ತುಮಕೂರು – ಯೋಗ ಪ್ರತಿಯೊಬ್ಬರ ಜೀವನದ ಅಂಗವಾಗಬೇಕು ಎಂದು ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸಿದ್ದಗಂಗಾ ಮಠದ ಆವರಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ತುಮಕೂರು ಇವರ ಸಹಯೋಗದಲ್ಲಿ ವಸುದೈವ ಕುಟುಂಬಕಮ್ ಪ್ರತಿ ಅಂಗಳದಲ್ಲಿ ಯೋಗ ಎಂಬ ಘೋಷ ವಾಕ್ಯದೊಂದಿಗೆ ಹಮ್ಮಿಕೊಂಡಿದ್ದ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾರು ದೈಹಿಕ ಮತ್ತು ಮಾನಸಿಕವಾಗಿ ಆರೋಗ್ಯ ಕಾಪಾಡಿಕೊಳ್ಳುತ್ತಾರೋ ಅಂತಹವರ ಜೀವನ ಉತ್ತಮವಾಗಿರುತ್ತದೆ. ಹಾಗಾಗಿ ಯೋಗ ಪ್ರತಿಯೊಬ್ಬರ ಬದುಕಿನ ಭಾಗವಾಗಲಿ ಎಂದು ತಿಳಿಸಿದರು.
ಇಂದು 9 ನೇ ಅಂತಾರಾಷ್ಟ್ರೀಯ ಯೋಗ ದಿನ. ಕಳೆದ 9 ವರ್ಷಗಳ ಹಿಂದೆ ಪ್ರಧಾನ ಮಂತ್ರಿಗಳು ವಿಶ್ವ ಸಂಸ್ಥೆಗೆ ಮನವಿ ಮಾಡಿಕೊಂಡ ಮೇರೆಗೆ ಪ್ರತಿ ವರ್ಷವೂ ಜೂನ್ 21ನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ ಎಂದರು.
ವಿಶ್ವಕ್ಕೆ ಕೊಟ್ಟಂತಹ ನಮ್ಮ ಭಾರತೀಯ ಕೊಡುಗೆಗಳಲ್ಲಿ ಯೋಗವೂ ಅತ್ಯಂತ ಮಹತ್ವ ಪೂರ್ಣವಾಗಿದೆ. ಮನುಷ್ಯನ ಬದುಕು ಚೆನ್ನಾಗಿರಬೇಕು, ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ಯೋಗಾಸನಗಳು ಬಹಳ ಮುಖ್ಯ ಎಂದು ಅವರು ಹೇಳಿದರು.
ವ್ಯಾಯಾಮ ಮಾಡಿದರೆ ದೇಹಕ್ಕೆ ಮಾತ್ರ ಪುಷ್ಟಿ ಸಿಗುತ್ತದೆ. ಆದರೆ ಯೋಗಾಸನದ ಮೂಲಕ ಮಾಡಿದರೆ ದೇಹ, ಮನಸ್ಸು, ಆತ್ಮ ಈ ಮೂರಕ್ಕೂ ಉಪಯೋಗವಾಗುತ್ತದೆ ಎಂದ ಅವರು, ದೇಹ ಮಾತ್ರ ಆರೋಗ್ಯವಾಗಿದ್ದರೆ ಸಾಲದು, ಮನುಷ್ಯ ಮಾನಸಿಕವಾಗಿ ಚೆನ್ನಾಗಿರಬೇಕು ಎಂದರು.
ಕೆಲವರು ದೈಹಿಕವಾಗಿ ಚೆನ್ನಾಗಿದ್ದರೆ, ಮಾನಸಿಕವಾಗಿ ಕುಗ್ಗಿ ಹೋಗಿರುತ್ತಾರೆ. ಇವೆರಡೂ ಆರೋಗ್ಯವಲ್ಲ. ಯಾರು ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಾರೋ ಅಂತಹವರ ಜೀವನ ಆರೋಗ್ಯಕರವಾಗಿರುತ್ತದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಸಾವಿರಾರು ಮಕ್ಕಳು, ಅಧಿಕಾರಿಗಳು, ಸಾರ್ವಜನಿಕರು ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮೈದಾಳ ಗ್ರಾ.ಪಂ. ಅಧ್ಯಕ್ಷೆ ಮಾಲಾ ಮಂಜುನಾಥ್, ಉಪವಿಭಾಗಾಧಿಕಾರಿ ಹೋಟೆಲ್ ಶಿವಪ್ಪ, ತಹಶೀಲ್ದಾರ್ ಸಿದ್ದೇಶ್, ಟೂಡಾ ಆಯುಕ್ತ ಗೋಪಾಲ್ ಜಾಧವ್, ಡಿಡಿಪಿಐ ಸಿ. ನಂಜಯ್ಯ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸಂಜೀವಮೂರ್ತಿ, ಕೌಶಲ್ಯಾಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ. ಶ್ರೀನಿವಾಸ್, ರಂಗಧಾಮಯ್ಯ, ಯೋಗ ಕಾರ್ಯಕ್ರಮದ ಉಸ್ತುವಾರಿ ಭವ್ಯ, ಬ್ರಹ್ಮಕುಮಾರಿ ಸಂಸ್ಥೆಯ ಸುಜಾತ, ಅಪೇಕ್ಷ ಮತ್ತಿತರರು ಭಾಗವಹಿಸಿದ್ದರು.