ರಾಜ್ಯಸಭಾ ಚುನಾವಣೆ ವೇಳೆ ಗುಬ್ಬಿ ಶಾಸಕರಾದ ಎಸ್.ಆರ್.ಶ್ರೀನಿವಾಸ ಅವರು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕದೆ ಅಡ್ಡ ಮತದಾನ ಮಾಡಿದ್ದನ್ನು ಖಂಡಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಶಾಸಕರ ಮನೆ ಮುಂದೆ ಧರಣಿ ಕುಳಿತ್ತಿದ್ದ ಕಾರ್ಯಕರ್ತನೊಬ್ಬನಿಗೆ ಕಪಾಳ ಮೋಕ್ಷ ಮಾಡಿದ ಘಟನೆಯಿಂದ ಶಾಸಕರ ಮನೆ ಮುಂದೆ ಬಿಗುವಿನ ವಾತವರಣ ಉಂಟಾದ ಘಟನೆ ಇಂದು ಬೆಳಿಗ್ಗೆ ನಡೆಯಿತು.
ಹಲವಾರು ತಾಲ್ಲೂಕುಗಳಿಂದ ಬಂದಿದ್ದ ಕಾರ್ಯಕರ್ತರು ಜಿಲ್ಲಾ ಜೆಡಿಎಸ್ ಅಧ್ಯಕ್ಷರಾದ ಆರ್.ಸಿ.ಆಂಜಿನಪ್ಪ ಆವರ ನೇತೃತ್ವದಲ್ಲಿ ಶಾಸಕ ಎಸ್.ಆರ್.ಶ್ರೀನಿವಾಸ್ ಅವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಗ ಮನೆಯಿಂದ ಹೊರ ಬಂದ ಶಾಸಕರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರನ್ನು ವಾಚಾಮಗೋಚರವಾಗಿ ಕೆಟ್ಟ ಮಾತುಗಳಿಂದ ನಿಂಧಿಸಲು ಪ್ರಾರಂಭಿಸಿದಾಗ, ಇದನ್ನು ಪ್ರತಿಭಟಿಸಿದಾಗ ಶಾಸಕರೇ ಪ್ರತಿಭಟನಾ ನಿರತರನ್ನು ತಳ್ಳಿ, ಅವರಿಗೂ ಅವಾಚ್ಯ ಶಬ್ದಗಳಿಂದ ನಿಂಧಿಸಿದಾಗ ಇದನ್ನು ಪ್ರತಿಭಟಿಸಿದ ಶಿರಾ ನಗರಸಭಾ ಸದಸ್ಯರಾದ ರವೀಶ್ ಅವರ ಕಪಾಳಕ್ಕೆ ಹೊಡೆದರೆನ್ನಲಾಗಿದೆ, ಅಲ್ಲದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬೆಳ್ಳಿ ಲೋಕೇಶ್ ಅವರನ್ನು ಕೈ ಹಿಡಿದು ನೀನೇಕೆ ಬಂದೆ ಎಂದು ನೂಕಿದರೆನ್ನಲಾಗುತ್ತಿದೆ.
ಈ ವೇಳೆಗೆ ವಾಸಣ್ಣನವರ ಬೆಂಬಲಿಗರು ಜಮಾಯಿಸಿದ್ದರಿಂದ ಶಾಸಕ ಎಸ್.ಆರ್.ಶ್ರೀನಿವಾಸ ಅವರ ಮನೆ ಮುಂದೆ ಪ್ರಕ್ಷುಬ್ಧ ವಾತವರಣ ಕಂಡು ಬಂದ ಹಿನ್ನಲೆಯಲ್ಲಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಯಿತು, ಅಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ಕರೆಸಲಾಯಿತು.ತದ ನಂತರ ಪೊಲೀಸರು ವಾತವರಣವನ್ನು ತಿಳಿಗೊಳಿಸಿದರು.

ತಿಥಿಕಾರ್ಡ್ :- ಎಸ್.ಆರ್.ಶ್ರೀನಿವಾಸ ಅವರು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿರುವುದನ್ನು ವಿರೋಧೀಸಿರುವ ಗುಬ್ಬಿ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರು “ಕೈಲಾಸ ಸಮಾರಾಧನೆ” ಎಂಬ ತಿಥಿ ಕಾರ್ಡ್‍ನ್ನು ಮುದ್ರಿಸಿದ್ದು, ಜೂನ್ 21ರಂದು ಕೈಲಾಸ ಸಮಾರಾಧನೆಯನ್ನು ಗುಬ್ಬಿ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವುದಾಗಿ ಸಾಮಾಜಿಕ ಜಾಲ ತಾಣಗಳಲ್ಲಿ ಆಹ್ವಾನ ಪತ್ರವನ್ನು ಹಾಕಿಕೊಂಡಿದ್ದಾರೆ.