ತುಮಕೂರು:ತುಮಕೂರು ಸೇರಿದಂತೆ ರಾಜ್ಯದ ಬಯಲು ಸೀಮೆಯ ಏಳು ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಎತ್ತಿನಹೊಳೆ ಯೋಜನೆ ವಿಳಂಬಕ್ಕೆ ನಿಜವಾದ ಕಾರಣಗಳೇನು ಎಂದು ತಿಳಿಸುವ ನಿಟ್ಟಿನಲ್ಲಿ ಡಿಸೆಂಬರ್ 18ರ ಗುರುವಾರ ಬೆಳಗ್ಗೆ 10 ಗಂಟೆಗೆ ತುಮಕೂರಿನ ಅಮರಜೋತಿ ನಗರದಲ್ಲಿರುವ ಎತ್ತಿನಹೊಳೆ ಕಚೇರಿಗೆ ಸಾರ್ವಜನಿಕರೊಂದಿಗೆ ಭೇಟಿ ನೀಡಿ ಚರ್ಚೆ ನಡೆಸಲಾಗುವುದು ಎಂದು ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಸುಧಾ ಟೀ ಹೌಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಎತ್ತಿನಹೊಳೆ ಯೋಜನೆ ವಿಳಂಭಕ್ಕೆ ಕಾರಣಗಳು ಮತ್ತು ಪರಿಹಾರ ಎಂಬ ವಿಷಯ ಕುರಿತ ಸಮಾಲೋಚನಾ ಸಭೆಯ ನೇತೃತ್ವ ವಹಿಸಿ ಮಾತನಾಡಿದ ಅವರು, ಕಳೆದ ಸಭೆಯ ನಿಗಧಿಯಂತೆ ದೆಹಲಿಯಲ್ಲಿ ಸಚಿವರಾದ ಸಿ.ಆರ್.ಪಾಟೀಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ.ಆದರೆ ಸಚಿವಾಲಯ ವಿಶ್ವೇಶ್ವರಯ್ಯ ಜಲನಿಗಮದ ಅಧಿಕಾರಿಗಳಿಂದ ವಿಳಂಬವಾಗಿದೆ ಎಂದು ಹೇಳುತಿದ್ದಾರೆ. ಹಾಗಾಗಿ ನಿಜವಾದ ಅಡೆ,ತೆಡೆ ಯಾರಿಂದ ಆಗಿದೆ.ಇದರ ಹಿಂದಿನ ಉದ್ದೇಶವೇನು ಎಂದು ಜಿಲ್ಲೆಯ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಡಿಸೆಂಬರ್ 18ರ ಗುರುವಾರ ಎತ್ತಿನಹೊಳೆ ಯೋಜನೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ಚರ್ಚೆ ನಡೆಸಲಾಗುವುದು ಎಂದರು.
ಕರ್ನಾಟಕ ಸರಕಾರ 2012 ರಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿ, ಶೇ90 ರಷ್ಟು ನಾಲಾ ಕಾಮಗಾರಿ ಮುಕ್ತಾಯಗೊಂಡ ನಂತರ ಕೇಂದ್ರದ ಜಲಸಂಪನ್ಮೂಲ ಇಲಾಖೆ ಪರಿಸರ ಮತ್ತು ಅರಣ್ಯ ಇಲಾಖೆಯ ಎನ.ಓ.ಸಿ ಕುರಿತಂತೆ ತಕರಾರು ತೆಗೆದಿದೆ.ಇದುವರೆಗೂ ಎತ್ತಿನಹೊಳೆ ಯೋಜನೆಗಾಗಲಿ, ಭದ್ರಮೇಲ್ದಂಡೆ ಯೋಜನೆಗಾಗಲಿ ಒಂದು ನೈಯಾಪೈಸೆ ಹಣವನ್ನು ಕೇಂದ್ರ ಸರಕಾರ ನೀಡಿಲ್ಲ. ಬಜೆಟ್ನಲ್ಲಿ ಘೋಷಣೆ ಮಾಡಿಯೂ ಭದ್ರ ಮೇಲ್ದಂಡೆ ಯೋಜನೆಗೆ 5300 ಕೋಟಿ ಒಂದು ವರ್ಷ ಕಳೆದರೂ ನೀಡಿಲ್ಲ.ಇದರ ವಿರುದ್ದ ಎತ್ತಿನಹೊಳೆ ಯೋಜನಾ ವ್ಯಾಪ್ತಿಗೆ ಒಳಪಡುವ ಹಾಸನ,ತುಮಕೂರು, ಚಿತ್ರದುರ್ಗ, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ,ಕೋಲಾರ ಜಿಲ್ಲೆಗಳ ಜನರು ಈಗಲೇ ಎಚ್ಚೆತ್ತುಕೊಂಡು ಹೋರಾಟ ರೂಪಿಸದಿದ್ದರೆ ಇಷ್ಟು ದಿನದವರೆಗೆ ರಾಜ್ಯ ಸರಕಾರ ನಡೆಸಿ, ಕಾಮಗಾರಿಗಳು ಹೊಳೆಯಲ್ಲಿ ಹುಣಸೆಹಣ್ಣು ಕದಡಿದಂತಾಗುತ್ತದೆ. ಹಾಗಾಗಿ ಶತಾಯ,ಗತಾಯ ಕೇಂದ್ರ ಸರಕಾರದ ಎಲ್ಲಾ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಿ, ಯೋಜನೆ ಪೂರ್ಣಗೊಳ್ಳುವಂತೆ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ನೋಡಿಕೊಳ್ಳಬೇಕಾಗಿದೆ ಎಂದರು.
ಕೇಂದ್ರ ಸರಕಾರ ಎತ್ತಿನಹೊಳೆ ಯೋಜನೆ ಕುರಿತಂತೆ ಮೊದಲಿಗೆ 11 ಮತ್ತು ಈಗ 3 ಪ್ರಶ್ನೆಗಳನ್ನು ಕೇಳಿದೆ.ಅಲ್ಲದೆ ಕೇಂದ್ರದ ಅರಣ್ಯ ಸಮಿತಿ ಮತ್ತು ಪರಿಸರ ಇಲಾಖೆಯ ಸಮಿತಿಗಳು ರಾಜ್ಯಕ್ಕೆ ಬಂದ ಪರಿಶೀಲನೆ ನಡೆಸಿವೆ. ಇಂತಹ ಮಹತ್ವದ ವಿಚಾರಗಳನ್ನು ರಾಜ್ಯ ಜಲಸಂಪನ್ಮೂಲ ಸಚಿವರು ಹಾಗೂ ಯೋಜನಾ ವ್ಯಾಪ್ತಿಗೆ ಒಳಪಡುವ ಎಲ್ಲಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದು ಸಮರ್ಪಕ ಉತ್ತರ ನೀಡಬೇಕಾದ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು,ನಿರ್ಲಕ್ಷ ವಹಿಸಿ,ಹೋರಾಟ ಆರಂಭವಾದ ನಂತರ ಇಂದು ದೆಹಲಿಗೆ ಸಮಜಾಯಿಸಿ ನೀಡಲು ಹೋಗಿದ್ದಾರೆ.ಎತ್ತಿನಹೊಳೆ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ. ಇದನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಅಂಕಿ ಅಂಶಗಳ ಸಮೇತ ಜನರ ಮುಂದಿಡುವ ನಿಟ್ಟಿನಲ್ಲಿ ಡಿಸೆಂಬರ್ 18 ರಂದು ಎತ್ತಿನಹೊಳೆ ಕಚೇರಿಗೆ ಭೇಟಿ ನೀಡಲು ನಿರ್ಧರಿಸಿದ್ದು, ರೈತರು, ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಮುರುಳೀಧರ ಹಾಲಪ್ಪ ಮನವಿ ಮಾಡಿದರು.
ಸಮಾಲೋಚನಾ ಸಭೆಯಲ್ಲಿ ಮುಖಂಡರಾದ ಸಂಜೀವಕುಮಾರ್, ಹೆಬ್ಬೂರು ಶ್ರೀನಿವಾಸಮೂರ್ತಿ, ರೈತ ಮುಖಂಡರಾದ ಷಡಕ್ಷರಿ,ನಿವೃತ್ತ ಅಧಿಕಾರಿ ಗೋವಿಂದೇಗೌಡ,ರೇವಣ್ಣಸಿದ್ದಯ್ಯ,ಪಿ.ಶಿವಾಜಿ,ದಸಂಸ ಮುಖಂಡರಾದ ಪಿ.ಎನ್.ರಾಮಯ್ಯ, ಗಣೇಶ್, ಆರ್.ವಿ.ಪುಟ್ಟಕಾಮಣ್ಣ,ಸೌಭಾಗ್ಯ,ಯಶೋಧಮ್ಮ, ಸಿಮೆಂಟ್ ಮಂಜುನಾಥ್, ಆದಿಲ್,ಜೈನ್ ಷೇಕ್ ಫಯಾಜ್,ಬಿ.ಉಮೇಶ್,ಹರೀಶ್, ದಯಾನಂದ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.