ಕೇಂದ್ರ ಸರ್ಕಾರದ ಪ್ರವೇಶ ಪರೀಕ್ಷೆ ಕನ್ನಡ ಭಾಷೆಯಲ್ಲೂ ಬರೆಯುವ ಅವಕಾಶಕ್ಕೆ ಮು.ಹಾಲಪ್ಪ ಒತ್ತಾಯ

ತುಮಕೂರು: ಕೇಂದ್ರ ಸರ್ಕಾರ ನಡೆಸುವ ಎಲ್ಲಾ ಪ್ರವೇಶ ಪರೀಕ್ಷೆಗಳಿಗೂ ಹಿಂದಿ, ಇಂಗ್ಲೀಷ್‍ನಂತೆ ಕನ್ನಡ ಭಾಷೆಯಲ್ಲೂ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಒತ್ತಾಯಿಸಿದರು.

ಇಲ್ಲಿಯ ಜಯನಗರದ ಬಸ್ ನಿಲ್ದಾಣದ ಸಮೀಪ ನಿರ್ಮಾಣವಾಗಿರುವ ಸ್ಮಾರ್ಟ್‍ಸಿಟಿ ಮಿನಿ ಮಾರುಕಟ್ಟೆ ಆವರಣದಲ್ಲಿ ಜಯನಗರ ನಾಗರೀಕ ಹಿತರಕ್ಷಣಾ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರೈಲ್ವೆ, ಬ್ಯಾಂಕಿಂಗ್, ಅಂಚೆ ಕಚೇರಿ ಸೇರಿದಂತೆ ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಪ್ರವೇಶ ಪರೀಕ್ಷೆಗೆ ಹಿಂದಿ, ಇಂಗ್ಲೀಷ್ ಹೇಗೆ ಪರಿಗಣನೆ ಮಾಡಿದ್ದಾರೋ, ಅದೇ ರೀತಿ ಕನ್ನಡ ಭಾಷೆಗೂ ಸಹ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕು. ಆಗ ನಮ್ಮ ಕನ್ನಡ ಭಾಷೆ ರಾಷ್ಟ್ರಭಾಷೆಯಾಗಿ ಸ್ವಾಭಿಮಾನದ ಭಾಷೆಯಾಗಿ ಬೆಳವಣಿಗೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸ್ಥಳೀಯವಾಗಿ ಗಾಂಜಾ, ಚರಸ್ಸು ತುಂಬಾ ದೊಡ್ಡ ಮಟ್ಟಕ್ಕೆ ಬೆಳೆಯುತ್ತಿರುವುದು ಆತಂಕಕಾರಿ ವಿಷಯ. ನಮ್ಮ ಮಕ್ಕಳನ್ನ ನಮ್ಮ ಬಡಾವಣೆಯನ್ನು ಶುದ್ಧಿಯಾಗಿ ಇಟ್ಟುಕೊಂಡಿಲ್ಲವೆಂದರೆ ನಾವು ಊಹಿಸಲಾಗದಷ್ಟು ಬೇರೆ ಬೇರೆ ರೀತಿಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ವಿದ್ಯಾವಾಚಸ್ಪತಿ ಡಾ.ಕವಿತಾಕೃಷ್ಣ ಮಾತನಾಡಿ, ಜಗತ್ತಿನಲ್ಲಿ ಆರು ಸಾವಿರ ಭಾಷೆಗಳಿವೆ, ಇದರಲ್ಲಿ 3645 ಅಂದರೆ ಶೇ.60 ರಷ್ಟು ಭಾಷೆಗಳು ಭಾರತದಲ್ಲಿದ್ದು, ಆರಂಭದಲ್ಲಿ 14 ಭಾಷೆಗಳನ್ನು ಸಂವಿಧಾನದಲ್ಲಿ ಸೇರ್ಪಡೆಯಾಗಿದ್ದು, ಈಗ 22 ಭಾಷೆಗಳವರೆಗೆ ಆಗಿವೆ. ಇವೆಲ್ಲಾ ರಾಷ್ಟ್ರ ಭಾಷೆಗಳೇ, ಆರುವರೆ ಕೋಟಿ ಕನ್ನಡಿಗರು ಮಾತನಾಡುವ ಭಾಷೆ ಕನ್ನಡವೇ ಆಗಿದೆ. ಹಿಂದಿ ಒಂದು ಸಂಪರ್ಕ ಭಾಷೆಯಷ್ಟೇ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಪರ್ಕ ಮಾಡುವ ಭಾಷೆಯಾಗಿದೆಯೇ ಹೊರತು, ಕನ್ನಡ ರಾಷ್ಟ್ರಭಾಷೆ ಎಂಬುದನ್ನು ನಾವೆಲ್ಲರೂ ಮನಗಾಣಬೇಕಿದೆ ಎಂದರು.

ಜಾತಿಗಳನ್ನಾಧರಿಸಿ, ಬಡತನ, ಸಿರಿತನಗಳನ್ನಾಧರಿಸಿ, ಮೇಲು ಕೀಳುಗಳನ್ನಾಧರಿಸಿ ಭಾಷೆಯನ್ನು ಕಟ್ಟಬಾರದು, ಜಾತಿ, ಬಡತನ, ಸಿರಿತನ, ಮೇಲು, ಕೀಳುಗಳನ್ನು ಮೀರಿ ಕನ್ನಡ ಭಾಷೆಯನ್ನು ನಾವು ಕಟ್ಟಬೇಕು ಎಂದು ತಿಳಿಸಿದರು.

ಬ್ರಿಟೀಷರು ಭಾರತವನ್ನು ಬಿಟ್ಟು ತೊಲಗಿದರೂ ಸಹ ಭಾರತೀಯರಾದ ನಾವು ಅವರ ಬೂಟು ನೆಕ್ಕುವುದನ್ನು ಮಾತ್ರ ಬಿಟ್ಟಿಲ್ಲ, ಮೊದಲು ನಮ್ಮ ಮನೆ ಶುದ್ದಿ ಮಾಡಿಕೊಂಡು ನಂತರ ದೇಶವನ್ನು ಶುದ್ಧಿ ಮಾಡಬೇಕು ಎಂದು ಸಲಹೆ ನೀಡಿದರು.

ಮುರಳೀಧರ ಹಾಲಪ್ಪ ಅವರು ತಮ್ಮ ತಂದೆ ಹೆಸರಿನಲ್ಲಿ ಟ್ರಸ್ಟ್ ಸ್ಥಾಪಿಸಿ ಬಡವರಿಗೆ ದಾನಧರ್ಮ ಮಾಡುತ್ತಿದ್ದು, ಇಂತಹವರು ರಾಜಕಾರಣದಲ್ಲಿ ಮುಂದೆ ಬಂದು ಸಮಾಜದಲ್ಲಿರುವ ಬಡವರಿಗೆ ಸಹಾಯಹಸ್ತ ಚಾಚಲಿ ಎಂದು ಆಶಿಸಿದರು.

31ನೇ ವಾರ್ಡ್ ಮಹಾನಗರಪಾಲಿಕೆ ಸದಸ್ಯ ಸಿ.ಎನ್. ರಮೇಶ್ ಮಾತನಾಡಿ, ರಾಜಕೀಯ ನಿಂತ ನೀರಲ್ಲ, ಅಭಿವೃದ್ಧಿಗೆ ಯಾವುದೇ ಪಕ್ಷ ಮುಖ್ಯವಲ್ಲ, ಜಯನಗರ ಹಂತ ಹಂತವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಮತ್ತಷ್ಟು ಅಭಿವೃದ್ಧಿಯಾಗಲು ಸಾರ್ವಜನಿಕರ ಸಹಕಾರವೂ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಯನಗರ ನಾಗರೀಕ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಬಿ.ವಿ.ದ್ವಾರಕನಾಥ್, ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು, ಕೆ.ಆರ್.ಮಂಜುಳ, ಆರ್.ಎಸ್.ಬಸವರಾಜು, ಮಹದೇವಪ್ಪ, ವೆಂಕಟೇಶ್, ಷಡಾಕ್ಷರಿ, ಶ್ರೀನಿವಾಸಮೂರ್ತಿ, ಪುಟ್ಟರುದ್ರಯ್ಯ, ಲೋಕೇಶ್, ಶಿವಕುಮಾರ್, ರಾಘವೇಂದ್ರ, ಚಂದ್ರಚೂಡ್ ಸೇರಿದಂತೆ ಜಯನಗರ ಬಡಾವಣೆಯ ನಾಗರೀಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *