20 ವರ್ಷದಿಂದ ಸೇವಾ ಭದ್ರತೆಯಿಲ್ಲದೆ ಬಿಡಿಗಾಸಿಗೆ ದುಡಿಯುತ್ತಿರುವ ಬಿಸಿಯೂಟದ ಮಹಿಳೆಯರು

ಬಿಡಿಗಾಸಿಗೆ ಬಿಸಿಯೂಟ ತಯಾರಿಕೆಯನ್ನು ತಾಯಂದಿರಿಂದ ಮಾಡಿಸುತ್ತಿರುವುದು ಅಕ್ಷಮ್ಯ ಎಂದು ಬಿಸಿಯೂಟ ತಯಾರಕರ ಫೆಡರೇಷನ್ ಎಐಟಿಯುಸಿ ಜಿಲ್ಲಾ ಸಂಚಾಲಕ ಕಾಂತರಾಜು ಅಸಮದಾನ ವ್ಯಕ್ತಪಡಿಸಿದರು.
ಅವರು ತುಮಕೂರಿನಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ 20 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಸತತವಾಗಿ ಬಿಸಿಯೂಟ ತಯಾರು ಮಾಡುವ ಮಹಿಳೆಯರಿಗೆ ಸೂಕ್ತ ಸೌಲಭ್ಯ ಹಾಗೂ ಸೂಕ್ತ ಮಾಸಿಕ ವೇತನ ನೀಡದೆ ಅತ್ಯಂತ ಕಡಿಮೆ ಬೆಲೆಗೆ ಗೌರವಧನದ ಹೆಸರಿನಲ್ಲಿ ದುಡಿಸಿಕೊಳ್ಳಲಾಗುತ್ತಿದೆ.

ಬಿಸಿಯೂಟ ತಯಾರಕರ ಫೆಡರೇಷನ್ (ಎ.ಐ.ಟಿ.ಯು.ಸಿ)ನೇತೃತ್ವದಲ್ಲಿ ಬಿಸಿಯೂಟ ತಯಾರಕರ ಬೇಡಿಕೆಗಳ ಈಡೇರಿಕೆಗಾಗಿ ಫೆಬ್ರವರಿ 15 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲು ಕರ್ನಾಟಕ ರಾಜ್ಯ ಸಮಿತಿ ತೀರ್ಮಾನಿಸಿದ್ದು ಜಿಲ್ಲೆಯಿಂದಲೂ ಬಿಸಿಯೂಟ ತಯಾರಕರು ಭಾಗವಹಿಸುವರು ಎಂದು ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಸಿಯೂಟ ನೌಕರರ ಕೆಲಸವನ್ನು ಖಾಯಂ ಮಾಡಿ ಕೂಡಲೇ ಆದೇಶ ಹೊರಡಿಸಬೇಕು, 60 ವರ್ಷ ಮೇಲ್ಪಟ್ಟ ಬಿಸಿಯೂಟ ತಯಾರಿಕೆ ಮಹಿಳೆಯರಿಗೆ ಕನಿಷ್ಠ ಪಿಂಚಣಿ 3000 ನೀಡಬೇಕು, 2 ಲಕ್ಷ ಇಡುಗಂಟು ನೀಡಬೇಕು ಎಂದು ಕಾಂತರಾಜು ಆಗ್ರಹಿಸಿದರು.
2003ರಲ್ಲಿ ಬಿಸಿಯೂಟ ಕೆಲಸಗಾರರಿಗೆ ಕೇವಲ ಮಾಸಿಕ 300 ರೂಗಳನ್ನು ನೀಡುವ ಮೂಲಕ ಕೆಲಸಕ್ಕೆ ನೇಮಿಸಿಕೊಂಡ ಸರ್ಕಾರ ಹಲವು ಹೋರಾಟಗಳ ಫಲವಾಗಿ ಇಂದು 3600 ರಿಂದ 3700 ರೂಗಳಿಗೆ ಬಂದು ನಿಂತಿದೆ. ಬಿಸಿಯೂಟದ ಕೆಲಸದ ಜೊತೆಗೆ ಶಾಲೆಗಳಲ್ಲಿ ಬೆಳಗ್ಗೆ 9 ರಿಂದ ಸಂಜೆಯವರೆಗೂ ಇತರೆ ಕೆಲಸಗಳನ್ನು ಮಾಡಬೇಕಾಗಿದೆ.

ಮುಂದುವರಿದು ಮಾತನಾಡಿದ ಅವರು ಬಿಸಿಯೂಟ ತಯಾರಕರಿಗೆ ಸರ್ಕಾರ ಕನಿಷ್ಠ 31,500 ರೂಗಳು ಮಾಸಿಕ ವೇತನ ಜಾರಿಗೊಳಿಸಬೇಕು. ಬಿಸಿಯೂಟ ತಯಾಕರಿಗೆ ಉತ್ತರ ಪ್ರದೇಶ ರಾಜ್ಯದ ಅಲಹಬಾದ್ ಹೈಕೋರ್ಟ್ ಆದೇಶ ಸಂಖ್ಯೆ (9927/2020) (15/12/2020) ಆದೇಶಿಸಿರುವಂತೆ ಅವರ ಕೆಲಸವನ್ನು ಖಾಯಂಗೊಳಿಸಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಬೇಕು. ಬಿಸಿಯೂಟ ತಯಾರಿಕೆ ಮತ್ತು ಪೂರೈಕೆಯನ್ನು ಖಾಸಗಿ ಸಂಸ್ಥೆಯವರಿಗೆ ವಹಿಸುವ ನಿರ್ದಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು. ಬಿಸಿಯೂಟ ತಯಾರಿಕೆ ಯೋಜನೆ ಎನ್ನುವುದನ್ನು ಬದಲಾಯಿಸಿ ನಿರಂತರ ಕಾರ್ಯಕ್ರಮವೆಂದು ಮಾರ್ಪಡಿಸಬೇಕು ಎಂದರು.

ಬಿಸಿಯೂಟ ಅಡುಗೆ ತಯಾರಕರನ್ನು ಗೌರವ ಕಾರ್ಯಕರ್ತೆಯರು ಎಂಬುದನ್ನು ಕೈಬಿಟ್ಟು ಕಾರ್ಮಿಕರು ಎಂದು ಘೋಷಿಸಿ ಕಾರ್ಮಿಕ ಇಲಾಖೆಯ ವ್ಯಾಪ್ತಿಗೆ ಒಳಪಡಿಸಬೇಕು. 60 ವರ್ಷ ವಯೋಮಾನ ಮೀರಿ ನಿವೃತ್ತಿಯಾದವರಿಗೆ ರೂ. 2,00,000 ಇಡುಘಂಟು ನೀಡಬೇಕು ಮತ್ತು ಮಾಸಿಕ ಪಿಂಚಣಿ 3000 ರೂ ಜಾರಿಗೊಳಿಸಬೇಕು. ಪತ್ರಿಕಾಗೋಷ್ಠಿಯಲ್ಲಿ ತುಮಕೂರು ಜಿಲ್ಲಾ ಸಂಚಾಲಕಿ ಎ.ಬಿ. ಉಮಾದೇವಿ, ಸಾವಿತ್ರಮ್ಮ ಗುಬ್ಬಿ ತಾಲ್ಲೂಕು ಅಧ್ಯಕ್ಷೆ ವನಜಾಕ್ಷಿ, ಕೊರಟಗೆರೆಯ ಸಂಚಾಲಕಿ ಪಾರ್ವತಮ್ಮ, ತುಮಕೂರು ತಾಲ್ಲೂಕು ಅಧ್ಯಕ್ಷೆ ರಾಧಮ್ಮ, ಶಿರಾ ಅಧ್ಯಕ್ಷೆ, ಪುಷ್ಪಲತ, ಕೊರಟಗೆರೆ ತಾಲ್ಲೂಕು ಅಧ್ಯಕ್ಷೆ ಲಕ್ಷ್ಮಮ್ಮ, ರೇಣುಕಮ್ಮ, ನಾಗರತ್ನಮ್ಮ, ಮಂಜುಳ, ಶಾಂತಮ್ಮ, ನಾಗರತ್ನಮ್ಮ, ಮೀನಾ, ರಾಧ, ರಾಜಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *