ಗ್ಯಾಸ್ ಬೆಲೆ ಏರಿಕೆ-ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ

ತುಮಕೂರು:ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವನ್ನು ಖಂಡಿಸಿ, ಇಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ಗೀತಾ ರಾಜಣ್ಣ ಅವರ ನೇತೃತ್ವದಲ್ಲಿ ನಗರದ ಭದ್ರಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಖಾಲಿ ಸಿಲಿಂಡರ್ ಹೊತ್ತು ನಡೆದ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಭದ್ರಮ್ಮ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರಕಾರದ ಬೆಲೆ ಹೆಚ್ಚಳ ನೀತಿಯನ್ನು ಖಂಡಿಸಿದರಲ್ಲದೆ,ಅಗತ್ಯ ವಸ್ತುಗಳ ಬೆಲೆಗಳನ್ನು ಇಳಿಸುವ ಮೂಲಕ ಜನಸಾಮಾನ್ಯರ ನೆರವಿಗೆ ಬರುವಂತೆ ಸರಕಾರವನ್ನು ಆಗ್ರಹಿಸಿದರು.

ಪ್ರತಿಭಟನಾ ನಿರತ ಕಾಂಗ್ರೆಸ್ ಮಹಿಳಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಶ್ರೀಮತಿ ಗೀತಾ ರಾಜಣ್ಣ,ಮನಮೋಹನ್‍ಸಿಂಗ್ ಕಾಲದಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಾದರೆ ವೀರಾವೇಷದಿಂದ ಬೀದಿಗಿಳಿ ಯುತ್ತಿದ್ದ ಬಿಜೆಪಿ ಮಹಿಳಾ ಮಣಿಗಳು,ಗ್ಯಾಸ್ ಸಿಲಿಂಡರ್ ಬೆಲೆ 1100 ದಾಟಿದರು ಬಾಯಿ ಬಿಡುತ್ತಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ,ಮನಮೋಹನಸಿಂಗ್ ವಯಸ್ಸಿನಂತೆ ಗ್ಯಾಸ್ ಬೆಲೆ ಹೆಚ್ಚಾದರೆ ಬಡವರು ಬದುಕುವುದು ಹೇಗೆ ಎಂದು ಪ್ರಶ್ನಿಸಿದ್ದರು. ಆದರೆ ಇಂದಿನ ಬೆಲೆ ಹೆಚ್ಚಳದಲ್ಲಿ ಬಡವರು ಹೇಗೆ ಬದುಕುತಿದ್ದಾರೆ ಎಂದು ನೋಡುವ ವ್ಯವದಾನವೂ ಇಲ್ಲದಂತಾಗಿದೆ.ಇದು ಈ ದೇಶದ ದುರಂತ ಎಂದರು.

ಗ್ಯಾಸ್ ಬೆಲೆ 450 ರೂ ಇದ್ದಾಗ ಸಬ್ಸಿಡಿ ದೊರೆಯುತಿತ್ತು.ಆದರೆ ಇಂದು ಬೆಲೆ 1100 ರೂ ಆದರೂ ಸಬ್ಸಿಡಿ ಇಲ್ಲ. ಉಜ್ವಲ ಹೆಸರಿನಲ್ಲಿ ಮನೆ ಮನೆಗೆ ಸಿಲಿಂಡರ್ ವಿತರಿಸಿ,ಇರುವ ಒಲೆಯನ್ನುಕಿತ್ತು ಹಾಕಿ,ಮಹಿಳೆಯರು ಕಣ್ಣೀರು ಹಾಕುವಂತಾಗಿದೆ. ಹೊಗೆರಹಿತ ಅಡುಗೆ ಎಂಬ ನರೇಂದ್ರಮೋದಿ ಅವರ ಘೋಷಣೆ,ಹುಸಿಯಾಗಿದೆ.ನಮ್ಮ ಹೆಣ್ಣು ಮಕ್ಕಳು ಅಡುಗೆ ಮನೆಯಲ್ಲಿ ಹೊಗೆ ಬದಲು ರಕ್ತ ಸುರಿಸುತ್ತಿದ್ದಾರೆ. ಈ ಶಾಪ ಬಿಜೆಪಿ ಪಕ್ಷವನ್ನು ತಟ್ಟದೆ ಬಿಡದು. ಇದರ ಫಲ ಚುನಾವಣೆಯಲ್ಲಿ ಗೊತ್ತಾಗಲಿದೆ ಎಂದು ಗೀತಾ ರಾಜಣ್ಣ ತಿಳಿಸಿದರು.

ಗ್ಯಾಸ್‍ನ ಜೊತೆಗೆ, ಅಡುಗೆ ಎಣ್ಣೆ, ಇಂಧನ ಬೆಲೆಗಳು ಹೆಚ್ಚಾಗಿವೆ. ಮನೆಯನ್ನು ನಿಭಾಯಿಸಿ,ಕೆಲಸಕ್ಕೆ ಹೋಗುವ ಹೆಣ್ಣು ಮಕ್ಕಳಿಗೆ ಒಂದೆಡೆ ಅಡುಗೆ ಅನಿಲ ಬಿಸಿ, ಇನ್ನೊಂದೆಡೆ ಅಡುಗೆ ಎಣ್ಣೆ ಹೆಚ್ಚಳ ಎರಡು ಕೂಡ ನುಂಗಲಾರದ ತುತ್ತಾಗಿದೆ.ಸರಕಾರ ಕೂಡಲೇ ಗ್ಯಾಸ್‍ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಎಲ್ಲಾ ಮಹಿಳೆಯರು ಸೇರಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಗೀತಾ ರಾಜಣ್ಣ ನುಡಿದರು.

ನೆರೆ ಬಂದಾಗ, ಬರಬಂದಾಗ, ಕೋರೋನ ಬಂದಾಗ ಬಾರದ ಮೋದಿ, ಚುನಾವಣೆ ಇರುವಾಗ ವಾರಕ್ಕೆ ಎರಡು ಬಾರಿ ರಾಜ್ಯಕ್ಕೆ ಬಂದು ಕೈ ಬೀಸಿ ಹೋಗುತ್ತಿದ್ದಾರೆ.2019ರಲ್ಲಿ ನೆರೆಯಿಂದ ಸಂತ್ರಸ್ಥರಾದವರಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಕಿಸಾನ್ ಸನ್ಮಾನ ಹೆಸರಿನಲ್ಲಿ ರೈತರ ಮೂಗಿಗೆ ತುಪ್ಪ ಸವರಿ, ಮರಳು ಮಾಡುವ ಕೆಲಸ ಮಾಡುತ್ತಿದ್ದೀರಿ, ಇದು ರಾಜ್ಯದಲ್ಲಿ ಹೆಚ್ಚು ಕಾಲ ನಡೆಯದು. ನಿಮಗೆ ಕರ್ನಾಟಕದ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ರಾಜಣ್ಣ ತಿಳಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮಹಿಳಾ ಮುಖಂಡರಾದ ಸುವರ್ಣಮ್ಮ,ಪಾಲಿಕೆ ಸದಸ್ಯೆ ರೂಪಾ ಶೆಟ್ಟಾಳಯ್ಯ,ವೈದ್ಯಕೀಯಘಟಕ ಡಾ.ಫಹ್ರ್ಹಾನಾ,ನಾಗಮಣಿ,ಸುಜಾತ,ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಾ.ಆರುಂಧತಿ,ಗೀತಮ್ಮ,ಕಾರ್ಮಿಕ ಘಟಕದ ಮಹಿಳಾ ಪದಾಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *