ತುಮಕೂರು : ಪ್ರಭಾವಿ ಸಚಿವರುಗಳು ಎನ್ನಿಸಿಕೊಂಡಿದ್ದ ಜೆ.ಸಿ.ಮಾಧುಸ್ವಾಮಿ ಮತ್ತು ಬಿ.ಸಿ.ನಾಗೇಶ್ ಇಬ್ಬರೂ ಸೋತಿದ್ದಾರೆ.
ಈ ಇಬ್ಬರು ಸಚಿವರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದವರಾಗಿದ್ದರು.
ಜೆ.ಸಿ.ಮಾಧುಸ್ವಾಮಿಯವರು ಕಾನೂನು ಮತ್ತು ಸಣ್ಣ ನೀರಾವರಿ ಸಚಿವರಾಗಿ ಸರ್ಕಾರವನ್ನು ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವರಾಗಿ ತುಮಕೂರು ಜಿಲ್ಲೆಗೆ ಹೇಮಾವತಿ ನೀರನ್ನು ಹಾಸನ ಜಿಲ್ಲೆಯ ರಾಜಕಾರಣಿಗಳ ರಾಜಕೀಯದ ನಡುವೆಯೂ ಸಮರ್ಪಕವಾಗಿ ಹರಿಸುವಲ್ಲಿ ದಿಟ್ಟತನವನ್ನು ತೋರಿಸಿದ್ದರು. ಕೊರೊನಾ ಸಮಯದಲ್ಲಿ ಜಿಲ್ಲೆಯಲ್ಲಿ ಟೊಂಕ ಕಟ್ಟಿಕೊಂಡು ಕೊರೊನಾ ಸಂಕಷ್ಟಗಳನ್ನು ಎದುರಿಸುವಲ್ಲಿ ಆಕ್ಸಿಜನ್, ಅಗತ್ಯ ಸೌಲಭ್ಯಗಳನ್ನು ಮುಂಚೂಣಿಯಲ್ಲಿ ನಿಂತು ನಿಭಾಯಿಸಿದ್ದರು.
ವಿಧಾನಸಭೆಯ ಕಲಾಪವನ್ನು ನಡೆಸುವಲ್ಲಿ ಇವರು ಪ್ರಮುಖ ಪಾತ್ರ ವಹಿಸುತ್ತಿದ್ದರು, ಸಂಪುಟ ಸಭೆಯಲ್ಲಿಯೂ ಕೆಲ ತೀರ್ಮಾನಗಳನ್ನು ಪಟ್ಟು ಹಿಡಿದು ಜಾರಿಗೆ ತರುತ್ತಿದ್ದರು.
ಇಂತಹ ಸಚಿವರಾದ ಮಾಧುಸ್ವಾಮಿಯವರು ಎಂದೂ ಯಾರಿಗೂ ವರ್ಗಾವಣೆಗೆ ಶಿಫಾರಸ್ಸು ಪತ್ರ ನೀಡುತ್ತಿರಲಿಲ್ಲ, ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ನೀರಾವರಿ ಕೆಲಸ ಮತ್ತು ರಸ್ತೆ ಅಭಿವೃದ್ಧಿಗಳನ್ನು ಮಾಡಿದರು.
ಕ್ಷೇತ್ರದ ಜನರಿಗೆ ಜಾತ್ರೆ, ದೇವಸ್ಥಾನಗಳಿಗೆ ಹಣ ನೀಡುವುದಿಲ್ಲ, ನಾವು ಅಭಿವೃದ್ಧಿ ಮಾಡಲು ಬಂದಿರುವುದು ಎಂದು ಖಡಕ್ಕಾಗಿ ಹೇಳುತ್ತಿದ್ದರು.
ಯಾವ ಮುಲಾಜಿಗೂ ಒಳಗಾಗುತ್ತಿರಲಿಲ್ಲ, ಹೇಳುವುದನ್ನು ನೇರವಾಗಿ ಹೇಳುತ್ತಿದ್ದರು, ಹೀಗೆ ಹೇಳುವುದೇ ಇವರ ಸೋಲಿಗೆ ಕಾರಣವಾಯಿತು ಎನ್ನಲಾಗುತ್ತಿದೆ.
ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಬಿ.ಸಿ.ನಾಗೇಶ್ ಅವರು ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಇತಿಹಾಸವನ್ನು ತಿರುಚಿದರು, ಎಡಪಂಥೀಯ ಲೇಖಕರ ಲೇಖನಗಳನ್ನು ಮೊಟಕುಗೊಳಿಸಿ ಬಲಪಂಥೀಯರ ಲೇಖನಗಳನ್ನೇ ಸೇರಿಸಿದ್ದಾರೆಂದು ಪ್ರತಿಭಟನೆಗಳು, ಶಿಕ್ಷಣವನ್ನೆ ಕೇಸರಿಮಯ ಮಾಡಲು ಹೊರಟಿದ್ದಾರೆಂಬ ದೊಡ್ಡ ಆರೋಪ ಇವರ ಮೇಲಿತ್ತು, ಅಲ್ಲದೆ ಕ್ಷೇತ್ರದಲ್ಲಿ ಇವರು ಅವರದೇ ಸರ್ಕಾರವಿದ್ದರೂ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ವಿಫಲರಾಗಿದ್ದು ಇವರ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.