ತುಮಕೂರು:ಮನೆಯಲ್ಲಿ ಮದ್ಯ ಮತ್ತು ಮಾದಕ ವಸ್ತುಗಳ ಅಕ್ರಮ ಸಂಗ್ರಹಣೆ ಸಹ ಅಪರಾಧವಾಗಿದ್ದು,ಇದಕ್ಕೆ ಜಾಮೀನು ರಹಿತ ಕೇಸು ಬಿಳುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ರಾಘವೇಂದ್ರ ಶೆಟ್ಟಿಗಾರ್ ಎಚ್ಚರಿಕೆ ನೀಡಿದ್ದಾರೆ.
ನಗರದ ಆರ್ಚ್‍ಡ್ಸ್ ಮದ್ಯ ವರ್ಜನಾ ಮತ್ತು ಸಮಗ್ರ ಪುನರ್ವಸತಿ ಕೇಂದ್ರದಲ್ಲಿ,ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪೊಲೀಸ್ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ದುರ್ಬಳಕೆ ಹಾಗೂ ಅಕ್ರಮ ಸಾಗಾಟದ ವಿರುದ್ದ ಅಂತರ ರಾಷ್ಟ್ರೀಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತಿದ್ದ ಅವರು,ಗೊತ್ತೋ,ಗೊತ್ತಿಲ್ಲದೆಯೇ ಮಾಡುವ ಮಾದಕ ವಸ್ತುಗಳ ಸಂಗ್ರಹಣೆಯಂತಹ ತಪ್ಪುಗಳಿಂದ ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ.ಇದರ ಬಗ್ಗೆ ಎಚ್ಚರ ಇರಲಿ ಎಂದರು.
ಮನುಷ್ಯ ಆರೋಗ್ಯವಂತ ಸುಲಲಿತ ಜೀವನ ನಡೆಸಬೇಕೆಂದರೆ ಮಾದಕ ವಸ್ತು ಮತ್ತು ಮದ್ಯ ಸೇವೆಯಂತಹ ಚಟಗಳಿಂದ ಮುಕ್ತರಾಗಬೇಕು.ಸ್ನೇಹಿತರ ಸಹವಾಸವೋ,ಒತ್ತಾಯಕ್ಕೋ ಮಣಿದು ಒಮ್ಮೆ ಇದನ್ನು ಸೇವಿಸಿ, ಮತ್ತೆ ಮತ್ತೆ ಸೇವಿಸುವ ಚಟಕ್ಕೆ ಬೀಳುವುದರಿಂದ ದೇಹದ ಆರೋಗ್ಯದ ಜೊತೆಗೆ, ಮಾನಸಿಕವಾಗಿಯೂ ಕುಗ್ಗಿ ಹೋಗುತ್ತಾರೆ, ಇದಕ್ಕೆ ಹಣ ಹೊಂದಿಸಲು ಸುಲಿಗೆ, ದರೋಡೆ, ಕಳ್ಳತನದಂಹತ ಪ್ರಕರಣಗಳಿಗೆ ಇಳಿಯುವುದನ್ನು ಕಾಣಬಹುದಾಗಿದೆ.ಮಾದಕ ವಸ್ತುಗಳ ಸೇವೆಯಿಂದ ತಾನು ದೈಹಿಕ ಮತ್ತು ಮಾನಸಿಕವಾಗಿ ನರಳುವ ಜೊತೆಗೆ, ತಮ್ಮ ಕುಟುಂಬವನ್ನು ಸಮಾಜದ ಮುಂದೆ ನರಳುವಂತೆ ಮಾಡುತ್ತಾರೆ. ಇದನ್ನು ತಪ್ಪಿಸುವತ್ತ ನಾವೆಲ್ಲರೂ ಮುಂದಾಗಬೇಕಾಗುತ್ತದೆ ಎಂದು ನ್ಯಾ.ರಾಘವೇದ್ರ ಶೆಟ್ಟಿಗಾರ್ ನುಡಿದರು.
ಜಿಲ್ಲಾಸ್ಪತ್ರೆಯ ಮನೋವೈದ್ಯರಾದÀ ಡಾ.ಸುರೇಂದ್ರನಾಥ್ ಮಾತನಾಡಿ,1989 ರಿಂದ ವಿಶ್ವ ಸಂಸ್ಥೆ ಪ್ರತಿವರ್ಷದ ಜೂನ್ 26ನೇ ದಿನವನ್ನು ಮಾದಕ ವಸ್ತುಗಳ ಸೇವೆ ತಡೆ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದೆ.2019ರಲ್ಲಿ ಭಾರತ ಸರಕಾರ ನಡೆಸಿದ ಸರ್ವೆಯೊಂದರ ಪ್ರಕಾರ ಒಟ್ಟಾರೆ ಜನಸಂಖ್ಯೆಯ ಶೇ15 ರಷ್ಟು ಜನತೆ ಇಂತಹ ದುಶ್ಚಟಗಳಿಗೆ ಒಳಗಾಗುತ್ತಿದ್ದು,ಇವರಲ್ಲಿ ಕರುಳು, ಕಿಡ್ನಿ ಸೇರಿದಂತೆ ಬಹುಅಂಗಾಂಗ ತೊಂದರೆಗೆ ಒಳಗಾಗುವುದನ್ನು ಕಾಣಬಹುದು.ಇದನ್ನು ತಡೆಯುವ ನಿಟ್ಟಿನಲ್ಲಿ ಸರಕಾರದ ಅಧಿಕಾರಿಗಳು,ಜನಪ್ರತಿನಿಧಿಗಳು,ವೈದ್ಯರು ಒಗ್ಗೂಡಿ ಕೆಲಸ ಮಾಡಬೇಕಾಗುತ್ತದೆ.ಮಾದಕ ವಸ್ತು ವ್ಯಸನಿಯನ್ನು ಎಲ್ಲಾ ಮೂಲಗ ಳಿಂದ ಪರಿಶೀಲನೆ ಮಾಡಿ,ಚಿಕಿತ್ಸೆಗೆ ಒಳಪಡಿಸುವುದರಿಂದ ಅವರನ್ನು ಚಟ ಮುಕ್ತರನ್ನಾಗಿಸುವ ಕೆಲಸ ಆಗಬೇಕೆಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಂಜುನಾಥ್ ಮಾತನಾಡಿ, ಇಡಿ ವಿಶ್ವದಲ್ಲಿ 2.45 ದಶಲಕ್ಷ ಮಾದಕ ವಸ್ತುಗಳ ವ್ಯಸನಿಗಳಿದ್ದಾರೆ ಎಂದು ಆಂದಾಜಿಸಲಾಗಿದೆ.ಇದರ ಪ್ರಮಾಣ ಮುಂದಿನ 2030ರ ವೇಳೆ ಶೇ11ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.ಇದು ದೇಶದ ಅರ್ಥಿಕತೆಯ ಮೇಲೆ ಒಡೆತ ನೀಡುವುದಲ್ಲದೆ, ಮಾನವ ಸಂಪನ್ಮೂಲಕ್ಕೂ ಧಕ್ಕೆ ತರಲಿದೆ ಎಂದು ಎಚ್ಚರಿಸಿದರು.
ಜಿಲ್ಲಾ ಕುಷ್ಠರೋಗ ನಿಯಂತ್ರಣ ಮತ್ತು ಮಾನಸಿಕ ರೋಗ ನಿವಾರಣಾಧಿಕಾರಿ ಡಾ.ಎಂ.ಚೇತನ್ ಮಾತನಾಡಿ,ಒಂದು ಕುಟುಂಬದ ವ್ಯಕ್ತಿ ಮದ್ಯ ಮತ್ತು ಮಾದಕ ವ್ಯಸನಿಯಾಗುವುದರಿಂದ ಇಡೀ ಕುಟುಂಬವೇ ಬೀದಿಗೆ ಬೀಳುವುದಲ್ಲದೆ,ಸಮಾಜಕ್ಕೆ ಹೊರೆಯಾಗಿ ಬದುಕುಬೇಕಾಗುತ್ತದೆ.ಹಾಗಾಗಿ ನಮ್ಮ ನಿಮ್ಮ ಮಕ್ಕಳು ಈ ವ್ಯಸನಕ್ಕೆ ತುತ್ತಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ.ಸಂಪನ್ಮೂಲ ಕ್ರೂಡೀಕರಣದ ಹೆಸರಿನಲ್ಲಿ ಮದ್ಯದಂಗಡಿಗಳ ತೆರೆಯುವ ಬದಲು ಮದ್ಯ ಮುಕ್ತರಾಜ್ಯಗಳ ಸಾಲಿಗೆ ಸೇರುವ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಅದು ದೇಶದ ಪ್ರಗತಿಗೆ ನಾವು ಕೊಟ್ಟ ಕೊಡುಗೆಯಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ್ ಮಾತನಾಡಿ,ಮದ್ಯಪಾನ ಮಾಡುವುದು ಮತ್ತು ಪ್ರೋತ್ಸಾಹಿಸುವುದು ಹಾಗು ಮಾದಕ ವಸ್ತುಗಳ ಸೇವನೆ ಅಕ್ರಮ ಚಟುವಟಿಕೆಗಳಿಗೆ ಬೆಂಬಲಿಸಿದಂತೆ, ಇದರಿಂದ ದೇಶದ ಅರ್ಥಿಕ ವ್ಯವಸ್ಥೆ ದುರ್ಬಲಗೊಳ್ಳಲಿದೆ. ಮಾನವ ಸಂಪನ್ಮೂಲಗಳ ದೈಹಿಕ ಮತ್ತು ಮಾನಸಿಕ ಆರೋಗ್ಯ ಹದಗೆಡಲಿದೆಸಮಾಜದ ಸ್ವಾಥ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಹಾಗಾಗಿ ನಾವೆಲ್ಲರೂ ಮದ್ಯ ಮತ್ತು ಮಾದಕ ವಸ್ತುಗಳ ಸೇವನೆಯಿಂದ ದೂರ ಇರೋಣ, ಎಲ್ಲಾದರೂ ಮಾದಕ ವಸ್ತುಗಳ ಸೇವೆ ಮತ್ತು ಅಕ್ರಮ ಸಂಗ್ರಹಣೆ ಕಂಡು ಬಂದರೆ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ, ದೇಶ ಉಳಿಸಿದ ಕೀರ್ತಿಯಲ್ಲಿ ಭಾಗಿಯಾಗಿ ಎಂದು ಸಲಹೆ ನೀಡಿದರು.
ಅರ್ಚಡ್ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಮಾಲ ಸದಾಶಿವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ 22 ವರ್ಷಗಳಿಂದ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಸಾವಿರಾರು ಮದ್ಯವರ್ಜನಾ ಶಿಬಿರಗಳನ್ನು ನಮ್ಮ ಸಂಸ್ಥೆಯ ಮೂಲಕ ನಡೆಸಲಾಗಿದೆ.ನಮ್ಮ ಶಿಬಿರಗಳಲ್ಲಿ ಭಾಗವಹಿಸಿದ ಬಹುಪಾಲು ಜನರು, ಮದ್ಯಪಾನದಿಂದ ದೂರ ಇದ್ದು, ಹೊಸ ಬದುಕು ರೂಪಿಸಿಕೊಂಡಿದ್ದಾರೆ ಎಂದರು.
ವೇದಿಕೆಯಲ್ಲಿ ಹಿರಿಯ ನಾಗರಿಕರು ಮತ್ತು ಅಂಗವಿಕಲರ ಕಲ್ಯಾಣಾಧಿಕಾರಿ ರಮೇಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಶ್ರೀಧರ್ ಎಂ.ಎಸ್.,ಅರ್ಚಡ್ ಸಂಸ್ಥೆ ನಿರ್ವಾಹಕ ನಿರ್ದೇಶಕ ಡಾ.ಹೆಚ್.ಜಿ.ಸದಾಶಿವಯ್ಯ, ಪೊಲೀಸ್ ಅಧಿಕಾರಿ ವಿದ್ಯಾಶ್ರೀ ಸೇರಿದಂತೆ ಹಲವರು ಉಪಸ್ಥಿತರಿದ್ದರು.