ಕಾಂಗ್ರೆಸ್ ನ 5ಕೆ.ಜಿ. ಅಕ್ಕಿ ಎಲ್ಲಿ ಹೋಯ್ತು -ಬಂಡೆಪ್ಪ ಕಾಶೆಂಪೂರ್ ಟೀಕೆ

ತುಮಕೂರು : ಹತ್ತು ಕೇಜಿ ಅಕ್ಕಿ ಕೊಡ್ತೀವಿ ಅಂತ ಸಿದ್ದರಾಮಯ್ಯನವರು ಹೇಳುತ್ತಿದ್ದರು. ಕೊಡಲಿಲ್ಲ, ಮೋದಿ ಸರ್ಕಾರ ಕೊಡುವ 5 ಕೆ.ಜಿ ಕೊಡ್ತಿದ್ದಾರೆ. ನಿಮ್ಮ ಅಕ್ಕಿ ಎಲ್ಲಿ ಹೋಯ್ತು? ಅಕ್ಕಿ ಬದಲು ಬ್ಯಾಂಕ್ ಅಕೌಂಟಿಗೆ ಅರ್ಧದಷ್ಟು ಹಣ ಹಾಕ್ತಿದ್ದಾರೆ. ಈಗ ಕೆಜಿ ಅಕ್ಕಿಗೆ 60 ರೂ. ಇದೆ. ಕಾಂಗ್ರೆಸ್ ಸರ್ಕಾರ ಕೊಡುವ ಹಣ 3 ಕೆಜಿ ಅಕ್ಕಿಗೆ ಆಗುತ್ತದೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರು.

ಸೋಮವಾರ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲರಿಗೂ 200 ಯೂನಿಟ್ ಕರೆಂಟ್ ಫ್ರೀ ಎಂದು ಹೇಳಿದಿರಿ, 135 ಸೀಟು ಗೆದ್ದ ಮೇಲೆ ವರಸೆ ಬದಲಾಯಿಸಿದಿರಿ, ಗ್ಯಾರಂಟಿ ಯೋಜನೆಗಳಿಗೆ ಮಾನದಂಡ ವಿಧಿಸಿದಿರಿ. ಯುವ ನಿಧಿಗೂ ಮಾನದಂಡ ಮಾಡಿ ನಿರುದ್ಯೋಗಿ ಯುವಜನತೆಗೆ ಮೋಸ ಮಾಡಿದಿರಿ. ಕಾಂಗ್ರೆಸ್‍ನವರು ಸುಳ್ಳಿನ ಸರದಾರರು ಎಂದು ಟೀಕಿಸಿದರು.

ಇಷ್ಟು ದಿನ ಗ್ಯಾರಂಟಿ ಯೋಜನೆಗಳ ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಮುಖಂಡರಿಗೆ ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ವಿಶ್ವಾಸ ಇಲ್ಲದಂತಾಗಿದೆ. ಪ್ರಚಾರ ಫಲ ಕೊಡದ ಕಾರಣ ಈಗ ಚೊಂಬಿನ ಜಾಹೀರಾತು ನೀಡಿ ಕೇಂದ್ರ ಸರ್ಕಾರ ಬರಪರಿಹಾರ ಕೊಡುತ್ತಿಲ್ಲ ಎಂದು ದೂರುತ್ತಾ ಚುನಾವಣೆಯಲ್ಲಿ ಮತ ಪಡೆಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪುರ್ ಹೇಳಿದರು.

ಜನರ ಕಷ್ಟಸುಖ ನೋಡಿಕೊಳ್ಳಲಿ ಎಂದು ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ, ನೀವು ಬರಗಾರದಲ್ಲೂ ಜನರಿಗೆ ನೀರು ಕೊಡಲಿಲ್ಲ, ರೈತರಿಗೆ ಬರಪರಿಹಾರ ನೀಡಲಿಲ್ಲ. ಕೇಂದ್ರ ಸರ್ಕಾರ ಬರಪರಿಹಾರ ನೀಡಲಿಲ್ಲ ಎಂದು ಮೋದಿ ಸರ್ಕಾರವನ್ನು ದೂರುತ್ತಾ ಕಾಲಹರಣ ಮಾಡುತ್ತಿರುವಿರಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸರ್ಕಾರದ ನೆರವು ಕೇಳದ ರೈತರ ಸಾಲ ಮನ್ನಾ ಮಾಡಿದರು. ಅಂತಹ ಇಚ್ಛಾಶಕ್ತಿ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ಬಂಡೆಪ್ಪ ಕಾಶಂಪುರ್ ಹೇಳಿದರು.

ದೇಶದ ರಕ್ಷಣೆ, ಅಭಿವೃದ್ಧಿಗೆ ದೇಶವನ್ನು ಮುನ್ನಡೆಸಲು ಸಮರ್ಥ ನೇತಾರ ಬೇಕು, ಮೋದಿಯವರೇ ಮತ್ತೊಮ್ಮೆ ಪ್ರಧಾನಿಯಾಗಲು ಸಮರ್ಥರು ಎಂದು ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆಗೆ ಹೊರಟಿದ್ದೇವೆ. ಮೋದಿಯವರು ಮತ್ತೆ ಪ್ರಧಾನಿ ಆಗುತ್ತಾರೆ ಅವರಿಗೆ ಮತ್ತಷ್ಟು ಶಕ್ತಿ ತುಂಬಲು ತುಮಕೂರಿನಲ್ಲಿ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರನ್ನು ಗೆಲ್ಲಿಸಲು ಎಲ್ಲಾ ವರ್ಗದ ಜನರೂ ಮತ ನೀಡಬೇಕು ಎಂದು ಕೋರಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಮಧುಗಿರಿ ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಕೆ.ಮಂಜುನಾಥ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಹಿಂದುಳಿದ ವರ್ಗಗಳ ಮುಖಂಡರಾದ ಟಿ.ಕೆ.ನರಸಿಂಹಮೂರ್ತಿ, ಪುಟ್ಟರಾಜು, ರವೀಶ್ ಜಹಾಂಗೀರ್, ಹೆಚ್.ಡಿ.ಕೆ.ಮಂಜುನಾಥ್, ಲಕ್ಷ್ಮೀನರಸಿಂಹರಾಜು, ಶಂಕರ್, ಓಂನಮೋನಾರಾಯಣ, ಸಿ.ಎಂ.ನಾಗರಾಜು, ಇಂದ್ರಕುಮಾರ್, ಮಲ್ಲಿಕಾರ್ಜುನ್, ಯೋಗೀಶ್, ಲಕ್ಷ್ಮಮ್ಮ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *