ತುಮಕೂರು:ಶಿಕ್ಷಣ ಮಕ್ಕಳ ಮನಸ್ಸು ಗೆದ್ದಾಗ ಮಾತ್ರ,ಅವರನ್ನು ಸಾಧನೆಗೆ ಮೆಟ್ಟಿಲಿನ ಕಡೆಗೆ ಕರೆದುಕೊಂಡು ಹೋಗಲು ಸಾಧ್ಯ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.
ನಗರದ ಏಂಪ್ರೆಸ್ ಶಾಲೆಯ ಆಡಿಟೋರಿಯಂ ನಲ್ಲಿ ಡಿ.ಟಿ.ಶ್ರೀನಿವಾಸ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡುತಿದ್ದ ಅವರು,ಇಂದಿನ ಮಕ್ಕಳು ನಮಗಿಂತಲೂ ಹೆಚ್ಚು ಬುದ್ದಿವಂತರಿದ್ದಾರೆ.ಆಯಾಯ ದಿನದ ಅಪ್‍ಡೇಟ್‍ಗಳೊಂದಿಗೆ ಕ್ಲಾಸ್‍ರೂಮ್‍ಗೆ ತೆರಳದಿದ್ದರೆ,ಪೇಚಿಗೆ ಸಿಲುಕುವ ಸಾಧ್ಯತೆಯೇ ಹೆಚ್ಚು.ಹಾಗಾಗಿ ಶಿಕ್ಷಕರು ನಿರಂತರ ಅಭ್ಯಾಸದಲ್ಲಿ ತೊಡಗುವ ಅನಿವಾರ್ಯತೆ ಇದೆ ಎಂದರು.
ತುಮಕೂರು ಜಿಲ್ಲೆಯ ಅನೇಕ ಹಿರಿಯರು ನಾನು ಬೆಂಗಳೂರು ವಿವಿಯ ಜ್ಞಾನಭಾರತಿಯಲ್ಲಿ ವಿದ್ಯಾರ್ಥಿ ನಾಯಕನಾಗಿದ್ದ ದಿನಗಳಿಂದಲೂ ಪರಿಚಿತರು.ಹಾಗಾಗಿ ತುಮಕೂರು, ಬೆಂಗಳೂರು ನಡುವೆ ಅಂತಹ ವ್ಯೆತ್ಯಾಸವಿಲ್ಲ. ಜೊತೆಗೆ ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಡಿ.ಟಿ.ಶ್ರೀನಿವಾಸ್ ಶಿಕ್ಷಕರ ಸಮಸ್ಯೆಯ ಜೊತೆಗೆ,ಒಂದು ಶಾಲೆಯ ಆಡಳಿತ ಮಂಡಳಿಯವರಾಗಿ ಎಲ್ಲಾ ಸಮಸ್ಯೆಗಳನ್ನು ಅರಿತಿದ್ದು,ಅವರು ಗೆಲ್ಲುವುದರಿಂದ ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು ನನಗೊಬ್ಬ ದಕ್ಷ ಹೋರಾಟಗಾರ ಸಿಕ್ಕಂತಾಗುತ್ತದೆ.ಇಂಜಿನಿಯರ್ ಆಗಿ, ಕೆ.ಎ.ಎಸ್. ಅಧಿಕಾರಿಯಾಗಿ, ಶಿಕ್ಷಣ ಸಂಸ್ಥೆಯೊಂದರ ಆಡಳಿತ ಮಂಡಳಿ ನಿರ್ದೇಶಕನಾಗಿ ಅಪಾರ ಅನುಭವವನ್ನು ಅವರು ಹೊಂದಿದ್ದಾರೆ.ಅಂತಹವರು ಮೇಲ್ಮನೆಯಲ್ಲಿ ಶಿಕ್ಷಕರ ಪರವಾಗಿ ಕೆಲಸ ಮಾಡುವಂತಹ ಅವಕಾಶವನ್ನು ಆಗ್ನೇಯ ಶಿಕ್ಷಕ ಕ್ಷೇತ್ರದ ಮತದಾರರು ಕಲ್ಪಿಸಬೇಕೆಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ ಮಾತನಾಡಿ, ಪುಟ್ಟಣ್ಣ ಅವರನ್ನು ಬೆಂಗಳೂರು ವಿವಿಯ ವಿದ್ಯಾರ್ಥಿನಾಯಕರಾಗಿ ಕೆಲಸ ಮಾಡುತ್ತಿದ್ದ ಕಾಲದಿಂದಲೂ ಬಲ್ಲೆ. ಅವರಂತೆಯೇ ಡಿ.ಟಿ.ಶ್ರೀನಿವಾಸ್ ಅವರು ಸಹ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಹೋರಾಟ ನಡೆಸುತಿದ್ದಾರೆ. ಆಗ್ನೇಯ ಶಿಕ್ಷಕರ ಕ್ಷೇತ್ರದ ಮತದಾರರು ಈ ಬಾರಿ ಅವರ ಕೈ ಹಿಡಿಯುವ ಮೂಲಕ ಸರಕಾರ ಮತ್ತಷ್ಟು ಬಲಿಷ್ಠವಾಗಿ ಕೆಲಸ ಮಾಡಲು ಸಹಕರಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಕೆ.ಎಸ್.ಕಿರಣ್‍ಕುಮಾರ್ ಮಾತನಾಡಿ,ಒಬ್ಬ ವ್ಯಕ್ತಿ ಶಿಕ್ಷಕರ ಕ್ಷೇತ್ರದಿಂದ ಐದು ಬಾರಿ ನಿರಂತರವಾಗಿ ಆಯ್ಕೆಯಾಗುವುದೆಂದರೆ ಪುಟ್ಟಣ್ಣ ಅವರ ಸೇವೆ ಎಂತಹದ್ದು ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು.ಏನೇ ಷಡ್ಯಂತ್ರ ರೂಪಿಸಿದರೂ ದೃತಿಗೇಡದೆ ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು,ಅವರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ ಪರಿಣಾಮ ಮತದಾರರು ಅವರನ್ನು ಪುನಃ ಆಯ್ಕೆ ಮಾಡಿದ್ದಾರೆ.ಪುಟ್ಟಣ್ಣ ಅವರಷ್ಟೇ ಅನುಭವಿಗಳು ಆಗಿರುವ ಡಿ.ಟಿ.ಶ್ರೀನಿವಾಸ್ ಶಾಸನ ಸಭೆಗೆ ಹೋದರೆ ಶಿಕ್ಷಣ ಕ್ಷೇತ್ರದ ಬೆಳವಣಿಗೆ ವೇಗ ಪಡೆದುಕೊಳ್ಳಲಿದೆ ಎಂದರು.
ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಕಳೆದ 25 ವರ್ಷಗಳಿಂದ ಶಿಕ್ಷಣ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸವನ್ನು ಮಾಡುತ್ತಲೇ ಬಂದಿದ್ದೇವೆ.ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿರುತ್ತದೆ. ಓಪಿಎಸ್ ಜಾರಿ,ಶಿಕ್ಷಕರ ಅಂತರಜಿಲ್ಲಾ ವರ್ಗಾವಣೆ, ಖಾಲಿ ಹುದ್ದೆಗಳ ಭರ್ತಿ, ಅನುದಾನಿತ ಶಾಲೆಗಳ ಸಿಬ್ಬಂದಿಗೆ ನೇಮಕ ಸೇರಿದಂತೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಸರಕಾರ ಮುಂದಾಗಿದೆ.ಈಗಾಗಲೇ 13 ಸಾವಿರ ಶಿಕ್ಷಕರನ್ನು ಎನ್.ಪಿ.ಎಸ್.ನಿಂದ ಒಪಿಎಸ್‍ಗೆ ತರಲಾಗಿದೆ. ಉಳಿದ 2.53 ಲಕ್ಷ ನೌಕರರನ್ನು ಶೀಘ್ರದಲ್ಲಿಯೇ ಓಪಿಎಸ್‍ಗೆ ತರುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ.13 ವರ್ಷಗಳ ಕಾಲ ಕೆ.ಎ.ಎಸ್.ಅಧಿಕಾರಿಯಾಗಿ ಕೆಲಸ ಮಾಡಿ, ಸರಕಾರ ಒಳ, ಹೊರಗಿನ ಪರಿಚಯ ಇದೆ.ಈ ಬಾರಿಯ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನೀವು ನನಗೆ ಆಶೀರ್ವಾದ ಮಾಡಿ, ನಿಮ್ಮ ಸಮಸ್ಯೆಗಳ ಪರಿಹಾರಕ್ಕೆ ದುಡಿಯಲು ಸಹಕರಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಡಾ.ರಫೀಕ್ ಅಹಮದ್ ವಹಿಸಿದ್ದರು.ವೇದಿಕೆಯಲ್ಲಿ ಹಿರಿಯೂರು ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಪೂರ್ಣೀಮ ಶ್ರೀನಿವಾಸ್,ಚಿಕ್ಕಣ್ಣನಹಟ್ಟಿ ಸುಕ್ಷೇತ್ರದ ಧರ್ಮದರ್ಶಿ ಪಾಪಣ್ಣ, ಷಣ್ಮುಖಪ್ಪ, ಇಕ್ಬಾಲ್ ಅಹಮದ್, ನಿರಂಜನ್.ಟಿ.ಎಸ್., ಮರಿಚನ್ನಮ್ಮ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.