ನೀರು ಗೋವಿಂದರಾಜುಗೆ ನೀರು ಕುಡಿಸಿದವರು ಯಾರು ?

ತುಮಕೂರು : ಫಲಿತಾಂಶಕ್ಕೂ ಮೊದಲೇ ಎನ್. ಗೋವಿಂದರಾಜು, ಶಾಸಕರು, ತುಮಕೂರು ವಿಧಾನಸಭಾ ಕ್ಷೇತ್ರ, ಎಂಬ ನಾಮ ಫಲಕ ಪಡೆದು ನಗೆಪಾಟಿಲೆಗೆ ಗುರಿಯಾಗಿದ್ದ ಜೆಡಿಎಸ್ ಅಭ್ಯರ್ಥಿ ಮೂರನೇ ಬಾರಿ ಸೋಲನ್ನಪ್ಪುವುದರ ಮೂಲಕ ತಮ್ಮ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ ಎನ್ನಲಾಗಿದೆ.

ಆರು ತಿಂಗಳ ಹಿಂದೆಯೇ ಕುಮಾರಸ್ವಾಮಿಯವರು ಎನ್.ಗೋವಿಂದರಾಜು ಅವರನ್ನು ಜೆಡಿಎಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿದರೂ ತಮ್ಮ ಗೆಲುವಿಗೆ ಬೇಕಾದ ತಂತ್ರಗಳನ್ನು ಎಣೆಯುವಲ್ಲಿ ವಿಫಲರಾಗಿ ಸೋಲನ್ನುಂಡಿದ್ದಾರೆ.

ಜೆಡಿಎಸ್‍ನ ಪ್ರಬಲ ಮತದಾರರಾದ ಒಕ್ಕಲಿಗರನ್ನು ನಗರದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳದ ಇವರು, ಬಸ್‍ಗಳಲ್ಲಿ ನಗರದ ಬಡವರು, ಸ್ಲಂ ಜನರನ್ನು ದೇವಸ್ಥಾನಗಳಿಗೆ ಆಣೆ, ಪ್ರಮಾಣ ಮಾಡಿಸುವುದು, ಸೀರೆ, ಹಣ ಹಂಚುವುದರಲ್ಲಿಯೇ ಕಾಲ ಹರಣ ಮಾಡಿದ್ದಲ್ಲದೆ, ತಮ್ಮ ಪಕ್ಷದ ನಾಯಕರನ್ನು ಒಗ್ಗಟ್ಟಿನಿಂದ, ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಹಣ ಹಂಚಿಸಿ ಪ್ರಮಾಣ ಮಾಡಿಸಿದರೆ ಗೆಲ್ಲಬಹುದು ಎಂಬ ಹುಂಬತನದಿಂದ ತಮ್ಮ ಸೋಲನ್ನು ತಾವೇ ತಂದುಕೊಂಡಿದ್ದಾರೆ.

ಪಕ್ಷದ ನಾಯಕರುಗಳು, ಕಾರ್ಯಕರ್ತರುಗಳು ಹೇಳುವುದನ್ನು ಕೇಳಿಸಿಕೊಳ್ಳಲು ಗೋವಿಂದರಾಜು ತಯಾರಿರಲಿಲ್ಲ, ಪಕ್ಷವನ್ನು ಕಟ್ಟಿ ಬೆಳೆಸಿದ ನರಸೇಗೌಡ, ಬೆಳ್ಳಿ ಲೋಕೇಶ್ ಅವರಂತಹವರನ್ನು ತಮ್ಮ ಹುಂಬತನದಿಂದ ಬೇರೆ ಪಕ್ಷಕ್ಕೆ ಹೋಗುವಂತಹ ಪರಿಸ್ಥಿತಿ ತಂದಿಟ್ಟರು.

ಅನೇಕ ಚುನಾವಣೆಗಳನ್ನು ಎದುರಿಸಿರುವ ಹಿರಿಯರು ಇವರಿಗೆ ಸಲಹೆಗಳನ್ನು ನೀಡಿದರೂ ಅವುಗಳನ್ನು ಗಂಭೀರವಾಗಿ ತೆಗೆದುಕೊಂಡು, ಅವುಗಳನ್ನು ಪಾಲಿಸುವ ನಿಟ್ಟಿನಲ್ಲಿ ಕಾರ್ಯತಂತ್ರಗಳನ್ನು ರೂಪಿಸಲಿಲ್ಲ, ಇತರರು ಕೆಲಸ ಮಾಡಲು ಬಿಡಲಿಲ್ಲ, ತಾವು ಕೆಲಸ ಮಾಡಲಿಲ್ಲ, ಕೆಲವು ಭಟಂಗಿಗಳ ಮಾತನ್ನು ಕೇಳಿ ಗೆಲ್ಲವನ್ನು ತಾವೇ ಸೋಲನ್ನಾಗಿ ಮಾಡಿಕೊಂಡರು.

ಯಾರಿಗೆ ರಾಜಕೀಯ ಪ್ರಬುದ್ದತೆ ಇರುವುದಿಲ್ಲವೋ ಅವರು ಯಾರ ಸಲಹೆ, ಸೂಚನೆಗಳನ್ನು ತೆಗೆದುಕೊಳ್ಳುವುದಿಲ್ಲ, ಇದರಿಂದಲೇ ಎನ್.ಗೋವಿಂದರಾಜು ಸೋಲುವಂತಾಯಿತು.
ಚುನಾವಣೆಯ ತಂತ್ರಗಾರಿಕೆಗಳನ್ನು ಮಾಡುವಂತಹವರೆ ಇವರ ಜೊತೆ ಇರಲಿಲ್ಲ, ಅಲ್ಲದೆ ಇವರು ಯಾರನ್ನೂ ನಂಬುವ ಸ್ಥಿತಿ ಕೂಡ ಇರಲಿಲ್ಲ ಈ ಹಿನ್ನಲೆಯಲ್ಲಿ ಎನ್.ಗೋವಿಂದರಾಜು ಸೋಲಬೇಕಾಯಿತು.

ಚುನಾವಣೆ ನಡೆದು ಇನ್ನೂ ಫಲಿತಾಂಶ ಪ್ರಕಟವಾಗದೆ ಇದ್ದರೂ ಅಭಿಮಾನಿಗಳು, ಬೆಂಬಲಿಗರು ಶಾಸಕರು ಎಂಬ ಫಲಕ ಮಾಡಿಸಿಕೊಂಡು ಬಂದಿದ್ದನ್ನು ನಯವಾಗಿ ತಿಸ್ಕರಿಸುವುದನ್ನು ಬಿಟ್ಟು, ನಾಮ ಫಲಕವನ್ನು ನಗುಮುಖದಿಂದ ಖುಷಿಯಾಗಿ ಸ್ವೀಕರಿಸಿ, ಪೋಟೋಗೆ ಪೋಸ್ ನೀಡಿ ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬ ಗಾದೆಯಂತೆ ನಗೆ ಪಾಟಿಲಿಗೆ ಗುರಿಯಾದವರು ಕರ್ನಾಟಕದ ವಿಧಾನಸಭಾ ಚುನಾವಣಾ ಇತಿಹಾಸದಲ್ಲಿ ಇವರೇ ಮೊದಲಿರಬೇಕು.

ಒಟ್ಟಿನಲ್ಲಿ ಇವರಿಗೆ ಗೆಲುವನ್ನು ತಂದು ಕೊಡವಂತಹ ಸಾಮಥ್ರ್ಯವಿದ್ದ ನರಸೇಗೌಡ ಮತ್ತು ಬೆಳ್ಳಿ ಲೋಕೇಶ್‍ರವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಲ್ಲಿ ಎಡವಿ ಈ ಸೋಲನ್ನು ತಂದುಕೊಂಡಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ.

ತುಮಕೂರು ನಗರಕ್ಕೆ ಗೆಳೆಯರ ಬಳಗದಿಂದ ನೀರು ಒದಗಿಸಿದ್ದರಿಂದ ನೀರು ಗೋವಿಂದರಾಜು ಎಂದು ಹೆಸರು ಪಡೆದಿದ್ದ ಇವರು, ತುಮಕೂರು ಜನ ಇವರಿಗೆ ನೀರು ಕುಡಿಸಿದ್ದು ಮಾತ್ರ ಮರೆಯಲು ಸಾಧ್ಯವಿಲ್ಲವೇನೋ.

ಅಲ್ಲದೆ ಇವರಿಗೆ ಕೆಲ ಪತ್ರಕರ್ತರು ನೀಡಿದ ಸಲಹೆಗಳು ಸಹ ಇವರನ್ನು ಸೋಲಿನ ದವಡೆಗೆ ನೂಕಿದವು ಎನ್ನಲಾಗುತ್ತಿದ್ದು, 2018ರಲ್ಲಿಯೂ ಈ ಪತ್ರಕರ್ತರೇ ಇವರನ್ನು ದಾರಿ ತಪ್ಪಿಸಿ ಸೋಲುವಂತೆ ಮಾಡಿದ್ದನ್ನು ಇವರು ಸರಿಯಾಗಿ ಅರ್ಥೈಸಿಕೊಳ್ಳಲಿಲ್ಲವೇನೋ. ಒಟ್ಟಿನಲ್ಲಿ ಗೋವಿಂದರಾಜುಗೆ ಆಣೆ, ಪ್ರಮಾಣಗಳು ಗೆಲುವು ತರುವುದಿಲ್ಲ ಎಂಬುದು ಈಗಲಾದರೂ ಅರಿವಾಗಿರಬಹುದು.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *