ಲೋಕಸಭೆ ಎದುರಿಸುವ ಸಾಮರ್ಥ್ಯವಿದೆ-ಮುರಳೀಧರ ಹಾಲಪ್ಪ

ತುಮಕೂರು: ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನಾನೂ ಕೂಡ ಪ್ರಭಲ ಆಕಾಂಕ್ಷಿಯಾಗಿದ್ದು, ಚುನಾವಣೆ ಎದುರಿಸಲು ನನಗೂ ಸಾಮರ್ಥ್ಯವಿದೆ ಎಂಬುದು ತುಮಕೂರು ಲೋಕಸಭಾ ಕ್ಷೇತ್ರದ ಜನತೆಗೇ ಗೊತ್ತಿರುವ ವಿಚಾರ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ತಿಳಿಸಿದರು.

ಇಲ್ಲಿಯ ಜಯನಗರದ ತಮ್ಮ ಸ್ವಗೃಹದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರದ ಬೂತ್ ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಇಡೀ ಜಿಲ್ಲೆಯಾದ್ಯಂತ ಪ್ರತಿಯೊಂದು ವಿಭಾಗದಲ್ಲೂ ಕಾಂಗ್ರೆಸ್ ಪಕ್ಷದ ಸಂಘಟನೆ ಮಾಡಿದ್ದು, ಅದರಲ್ಲಿ ರೈತರೊಂದಿಗೆ ನಾವು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದೇನೆ. ಜೊತೆಗೆ ಯುವಕರೊಂದಿಗೆ ಬೆರೆತು ಯುವಸಬಲೀಕರಣ ಕಾರ್ಯಕ್ರಮಗಳನ್ನು ನಡೆಸಿದ್ದೇನೆ. ಹಾಗೆಯೇ ಮಹಿಳಾ ಸಬಲೀಕರಣ ಕಾರ್ಯಕ್ರಮಗಳನ್ನೂ ಸಹ ಮಾಡಿಕೊಂಡು ಬಂದಿದ್ದು, ಜನಸಾಮಾನ್ಯರೊಂದಿಗೆ ಬೆರೆತು ಪಕ್ಷ ಸಂಘಟನೆ ಮಾಡಿದ್ದೇನೆ ಎಂದು ಹೇಳಿದರು.


ಇತ್ತೀಚೆಗೆ ಮಾಜಿ ಶಾಸಕರಾದ ಡಿ.ಸಿ.ಗೌರಿಶಂಕರ್ ಅವರು ನಮ್ಮ ಪಕ್ಷಕ್ಕೆ ಬಂದಿರುವುದು ನಮಗೆ ಆನೆ ಬಲ ಬಂದಂತಾಗಿದೆ. ತುಮಕೂರು ಗ್ರಾಮಾಂತರ ಸೇರಿದಂತೆ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಡಿ.ಸಿ. ಗೌರಿಶಂಕರ್ ಅವರು ಜನಪ್ರಿಯತೆಯನ್ನು ಹೊಂದಿದ್ದಾರೆ. ಜೊತೆಗೆ ತುಮಕೂರು ಗ್ರಾಮಾಂತರದ ಕಳೆದ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಷಣ್ಮುಖಪ್ಪ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಗೌಡ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಮುಂತಾದವರು ಪಕ್ಷಕ್ಕಾಗಿ ಹಗಲಿರುಳು ದುಡಿಯುತ್ತಿದ್ದಾರೆ ಎಂದರು.
ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಮುರಳೀಧರ ಹಾಲಪ್ಪ ಅವರೇ ಅಭ್ಯರ್ಥಿಯಾಗಬೇಕೆಂದು ಪಕ್ಷದ ಮುಖಂಡರು, ಕಾರ್ಯಕರ್ತರು, ರೈತರು, ಯುವಕರು, ಮಹಿಳಾ ಮತದಾರರು ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಟಿಕೇಟ್ ನೀಡುವ ಭರವಸೆ ಇದೆ. ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್, ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಲೋಕಸಭಾ ಚುನಾವಣೆ ಎದುರಿಸಲು ಸಿದ್ಧ ಎಂದು ತಿಳಿಸಿದರು.


ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡು ಲೋಕಸಭಾ ಚುನಾವಣಾ ಅಭ್ಯರ್ಥಿಯಾಗಲಿದ್ದಾರೆ ಎಂಬ ಎಂಬ ಪ್ರಶ್ನೆಗೆ ಉತ್ತರಿಸಿದ ಮುರಳೀಧರ ಹಾಲಪ್ಪ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯ ವಿರುದ್ಧ ಪ್ರಚಾರ ಮಾಡಿದಂತವರು ಈಗ ಕಾಂಗ್ರೆಸ್‌ಗೆ ಬಂದು ಟಿಕೇಟ್ ಕೇಳುತ್ತಾರೆ ಎಂದರೆ ಯಾರು ಒಪ್ಪುತ್ತಾರೆ.

ಇದೆಲ್ಲವನ್ನೂ ಪಕ್ಷದ ವರಿಷ್ಠರು, ಮುಖಂಡರು, ಕಾರ್ಯಕರ್ತರು ಗಮನಿಸುತ್ತಾರೆ. ಅವರಿನ್ನೂ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ, ಅದರ ಬಗ್ಗೆ ಅಪ್ರಸ್ತುತ. ಈಗ ನಾನೇ ಪ್ರಭಲ ಆಕಾಂಕ್ಷಿ ಅಂದ ಮೇಲೆ ಅವರ ಬಗ್ಗೆ ನಾನ್ಯಾಕೆ ಮಾತನಾಡಲಿ ಎಂದು ಹೇಳಿದರು.
ಮಾಜಿ ಶಾಸಕ ಡಿ.ಸಿ. ಗೌರಿಶಂಕರ್ ಮಾತನಾಡಿ, ಮುಂದಿನ ಲೋಕಸಭಾ ಚುನಾವಣೆ ಗೆಲುವಿನ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಿದ್ದೇವೆ.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು ಹೇಗೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಿದ್ದೇವೆ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಉದ್ದೇಶ. ಹಾಗಾಗಿ ಗ್ರಾಮಾಂತರ ಮುಖಂಡರೆಲ್ಲಾ ಸೇರಿ ತಂತ್ರಗಾರಿಕೆ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.


ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಹನುಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ, ಮುಖಂಡ ಷಣ್ಮುಖಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ. ಶ್ರೀನಿವಾಸ್, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಕಮಲಗಂಗಹನುಮಯ್ಯ ಹಾಗೂ ಬ್ಲಾಕ್ ಅಧ್ಯಕ್ಷರು, ಇತರ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *