ಚಂದ್ರಶೇಖರ್ ಗುರೂಜಿಗಳ ಆಪ್ತರೂ ಆಗಿದ್ದ ಮಹಾಂತೇಶ ಶಿರೋಳ ಹಾಗೂ ಮಂಜುನಾಥ್ ಎಂಬುವವರು ಕೊಲೆಗೈದ ಆರೋಪಿಗಳು ಎನ್ನಲಾಗುತ್ತಿದೆ.
ಗುರೂಜಿ ಕೊಲೆ ಹಿಂದೆ ವನಜಾಕ್ಷಿ ಎಂಬ ಮಹಿಳೆಯ ಹೆಸರು ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ಸಹ ಪೆÇಲೀಸರು ಬಂಧಿಸಿದ್ದಾರೆ. 2019 ರವರೆಗೆ ಸ್ವಾಮೀಜಿ ಜೊತೆ ಕೆಲಸ ಮಾಡಿದ ವನಜಾಕ್ಷಿ ಹಾಗೂ ಮಹಾಂತೇಶ ಶಿರೋಳ ಅವರಿಗೆ ಚಂದ್ರಶೇಖ ಗುರೂಜಿ, ಮುಂದೆ ನಿಂತು ಮದುವೆ ಮಾಡಿಸಿದ್ದರು. ನಂತರ ಉಳಿಯಲು ಪ್ಲಾಟ್ ನೀಡಿದ್ದರು. ಸಂಸ್ಥೆಯಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ ಫ್ಲಾಟ್ ವಾಪಸ್ ಮಾಡದಂತೆ ಗುರೂಜಿ ಇವರಿಗೆ ಕೇಳಿದ್ದರು ಎನ್ನಲಾಗುತ್ತಿದೆ.
ಗೂರೂಜಿಯನ್ನು ಆಸ್ತಿಯ ಮತ್ತು ಮಹಿಳೆಯ ವಿಚಾರಕ್ಕಾಗಿಯೇ ಕೊಲೆ ಮಾಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎನ್ನಲಾಗುತ್ತಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಚಂದ್ರಶೇಖರ್ ಗುರೂಜಿ ಪರಿಚಯ :- ಮೂಲತಃ ಬಾಗಲಕೋಟೆ ನಿವಾಸಿ. ಚಂದ್ರಶೇಖರ್ ವಿರುಪಾಕ್ಷಪ್ಪ ಅಂಗಡಿ ಇವರ ಪೂರ್ಣ ಹೆಸರು. ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಬಿಇ ಪದವಿ ಪಡೆದ ಅವರು, 1988ರಲ್ಲಿ ಮುಂಬೈಗೆ ತೆರಳಿ ಗುತ್ತಿಗೆದಾರನಾಗಿ ಕೆಲಸ ಆರಂಭಿಸಿದರು. ಆರು ವರ್ಷಗಳ ಬಳಿಕ ಸಿಂಗಾಪುರಕ್ಕೆ ತೆರಳಿ ವಾಸ್ತುಶಾಸ್ತ್ರ ಅಭ್ಯಾಸ ಮಾಡಿದರು. ಅಲ್ಲಿಂದ ಮರಳಿ ಬಂದ ನಂತರ ಮುಂಬೈನಲ್ಲಿ ಸರಳವಾಸ್ತು ಕಚೇರಿ ಆರಂಭಿಸಿದರು. ಈ ಪ್ರಯತ್ನದಲ್ಲಿ ಯಶಸ್ಸು ಸಿಕ್ಕ ನಂತರ ರಾಜ್ಯದ ವಿವಿಧ ಕಡೆ ಶಾಖೆಗಳನ್ನು ಪ್ರಾರಂಭಿಸಿದರು.
ಎಂಜಿನಿಯರಿಂಗ್ಗೆ ಸೇರುವ ಮೊದಲು ಸೇನೆಗೆ ಸೇರಲು ಪರೀಕ್ಷೆ ಎದುರಿಸಿದ್ದರು. ಆದರೆ ದೈಹಿಕ ಪರೀಕ್ಷೆಯ ಸಮಯದಲ್ಲಿ ಕಡಿಮೆ ತೂಕದ ಕಾರಣ ಇವರನ್ನು ತಿರಸ್ಕರಿಸಲಾಯಿತು. ನಂತರ ಎಂಜಿನಿಯರಿಂಗ್ಗೆ ಸೇರಿದರು. ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ ನಂತರ ಮುಂಬೈನ ಕಟ್ಟಡ ನಿರ್ಮಾಣ ಕಂಪನಿಯಲ್ಲಿ ಎಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. ತಮಗೆ ವಹಿಸಿಕೊಟ್ಟಿದ್ದ ಯೋಜನೆಯನ್ನು ಎರೆಡು ವರ್ಷಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ ಗುರೂಜಿಯವರು ಆ ಕಂಪನಿಯಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಂತ ಕಟ್ಟಡ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಸ್ನೇಹಿತರ ಜೊತೆಗೂಡಿ ‘ಶರಣ ಸಂಕುಲ’ ಎಂಬ ಚಾರಿಟೇಬಲ್ ಟ್ರಸ್ಟ್ನ್ನು ಆರಂಭಿಸಿ, ಅವರೇ ಆ ಟ್ರಸ್ಟ್ನ ಸ್ಥಾಪಕ ಟ್ರಸ್ಟಿಯಾಗಿದ್ದರು. ಈ ಟ್ರಸ್ಟ್ ಸಮಾಜದಲ್ಲಿನ ಬಡವರು ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿದೆ.
1998ನೇ ಇಸವಿಯಲ್ಲಿ ಮೋಸದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದೇ ಸಮಯದಲ್ಲಿ ದಿಕ್ಸೂಚಿ ಮತ್ತು ಕಟ್ಟಡಗಳ ನಕ್ಷೆಯ ಚಿತ್ರಗಳು ಪದೇ ಪದೇ ಗುರೂಜಿಯವರ ಕನಸುಗಳಲ್ಲಿ ಕಾಣಿಸಿಕೊಳ್ಳುತ್ತಿತ್ತು. ಗುರೂಜಿಯವರು ಆಶ್ಚರ್ಯಕ್ಕೊಳಗಾದರು. ಈ ಹಂತದಲ್ಲಿ ವಾಸ್ತುಶಾಸ್ತ್ರದ ಬಗ್ಗೆ ಹೆಚ್ಚಿನ ಅಧ್ಯಯನ ಆರಂಭಿಸಿದರು. ಅಧ್ಯಯನದಿಂದ ತಾವು ಕಂಡುಕೊಂಡಿದ್ದನ್ನು ‘ಸರಳವಾಸ್ತು’ ಮೂಲಕ ಲಕ್ಷಾಂತರ ಜನರೊಂದಿಗೆ ಹಂಚಿಕೊಂಡಿದ್ದಾರೆ.
ಚಂದ್ರಶೇಖರ್ ಗುರೂಜಿ ಅವರ ಮೊದಲ ಪತ್ನಿ ಈ ಹಿಂದೆಯೇ ಸಾವನ್ನಪ್ಪಿದ್ದಾರೆ. ಮೊದಲ ಪತ್ನಿಗೆ ಓರ್ವ ಪುತ್ರಿ ಇದ್ದಾರೆ. ಎರಡನೇ ಪತ್ನಿಗೆ ಮಕ್ಕಳಿಲ್ಲ. ಬಾಗಲಕೋಟೆಯ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾರೆ. ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಇವರ ಹೆಚ್ಚಿನ ಸಂಬಂಧಿಕರು ಇದ್ದಾರೆ. ಬಾಗಲಕೋಟೆಯಲ್ಲಿ ಎಂಜಿನಿಯರಿಂಗ್ ಓದಿದ ನಂತರ ಮೂರು ವರ್ಷಗಳ ನಂತರ ತಮ್ಮ ಸಹೋದರ ಸಂಬಂಧಿ ಬಸವರಾಜ ಕುನ್ನೂರು ಜೊತೆಗೆ ಮುಂಬೈಗೆ ತೆರಳಿದ್ದರು. ಗುರೂಜಿ ಅವರಿಗೆ ಇಬ್ಬರು ಸಹೋದರರು, ಇಬ್ಬರು ಸಹೋದರಿಯರು ಇದ್ದಾರೆ. ಓರ್ವ ಸೋದರಿ ಈ ಹಿಂದೆಯೇ ಸಾವನ್ನಪ್ಪಿದ್ದಾರೆ.