ತಿಪಟೂರು : ನಾಗಪುರದಿಂದಿ ಬರುವುದನ್ನು ಜಾರಿಗೊಳಿಸಲಷ್ಟೇ ಮಂತ್ರಿಯಾಗಿರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಮಂತ್ರಿಗಳು ಕೂಡಲೇ ರಾಜೀನಾಮೆ ನೀಡಬೇಕೆಂದು ಜಾಗೃತಿ ವೇದಿಕೆಯ ಟೂಡಾ ಮಾಜಿ ಅಧ್ಯಕ್ಷರಾದ ಸಿ.ಬಿ.ಶಶಿಧರ್ ಅವರು ಆಗ್ರಹಿಸಿದರು.
ಅವರಿಂದು ಪಠ್ಯಪುಸ್ತಕ ವಿರೋಧಿಸಿ ತಿಪಟೂರು ತಾಲ್ಲೂಕಿನಾದ್ಯಂದ ಜುಲೈ 4ರಿಂದ 9ರವರೆಗ ನಡೆಯುತ್ತಿರುವ ಕಾಲ್ನಡಿಗೆ ಜಾಥದ 5ನೇ ದಿನವಾದ ಇಂದು ಕಿಬ್ಬನಹಳ್ಳಿ ಹೋಬಳಿಯ ಬಿಳಿಗೆರೆಯಲ್ಲಿ ಸೇರಿದ್ದ ಜನರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ನಾಗಪುರದವರು ನಿಮ್ಮನ್ನು ಗೊಂಬೆ ಮಾಡಿಕೊಂಡಿದ್ದಾರೆ, ಅವರು ಆಡಿಸಿದಂತೆ ಆಡಲು ಮಂತ್ರಿಯಾಗಿ ಏಕೆ ಇರಬೇಕು, ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ಒಂದೇ ಸಮುದಾಯದ 26 ಜನರ ಪಠ್ಯಗಳನ್ನು ಸೇರಿಸಿದ್ದು, ಇನ್ಯಾವ ಸಮುದಾಯದಲ್ಲಿಯೂ ಬರೆಯುವವರು ಇರಲಿಲ್ಲವೆ ಎಂದು ಪ್ರಶ್ನಿಸಿದರು.
ನಾಡಗೀತೆಗೆ, ನಾಡಧ್ವಜಕ್ಕೆ, ಕುವೆಂಪುರವರಿಗೆ ಅವಮಾನ ಮಾಡಿದ ರೋಹಿತ್ ಚಕ್ರತೀರ್ಥನೆಂಬ ಒಂದೇ ಒಂದು ಪದವಿಯನ್ನು ಪಡೆದವನನ್ನು ಪಠ್ಯಪುಸ್ತಕ ಪರಿಷ್ಕರಣೆ ಅಧ್ಯಕ್ಷನನ್ನಾಗಿ ಮಾಡಿದ ಹಿಂದಿನ ಉದ್ದೇಶವೇನು? ಹಾಗೆಯೇ ಪಠ್ಯಪುಸ್ತಕ ಪರಿಷ್ಕರಣೆಯ ಸಮಿತಿಯಲ್ಲಿ ನಿಮ್ಮದೇ ಸಮುದಾಯದ 9 ಮಂದಿ ಸದಸ್ಯರನ್ನು ನೇಮಿಸಿದ್ದರ ಹಿಂದಿನ ಮರ್ಮವೇನು ಎಂಬುದು ಈಗ ತಿಳಿದಿದೆ ಎಂದರು.

ಹಿಂದಿನ ಪಠ್ಯಗಳಲ್ಲಿ 28 ಪಾಠಗಳಲ್ಲಿ ಇಡೀ ನಾಡಿಗೆ ಸಾಮಾಜಿಕ ಸಮಾನತೆ ಸಾರಿದವರ ಪಠ್ಯಗಳನ್ನು ವಿವಿಧ ಎಲ್ಲಾ ಸಮುದಾಯದವರು ಬರೆದಿದ್ದರು, ಆದರೆ ಈಗ 26 ಪಾಠಗಳಲ್ಲಿ ಒಂದೇ ಸಮುದಾಯದವರು ಬರೆದಿದ್ದಾರೆ.
ಬಸವಣ್ಣ, ಕನಕದಾಸರು, ಪುರಂದದಾಸರು, ಬುದ್ಧ, ಬಸವಣ್ಣ, ಅಂಬೇಡ್ಕರ್, ಕುವೆಂಪು ಇವರನ್ನೆಲ್ಲಾ ಮಕ್ಕಳು ಓದಬಾರದು ಎಂದೇ ಇವರ ಪಾಠಗಳನ್ನು ಬಿಟ್ಟು ಒಂದು ಪಕ್ಷದ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ಅಳವಡಿಸದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಪಠ್ಯಪುಸ್ತಕ ಪರಿಷ್ಕರಣೆಯನ್ನು ವಾಪಸ್ಸು ಪಡೆಯದಿದ್ದರೆ ಅದರ ಪರಿಣಾಮ ಏನು ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದ ಅವರು, ಸರ್ಕಾರಿ ಶಾಲೆಯ ಬಡ ಮಕ್ಕಳು ಶೂ ಮತ್ತು ಕಾಲು ಚೀಲಕ್ಕಾಗಿ ಶಾಲೆಗೆ ಬರುತ್ತಿಲ್ಲ, ಓದಲು ಬರುತ್ತಿರುವುದು ಎಂದು ಬಡತನ, ಹಸಿವನ ಬಗ್ಗೆ ವ್ಯಂಗ್ಯ ಮಾಡಿದ ನೀವು, ನಿಮ್ಮ ಮಕ್ಕಳು ಶೂ-ಕಾಲು ಚೀಲ ಹಾಕಿಕೊಂಡು ಶಾಲೆಗೆ ಹೋಗಬೇಕು, ಬಡವರ ಮಕ್ಕಳು ಹಾಕಿಕೊಳ್ಳಬಾರೆದೆ, ಬಡವರ ಮಕ್ಕಳನ್ನು ವ್ಯಂಗ್ಯ ಮಾಡಿದ ನಿಮಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ಕೊಡಿ ಎಂದು ಕಿಡಿ ಕಾರಿದರು.

ಪಠ್ಯಪುಸ್ತಕ ಪರಿಷ್ಕರಣೆಯಿಂದ ನಕ್ಕಳ ಭವಿಷ್ಯ ಹಾಳು ಮಾಡಿದ ನಿಮಗೆ ಅಪರಾಧ ಭಾವನೆ ಕಾಡಲಿಲ್ಲವೆ, ನಿಮ್ಮದೇ ಪ್ರಧಾನಿ, ಮುಖ್ಯಮಂತ್ರಿ ಇದ್ದಾರೆ ತಿಪಟೂರು ತಾಲ್ಲೂಕಿನಲ್ಲಿ ಒಂದು ಒಳ್ಳೆಯ ಸರ್ಕಾರಿ ಶಾಲೆ ತೆರಯಿರಿ ಬಡ ಮಕ್ಕಳು ಚೆನ್ನಾಗಿ ಓದಿ ಉನ್ನತ ಹುದ್ದಗೆ ಸೇರಲಿ ಎಂದು ಸವಾಲು ಹಾಕಿದರು.
ಭಾರತೀಯ ಶರಣ ಸೇನೆಯ ರಾಯಸಂದ್ರ ರವಿಕುಮಾರ್ ಮಾತನಾಡಿ, ಈ ಜಾಥ ಪಠ್ಯಪುಸ್ತಕಗಳನ್ನು ತಿರುಚಿರುವ ಬಗ್ಗೆ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿದೆ, ಇದೇನು ಚುನಾವಣೆ ಕಾಲವಗಿದ್ದರೆ ಪಕ್ಷದ ಹೆಸರಿನಡಿಯಲ್ಲಿ ಬರುತ್ತಿದ್ದೆವು, ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪನವರನ್ನು ಕೆಳಗಿಳಿಸಿ, ಆರ್.ಎಸ್.ಎಸ್. ಹೇಳಿದಂತೆ ಕೇಳುವ ಮುಖ್ಯಮಂತ್ರಿ, ಶಿಕ್ಷಣ ಮಂತ್ರಿಯನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಬುದ್ಧ, ಬಸವಣ್ಣ, ಅಂಬೇಡ್ಕರ್, ಕುವೆಂಪು ಮತ್ತು ನಮ್ಮ ನಾಡಿನ ಎಲ್ಲಾ ಮಠಗಳನ್ನು ಕಡೆಗಣಿಸಿ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿದ್ದಾರೆ ಇಂತಹ ಮಂತ್ರಿಗಳು ಈ ನಾಡಿಗೆ ಬೇಕಿಲ್ಲ ಕೂಡಲೆ ಆರ್.ಎಸ್.ಎಸ್. ಕಚೇರಿಗೆ ಮರಳುವುದು ಉತ್ತಮ ಎಂದರು.
ಪಠ್ಯ ಪರಿಷ್ಕರಣೆ ವಿರೋಧಿಸಿ ತಿಪಟೂರು ತಾಲ್ಲೂಕಿನಾದ್ಯಂತ ಜುಲೈ 4 ರಿಂದ 9 ರವರೆಗೆ ನಡೆಯುತ್ತಿರುವ 5 ನೇ ದಿನದ ಕಾಲ್ನಡಿಗೆ ಇಂದು ತಾಲ್ಲೂಕಿನ ಕಿಬ್ನನಹಳ್ಳಿ ಹೋಬಳಿಯ ಜಕ್ಕನಹಳ್ಳಿಯಿಂದ ಪ್ರಾರಂಭವಾಯಿತು. ಕಾಲ್ನಡಿಗೆಯಲ್ಲಿ ಭಾರತೀಯ ಶರಣ ಸೇನಾದ ರಾಯಸಂದ್ರ ರವಿಕುಮಾರ್, ಡಿಎಸ್ಎಸ್ ನ ರಾಜ್ಯ ಕಾರ್ಯದರ್ಶಿ ಕುಂದೂರು ತಿಮ್ಮಯ್ಯ, ಎನ್ ಕೆ ಸುಬ್ರಮಣ್ಯ, ಸಿ.ಐ.ಟಿ.ಯು.ಜಿಲ್ಲಾ ಕಾರ್ಯದರ್ಶಿ, ತುರುವೇಕೆರೆ ಸತೀಶ್ ತಾಲ್ಲೂಕು ಸಿಐಟಿಯು ಅಧ್ಯಕ್ಷರು, ಚಂದನ್ ತಿಮ್ಲಾಪುರ, ರಘು ಬಿಳಿಗೆರೆ, ಜಾಗೃತ ತಿಪಟೂರು ವೇದಿಕೆಯ ಟೂಟಾ ಶಶಿಧರ್, ಶ್ರೀಕಾಂತ್ ಕೆಳಹಟ್ಟಿ, ಸದಸ್ಯರು ಮಹಾಪೋಷಕರು ಹಾಗೂ 100ಕ್ಕೂ ಹೆಚ್ಚು ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡಿದ್ದರು. ಅರಿವು ಮೂಡಿಸುವ ಜಾಥಾ ಇಂದು ಜಕ್ಕನಹಳ್ಳಿಯಿಂದ ಪಾರಂಭಗೊಂಡು, ತಿಮ್ಲಾಪುರ, ಬಿಳಿಗೆರೆ, ಕಿಬ್ಬನಹಳ್ಳಿ, ಹಟ್ನ ತಲುಪಿ ಕೆ.ಬಿ.ಕ್ರಾಸ್ ನಲ್ಲಿ ಅಂತ್ಯಗೊಂಡಿತು.