ತುಮಕೂರು: ಹಾಲಪ್ಪ ಪೌಂಡೇಷನ್ ವತಿಯಿಂದ ಕರ್ನಾಟಕ ಸರ್ಕಾರದ ಕೌಶಲ್ಯ ಕರ್ನಾಟಕ, ಉದ್ಯೋಗ ವಿನಿಮಯ ಇಲಾಖೆ, ಕೆ.ಎಸ್.ಎಫ್.ಸಿ, ಎಸ್.ಬಿ.ಐ, ಸಿಡಾಕ್, ಕೆಎಸ್‍ಎಸ್‍ಐಡಿಸಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೆ.ಐ.ಎ.ಡಿ.ಬಿ ಸಹಯೋಗದಲ್ಲಿ ಆಗಸ್ಟ್ 06ರ ಮಂಗಳವಾರ ರೈಲ್ವೆ ನಿಲ್ದಾಣ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಯುವ ಸಬಲೀಕರಣ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಹಾಲಪ್ಪ ಪೌಂಢೇಷನ್ ಅಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗ್ರಾಮೀಣ ಭಾಗದ ಮಕ್ಕಳೇ ಹೆಚ್ಚಾಗಿ ಓದುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ದೊರೆಯಬೇಕು, ಅವರು ಸಹ ಸ್ಪರ್ಧಾತ್ಮಕ ಜಗತ್ತಿಗೆ ತೆರೆದುಕೊಳ್ಳಬೇಕೆಂಬ ಮಹಾತ್ವಕಾಂಕ್ಷೆಯಿಂದ ಯುವ ಸಬಲೀಕರಣ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಬೆಳಗ್ಗೆ 9:30 ರಿಂದ ಸಂಜೆಯವರೆಗೂ ಕಾರ್ಯಕ್ರಮ ಇರುತ್ತದೆ ಎಂದರು.
ಕಲ್ಪತರು ನಾಡು ತುಮಕೂರು ಶೈಕ್ಷಣಿಕ ನಗರ ಜೊತೆಗೆ, ಕೈಗಾರಿಕಾ ಹಬ್ ಆಗಿಯೂ ಪರಿವರ್ತನೆಯಾಗುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ಓದಿದ ಮಕ್ಕಳಿಗೂ ಇಲ್ಲಿನ ಕಂಪನಿಗಳಲ್ಲಿ ಅವರ ವಿದ್ಯಾರ್ಹತೆಗೆ ತಕ್ಕಂತೆ ಉದ್ಯೋಗ ದೊರೆಯಬೇಕು. ಅವರು ಸಹ ಇತರೆ ಖಾಸಗಿ ಕಾಲೇಜುಗಳಲ್ಲಿ ಓದಿದ ಮಕ್ಕಳ ರೀತಿ ಕ್ಯಾಂಪಸ್ ಸೆಲೆಕ್ಷನ್‍ನಲ್ಲಿ ಭಾಗವಹಿಸಿ, ಉದ್ಯೋಗ ಪಡೆಯುವಂತಾಗಬೇಕು ಎಂಬ ಘನ ಉದ್ದೇಶದೊಂದಿಗೆ ಆಗಸ್ಟ್ 06ರಂದು ಬೆಳಗ್ಗೆ 10 ಗಂಟೆಗೆ ಯುವ ಸಬಲೀಕರಣ ಶಿಬಿರ ಆಯೋಜನೆಗೊಂಡಿದೆ. ತುಮಕೂರು ನಗರವಲ್ಲದೆ ರಾಜ್ಯದ ವಿವಿಧ ಕಡೆಗಳಿಂದ 37ಕ್ಕೂ ಹೆಚ್ಚು ಕಂಪನಿಗಳು ಅಂದು ಭಾಗವಹಿಸಿ, ಆಸಕ್ತ ವಿದ್ಯಾರ್ಥಿಗಳ ಸಂದರ್ಶನ ನಡೆಸಿ, ಟ್ರೈನಿಂಗ್ , ಅಂಪ್ರೇಟೀಸ್, ಅಲ್ಲದೆ ನೇರ ಆಯ್ಕೆ ಸಹ ಮಾಡಿಕೊಳ್ಳಲಿವೆ. ಉದ್ಯೋಗಾಸಕ್ತರು ಮತ್ತು ಉದ್ಯೋಗದಾತರ ನಡುವಿನ ಕೊಂಡಿಯಾಗಿ ಯುವ ಸಬಲೀಕರಣ ಶಿಬಿರ ಕೆಲಸ ಮಾಡಲಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ಕೌಶಲ್ಯ ಕರ್ನಾಟಕದ ಅಧಿಕಾರಿ ಕೆಂಪಯ್ಯ ಮಾತನಾಡಿ, ನಮ್ಮ ಸಂಸ್ಥೆ ವತಿಯಿಂದ ಕೈಗೊಳ್ಳುವ ವಿವಿಧ ಕೌಶಲ್ಯ ತರಬೇತಿಗೆ ಹೆಸರು ನೊಂದಾಯಿಸಿಕೊಳ್ಳಲು ಎರಡು ಪೆÇೀರ್ಟ್ ಗಳನ್ನು ಹುಟ್ಟು ಹಾಕಿದ್ದು, ಅಂದು ಶಿಬಿರಕ್ಕೆ ಬರುವ ವಿದ್ಯಾರ್ಥಿಗಳನ್ನು ನೊಂದಾಯಿಸಿ, ಅವರ ಆಸಕ್ತಿಗೆ ಅನುಗುಣವಾದ ತರಬೇತಿಯ ಜೊತೆಗೆ, ಅಗತ್ಯ ಇರುವ ಕಡೆ ಉದ್ಯೋಗ ದೊರಕಿಸಲು ಮಾರ್ಗದರ್ಶನ ನೀಡಲಿದೆ ಎಂದರು.
ಉದ್ಯೋಗ ವಿನಿಮಯ ಅಧಿಕಾರಿ ಕಿಶೋರ್ ಕುಮಾರ್ ಮಾತನಾಡಿ, ಎಂಪ್ಲಾಯಿಮೆಂಟ್ ಎಕ್ಸ್ಚೆಂಜ್ ವತಿಯಿಂದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ವೃತ್ತಿ ಮಾರ್ಗದರ್ಶನ, ಉದ್ಯೋಗ ಮೇಳದ ಜೊತೆಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ಸ್ಟೇಡಿ ಸರ್ಕಲ್ ಹುಟ್ಟು ಹಾಕಿದೆ. ಅಲ್ಲದೆ ಸರಕಾರದ ಯುವನಿಧಿ ಯೋಜನೆಯ ಸದ್ಬಳಕೆಗೆ ಮಾರ್ಗದರ್ಶನ ನೀಡಿದ್ದು, ಜಿಲ್ಲೆಯಲ್ಲಿ ಇದುವರೆಗೂ ಯುವನಿಧಿಗೆ 6 ಸಾವಿರ ಜನರು ಹೆಸರು ನೊಂದಾಯಿಸಿದ್ದು, ಇವರಲ್ಲಿ 4200 ಜನನರಿಗೆ ಯುವನಿಧಿ ಹಣ ಬರುತ್ತಿದೆ. ದಾಖಲಾತಿ ಕೊರತೆಯಿಂದ ಕೆಲವರ ಖಾತೆಗೆ ಹಣ ವರ್ಗಾವಣೆಯಾಗಿಲ್ಲ ಎಂದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ನಾಗರಾಜು ಮಾತನಾಡಿ, ಜಿಲ್ಲೆಯ ಬಹುದೊಡ್ಡ ಕೈಗಾರಿಕಾ ವಸಾಹತುವಾದ ವಸಂತನರಸಾಪುರದಲ್ಲಿ ಇದುವರೆಗೂ 1150 ಕೈಗಾರಿಕೆಗಳು ನೊಂದಣಿಯಾಗಿದ್ದು, 850 ಕಾರ್ಯನಿರ್ವಹಿಸುತ್ತಿವೆ. ಸುಮಾರು 10 ಸಾವಿರ ಜನರಿಗೆ ಉದ್ಯೋಗ ದೊರೆತ್ತಿದೆ. ಸರೋಜಿನಿ ಮಹಿಷಿ ವರದಿ ಅನ್ವಯ ಸ್ಥಳೀಯರಿಗೆ ಉದ್ಯೋಗ ನೀಡುವಂತೆ ಕೈಗಾರಿಕೆಗಳ ಜೊತೆ ಡಿಐಸಿ ಕೆಲಸ ಮಾಡುತ್ತಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ತರಂ ನಿಖತ್. ಎಸ್, ಮಾತನಾಡಿ, ನಮ್ಮ ಕಾಲೇಜಿನಲ್ಲಿ 4000 ವಿದ್ಯಾರ್ಥಿಗಳು ಓದುತ್ತಿದ್ದು, ಕಲಿಕೆ ಜೊತೆ ಕೌಶಲ್ಯ ಯೋಜನೆ ಅಡಿಯಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ಕನಿಷ್ಠ 50 ಗಂಟೆಗಳ ಕಾಲ ಡಿಜಿಟಲ್ ಮಾರ್ಕೇಟಿಂಗ್, ಟಿ.ವಿ ಮತ್ತು ಮಾಧ್ಯಮಗಳ ಬಗ್ಗೆ ತರಬೇತಿ ಹಾಗೂ ಜಿ.ಎಸ್.ಟಿ ಮತ್ತು ಟ್ಯಾಲಿ ಕುರಿತು ತರಬೇತಿ ನೀಡಲಾಗುತ್ತಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಒಬ್ಬ ವಿದ್ಯಾರ್ಥಿಗೆ 100 ಗಂಟೆ ತರಬೇತಿ ನೀಡಲು ಯೋಚಿಸಲಾಗಿದೆ. ಇದುವರೆಗೂ ಕಾಲೇಜಿನ 1215 ಮಕ್ಕಳು ತರಬೇತಿ ಪಡೆದಿದ್ದಾರೆ. ಇದು ಅವರ ಕ್ಷೇತ್ರದಲ್ಲಿ ಕೌಶಲ್ಯ ವೃದ್ದಿಸಿಕೊಳ್ಳಲು ಅನುಕೂಲವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿದ್ದಲಿಂಗೇಗೌಡ, ಮರಿಚನ್ನಮ್ಮ, ರೇವಣ್ಣಸಿದ್ದಯ್ಯ, ಮಂಜುನಾಥ್, ನಿಸಾರ್ ಅಹಮದ್, ಸಂಜೀವಕುಮಾರ್, ಸುಕನ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.