ವಿಡಂಬನೆ
ಮುಖ್ಯ ದೇವದೂತ ಆಗ ತಾನೆ ಗಟಗಟನೇ ಮಜ್ಜಿಗೆ ಕುಡಿದು ದರಬಾರು ಹಾಲಿನಲ್ಲಿ ಕೂತಿರುವ ಪರ-ವಿರೋಧ ದೂತ ಸೇವಕರಿಗೆ ತಮ್ಮ ಗಡಸು ಧ್ವನಿಯಲ್ಲಿ ಸಮಜಾಯಿಸಿ ನೀಡಬೇಕಂದುಕೊಳ್ಳುತ್ತಿರುವಾಗಲೇ ಜಂಗಮವಾಣಿ ಕಿರುಚ ತೊಡಗಿತು.
ಮುಖ್ಯ ದೇವದೂತನೂ ನಮಸ್ಕಾರ ದೇವಮಾನವ, ಹೇಳುವಂತಾರಾಗಿ ಶಿರಸ ವಹಿಸಿ ಪಾಲನೆ ಮಾಡುತ್ತೇನೆ, ನನ್ನ ಕುರ್ಚಿಗಾಗಿ.
ಅತ್ತ ಕಡೆಯಿಂದ ದೇವಲೋಕದ ದೇವ ಮಾನವ ಮುಖ್ಯ ದೇವದೂತನಿಗೆ ಈ ದಿನ ಒಳಮೀಸಲಾತಿ ಜಾರಿ ಮಾಡಲು ಕರೆದಿರುವ ಮಂತ್ರಿವರ್ಯರ ಸಭೆಯಲ್ಲಿ, ಆ ಅಲೆಮಾರಿಗಳನ್ನು ಬಲಿ ಕೊಡಬೇಕು ತಿಳಿಯಿತಲ್ಲ.
ಅದೇಕೆ ದೇವಮಾನವ ಆ ಅಲೆಮಾರಿಗಳ ಮೇಲೆ ನಿಮಗೆ ಅಷ್ಟೊಂದು ಕೋಪ, ಪಾಪ ಅವರಿಗೆ ಇರಲು ಮನೆ ಇಲ್ಲ, ಕುಡಿಯಲು ನೀರಿಲ್ಲ, ತಿನ್ನಲು ಅನ್ನವಿಲ್ಲ, ಅವರಿಗೂ ಒಂದು ಭಾಗ ಕೊಡೋಣ.
ಏ ಸಿದ್ದೇಶ್ವರ ನಿನ್ನನ್ನು ಕುರ್ಚಿಯ ಮೇಲೆ ಕೂರಿಸಿರುವುದು ನಾನು ಹೇಳಿದಂತೆ ರಾಜ್ಯಭಾರ ಮಾಡಲು, ಆಗಲಿಲ್ಲ ಎಂದರೆ ಹೇಳು ಈಶ್ವರ, ಕುಮಾರೇಶ್ವರ ಮುಂತಾದವರೆಲ್ಲಾ ಕಾಯುತ್ತಿದ್ದಾರೆ, ಈ ಕೂಡಲೇ ಅವರಿಗೆ ಪಟ್ಟಾಭೀಷೇಕಕ್ಕೆ ಅಣಿಮಾಡಲು ಹೇಳುತ್ತೇನೆ.
ಇಲ್ಲ ಇಲ್ಲ ದೇವ ಮಾನವ, ಅಂತಹ ಪ್ರಮಾದ ಮಾಡಬೇಡಿ ನೀವು ಹೇಳಿದಂತೆ ಆ ಅಲೆಮಾರಿಗಳನ್ನು ಬಲಿಕೊಡುತ್ತೇನೆ, ನನಗೆ ಬಲಿ ಕೊಡುವ ಮುನ್ನ ಯಾಕೆ ಬಲಿ ಪಡೆಯುತ್ತೀದ್ದೀರಿ ಸ್ವಲ್ಪ ಬಿಡಿಸಿ ಹೇಳ ಬಾರದೆ ಪ್ರಭು.
ಹಾಗೆ ಬಾ ದಾರಿಗೆ ಆ ಅಲೆಮಾರಿಗಳು ಭೂಲೋಕದಲ್ಲಿ ಕೂಗುಮಾರಿಗಳಾಗಿ ನನ್ನ ವೇಷ-ಭೂಷಣ ಹಾಕಿಕೊಂಡು ಬೀದಿ ಬೀದಿಯಲ್ಲೆ ಅಲೆಯುತ್ತಾ ಬದಿಕಿಕೊಳ್ಳಲಿ ಅಂತ ಇದ್ದರೆ ಈಗ ನನ್ನ ಸಹೋದರರ ಪಾಲು ಬೇಕೆಂದು ಹಠ ಮಾಡುತ್ತಿದ್ದಾರೆ, ಮೊದಲು ಬಲಿ ಹಾಕು, ಆಗ ನಿನ್ನ ಕುರ್ಚಿಯ ನಾಲ್ಕು ಕಾಲುಗಳು ಸ್ವಲ್ಪವೂ ಅಲುಗಾಡುವುದಿಲ್ಲ.
ಹೌದಾ ದೇವ ಮಾನವ ನನ್ನ ದರಬಾರು ಕುರ್ಚಿಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದರೆ ಹಿರಣ್ಯಕಶುಪಿವಿನಂತೆ ಸಿಕ್ಕ ಸಿಕ್ಕವರನ್ನೆಲ್ಲಾ ಬಲಿ ಹಾಕುತ್ತೇನೆ, ನನ್ನ ಸಾಮಾಜಿಕ ನ್ಯಾಯ, ಹಸಿದವರ ಪರ ಅನ್ನದಾನ, ಉದ್ಯೋಗ, ಶಿಕ್ಷಣ ಎಲ್ಲವನ್ನು ಕಿತ್ತು ನಿನ್ನ ಸಹೋದರರೇ 100ಕ್ಕೆ 99ಭಾಗ ಇರುವಂತೆ ನೋಡಿಕೊಳ್ಳುತ್ತೇನೆ ಮಹಾಪ್ರಭು,… ನನ್ನ ಕುರ್ಚಿ ಕೊಂಚವೂ ಅಲುಗಾಡಬಾರದು ದೇವಮಾನವ.

ಏ ಮೂಢ ದೇವದೂತ ಅದಕ್ಕೆ ಅಲ್ಲವೆ ನಿನಗೆ ಆ ದರಬಾರು ಕುರ್ಚಿ ನೀಡಿರುವುದು, ನಿನ್ನಿಂದ ಮಾತ್ರ ಅದು ಸಾಧ್ಯ, ನಿನ್ನನ್ನು ಬಿಟ್ಟರೆ ಬೇರೆ ಯಾರಿಂದಲೂ ಸಾಧ್ಯವಿಲ್ಲ, ಏಕೆಂದರೆ ಸಮಾಜವಾದ ಮಾತನಾಡುತ್ತಲೇ, ಹಾಸನೇಶ್ವರನ ಮುಗಿಸಿದೆ, ಮಧುಗಿರಿ ರಾಜನನ್ನನು ಮುಗಿಸಿದೆ, ಈಗ ಅಲೆಮಾರಿಗಳನ್ನು ಮುಗಿಸುತ್ತಿದ್ದೀಯ ಬೇಷ್ ಬೇಷ್ ನಿನ್ನ ಕುರ್ಚಿ ಭದ್ರವಾಗಿರುವಂತೆ ನೋಡಿಕೊಳ್ಳಲು ಇನ್ನೊಂದು ಬಲಿ ಬೇಕಲ್ಲ.
ಹೇಳಿ ದೇವಮಾನವ ನನ್ನ ಕುರ್ಚಿಗಿಂತ ಮುಖ್ಯ ಯಾವುದೂ ಇಲ್ಲ, ನೋಡು ದೇವಧೂತ ನಿನ್ನ ಮೊದಲ ಆಡಳಿತದ ಅವಧಿಯಲ್ಲಿ ನಿನಗೆ ಚಿತ್ರಗುಪ್ತನಾಗಿದ್ರಲ್ಲ ಮಟ್ಟೇಶ್ವೆರನನ್ನು ಯಾವುದೇ ಕಾರಣಕ್ಕೂ ಧೂತನನ್ನಾಗಿ ಮಾಡಬಾರದ, ಅವರನ್ನು ಬಲಿ ಕೊಡಬೇಕು ಮುಖ್ಯಧೂತ.
ಆ ಮಟ್ಟೇಶ್ವರ ಹರಿಯುತ್ತೀರುವ ನದಿಯಲ್ಲಿ ಮೀನು ಹಿಡಿದುಕೊಂಡು ಮೀನುಳಿ ತಿಂದುಕೊಂಡು ಊರಲ್ಲಿರಲಿ, ದೂತ ಸೌಧದ ಗೊಡವೆಯೇತಕೆ, ಆಗಲಿ ದೇವ ಮಾನವ, ನನ್ನ ಕುರ್ಚಿ, ಮಟ್ಟೇಶ್ವರರ ಬಲಿ ಹಾಕಿದ ಮೇಲೆ ಕುರ್ಚಿಯ ಮಂಡೆ ಬಿಸಿಯೇಕೆ ಸಿದ್ದೇಶ್ವರ.
ಮುಖ್ಯಧೂತನು ಆಗಲಿ ದೇವಮಾನವ ಆ ಮಟ್ಟೇಶ್ವರನಿಗೂ ಸೌಧದ ಧೂತನನ್ನಾಗಿ ಯಾವುದೇ ಕಾರಣಕ್ಕೂ ಮಾಡುವುದಿಲ್ಲ, ದೇವಮಾನವ ನನ್ನ ಈಗ ಕುರ್ಚಿ ಭದ್ರವಾಗಿದೆಯಲ್ಲವೆ ಎಂದಾಗ ಗಹಗಹಿಸಿ ನಗುವ ದೇವಮಾನವ. ಸಧ್ಯಕ್ಕೆ ಆ ಅಲೆಮಾರಿಗಳನ್ನು, ಮಟ್ಟೇಶ್ವರ ಅವರನ್ನು ಬಲಿ ಕೊಟ್ಟು ಬಾ, ದಸರಾ ಅಂಬಾರಿ ಮುಗಿದ ನಂತರ ದೊಡ್ಡ ದೊಡ್ಡ ಬಲಿ ಕೊಡಲು ಮುಂದಾಗುವಂತೆ ಎಂದು ಹೇಳುತ್ತಾ ಹೇಳುತ್ತಾ ದೇವಮಾನವನ ಅಶೀರರವಾಣಿಗೆ ತಡೆ ಬೀಳುತ್ತದೆ.

ದೇವಮಾನವನ ಆದೇಶದಂತೆ ಅಲೆಮಾರಿಗಳನ್ನು, ಮಟ್ಟೇಶ್ವರರನ್ನು ಬಿಲಿಕೊಟ್ಟ ಮುಖ್ಯದೇವಧೂತನು, ಗೌರಿ-ಗಣೇಶ ಹಬ್ಬದ ನೆಪದಲ್ಲಿ ನಿದ್ರೆಗೆ ಜಾರಿದ್ದರೂ, ಫ್ರೀಡಂ ಪಾರ್ಕಿನಲ್ಲಿ ಯಾವ ಮಂತ್ರಿ ಧೂತ ನಮ್ಮ ನೆರವಿಗೆ ಬರಬಹುದೆಂದು ಅಲೆಮಾರಿಗಳು ವಿವಿಧ ದೇವರುಗಳ ವೇಷ ಹಾಕಿ, ಚಾಟಿಯಲ್ಲಿ ಹೊಡೆದುಕೊಂಡು, ಹಾಡು ಹೇಳುತ್ತಿದ್ದರೂ ಕೂಗಳತೆ ದೂರದಲ್ಲಿರುವ ಧೂತ ಸೌಧಕ್ಕೆ ಕೇಳಿಸುತ್ತಿಲ್ಲವಂತಲ್ಲ.
ಸಿದ್ದೇಶ್ವರ, ಈಶ್ವರ, ಕುಮಾರೇಶ್ವರ, ಮಹದೇಶ್ವರ, ತಂಗಡೇಶ್ವರ, ನಿಮ್ಮನ್ನು ಬಲಿ ಪಡೆಯಲಿಯೆಂದು ಮೊಂಡರು ಕೈ ಕೊಯ್ದುಕೊಂಡರೆ, ದಕ್ಕಲೇರು ಭೂ ತಾಯಿಗೆ ಕೆಂಪನ್ನ ಚೆಲ್ಲಿದರೆ, ಹಂದಿಜೋಗರು ವರಾಹ ದೇವರಿಗೆ ಹಂದಿಮರಿ ಕಡಿದರೆ, ಮಾರಮ್ಮ ಪೂಜಾರಿಗಳು ಮಾರಮ್ಮನಿಗೆ ಕೊಂಬು ತಿರುಗಿದ ಟಗರು ಬಲಿ ಕೊಟ್ಟರೆ, ಸುಡುಗಾಡು ಸಿದ್ದರು ಚಾಟಿಯಲ್ಲಿ ಹೊಡೆದುಕೊಂಡರೆ ಏನಾಗಬಹುದು ಇಡೀ ಭೂಮಂಡಲ ಕೆರಳಿ ಕೆಂಪಾಗಿ ನಿಮ್ಮನ್ನು ಬಲಿ ಪಡೆಯದೆ ಬಿಡದು ಸಿದ್ದೇಶ್ವರನಿಗೆ ಉಘೇ ಉಘೇ ಸಮಾಜೇಶ್ವರ…
-ವೆಂಕಿ