ಇವರು ನಮ್ಮ ಮಾವನವರ ತಂಗಿಯ ಗಂಡ, ನನಗೆ ಅಣ್ಣನ ತರಹ ಇದ್ದರು, ಅವರ ಮನಸ್ಸಿಗೆ ಬಂದರೆ ವೆಂಕಟಾಚಲ ಬಾರಪ್ಪ ನೀನು, ನೋಡಂಗೆ ಆಗಿದೆ, ನೀನು ಇವತ್ತು ಬರಲೇ ಬೇಕು ಅಂತ ಹಠ ಮಾಡಿ ಕರೆಯುತ್ತಿದ್ದರು, ಕೆಲವು ಸಲ ಅವರ ಒತ್ತಾಯಕ್ಕೆ ಕೊರಟಗೆರೆ ತಾಲ್ಲೂಕು ಸಿದ್ದರಬೆಟ್ಟದ ಬುಡದ ಕುರಂಕೋಟೆ ಸಮೀಪದ ಬೆಟ್ಟದ ಶಂಭೋನಹಳ್ಳಿ ಇವರ ಊರು, ನಾನು ಹೋಗುವ ಹೊತ್ತಿಗೆ ಕೋಳಿ ಸಾರು ಅಥವಾ ಹೊಲದಲ್ಲಿ ಸಿಗುತ್ತಿದ್ದ ಸೊಪ್ಪಿನ ಸಾರು ಮುದ್ದೆ ತಯಾರಿರುತ್ತಿತ್ತು.
ಯಾಕಣ್ಣ ನನ್ನ ಹಿಂಗೆ ಬಾ ಅಂದರೆ ಈಗ ಊಟ ಮಾಡಾನ ಬಾರಪ್ಪ ಎಂದು ಊಟ ಮಾಡಿಸಿ, ಲೋಕರೂಢಿ ಮಾತನಾಡಿ ಸಂಜೆಯಾದರೆ ನೀನು ಕತ್ತಲೆ ಆಗುವುದರೊಳಗೆ ತುಮಕೂರು ಸೇರಿಕಂಡು ಬಿಡು ಎಂದು ಕಳಿಸಿ ಬಿಡುತ್ತಿದ್ದರು. ಇವರಿಗೆ ಉಬ್ಬಸ ಇದ್ದಿದ್ದರಿಂದ ಬೀಡಿ ಸೇದ ಬೇಡ ಎಂದು ಹಲವಾರು ಸಲ ಹೇಳಿದರೂ ಕೇಳುತ್ತಿರಲಿಲ್ಲ, ಈಗೊಂದು ನಾಲ್ಕು ವರ್ಷಗಳ ಹಿಂದೆ ಉಬ್ಬಸ ಹೆಚ್ಚಾಗಿ ಆಸ್ಪತ್ರೆಗೆ ಬಂದ ಮೇಲೆ ಡಾಕ್ಟರ್ ಬೀಡಿ ಸೇದಿದರೆ ನೀನು ಉಳಿಯುವುದಿಲ್ಲ ಎಂದು ಹೇಳಿದ ಮೇಲೆ ಬೀಡಿ ಸೇದುವುದನ್ನು ಬಿಟ್ಟಿದ್ದರು.
ಉಬ್ಬಸವಿದ್ದರೂ ಕೊರೋನಾ ಕಾಲದಲ್ಲೂ ಏನು ಆಗಿರಲಿಲ್ಲ, ಡಿಸೆಂಬರ್ 10ರಂದು ಕೆಂಪಕ್ಕ(ಯಲ್ಲಪ್ಪನವರ ಪತ್ನಿ) ಪೋನ್ ಮಾಡಿ ಅಣ್ಣನಿಗೆ ಉಬ್ಬಸ ಜಾಸ್ತಿಯಾಗಿದೆ ಅಂದರು, ತೋವಿನಕೆರೆ ಆಸ್ಪತ್ರೆಯಲ್ಲಿ ತೋರಿಸಿದ್ರು ಕಡಿಮೆಯಾಗಿಲ್ಲ ಅಂದ್ರು, ತುಮಕೂರು ಆಸ್ಪತ್ರೆಗೆ ಕರೆ ತರುವುದಾಗಿ ಹೇಳಿದಾಗ, ಬನ್ನಿ ಎಂದೆ, ಅವರು ಬಂದಾಗಲೇ ಉಬ್ಬಸದಿಂದ ಕುಗ್ಗಿ ಹೋಗಿದ್ದರು, ವೈದ್ಯರು ಶರೀರದಲ್ಲಿ ಶಕ್ತಿಯಿಲ್ಲ, ಉಬ್ಬಸ ಈಗಾಗಲೇ ಮಿತಿ ಮೀರಿದೆ ಎಂದರು, ಇರಲಿ ಎಂದು ಆಸ್ಪತ್ರೆಗೆ ದಾಖಲಿಸಿದೆವು, ಎರಡು ದಿನ ಪರವಾಗಿಲ್ಲ ಅನ್ನಿಸಿತು, ಆದರೆ ಮೂರನೆ ದಿನ ತುಂಬಾ ಸುಸ್ತಾಗಿ ಉಸಿರಾಟದ ತೊಂದರೆ ಹೆಚ್ಚಾಯಿತು. ಇಂದು ಬೆಳಿಗ್ಗೆ ಉಸಿರಾಟ ತುಂಬಾ ಇಳಿದು ಆಕ್ಸಿಜನ್ ಹಾಕಿದರು, ವೈದ್ಯರು ಐಸಿಯು ಇರುವ ಕಡೆ ಕರೆದುಕೊಂಡು ಹೋಗಿ ಅಂದರು, ಆದರೆ ಮಗ, ಕೆಂಪಕ್ಕ ಬೇಡ ಅವರ ಆಯಸ್ಸು ಇಷ್ಟೇ ಅಂದರು, ಅವರು ಸಹ ಆ ದಿನ ದುಡಿಯಬೇಕು ತಿನ್ನಬೇಕು, ಅಂತಹ ಪರಿಸ್ಥಿತಿ, ಕೊನೆಗೂ ಅಣ್ಣ ಯಲ್ಲಪ್ಪ ಉಳಿಯಲಿಲ್ಲ, ತುಂಬಾ ಪ್ರೀತಿ ಮತ್ತು ಹಲವಾರು ದಿನ ಪೋನ್ ಮಾಡದಿದ್ದರೆ ನಿನ್ನ ನಾನು ಮಾತನಾಡಿಸುವುದಿಲ್ಲ ಎಂದು ಮುನಿಸು ತೋರಿಸುತ್ತಿದ್ದರು.
ಇಂದು ಅವರು ಇನ್ನೆಂದೂ ನನ್ನನ್ನು ಮಾತನಾಡಿಸಲು ಸಾಧ್ಯವಾಗದಂತೆ ಮುನಿಸಿಕೊಂಡು ಇಂದು ಮಧ್ಯಾಹ್ನ ಹೊರಟೇ ಬಿಟ್ಟರು. ಅವರ ಆತ್ಮಕ್ಕೆ ಬುದ್ಧನು ಒಳ್ಳೆಯದು ಮಾಡಲಿ ಎಂದು ಬುದ್ಧನಲ್ಲಿ ಪ್ರಾರ್ಥಿಸುತ್ತೇನೆ.