ಪತ್ರಿಕಾ ದಿನಾಚರಣೆ ಎಂದರೇನು? ಅಂತರಾಷ್ಟ್ರೀಯದಲ್ಲಿ ಪತ್ರಕರ್ತರಿಗೆ ಅಪಾಯಕಾರಿ ದೇಶ ಭಾರತ ಎಂಬ ಹಣೆ ಪಟ್ಟಿ

179ನೇ ವರ್ಷದ ಪತ್ರಿಕಾ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಪತ್ರಕರ್ತನಾಗಿ ನಾನು ಸಮಾಜಕ್ಕೆ ಏನು ಮಾಡಿದೆ, ಸಮಾಜವನ್ನು ಎತ್ತ ಕೊಂಡ್ಯೋಯ್ದೆ, ಇದರಿಂದ ನನಗೆ ಆತ್ಮ ತೃಪ್ತಿ ಸಿಕ್ಕಿದೆಯೆ? ನಾನು ನನ್ನ ವೃತ್ತಿಗೆ ಬದ್ಧನಾಗಿ ನಡೆದುಕೊಂಡು ಮನುಷ್ಯ ಒಳಿತೇ, ಪತ್ರಿಕಾ ಧರ್ಮದ ಒಳಿತು ಎಂದುಕೊಂಡು ದೇಶದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುತ್ತಾ ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಳ್ಳುವುದೇ ‘ಪತ್ರಿಕಾ ದಿನಾಚರಣೆ’ ಎಂದುಕೊಂಡಿದ್ದೇನೆ.

179 ವರ್ಷಗಳ ಹಿಂದಕ್ಕೆ ತಿರುಗಿ ನೋಡಿದರೆ ಎರಡೂವರೆ ವರ್ಷಗಳ ಇತಿಹಾಸವಿರುವ ಕನ್ನಡಕ್ಕೆ ಒಂದು ಪತ್ರಿಕೆಯನ್ನು ಹೊರ ತರುವಂತಹ ಸಾಮಥ್ರ್ಯವಿರಲಿಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು.

ಭಾರತ ದೇಶಕ್ಕೆ ಮತ ಪ್ರಚಾರಕ್ಕೆಂದು ಜರ್ಮನಿಯಿಂದ ಮಂಗಳೂರಿಗೆ ಬಂದ 32 ವರ್ಷದ ಯುವಕ ಮೊಗ್ಲಿಂಗ್ ಮೊದಲು ಮತ ಪ್ರಚಾರ ಮಾಡಲು ಭಾಷೆಯನ್ನು ಚೆನ್ನಾಗಿ ಕಲಿತನು. ಭಾಷೆಯನ್ನು ಕಲಿತ ನಂತರ ಕನ್ನಡದಲ್ಲಿ ಮತ ಪ್ರಚಾರಕ್ಕೆ ಇಳಿದಾಗ ಆತ ಹೇಳಿದ್ದನ್ನು ಕೇಳುತ್ತಿದ ಜನರು ಅಷ್ಟಾಗಿ ನೆನಪು ಇಟ್ಟುಕೊಳ್ಳುತ್ತಿರಲಿಲ್ಲ. ಇದರಿಂದ ಆತ ಸ್ವಲ್ಪ ಬೇರೆ ತರಹ ಯೋಚಿಸ ತೊಡಗಿದ ಕನ್ನಡವನ್ನು ಓದಲು ಬರೆಯಲು ಕಲಿತನಲ್ಲದೆ ದಾಸರ ಪದಗಳು, ರಾಜೇಂದ್ರ ನಾಮ, ಚನ್ನಬಸವ ಪುರಾಣ, ಬಸವ ಪುರಾಣ, ತುಳು ಗಾದೆಗಳು ಸೇರಿದಂತೆ ಹಲವು ಪುಸ್ತಕಗಳನ್ನು ಬರೆದು ಪ್ರಕಟಿಸಿದ.

ತದ ನಂತರ ಆತ ಒಂದು ಪತ್ರಿಕೆಯನ್ನು ಪ್ರಾರಂಭಿಸಲು ಪತ್ರಿಕೆಯ ಮುದ್ರಣದ ಸಾಮಗ್ರಿಗಳನ್ನು ಜರ್ಮನಿಯಿಂದಲೇ ತರಿಸಿಕೊಂಡು ಮಂಗಳೂರಿನಲ್ಲಿ ಪತ್ರಿಕಾಲಯವನ್ನು ತೆರೆದು 1843 ಜುಲೈ1 ರಂದು ‘ಮಂಗಳೂರು ಸಮಾಚಾರ’ ಎಂಬ ಪತ್ರಿಕೆಯನ್ನು ಹೊರ ತಂದನು.
1843ರ ಜುಲೈ 1ರಂದು ಕನ್ನಡ ಪತ್ರಿಕೆ ಮಂಗಳೂರು ಸಮಾಚಾರ ಉದಯಿಸಿದ ದಿನವನ್ನೇ ಪತ್ರಿಕಾ ದಿನವೆಂದು ಆಚರಿಸಿಕೊಂಡು ಬರುತ್ತಿದ್ದೇವೆ.

17ರ ಶತಮಾನದಿಂದ 21ನೇ ಶತಮಾನದವರೆಗೂ ಪತ್ರಿಕೆಯ ಮುದ್ರಣ, ಪ್ರಚಾರ ಮತ್ತು ಸುದ್ದಿ ಬರಹದಲ್ಲಿ ಆಯಾ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ, ವೇಗ ಪಡೆಯುತ್ತಾ ಬಂದಿವೆ.

ಈಗ್ಗೆ 50ವರ್ಷಗಳ ಹಿಂದಕ್ಕೆ ಹೋದರೆ ಪತ್ರಿಕೆಗಳನ್ನು ಹೊರ ತರುವ ಮುನ್ನ ಮೊಳೆ ಜೋಡಿಸಿ ಪಡಿಯಚ್ಚು ಎಂದು ಮಾಡಿಕೊಳ್ಳಬೇಕಿತ್ತು. ಮೊಳೆ ಜೋಡಿಸಲೇ ಹತ್ತಾರು ಜನ ಪತ್ರಿಕಾಲಯದಲ್ಲಿ ಕೆಲಸ ಮಾಡಬೇಕಿತ್ತು. ಪೋಟೊಗಳನ್ನು ಹಾಕಬೇಕೆಂದರೆ ಬೆಂಗಳೂರಿನಂತಹ ನಗರಕ್ಕೆ ಕಳುಹಿಸಿ ಪೋಟೋ ಅಚ್ಚು ಮಾಡಿಸಿ ತರಿಸಿಕೊಳ್ಳಬೇಕಿತ್ತು. ಇದಕ್ಕಾಗಿ ಹಗಲಿರಳೂ ಕೆಲವರು ಪತ್ರಿಕಾಲಯ ಅಲ್ಲದೆ ಹೊರಗೂ ಕೆಲಸ ಮಾಡಬೇಕಿತ್ತು.

ಸುದ್ದಿಗಳನ್ನು ಜಿಲ್ಲೆ, ತಾಲ್ಲೂಕುಗಳಿಂದ ಬರುವ ಬಸ್ಸು ಇತರ ವಾಹನಗಳಲ್ಲಿ ಕಳಿಸುತ್ತಿದ್ದಾಗ ಅವು ಬರುವ ವೇಳೆಗೆ, ಅವು ಬರುತ್ತಿದ್ದ ಸ್ಥಳಕ್ಕೆ ಹೋಗಿ ಸುದ್ದಿ ಕವರ್ ತಂದರೆ, ಆ ಸುದ್ದಿಯನ್ನು ಪತ್ರಿಕಾಲಯದಲ್ಲಿ ಸುದ್ದಿ ಕಳುಹಿಸಿದವರಿಗೆ ಸುಪ್ರಭಾತ ಆಡುತ್ತಾ ತಿದ್ದಿ ತೀಡಿ ಒಪ್ಪ ಮಾಡಬೇಕಿತ್ತು. ಆಗ ಈಗಿನಂತೆ ಪೋನ್ ಸಹ ಇರಲಿಲ್ಲ, ಆ ಸುದ್ದಿಯನ್ನು ಹಲವಾರು ಸಲ ಓದಿ ಅಚ್ಚುಕಟ್ಟಾಗಿ ಬರೆಯುವ ಕೆಲಸ ಡೆಸ್ಕ್‍ನಲ್ಲಿದ್ದವರ ಪಾಡು ಆ ದೇವರಿಗೆ ಮುಟ್ಟುತ್ತಿತ್ತು.

ನಂತರ ಸುದ್ದಿ ಕಳಿಸಲು ಟೆಲಿಗ್ರಾಫ್, ಫಾಕ್ಸ್, ಇ-ಮೇಲ್‍ಗಳು ಬಂದವು, ಅದೇ ರೀತಿ ಪತ್ರಿಕೆಗಳನ್ನು ಮುದ್ರಿಸಲು ಕಪ್ಪು ಬಿಳುಪಿನ ಮುದ್ರಣ ಯಂತ್ರಗಳು, ತದ ನಂತರ ಆಫ್‍ಸೆಟ್ ಯಂತ್ರಗಳು, ನಂತರ ಕಲರ್ ಮುದ್ರಣ ಯಂತ್ರಗಳು, ದೃಶ್ಯ ಮಾಧ್ಯಮಗಳು, ಈಗ ವೆಬ್ ಪೋರ್ಟ್‍ಲ್, ಯು-ಟೂಬ್, ಫೆಸ್‍ಬುಕ್, ವಾಟ್ಸ್ ಆಪ್ ಹೀಗೆ ಕ್ಷಣ ಮಾತ್ರದಲ್ಲಿ ಸುದ್ದಿಯನ್ನು ಪ್ರಚಾರ ಮಾಡುವ ಜಾಲತಾಣಗಳು ಬಂದಿವೆ.
ಆದರೆ ಭಾರತ ದೇಶದಲ್ಲಿ ಮಾತ್ರ ಪತ್ರಕರ್ತರಿಗೆ ಅಪಾಯಕಾರಿ ದೇಶ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದುಕೊಂಡಿದೆ.
ಇಂದಿಗೂ ಸಹ ಭಾರತದಲ್ಲಿ ವಸ್ತುನಿಷ್ಠ ವರದಿ ಮಾಡುವ ಪತ್ರಕರ್ತರಿಗೆ ಜೀವ ಬೆದರಿಕೆ, ಹಲ್ಲೆ, ಕೊಲೆಗಳು ನಡೆಯುತ್ತಲೇ ಇವೆ. ಪತ್ರಕರ್ತ ಅಂದರೆ ಭದ್ರತೆಯಿಲ್ಲದ, ಆರ್ಥಿಕತೆಯಿಲ್ಲದ ಬಡಪಾಯಿ ಪತ್ರಕರ್ತ ಒಂದು ಕಡೆಯಾದರೆ, ಇಡೀ ದೇಶವನ್ನು ತನ್ನ ಕಪಿ ಮುಷ್ಠಿಯಲ್ಲಿಟ್ಟುಕೊಂಡು ನಾವು ಬರೆದಿದ್ದೆ ಸರಿ, ನಾವು ಪ್ರಚಾರ ಮಾಡಿದ್ದೇ ಸರಿ ಎಂದು ಬಿಂಬಿಸಿಕೊಳ್ಳುತ್ತಿರುವ ಉದ್ಯಮಗಾಗಿರುವ ಪತ್ರಿಕಾ ವಲಯ ಮತ್ತೊಂದು ಕಡೆ ಇದ್ದು.

ದೇಶದಲ್ಲಿ ನಡೆಯುತ್ತಿರುವ ಹಲವಾರು ಸತ್ಯ-ಮಿಥ್ಯಗಳನ್ನು ಹಾಗೆಯೆ ಮುಚ್ಚಿ ಹೋಗುತ್ತಿರುವುದಕ್ಕೆ ಪತ್ರಿಕಾ ಕ್ಷೇತ್ರದ ಕೊಡುಗೆ ಬಹಳ ದೊಡ್ಡ ಕೊಡುಗೆಯಿದೆ ಎಂದು ಹಲವಾರು ಚಿಂತಕರು ಹೇಳುತ್ತಿದ್ದಾರೆ. ಪತ್ರಿಕಾ ಧರ್ಮ ಈಗ ಇದೆಯೇ ಎಂಬುದನ್ನು ನಮಗೆ ನಾವೆ ನಮ್ಮ ಎದೆ ಮುಟ್ಟಿಕೊಂಡು ನೋಡಿಕೊಳ್ಳಬೇಕಿದೆ.


ಎಲ್ಲರಿಗೂ ಪತ್ರಿಕಾ ದಿನಾಚರಣೆಯ ಶುಭಾಶಯಗಳು.

Leave a Reply

Your email address will not be published. Required fields are marked *