ತುಮಕೂರು:ಸ್ವಾತಂತ್ರ ನಂತರದಲ್ಲಿ ನೇಕಾರ ಸಮುದಾಯವನ್ನು ಗುರುತಿಸಿ, ಅವರಿಗೆ ಶಕ್ತಿ ತುಂಬುವ ಕೆಲಸ ಮಾಡಿರುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರಮೋದಿ ಅವರು,ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನೇಕಾರ ಬಂಧುಗಳು ಬಿಜೆಪಿ ಪಕ್ಷವನ್ನು ಬೆಂಬಲಿಸಬೇಕೆಂದು ಬಿಜೆಪಿ ನೇಕಾರರ ಪ್ರಕೋಷ್ಠದ ರಾಜ್ಯಾಧ್ಯಕ್ಷ ಸೋಮಶೇಖರ್ ಮನವಿ ಮಾಡಿದ್ದಾರೆ.
ಬಿಜೆಪಿ ನೇಕಾರರ ಪ್ರಕೋಷ್ಠ ಮತ್ತು ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರೈತರಷ್ಟೇ,ಈ ದೇಶದ ನೇಕಾರರಿಗೂ ಸಮಾನ ಗೌರವ ದೊರೆಯಬೇಕು ಎಂದು ತಿಳಿದು,ಆಗಸ್ಟ್ 08ನ್ನು ನೇಕಾರರ ದಿವಸ್ ಆಗಿ ಘೋಷಿಸುವ ಮೂಲಕ ಇಡೀ ಸಮುದಾಯಕ್ಕೆ ಒಂದು ಘನತೆಯನ್ನು ಮೋದಿ ಅವರು ತಂದುಕೊಟ್ಟಿದ್ದಾರೆ.ಹಾಗಾಗಿ ಬಿಜೆಪಿ ಪಕ್ಷದ ಪರವಾಗಿ ನಮ್ಮ ಪ್ರಕೋಷ್ಠ ರಾಜ್ಯದ 28 ಕ್ಷೇತ್ರಗಳಲ್ಲಿಯೂ ಸಂಚರಿಸಿ, ಮತ ಕೇಳಲಿದೆ ಎಂದರು.
ತುಮಕೂರು ನಗರ ಸೇರಿದಂತೆ ಜಿಲ್ಲೆಯ ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ, ಗುಬ್ಬಿ ತಾಲೂಕುಗಳಲ್ಲಿ ಸುಮಾರು 60 ಸಾವಿರ ಮತದಾರರಿದ್ದು,ಭಾಗಲಕೋಟೆ ಜಿಲ್ಲೆಯಲ್ಲಿ ಸುಮಾರು 2.45 ಲಕ್ಷ ಮತದಾರರಿದ್ದಾರೆ.45ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಿರ್ಣಾಯಕ ಮತದಾರರಿಗೆ ನೇಕಾರ ಸಮುದಾಯವಿದೆ.ಕೇಂದ್ರದಲ್ಲಿ ನರೇಂದ್ರಮೋದಿ ಹೇಗೋ, ಹಾಗೆಯೇ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ನೇಕಾರ ಸಮುದಾಯದ ಕಣ್ಮಣಿಯಾಗಿದ್ದಾರೆ.ರೈತರ ಮಾದರಿಯಲ್ಲಿ ನೇಕಾರರ ಸಾಲ ಮನ್ನಾ ಮಾಡಿದ ವ್ಯಕ್ತಿ ಎಂದರೆ ಬಿ.ಎಸ್.ಯಡಿಯೂರಪ್ಪ, ಹಾಗಾಗಿ ನೇಕಾರರ ಬಿಜೆಪಿಗೆ ಮತ ಹಾಕುವ ಮೂಲಕ ಅವರ ನಾಯಕತ್ವವನ್ನು ಬೆಂಬಲಿಸಬೇಕೆಂಬುದು ನಮ್ಮ ಕೋರಿಕೆಯಾಗಿದೆ ಎಂದರು.
ನರೇಂದ್ರ ಮೋದಿ ಅವರ ಕಳೆದ 10 ವರ್ಷಗಳ ಆಡಳಿತದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ.ದೇಶದಾದ್ಯಂತ ಸುಮಾರು 20ಕ್ಕು ಹೆಚ್ಚು ಟೆಕ್ಸ್‍ಟೈಲ್ ಪಾರ್ಕುಗಳನ್ನು ತೆರೆಯಲು ಕೇಂದ್ರ ಸರಕಾರ ಮುಂದಾಗಿದೆ.ಇದರಿಂದ ನೇಕಾರ ಸಮುದಾಯದ ದುಡಿಮೆ ಹೆಚ್ಚಾಗಲಿದ್ದು, ಅರ್ಥಿಕವಾಗಿ ಸದೃಢರಾಗಲು ಸಾಧ್ಯವಿದೆ.ಇದನ್ನು ನೇಕಾರ ಸಮುದಾಯ ಮನಗಂಡು ಬಿಜೆಪಿ ಪಕ್ಷಕ್ಕೆ ಮತ ನೀಡಬೇಕೆಂದು ಸೋಮಶೇಖರ್ ಮನವಿ ಮಾಡಿದರು.
ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಕುಮಾರ್ ಮಾತನಾಡಿ,ರಾಜ್ಯದಲ್ಲಿ ನೇಕಾರರ ಸಮುದಾಯಕ್ಕೆ ಏನಾದರೂ ಸಹಾಯವಾಗಿದ್ದರೆ ಅದು ಬಿಜೆಪಿ ಸರಕಾರದಿಂದ ಮಾತ್ರ. ಆಗಸ್ಟ್ 08ನ್ನು ನೇಕಾರರ ದಿವಸ್ ಎಂದು ಘೋಷಿಸಿ,ವಿಶೇಷ ಅನುದಾನ ನೀಡುವ ಮೂಲಕ ನಮ್ಮ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ.ನರೇಂದ್ರಮೋದಿ ಅವರು ಸ್ಪರ್ಧಿಸುವ ವಾರಣಾಸಿ ಕ್ಷೇತ್ರದಲ್ಲಿ 3 ಲಕ್ಷ ಕ್ಕೂ ಅಧಿಕ ನೇಕಾರರ ಸಮುದಾಯವಿದ್ದು, ನರೇಂದ್ರಮೋದಿ ಗೆಲುವಿಗೆ ಪಣತೊಟ್ಟು ಕೆಲಸ ಮಾಡಿದ್ದಾರೆ.ಅದೇ ರೀತಿ ರಾಜ್ಯದಲ್ಲಿಯೂ ಬಿಜೆಪಿ ಪರ ಕೆಲಸ ಮಾಡಬೇಕಾಗಿದೆ ಎಂದರು.
ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿರುವ ವಿ.ಸೋಮಣ್ಣ ಹೊರಗಿನವರು ಎಂಬುದು ಅಪ್ರಸ್ತುತ, ಚಿಕ್ಕಮಗಳೂರಿನಿಂದ ಇಂದಿರಾಗಾಂಧಿ,ಬಳ್ಳಾರಿಯಿಂದ ಸೋನಿಯಾಗಾಂಧಿ,ಕೇರಳದ ವೈನಾಡಿನಿಂದ ರಾಹುಲ್‍ಗಾಂಧಿ ಅವರುಗಳು ಸ್ಪರ್ಧಿಸಿ ಗೆಲುವು ಸಾಧಿಸಿರುವಾಗ,ನೆರೆಯ ಬೆಂಗಳೂರು ಹೇಗೆ ಹೊರಗಿನದಾಗಲು ಸಾಧ್ಯ ಎಂದ ಅವರು, ವಿ.ಸೋಮಣ್ಣ ಅಭಿವೃದಿ ವಿಚಾರದಲ್ಲಿ ಒಳ್ಳೆಯ ಕೆಲಸಗಾರರು.ಹಾಗಾಗಿ ನೇಕಾರರ ಸಮುದಾಯ ಅವರನ್ನು ಬೆಂಬಲಿಸಬೇಕಿದೆ ಎಂದು ಧನಿಯಕುಮಾರ್ ತಿಳಿಸಿದರು.
ಬಿಜೆಪಿ ನೇಕಾರರ ಪ್ರಕೋಷ್ಠದ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ರಾಜ್ಯ ಮಹಿಳಾ ಅಧ್ಯಕ್ಷೆ ಶೋಭಾ, ನೇಕಾರರ ಸಮುದಾಯದ ಉಪಾಧ್ಯಕ್ಷ ಎಸ್.ವಿ.ವೆಂಕಟೇಶ್ ಮಾತನಾಡಿದರು.ಮುಖಂಡರಾದ ಯೋಗಾನಂದ್, ಅನಿಲ್‍ಕುಮಾರ್,ಜಗದೀಶ್, ನಿರ್ಮಲ ದಿವಾಕರ್,ಧರಣೇಶ್, ದಯಾನಂದಶೆಟ್ಟಿ, ಮಹೇಶ್ ಮತ್ತಿತರರು ಉಪಸ್ಥಿತರಿದ್ದರು.