ಗುಬ್ಬಿ: ಯುವಕರನ್ನು ಒಗ್ಗೂಡಿಸಿ ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರ ನಿರ್ಮೂಲನೆಗೆ ಪಣ ತೊಟ್ಟ ರಾಹುಲ್ ಗಾಂಧಿ ಅವರು ಪಕ್ಷಾತೀತ ಐಕ್ಯತಾ ಪಾದಯಾತ್ರೆಯನ್ನು ಬೃಹತ್ ಮಟ್ಟದಲ್ಲಿ ನಡೆದಿದೆ. ರಾಜ್ಯಕ್ಕೆ ಆಗಮಿಸಿದ ಭಾರತ್ ಜೋಡೋ ಯಾತ್ರೆ ಕೆ.ಬಿ.ಕ್ರಾಸ್ ಗೆ ಇದೇ ತಿಂಗಳ 9 ರಂದು ಸಾಗಲಿದ್ದು ನಮ್ಮ ತಾಲ್ಲೂಕಿನ 5 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಜಿ.ಎಸ್.ಪ್ರಸನ್ನಕುಮಾರ್ ತಿಳಿಸಿದರು.
ಪಟ್ಟಣದ ಶಾದಿಮಹಲ್ ನಲ್ಲಿ ನಡೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಅವರು ಕೆ.ಬಿ.ಕ್ರಾಸ್ ನಿಂದ ಚಿಕ್ಕನಾಯಕನಹಳ್ಳಿ ವರೆಗೆ ನಮ್ಮ ತಾಲ್ಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಹೆಜ್ಜೆ ಹಾಕಲಿದ್ದಾರೆ ಎಂದರು.
ಕೇವಲ ಎಂಟು ವರ್ಷದಲ್ಲಿ ಇಡೀ ದೇಶದ ಸಂಪತ್ತು ಲೂಟಿ ಮಾಡಿದ ಬಿಜೆಪಿ ಕೇವಲ ಬಂಡವಾಳಶಾಹಿ ಪರ ನಿಂತಿದೆ. ಜನರಿಗೆ ಮಂಕು ಬೂದಿ ಎರಚುವ ಗಾರುಡಿಗರಂತೆ ವರ್ತಿಸುವ ಮೋದಿ ಅಮಿತ್ ಷಾ ಅವರ ಮಾತುಗಳಿಗೆ ಮರುಳಾಗಿ ದೇಶವನ್ನೇ ಕಳೆದುಕೊಳ್ಳುವ ದುಸ್ಥಿತಿ ಬಗ್ಗೆ ತಿಳಿಸಿ ಜಾಗೃತಿ ಮೂಡಿಸುವ ಜೊತೆಗೆ ಜನರ ಸಮಸ್ಯೆ ಆಲಿಸುವ ಕಾರ್ಯ ಸಹ ರಾಹುಲ್ ಗಾಂಧಿ ಅವರು ನಡೆಸಿದ್ದಾರೆ. ಸಮಸ್ಯೆ ಆಲಿಸಲು ಮತ್ತೊಂದು ಸಹಾಯ ವಾಣಿ ಸಹ ತೆರೆದು 9739780611 ಸಂಖ್ಯೆಯಲ್ಲಿ ವಾಟ್ಸಪ್ ಮೂಲಕ ಸಮಸ್ಯೆ ಹಂಚಿಕೊಳ್ಳಲು ಅವಕಾಶ ಮಾಡಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ಹೊನ್ನಗಿರಿಗೌಡ ಮಾತನಾಡಿ ದೇಶದ ಚಿನ್ನವನ್ನು ಹೊರದೇಶದಲ್ಲಿ ಅಡವಿಟ್ಟ ಬಿಜೆಪಿ ದಿವಾಳಿತನ ಸೃಷ್ಠಿಸಿದ್ದಾರೆ. ದೇಶದಲ್ಲಿ ಕೇವಲ ಹಿಂದುತ್ವ ಅಷ್ಟೇ ಬಿಂಬಿಸಿ ನಾನಾಧರ್ಮಗಳ ಮೇಲೆ ಸವಾರಿ ಮಾಡಿದ್ದಾರೆ. ಒಡೆದು ಆಳುವ ನೀತಿ ಬಿಜೆಪಿ ಪಾಲಿಸುತ್ತಿದೆ. ಯುವಕರನ್ನು ಬಳಸಿಕೊಂಡು ಕೋಮು ಗಲಭೆ ಸೃಷ್ಠಿಸಿದ್ದಾರೆ. ಇಂತಹ ಬಿಜೆಪಿ ದುರಾಡಳಿತ ಬಗ್ಗೆ ಸಾಮಾನ್ಯರಿಗೆ ತಿಳಿಸಬೇಕು. ಈ ನಿಟ್ಟಿನಲ್ಲಿ ಯುವಕರನ್ನು ಒಟ್ಟುಗೊಳಿಸಿ ದೇಶ ಉಳಿಸುವ ನಿಟ್ಟಿನಲ್ಲಿ ಈ ಪಾದಯಾತ್ರೆ ಮೂರೂವರೆ ಸಾವಿರ ಕಿಮೀ ದೂರ ಕ್ರಮಿಸಲಿದೆ. ನನ್ನ ತಾಲ್ಲೂಕಿನ ಕಾರ್ಯಕರ್ತರು ಇದೇ ತಿಂಗಳ 8ರ ಶನಿವಾರ ಬೆಳಿಗ್ಗೆ 6.30 ಕ್ಕೆ ಯಾತ್ರೆಗೆ ಸೇರ್ಪಡೆಗೊಳ್ಳಲಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಶಂಕರಾನಂದ ಮಾತನಾಡಿ ರಾಜಕೀಯ ಹೊರತಾದ ಈ ಐಕ್ಯತಾ ಯಾತ್ರೆ ದೇಶದಲ್ಲಿನ ಅವ್ಯವಹಾರ, ಭ್ರಷ್ಟಾಚಾರ ತಿಳಿಸಿ ದೇಶ ಉಳಿಸುವ ನಿಟ್ಟಿನಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಗುಬ್ಬಿಯಲ್ಲಿ ಕಾಂಗ್ರೆಸ್ ನಲ್ಲಿ ಯಾವ ಗೊಂದಲ ಸೃಷ್ಟಿಯಾಗಿಲ್ಲ. ಪಕ್ಷ ಸಂಘಟನೆ ಬಗ್ಗೆ ಅಷ್ಟೇ ಮುತುವರ್ಜಿ ತೋರಿದ ಮುಖಂಡರು ಯಾತ್ರೆಯ ಯಶಸ್ವಿಗೆ ಮುಂದಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮಯೂರ್ ಜೈಕುಮಾರ್ ಗುಬ್ಬಿಗೆ ಭೇಟಿ ನೀಡಿ ಕಾಂಗ್ರೆಸ್ ಮುಖಂಡರ ಜೊತೆ ಚರ್ಚಿಸಿ ಯಾತ್ರೆ ಯಶಸ್ವಿಗೆ ಪೂರ್ವ ತಯಾರಿ ಬಗ್ಗೆ ಪರಿಶೀಲನೆ ನಡೆಸಿದರು.
ಯಾತ್ರೆಯ ಸಹ ಸಂಯೋಜಕರಾದ ರಾಯಸಂದ್ರ ರವಿಕುಮಾರ್, ಮಂಜುನಾಥ್, ಪಪಂ ಸದಸ್ಯ ಮಹಮದ್ ಸಾದಿಕ್, ಕೆ.ಆರ್.ತಾತಯ್ಯ, ಸಲೀಂ ಪಾಷ, ಜಿ.ವಿ.ಮಂಜುನಾಥ್, ಜಿ.ಎಂ.ಶಿವಾನಂದ್ ಇತರರು ಇದ್ದರು.