ಹಿರಿಯೂರು ಬಳಿಯ ಅಪಘಾತ ಏಕಾಯಿತು, ಹೇಗಾಯಿತು…! ಅಮೂಲ್ಯ ಜೀವಗಳ ಸಾವಿಗೆ ಕಾರಣ ಯಾರು…?

ಹಿರಿಯೂರು : ಇನ್ನೊಂದು ಕ್ಷಣವಾಗಿದ್ದರೆ ಆ ಬಸ್ಸು ಮುಂದೆ ಸಾಗುತ್ತಿತ್ತು, ಹಿಂದೆ ಇದ್ದ ಶಾಲಾ ಮಕ್ಕಳ ಬಸ್ಸಿಗೆ ಆ ಲಾರಿ ಡಿಕ್ಕಿ ಹೊಡೆಯ ಬೇಕಿತ್ತು, ಆದರೆ ವೇಗವಾಗಿ ತೆರಳುತ್ತಿದ್ದ ಸೀ ಬರ್ಡ್ ಬಸ್ ಶಾಲಾ ಬಸ್ ಹಿಂದಿಕ್ಕಿ ಮುಂದಕ್ಕೆ ಚಲಿಸಿದ್ದಕ್ಕೆ ಬಸ್ಸು ಲಾರಿಗೆ ಸಿಕ್ಕಿಕೊಂಡಿತೆ ಎಂಬ ಪ್ರಶ್ನೆ ಈಗ ಎಲ್ಲರಲ್ಲಿ ಕಾಡುತ್ತಾ ಇದೆ.

ಬೆಂಗಳೂರಿನಿಂದ ಸೀ ಬರ್ಡ್ ಟ್ರಾವೆಲ್ಸ್ ಸ್ಲೀಪರ್ ಕೋಚ್ ಬಸ್ಸು ಸುಮಾರು ಮಧ್ಯರಾತ್ರಿ 12 ಗಂಟೆಗೆ ಬಿಟ್ಟಿದೆ. ಬೆಂಗಳೂರು ಬಿಡುವಾಗ ಬಸ್ಸಿನಲ್ಲಿ ಡ್ರೈವರ್ ಕಂಡಕ್ಟರ್ ಸೇರಿ 30 ಜನರಿದ್ದರು, ಮಧ್ಯದಲ್ಲಿ ಇಬ್ಬರು ಹತ್ತಿಕೊಂಡಿದ್ದಾರೆ ಎಂದು ಪೊಲೀಸರ ಹೇಳಿಕೆಯಿಂದ ತಿಳಿದು ಬಂದಿದೆ.

ಈ ಟ್ರಾವೆಲ್ಸ್ ಗಳಿಗೆ ಇಷ್ಟು ಸಮಯಕ್ಕೆ ಕೊನೆಯ ನಿಲ್ದಾಣವನ್ನು ತಲುಪಬೇಕು ಎಂಬ ಷರತ್ತನ್ನು ಆ ಬಸ್ಸಿನ ಕಂಪನಿಯವರು ವಿಧಿಸಿರುತ್ತಾರೆ, ಈ ಹಿನ್ನಲೆಯಲ್ಲಿಯೇ ಈ ಟ್ರಾವೆಲ್ಸ್‍ನವರು ಮುಂಗಡ ಬುಕ್ಕಿಂಗ್ ಮಾಡಿಕೊಂಡು ಇಂತಿಂತಹ ಸಮಯಕ್ಕೆ ಹೋಗುವವರಿಗೆ ಆ ಸಮಯಕ್ಕೆ ಹೊರಡುವ ಟ್ರಾವೆಲ್ಸ್ ಗಳ ಟಿಕೆಟ್‍ಗಳನ್ನು ಬುಕ್ ಮಾಡಿ ಕೊಡುತ್ತಾರೆ.

ಈ ವೋಲ್ವೋ ಟ್ರಾವೆಲ್ಸ್ ಗಳು ಸ್ಲೀಪಿಂಗ್ ಕೋಚುಗಳು ಆಗಿರುವುದರಿಂದ ಬಹುತೇಕ ರಾತ್ರಿಯ ವೇಳೆಯಲ್ಲೆ ಚಲಿಸುತ್ತವೆ, ಇವುಗಳಲ್ಲಿ ರೈಲುಗಳಲ್ಲಿರುವಂತೆ ಮೇಲೆ ಕೆಳಗೆ ಮಲಗುವ ವ್ಯವಸ್ಥೆಯನ್ನು ಮಾಡಿರುತ್ತಾರೆ, ಈ ಹಿನ್ನೆಲೆಯಲ್ಲಿಯೇ ಇಂತಹ ಬಸ್‍ಗಳು ಅಪಘಾತವಾದಾಗ ಪ್ರಯಾಣಿಕರು ಬೇಗ ಧುಮಿಕಿ ಪಾರಾಗಲು ಸಾಧ್ಯವಾಗುವುದಿಲ್ಲ.

ಈ ಬಸ್ ಗಳು ಅತಿ ವೇಗವಾಗಿ ಚಲಿಸುವುದರಿಂದ ಇಂಜಿನ್‍ಗಳು ತುಂಬಾ ಬಿಸಿಯಾಗಿರುತ್ತವೆ ಹಾಗೂ ಬಸ್‍ಗಳನ್ನು ಫೈಬರ್ ವಸ್ತುಗಳಿಂದ ನಿರ್ಮಾಣ ಮಾಡಿರುತ್ತವೆ. ಹಾಗೂ ಈ ಬಸ್‍ಗಳಲ್ಲಿ ಮೂರು ಡಿಸೇಲ್ ಟ್ಯಾಂಕ್‍ಗಳನ್ನು ಹೊಂದಿರುತ್ತವೆ, ಒಂದು ಮುಂದೆ, ಎರಡನೆಯದು ಮಧ್ಯದಲ್ಲಿ, ಮೂರನೆಯದು ಹಿಂದೆ ಇರುತ್ತದೆ.

ಮೂರು ಡಿಸೇಲ್ ಟ್ಯಾಂಕ್‍ಗಳಿರುವುದರಿಂದ ಯಾವ ಭಾಗಕ್ಕಾದರೂ ಅಪಘಾತವಾಗಿ ಡಿಸೇಲ್ ಟ್ಯಾಂಕ್ ಹೊಡೆದು ಹೋದರೆ ಬಸ್ಸು ವೇಗವಾಗಿ ಚಲಿಸುತ್ತಿರುವುದರಿಂದ ತಳ ಭಾಗದಲ್ಲಿ ಇಂಜಿನ್ ಇರುವುದರಿಂದ ಬಿಸಿಯಾಗಿರುವುದರಿಂದ ಕೂಡಲೇ ಬೆಂಕಿ ಹತ್ತಿಕೊಳ್ಳುತ್ತದೆ.

ಈ ವೋಲ್ವೋ ಬಸ್‍ಗಳಿಗೆ ವೇಗದ ಮಿತಿ ಇಲ್ಲದಿರುವುದರಿಂದ, ಅತಿ ವೇಗವಾಗಿ ಚಲಿಸುತ್ತಿರುವುದರಿಂದ ಮುಂದಿನ ಅಥವಾ ಹಿಂದಿನ ವಾಹನಗಳು ಅತೀ ಸಮೀಪಕ್ಕೆ ಬಂದಾಗ ಏನಾದರೂ ಆಗಬಹುದು.

ಡಿಸೇಲ್ ಟ್ಯಾಂಕ್ ಹೇಗಿರುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಗಮನಿಸಬಹುದು.

ಇನ್ನಾ ಲಾರಿಗಳು ಅದರಲ್ಲೂ ಈ ಕಂಟೈನರ್‍ಗಳು ತುಂಬಾ ಭಾರವಾದ ವಸ್ತುಗಳನ್ನು ತುಂಬಿಕೊಂಡು ಚಲಿಸುತ್ತಿರುತ್ತವೆ, ಇವುಗಳು ಯಾವ ವೇಗದಲ್ಲಿ ಚಲಿಸುತ್ತಿರುತ್ತವೆ ಎಂಬುದು ಯಾರಿಗೂ ತಿಳಿಯದ ಯಕ್ಷ ಪ್ರಶ್ನೆ. ಯಾಕೆಂದರೆ ಕೆಲವೊಮ್ಮೆ ಆಮೆ ವೇಗದಲ್ಲಿ ಚಲಿಸುತ್ತಿದ್ದರೆ, ಕೆಲವು ವೇಳೆ ಶರ ವೇಗದಲ್ಲಿ ಹೋಗುತ್ತಿರುತ್ತವೆ, ಈ ಕಂಟೈನರ್ ಲಾರಿಗಳಲ್ಲಿ ಇಂಜಿನಿಗೂ ಬಾಡಿಗೂ ಪ್ರತ್ಯೇಕತೆ ಇರುವುದರಿಂದ ಕೆಲವೊಮ್ಮೆ ಇವು ಯಾವ ಕಡೆ ವಾಲುತ್ತವೆ, ಯಾವ ಕಡೆ ಚಲಿಸುತ್ತವೆ ಎಂಬುದೇ ತಿಳಿಯುವುದಿಲ್ಲ.

ಇವುಗಳ ಚಾಲಕರುಗಳು ಲಾರಿಯನ್ನು ಒಂದು ತರಹ ಆನೆ ತರಹ ಪಳಗಿಸಿದಂತೆ ಪಳಗಿಸಿಕೊಂಡು ಚಾಲನೆ ಮಾಡುತ್ತಿರುತ್ತಾರೆ, ಈ ಚಾಲಕರಿಗೆ ವಿಶ್ರಾಂತಿ, ಊಟದ ಸಮಯ ಎಂಬುದೇ ಇರುವುದಿಲ್ಲ, ಒಟ್ಟಿನಲ್ಲಿ ಲಾರಿ ಮತ್ತು ಚಾಲಕ ಜೊಂಪು ನಿದ್ರೆಯಲ್ಲೇ ಚಲಿಸುತ್ತಿರುತ್ತಾರೆ.

ಈ ಲಾರಿಗಳ ಚಾಲಕರು ರಾತ್ರಿಯ ಅವೇಳೆಯಲ್ಲಿ ಗಡದ್ದಾಗಿ ಊಟ ಮಾಡಿ ಡರ್ ಎಂದು ತೇಗಿ ಸ್ಟೇರಿಂಗ್ ಮೇಲೆ ಕೂತಾಗ, ಲಾರಿ ವಾಲಾಡುವ ಸ್ಥಿತಿಗೆ ತೊಟ್ಟಿಲು ತೂಗಿದಂತಾಗಿ, ಜೊಂಪು ನಿದ್ದೆಗೆ ಆ ಕ್ಷಣಕ್ಕೆ ಜಾರಿ ಬಿಡುತ್ತಾರೆ, ಹೀಗೆ ತೂಕಡಿಸಿ ಕಣ್ಣು ಬಿಡುವುದರೊಳಗೆ ಸ್ಟೇರಿಂಗ್ ಯಾವ ಕಡೆಗೆ ತಿರುಗುತ್ತಾ ಇದೆ ಎಂಬುದು ತಿಳಿಯುವುದಿಲ್ಲ, ಮುಂದೆ ಏನಿದೆ ಅಂತ ಗೋತ್ತಾಗುವುದೇ ಇಲ್ಲ ಅಷ್ಟರೊಳಗೆ ಅಪಘಾತವಾಗಿ ಹಲವಾರು ಜನ ಅಮೂಲ್ಯವಾದ ಜೀವಗಳನ್ನು ಕಳೆದುಕೊಂಡಿರುತ್ತಾರೆ.

ಹಿರಿಯೂರು ಬಳಿ ನಡೆದ ಅಪಘಾತವೂ ಸಹ ಲಾರಿಯ ಚಾಲಕನ ಜೊಂಪು ನಿದ್ದೆಯಿಂದ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎನ್ನಲಾಗಿದೆ, ಲಾರಿ ಬೆಂಗಳೂರು ಕಡೆಗೆ ಚಲಿಸುತ್ತಿದ್ದದ್ದು, ಚಿತ್ರದುರ್ಗ ಕಡೆ ಚಲಿಸುತ್ತಿದ್ದ ವೋಲ್ವೋ ಬಸ್ ಸೀ ಬರ್ಡ್ ಗೆ ಡಿವೈಡರ್ ಡಾಟಿ ಡಿಕ್ಕಿ ಹೊಡೆದಿದೆ ಎಂದರೆ ಚಾಲಕ ಎಚ್ಚರ ತಪ್ಪಿದ್ದ ಎಂದರ್ಥ.

ಚಾಲಕನ ಕ್ಷಣಿಕ ಜೊಂಪಿನಿಂದ ತಾನು ಜೀವ ಕಳೆದುಕೊಂಡು ಐದು ಜನರ ಜೀವ ತೆಗೆದಿರುವುದರ ಜೊತೆಗೆ ಹಲವರಿಗೆ ಸುಟ್ಟ ಗಾಯಗಳಿಂದ ನರಕಯಾತನೆ ಅನುಭವಿಸುತ್ತಿದ್ದಾರೆ.

ಇದಕ್ಕೆಲ್ಲಾ ಯಾರನ್ನು ದೂರುವುದು, ಲಂಚ, ಭ್ರಷ್ಟಚಾರ ತುಂಬಿರುವಾಗ ರಸ್ತೆ ನಿಯಮಗಳೆಲ್ಲಾ ಮಂಗಮಾಯವಾಗಿ ಬದುಕಿ ಬಾಳಬೇಕಾದ ಅಮೂಲ್ಯ ಜೀವಗಳನ್ನು ಕಳೆದುಕೊಂಡು ಎಷ್ಟೋ ಸಂಸಾರಗಳು ಅನಾಥವಾಗುತ್ತಿರುವುದಕ್ಕೆ ಕಾರಣ ಯಾರು? ಈ ವ್ಯವಸ್ಥೆ ಸರಿ ಪಡಿಸುವವರು ಯಾರು?

ಬಸ್ ನಲ್ಲಿ ಯಾರು ಯಾರು ಇದ್ದರು.

ಚಿತ್ರದುರ್ಗದಲ್ಲಿ ನಡೆದ ಭೀಕರ ಬಸ್ ದುರಂತ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ‘ಸೀ ಬರ್ಡ್’ (Seabird) ಬಸ್ ನಂಬರ್ KA-01 AE-5217 ಬೆಂಕಿಗೆ ಆಹುತಿಯಾಗಿದೆ. ಡಿಸೆಂಬರ್ 24, 2025 ರಂದು ರಾತ್ರಿ ಹೊರಟಿದ್ದ ಈ ಬಸ್‌ನಲ್ಲಿ ಒಟ್ಟು 32 ಜನ ಪ್ಯಾಸೆಂಜರ್ಸ್ (Passengers) ಇದ್ದರು ಎಂದು ಚಿತ್ರದುರ್ಗದ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ನೀಡಿದ್ದಾರೆ.

ಸೀ ಬರ್ಡ್ ಟ್ರಾವೆಲ್ಸ್‌ನ ಚಾರ್ಟ್ (Chart) ಪ್ರಕಾರ ಆ ಬಸ್‌ನಲ್ಲಿ ಪ್ರಯಾಣ ಮಾಡ್ತಿದ್ದವರ ಹೆಸರುಗಳು ಈ ಕೆಳಗಿನಂತಿವೆ. 3 ಜನ ಬಸ್ ಸಿಬ್ಬಂದಿ ಕೂಡ ಈ ಬಸ್‌ನಲ್ಲಿದ್ರು.

ಪ್ರಯಾಣಿಕರ ಮಾಹಿತಿ ಇಲ್ಲಿದೆ ನೋಡಿ…

ಗಾಂಧಿನಗರದಿಂದ ಬಸ್ ಹತ್ತಿದವರು ಬೆಂಗಳೂರಿನ ಗಾಂಧಿನಗರದಲ್ಲಿರುವ ಸೀ ಬರ್ಡ್ ಲಾಂಜ್‌ನಿಂದ ರಾತ್ರಿ 8:25ಕ್ಕೆ ಬಸ್ ಹೊರಟಿದೆ. ಇಲ್ಲಿ ಒಟ್ಟು 7 ಜನ ಬಸ್ ಹತ್ತಿದ್ದಾರೆ. ಅವರ ಹೆಸರುಗಳು: ಮಂಜುನಾಥ್ (Manjunath) , ಸಂಧ್ಯಾ ಎಚ್ (Sandhya h) , ಶಶಾಂಕ್ ಎಚ್ ವಿ (Shashank hv) , ದಿಲೀಪ್ (Dilip) , ಪ್ರತೀಶ್ವರನ್ (Prethiswaran) , ಬಿಂದು ವಿ (Bindhu v) ಮತ್ತು ಕವಿತಾ ಕೆ (Kavitha k).

ಆನಂದರಾವ್ ಸರ್ಕಲ್ ಪ್ಯಾಸೆಂಜರ್ಸ್ ಬಸ್ ಮುಂದೆ ಆನಂದರಾವ್ ಸರ್ಕಲ್ ಕಡೆ ಬಂದಾಗ ಅಲ್ಲಿ ಮೂರು ಜನ ಬಸ್ ಹತ್ತಿದ್ದಾರೆ. ಅನಿರುದ್ಧ್ ಬ್ಯಾನರ್ಜಿ (Anirudh banerjee) , ಅಮೃತಾ (Amruta) ಮತ್ತು ಇಶಾ (Isha) ಇಲ್ಲಿಂದ ಜರ್ನಿ ಶುರು ಮಾಡಿದ್ರು. ಇವರೆಲ್ಲರೂ ಸ್ಲೀಪರ್ ಬಸ್‌ನ ಅಪ್ಪರ್ ಬರ್ತ್ ಬುಕ್ ಮಾಡಿದ್ರು.

ಮೆಜೆಸ್ಟಿಕ್‌ನಲ್ಲಿ ಅತಿ ಹೆಚ್ಚು ಜನ!

ಮೆಜೆಸ್ಟಿಕ್ ಪಿಕಪ್ ಪಾಯಿಂಟ್‌ನಲ್ಲಿ ಅತಿ ಹೆಚ್ಚು ಅಂದ್ರೆ 13 ಜನ ಬಸ್ ಏರಿದ್ದಾರೆ. ಸೂರಜ್ (Suraj) , ಮಾನಸ (Manasa) , ಮಿಲನ (Milana) , ಹೇಮರಾಜ್ ಕುಮಾರ್ (Hemraj kumhar) , ಕಲ್ಪನಾ ಪ್ರಜಾಪತಿ (Kalpana prajapati) , ಶಶಿಕಾಂತ್ ಎಂ (Shashikant m) , ವಿಜಯ್ ಭಂಡಾರಿ (Vijay Bhandari) , ನವ್ಯ (Navya) , ಅಭಿಷೇಕ್ (Abhishek) , ಕಿರಣ್ ಪಾಲ್ ಎಚ್ (Kiran pal h) , ಕೀರ್ತನ್ ಎಂ (Kirthan m) , ನಂದಿತಾ ಜಿ ಬಿ (Nanditha g b) ಮತ್ತು ದೇವಿಕಾ ಎಚ್ (Devika h).

ಯಶವಂತಪುರ ಮತ್ತು ಗೊರಗುಂಟೆಪಾಳ್ಯ

ಯಶವಂತಪುರದ ಗೋವರ್ಧನ್ ಥಿಯೇಟರ್ ಹತ್ರ ಮೇಘರಾಜ್ (Megharaj) , ಮಸ್ರತುನ್ನಿಸಾ ಎಸ್ ಎನ್ (Masratunnisa s n) ಮತ್ತು ಸೈಯದ್ ಜಮೀರ್ ಗೌಸ್ (Syed zameer ghouse) ಬಸ್ ಹತ್ತಿದ್ದಾರೆ. ಕೊನೆಯದಾಗಿ ಗೊರಗುಂಟೆಪಾಳ್ಯದಲ್ಲಿ ಗಗನಶ್ರೀ ಎಸ್ (Gaganashree s) , ರಶ್ಮಿ ಮಹಲೆ (Rashmi mahale) ಮತ್ತು ರಕ್ಷಿತಾ ಆರ್ (Rakshitha r) ಬಸ್ ಹತ್ತಿದ್ದಾರೆ.

ಎಲ್ಲಿಗೆ ಹೋಗ್ತಿದ್ರು ಗೊತ್ತಾ?
ಈ ಬಸ್‌ನಲ್ಲಿ ಕುಳಿತಿದ್ದ 25 ಜನರು ಗೋಕರ್ಣಕ್ಕೆ ಟಿಕೆಟ್ ಬುಕ್ ಮಾಡಿದ್ದರು. ಇನ್ನುಳಿದವರಲ್ಲಿ ಇಬ್ಬರು ಶಿವಮೊಗ್ಗಕ್ಕೆ ಮತ್ತು ಇಬ್ಬರು ಕುಮಟಾಗೆ ಪ್ರಯಾಣ ಬೆಳಸಿದ್ದರು.

ಮೃತಪಟ್ಟವರ ವಿವರ

ಬಿಂದು, ಗ್ರೇಯ (05 ವರ್ಷ – ಬಿಂದು ಅವರ ಮಗಳು), ಮಾನಸ, ನವ್ಯ ಹಾಗೂ ರಶ್ಮಿ ಮಹಲೆ ಎನ್ನುವವರು ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *