ಶಿಕ್ಷಣದಿಂದ ದೌರ್ಬಲ್ಯವನ್ನು ಹೋಗಲಾಡಿಸಲು ಸಾಧ್ಯ

ತುಮಕೂರು: ಶೋಷಿತರು, ದಮನಿತರು, ದಲಿತರು ಒಟ್ಟಾರೆ ಅಲಕ್ಷಿತ ಸಮುದಾಯಗಳು ಉನ್ನತ ಮಟ್ಟಕ್ಕೆ ಏರಲು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಗುಬ್ಬಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಓ. ನಾಗರಾಜು ಹೇಳಿದರು.

ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಕನ್ನಡ ವಿಭಾಗ ಶನಿವಾರ ಹಮ್ಮಿಕೊಂಡಿದ್ದ ‘ಅಲಕ್ಷಿತ ಸಮುದಾಯಗಳ ಒಂದು ಒಳನೋಟ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಣ, ಆಹಾರ ಶಿಕ್ಷಣ, ಔಷಧ, ಉಡುಪು ಹಾಗೂ ಮೂಲಸೌಕರ್ಯಗಳಿಂದ ವಂಚಿತರಾಗಿದ್ದು ಇವೆಲ್ಲವನ್ನೂ ಪಡೆಯಬೇಕೆಂದರೆ ಸಂಘಟಿತರಾಗಬೇಕು. ಈ ಸಮುದಾಯಗಳು ಸಂಘಟಿತರಾಗುವುದರಿಂದ ಮಾತ್ರ ಮೂಲಸೌಕರ್ಯಗಳನ್ನು ಪಡೆದು ಸಮಾಜದಲ್ಲಿ ಸಹಬಾಳ್ವೆಯನ್ನು ನಡೆಸಲು ಸಾಧ್ಯವಾಗುತ್ತದೆ ಎಂದರು.

ಪ್ರಾಂಶುಪಾಲರಾದ ಡಾ. ಜಿ ದಾಕ್ಷಾಯಿಣಿ ಮಾತನಾಡಿ ಅಲಕ್ಷಿತ ಸಮುದಾಯಗಳು ಮೂಲ ಸೌಕರ್ಯಗಳಿಂದ ಇಂದಿಗೂ ವಂಚಿತವಾಗಿರುವುದು ವಿಚಿತ್ರ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಕೆಲಸ ಆಗಬೇಕಿದೆ ಎಂದರು.

ಶಿಕ್ಷಣದಿಂದ ಹಾಗೂ ಜಾಗೃತಿ ಕಾರ್ಯಕ್ರಮಗಳಿಂದ ಅಲಕ್ಷಿತ ಸಮುದಾಯಗಳಿಗೆ ನ್ಯಾಯ ಒದಗಿಸಲು ಸಾಧ್ಯ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶಿವಣ್ಣ ಬೆಳವಾಡಿ, ಸಹಪ್ರಾಧ್ಯಾಪಕಿ ಡಾ.ರೇಣುಕಾ ಎಚ್.ಆರ್. ಇತರ ಉಪನ್ಯಾಸಕರು ಹಾಜರಿದ್ದರು.

Leave a Reply

Your email address will not be published. Required fields are marked *