ತುಮಕೂರು: ಕ್ಷೇತ್ರದ ಬಿಜೆಪಿ, ಜೆಡಿಎಸ್ ಕಾರ್ಯಕರ್ತರ ಉತ್ಸಾಹ ಕಂಡು ಹುಮ್ಮಸ್ಸು ಬಂದಿದೆ. ಎನ್.ಡಿ.ಎ ಅಭ್ಯರ್ಥಿ ಸೋಮಣ್ಣ ಅವರು ಎರಡು ಲಕ್ಷಗಳ ಮತಗಳ ಅಂತರದಿಂದ ಚುನಾಯಿತರಾಗಿ ಲೋಕಸಭೇ ಪ್ರವೇಶಿಸುವುದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ತಾಲ್ಲೂಕಿನ ಕೆಸ್ತೂರಿನಲ್ಲಿ ಗುರುವಾರ ನಡೆದ ಬಿಜೆಪಿ, ಜೆಡಿಎಸ್ ಪಕ್ಷಗಳ ಸಮಾವೇಶದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ದೇವೇಗೌಡರ ನಡುವೆ ಆತ್ಮೀಯತೆ ಇದೆ. ಈ ಹಾಲಿ ಹಾಗೂ ಮಾಜಿ ಪ್ರಧಾನಿಗಳ ಆಶೀರ್ವಾದ ಸೋಮಣ್ಣರಿಗೆ ಸಿಕ್ಕಿದೆ, ಎರಡೂ ಪಕ್ಷಗಳ ಕಾರ್ಯಕರ್ತರ ಬೆಂಬಲ ದೊರಕಿದೆ. ಇದರೊಂದಿಗೆ ಸೋಮಣ್ಣ ಚುನಾವಣೆಯಲ್ಲಿ ಜಯಗಳಿಸುತ್ತಾರೆ, ಸೋಮಣ್ಣ ಎಂದರೆ ಅಭಿವೃದ್ಧಿ, ಅಭಿವೃದ್ಧಿ ಎಂದರೆ ಸೋಮಣ್ಣ ಎಂದು ಹೇಳಿದರು.
ತಾವು ಮುಖ್ಯಮಂತ್ರಿಯಾಗಿದ್ದಾಗ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮಿ ಯೋಜನೆ ನೀಡುತ್ತಿದ್ದೆ, ಹೈನುಗಾರಿಕೆ ಮಾಡುವವರಿಗೆ ಪ್ರೋತ್ಸಾಹಧನ ಕೊಡುತ್ತಿದ್ದೆವು, ಪ್ರಧಾನ ಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯ ಆರು ಸಾವಿರ ರೂ. ಜೊತೆಗೆ ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ರೂ.ಕೊಡುತ್ತಿದ್ದೆವು. ಈಗಿನ ಕಾಂಗ್ರೆಸ್ ಸರ್ಕಾರ ಈ ಎಲ್ಲಾ ಯೋಜನೆಗಳನ್ನು ಸ್ಥಗಿತಗೊಳಿಸಿ ಜನರಿಗೆ ಅನ್ಯಾಯ ಮಾಡಿದೆ ಎಂದು ಯಡಿಯೂರಪ್ಪ ಹೇಳಿದರು.
ಸಿದ್ಧಗಂಗಾ ಮಠದ ಡಾ.ಶಿವಕುಮಾರಸ್ವಾಮೀಜಿಗಳ ಕರ್ಮಭೂಮಿಯಾದ ತುಮಕೂರಿನ ಜನ ಪ್ರಬುದ್ಧರು, ಅವರು ಪ್ರಬುದ್ಧ ಅಭ್ಯರ್ಥಿಯದ ಸೋಮಣ್ಣನವರನ್ನೇ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದರು.
ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಮಾತನಾಡಿ, ಕ್ಷೇತ್ರದ ಎಲ್ಲೆಡೆ ಪ್ರಧಾನಿ ನರೇಂದ್ರ ಮೋದಿಯವರ ಗಾಳಿ ಇದೆ. ಆ ಗಾಳಿ ದಿನದಿನಕ್ಕೂ ಬಿರುಗಾಳಿಯಾಗಿ ಬೀಸುತ್ತಿದೆ. ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗುವುದು ನಿಶ್ಚಿತ. ಮೋದಿಯವರಿಗೆ ಶಕ್ತಿ ತುಂಬಲು ಚುನಾವಣೆಯಲ್ಲಿ ತಮ್ಮನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದರು.
ಏಪ್ರಿಲ್ 26ರ ನಂತರ ಅಭಿವೃದ್ಧಿಯ ಹೊಸ ಶಕೆ ಆರಂಭವಾಗುತ್ತದೆ. ಅಂತಹ ಅಭಿವೃದ್ಧಿ ಬದಲಾವಣೆಗೆ ತಾವು ಬದ್ಧರಾಗಿರುವುದಾಗಿ ಸೋಮಣ್ಣ ಹೇಳಿದರು.
ಶಾಸಕ ಸುರೇಶ್‍ಗೌಡ ಮಾತನಾಡಿ, ಸೋಮಣ್ಣನವರ ಗೆಲುವಿಗೆ ಕ್ಷೇತ್ರದ ಬಿಜೆಪಿ, ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಾಲು, ಜೇನಿನಂತೆ ಒಂದಾಗಿ ಕೆಲಸ ಮಾಡುತ್ತಿದ್ದಾರೆ. ಸೋಮಣ್ಣ ಎರಡು ಲಕ್ಷಗಳ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಹೇಳಿದರು.
ಮಾಜಿ ಶಾಸಕ ಸುಧಾಕರ ಲಾಲ್ ಮಾತನಾಡಿ, ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರೊಂದಿಗೆ ಅಣ್ಣತಮ್ಮಂದಿರಂತೆ ಸೇರಿ ಸೋಮಣ್ಣ ಅವರ ಗೆಲುವಿಗೆ ಕೆಲಸ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ನಮಗೆ ಸೂಚನೆ ನೀಡಿದ್ದಾರೆ. ಅವರ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸಿ ಸೋಮಣ್ಣರನ್ನು ಗೆಲ್ಲಿಸುತ್ತೇವೆ ಎಂದರು.
ಸಂಸದ ಜಿ.ಎಸ್.ಬಸವರಾಜು, ಶಾಸಕ ಬಿ.ಜಿ.ಜ್ಯೋತಿಗಣೇಶ್, ಮಾಜಿ ಸಚಿವ ಭೈರತಿ ಬಸವರಾಜು, ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಅಂಜನಪ್ಪ, ಮಧುಗಿರಿ ಜಿಲ್ಲಾ ಬಿಜೆಪಿ ಅಧÀ್ಯಕ್ಷ ಹನುಮಂತೇಗೌಡ, ಬಿಜೆಪಿ ಮುಖಂಡ ಅನಿಲ್‍ಕುಮಾರ್ ಮೊದಲಾದವರು ಭಾಗವಹಿಸಿದ್ದರು.