ಛೇ ನೀನು ಇಷ್ಟು ಬೇಗ ಹೋಗುತ್ತಿಯ ಎಂದುಕೊಂಡಿರಲಿಲ್ಲ, ನೀನು ಹೋಗುವಾಗ ನಮಗೆ ಟಾಟಾವನ್ನಾದರೂ ಮಾಡುತ್ತೀಯ ಅಂದುಕೊಂಡಿದ್ದೆವೆ ಅದನ್ನು ಮಾಡದೆ ತಣ್ಣಗೆ ಹೊರಟೇ ಬಿಟ್ಟೆ.
ನೀನು ಬರುವಾಗ ನಿನ್ನ ಸ್ವಾಗತಿಸಿದ್ದನ್ನು ನೋಡಿದರೆ ಬಹುಕಾಲ ಬದಕುತೀಯ ಅಂದುಕೊಂಡೆವು, ಆದರೆ ನೀನು ಬದುಕಿದ್ದೇ ಅಲ್ಪ ಕಾಲ, ಈ ಅಲ್ಪ ಕಾಲದಲ್ಲೇ ನೀನು ಏನೇನು ಆಟ ಆಡಿ ಬಿಟ್ಟೆ, ಇಷ್ಟೆಲ್ಲಾ ಆಟ ಆಡುವಾಗ ನೀನು ಯಾರನ್ನು ಲೆಕ್ಕಕ್ಕೆ ಇಟ್ಟುಕೊಳ್ಳಲಿಲ್ಲ ಯಾಕೆಂದರೆ ಅದು ನಿನ್ನ ನಿಯಮ.
ನೀನು ಬರುವಾಗ ಏನೆಲ್ಲಾ ಅಂದುಕೊಂಡಿರುತ್ತೀಯೋ ಅದನ್ನು ಮಾಡಿಯೇ ತೀರುತ್ತೀಯ, ಆದರೆ ಈ ಮನುಷ್ಯ ಅಂದುಕೊಂಡಿದ್ದನ್ನೆಲಾ ಮಾಡುವುದಿರಲಿ, ಮೋಸ, ಭ್ರಷ್ಟಚಾರ, ವಂಚನೆ, ಕೊಲೆ, ಸುಲಿಗೆ, ಸುಳ್ಳು, ಅಯ್ಯೋ ಒಂದೋ ಎರಡೋ, ಇದೆಲ್ಲ ಮೆರೆಯಲು ನೀನೆ ಕಾರಣ, ಅದೇ ರೀತಿ ಕಷ್ಟ-ಕಾರ್ಪಣ್ಯಗಳನ್ನು ನೀಡುತ್ತೀಯ, ಬೇವು-ಬೆಲ್ಲದಂತೆ.
ನೀನು ಬರುವಾಗ ತಣ್ಣಗೆ ಬಂದು ಬಿಟ್ಟೆ, ಯಾಕೆಂದರೆ ನೀನು ಬರುವುದೇ ಮಧ್ಯ ರಾತ್ರೀಲಿ, ಹೋಗುವುದು ಮಧ್ಯ ರಾತ್ರೀಲಿ, ಈ ಮಧ್ಯೆ ನಿನ್ನ ಆಟ-ಟೋಪಗಳೇನಪ್ಪ, ಕೆಲವರನ್ನು ಕರುಣೆಯಿಲ್ಲದೆ ಜೀವ ತೆಗೆಯುತ್ತೀಯ, ಮತ್ತೆ ಕೆಲವರನ್ನು ಪ್ರೀತಿಯಿಂದ ಈ ಭೂಮಿಗೆ ತರುತ್ತೀಯ,
ನೀನು ಬರುವಾಗಲೇ ಕೆಲವರು ಪಂಚಂಗ ನೋಡುವುದೇನು, ಯಾರ್ಯಾರಿಗೆ ಏನೇನು ಆಗುತ್ತದೆ ಎಂದು ಹೊಟ್ಟೆ ಪಾಡಿಗಾಗಿ ಹೇಳಬಾರದನ್ನೆಲ್ಲಾ, ಮಾಡಬಾರದನ್ನೆಲ್ಲಾ ಮಾಡುತ್ತಾರೆ, ಆದರೆ ನೀನು ಮಾಡುವುದನ್ನು ಮಾಡೇ ಮಾಡುತ್ತೀಯ. ಬಿರುಗಾಳಿ, ಚಂಡಮಾರುತ, ಬಿರುಬಿಸಿಲು, ಮಳೆಗಾಲಿ, ಯುದ್ಧ, ಭೂಕಂಪ, ಅಪಘಾತ, ಅತಿವೃಷ್ಠಿ, ಅನಾವೃಷ್ಠಿ ಏನೆಲ್ಲಾ ಮಾಡುತ್ತೀಯ, ಆದರೂ ನಿನ್ನ ಯಾರೂ ತಡೆಯಲು ಸಾಧ್ಯವಿಲ್ಲ, ನಿನ್ನ ಆ ಕಾಲಘಟ್ಟಕ್ಕೆ ನೀನು ಅವತಾರಗಳನ್ನು ಎತ್ತುತ್ತಲೇ ಇರುತ್ತೀಯ.
ನೀನು ಅಲ್ಪ ದಿನಗಳಿಗೆ ಇತಿಹಾಸ ಪುಟಗಳನ್ನು ಸೇರುವುದು ಎಷ್ಟು ಸರಿ, ಕೆಲವರಿಗೆ ಜನ್ಮ ದಿನಾಂಕ, ಇಷವಿ ಕೊಟ್ಟರೆ, ಕೆಲವರಿಗೆ ಮರಣ ದಿನಾಂಕ, ಇಷವಿ ಕೊಡುತ್ತೀಯ, ಇಷ್ಟಿದ್ದರೂ ನಿನ್ನ ಬಗ್ಗೆ ಈ ಮನುಷ್ಯನಿಗೆ ಭಯವಿಲ್ಲ, ನೀನು ಎಷ್ಟು ದಿನ ಇರುತ್ತೀಯ ಎಂದು ಗಹಗಹಿಸಿ ನಗುತ್ತಿರುತ್ತಾನೆ. ಆ ಮನುಷ್ಯನಿಗೆ ನೀನು ತಿರುಗೇಟು ಕೊಟ್ಟರೆ ಅಯ್ಯೋ ಎಂದು ಅಳುತ್ತಾ ಎಂತಾ ವರ್ಷನಪ್ಪ ಎಂದು ನಿನ್ನನ್ನು ಬೈಯ್ಯುತ್ತಾನೆ.
ನಿನ್ನ ಜೀವನ ಕೇವಲ 365ದಿನಗಳಾದರೂ, ನಿನ್ನ ಅವಶ್ಯಕತೆ 365ದಿನ-ರಾತ್ರಿ ಈ ಮನುಷ್ಯನಿಗೆ ಬಹಳ ಮುಖ್ಯ, ಏಕೆಂದರೆ ನೀನು ಕಾಲ ಚಕ್ರದಡಿ ಓಡುತ್ತಲೇ ಇರುತ್ತೀಯ, ನಿನ್ನ ಈ ಓಟಕ್ಕೆ ಮನುಷ್ಯ ಓಡಬೇಕು ಹೇಗೆಂದರೆ, ಮಗುವಾದವನ್ನು ಬಾಲಕ, ಯುವಕ, ಮಧ್ಯಮ, ಮುಪ್ಪುನತ್ತ ಸಾಗುತ್ತಿರುವಾಗ ತನ್ನ ಬಂಡಿಯಲ್ಲಿ ಕುಳಿತಿರುವ ಹೆಂಡತಿ, ಮಕ್ಕಳು, ಗಂಡ, ಅಪ್ಪ, ಅಮ್ಮ, ಅಣ್ಣ, ತಮ್ಮ, ತಂಗಿ, ಅಕ್ಕ, ಗೆಳೆಯ, ಗೆಳತಿ ಎಲ್ಲರನ್ನು ಬದುಕಿನ ಬಂಡಿಯಲ್ಲಿ ನಿನ್ನ ಓಟದ ಜೊತೆ ಓಡಬೇಕು.
ನೀನೇನೋ ಹಗಲು-ರಾತ್ರಿಗಳನ್ನು ಯಾವ ದಾಕ್ಷಿಣ್ಯವೂ ಇಲ್ಲದೆ ಓಡಿಸುತ್ತೀಯ ಆದರೆ ಈ ಮನುಷ್ಯ ದಿನ ಬೆಳಗ್ಗೆ, ಸಂಜೆ, ರಾತ್ರಿ, ಎರಡೊತ್ತು ಊಟಕ್ಕೆ, ಮಕ್ಕಳ ಶುಲ್ಕಕ್ಕೆ, ಮನೆ ಬಾಡಿಗೆಗೆ, ಹೊಲದ ಕೆಲಸಕ್ಕೆ, ಹಬ್ಬ ಹರಿ ದಿನಕ್ಕೆ, ನೆಂಟರು-ಇಷ್ಟರ ಬಯಕೆ ಈಡೇರಿಸೋಕೆ ದಡಿಮೆಯ ಓಟಕ್ಕೆ ಓಡ ಬೇಕು, ಸೂರ್ಯ ಮೂಡಿದಾಗಿನಿಂದ-ಮುಳುಗುವುದರೊಳಗೆ ತನ್ನ ಹೊಟ್ಟೆ ಜೊತೆಗೆ ಮನೆ, ಮಠಕ್ಕೂ ಈ ದುಡಿಮೆ ಆಗುತ್ತದಾ ಎಂದು ಬಡವನಿಂದ ಹಿಡಿದು ಶ್ರೀಮಂತನವರೆಗೂ ಲೆಕ್ಕ ಹಾಕುತ್ತಾನೆ.
ನೀನು ಮಾತ್ರ ಕರುಣೆ ಇಲ್ಲದೆ ಓಡುತ್ತಲೇ ಇರುತ್ತೀಯ, ರೋಗ-ರುಜಿನಗಳನ್ನು ತರುತ್ತೀಯ, ಒಂದು ಕಡೆ ಸಮೃದ್ಧಿ ತಂದರೆ ಮತ್ತೊಂದು ಕಡೆ ಅಶಾಂತಿ, ಭಯ, ಹಸಿವು, ನೀರಡಿಕೆ ತಂದು ತಮಾಷೆ ನೋಡುತ್ತೀಯ, ಹಗಲೆನ್ನದೆ, ರಾತ್ರಿಯೆನ್ನದೆ ಮಳೆ-ಗಾಳಿ ತಂದು ರೈತನ ಗೋಳು ಹೊಯ್ದುಕೊಳ್ಳುತ್ತೀಯ, ಕೆಲವೊಮ್ಮೆ ಮಳೆಯನ್ನೆ ಸುರಿಸದೆ ಮುಗಿಲ ಕಡೆ ನೋಡಿ ಅಯ್ಯೊ ಮೋಡಗಳೇ ಇಲ್ಲವಲ್ಲ ಈ ಕಾಲಕ್ಕೆ ಏನು ಬಂತಪ್ಪ ಎಂದು ಮಮ್ಮಲ ಮರುಗುವಂತೆ ಮಾಡುತ್ತೀಯ.
2022 ಎಂಬ ನೀನು ಹೀಗೆ ಮೌನವಾಗಿ ಹೊರಟು ಬಿಟ್ಟೆ, ನೀನು ಹೋಗುವಾಗ ಇತಿಹಾಸವನ್ನು ಸೃಷ್ಠಿ ಮಾಡಿ ಹೋಗಿದ್ದೀಯ, ಯಾಕೆಂದರೆ ಶತಮಾನಗಳಿಂದ ತುಂಬಿರದ ಕೆರೆಕಟ್ಟೆ, ಜಲಾಶಯ, ಡ್ಯಾಂಗಳನ್ನು ತುಂಬಿಸಿದ್ದೀಯ. ಸಾವಿರಾರು ಅಡಿ ಕೊರೆಸಿದರೂ ನೀರು ಬಾರದ ಬೋರ್‍ವೆಲ್‍ಗಳಲ್ಲಿ ನೀರು ಚಿಮ್ಮನೇ ಚಿಮ್ಮುವಂತೆ ಮಾಡಿದ್ದೀಯ, ಕೆಲವರ ಅಧಿಕಾರದಿಂದ ಇಳಿಸಿದ್ದೀಯ, ಕೆಲವರಿಗೆ ಅಧಿಕಾರ ಕೊಟ್ಟೀದೀಯ ಇದಕ್ಕಿಂತ ಇನ್ನೇನು ಬೇಕು.
ಸೊಕ್ಕಿನಿಂದ ಮೆರೆಯುವವರಿಗೂ, ಮೆರೆಯದವರೆಗೂ ಎಚ್ಚರಿಕೆ ಗಂಟೆಯೊಂದಿಗೆ ನೀನು ಕೇವಲ 365 ದಿನಗಳಿಗೆ ತಣ್ಣಗೆ ಹೊರಟು ಹೋದದ್ದು ಎಷ್ಟು ಸರಿ. ನೀನಾಗೆ ನೀನು ಹೋದೆಯಂತಲ್ಲ, ನೀನು ಹೋಗುವಾಗ ನಿನಗೆ ವಿಧಾಯ ಯಾರೂ ಹೇಳಲಿಲ್ಲ, ಆದರೆ ಮುಂದಿನವರಿಗೆ ಭರ್ಜರಿ ಸ್ವಾಗತ ಕೋರಿ ಕುಡಿದು, ಕುಪ್ಪಳಿಸಿದರು.
ಆದರೆ ನೀನು ಅಷ್ಟೇನು ತೊಂದರೆ ಕೊಡಲಿಲ್ಲ ಎಂದು ನಿನ್ನನ್ನು ಭಾವನಾತ್ಮಕವಾಗಿ ಬೀಳ್ಕೊಡಿಗೆ ಕೊಡ ಬೇಕಿತ್ತು, ಮನುಷ್ಯ ಸ್ವಾರ್ಥಿ ಅಲ್ಲವೆ, ನಿನಗೆ ಗೊತ್ತಲ್ಲ ನಿನಗೆ ಅವನು ಏನು ಕೊಡಲಿಲ್ಲ, ನೀನು ಅವನಿಗೆ ಎಲ್ಲ ಕೊಟ್ಟೆ, ನಿನಗೆ ಒಳ್ಳೆಯದಾಗಲಿ 2022.
-ಹೆಚ್.ವಿ.ವಿ.