಲಾರೆ. ಬುದ್ಧ ಮಾರ್ಗದ ಅನುಸರಣೆ ಹೇಳಿದಷ್ಟು, ಬರೆದಷ್ಟು ಸುಲಭವಲ್ಲ.
ಹಾಗೆಂದು ಬುದ್ಧಮಾರ್ಗದಲ್ಲಿ ನಡೆದವರಿಲ್ಲ ಎನ್ನಲಾಗದು. ಕ್ಷಣ, ಕ್ಷಣಕ್ಕೂ ಎಚ್ಚರವನ್ನು ಬಯಸುವ, ಸಮಚಿತ್ತವನ್ನು ಉಳಿಸಿಕೊಳ್ಳುವ ಈ ಕಠಿಣ ಮಾರ್ಗದಲ್ಲಿ ನಡೆದವರು, ನಡೆಯುವವರು, ನಡೆವ ಅಭ್ಯಾಸಿಗಳು ನಮ್ಮ ನಡುವೆ ಇದ್ದಾರೆ. ತುಮಕೂರಿನ ಸರಕಾರಿ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಜಿ ಎಂ ಶ್ರೀನಿವಾಸಯ್ಯ ಅಂತವರಲ್ಲೊಬ್ಬರು.
ಜಿಎಂಎಸ್ ಎಂದೇ ಎಲ್ಲರೂ ಪ್ರೀತಿಯಿಂದ ಕರೆಯುವ ಅವರಿಂದ ಬುದ್ಧನ ಬೋಧನೆ ಕೇಳಿಸಿಕೊಳ್ಳಲು ಸಾಧ್ಯವಿಲ್ಲ. ಜೊತೆಯಲ್ಲಿ ಒಡನಾಡಿದವರಿಗೆ ಬುದ್ಧ ಮಾರ್ಗದ ಅರಿವು ಸಾಧ್ಯ.
ಜಿಎಂಎಸ್ ತೊಂಬತ್ತೊಂದು ವರ್ಷಗಳ ತುಂಬು ಬದುಕಿನಲ್ಲಿ ಬಹಳ ಏರು ಪೇರುಗಳನ್ನು ಕಂಡಿದ್ದಾರೆ. ಕಠಿಣ ಪ್ರಸಂಗಗಳನ್ನು ಎದುರಿಸಿದ್ದಾರೆ. ಆದರೆ ಎಂದೂ ಸಮಚಿತ್ತವನ್ನು ಕಳೆದುಕೊಂಡಿಲ್ಲ. ಇತ್ತೀಚೆಗೆ ಯಾರಿಗಾದರೂ ಎದುರಿಸಲು ಅಸಾಧ್ಯವೆಂದು ತೋರುವ ದುರ್ಘಟನೆ ನಡೆದಾಗ, ಅವರದನ್ನು ನಿರ್ವಹಿಸಿದ ರೀತಿ ಇದಕ್ಕೆ ಉದಾಹರಣೆ. ಈ ಸಮಭಾವದ ಮನಸ್ಥಿತಿಯನ್ನು ಉಳಿಸಿಕೊಂಡ ಪರಿ ಬೆರಗು ಪಡುವಂತದ್ದು!
ಬುದ್ಧನನ್ನು ಅರಿತು ಬುದ್ಧನಾಗುವುದು ಹೇಗೆ ಅನ್ನುವುದಕ್ಕೆ ಜಿಎಂಎಸ್ ಅವರನ್ನು ನೋಡಿ ಕಲಿಯಬೇಕು. ಬುದ್ಧ ಆನಂದನಿಗೆ ‘ನಿನಗೇ ನೀನೇ ಬೆಳಕು’ ಎಂದಂತೆ ತನಗೆ ತಾನೇ ಬೆಳಕಾಗಿ ಇತರರಿಗೂ ಬೆಳಕ ಹಂಚಿದವರು ಜಿಎಂಎಸ್. ಅವರ ಮೂಲಕ ಬುದ್ಧನನ್ನು ಕಂಡೆವು.
ಬುದ್ಧ ಜಯಂತಿಯಂದು ಹಿರಿಯ ಜೀವಕ್ಕೆ ಪ್ರಣಾಮಗಳು.
- ಎಂ ನಾಗರಾಜ ಶೆಟ್ಟಿ