ಜನಪ್ರತಿನಿಧಿಗಳ ಮೇಲೆ ಒತ್ತಡ ಕುಲಾಂತರಿ ಬೀಜ ನೀತಿ ಕಾಯಿದೆಗೆ ಸಹಿ ಬೀಳದಂತೆ ನೋಡಿಕೊಳ್ಳಬೇಕು – ಕೆ.ಟಿ.ಗಂಗಾಧರ್

ತುಮಕೂರು: ಕುಲಾಂತರಿ ನೀತಿಯ ಚೆಂಡು ಸಪ್ರೀಂ ಕೋರ್ಟ್ ನಿಂದ ಸಂಸತ್ತಿನ ಅಂಗಳಕ್ಕೆ ಬಂದು ನಿಂತಿದೆ. ಈಗ ನಮ್ಮ ಜನಪ್ರತಿನಿಧಿಗಳ ಮೇಲೆ ಒತ್ತಡ ತರುವ ಮೂಲಕ ಕಾಯಿದೆಗೆ ಸಹಿ ಬೀಳದಂತೆ ನೋಡಿಕೊಳ್ಳಬೇಕು. ಇಲ್ಲವಾದರೆ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯ ಜನ್ಮ ಜಾಲಾಡಲು ಸಿದ್ಧರಾಗಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ಕೆ.ಟಿ. ಗಂಗಾಧರ್ ಕರೆ ನೀಡಿದರು.

ಗಾಂಧೀ ಸಹಜಬೇಸಾಯ ಆಶ್ರಮದ ವತಿಯಿಂದ ‘ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ತರಲು ಹೊರಟಿರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಗ್ರಾಮಾಂತರದ ಹ್ಯಾಂಡ್ ಪೋಸ್ಟ್‍ನ ದೊಡ್ಡ ಹೊಸೂರಿನ ಎರಡನೇ ದಿನದ ಸತ್ಯಾಗ್ರಹ’ದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

116 ದೇಶಗಳಲ್ಲಿ ತಿರಸ್ಕಾರ ಮಾಡಿರುವ ಕುಲಾಂತರಿ ಬೀಜ ತಳಿಯನ್ನು ನಮ್ಮ ದೇಶದಲ್ಲಿ ತರಲು ಹೊರಟಿರುವುದು ವಿಪರ್ಯಾಸ. ಇದರಿಂದ ಪರಿಸರ, ಜೀವವೈಧ್ಯತೆ ಅಷ್ಟೇ ಅಲ್ಲದೆ, ಮಾನವನ ವಿಕಾಸದಲ್ಲೂ ಅನಾಹುತವೇ ಸಂಭವಿಸಲಿದೆ. ಆದ್ದರಿಂದ ರೈತರು ಮಾತ್ರವಲ್ಲದೆ, ಪಟ್ಟಣದಲ್ಲಿರುವ ಜನರೂ ಕುಲಾಂತರಿ ನೀತಿಯನ್ನು ಕಾಲಿನಲ್ಲಿ ಒದ್ದು ತಿರಸ್ಕಾರ ಮಾಡಬೇಕು ಎಂದರು.

ತ್ರೇತಾಯುಗದಲ್ಲಿ ರಾಮ ಸೀತೆಯೂ ಕೃಷಿ ಮಾಡಿದ್ದರು. ಭರತಖಂಡದಲ್ಲಿ ಕೃಷಿಗೆ ಪೂರಕವಾದ ವಾತಾವರಣವಿದೆ. ಇಲ್ಲಿನ ಕೃಷಿಗೆ ಶೇ.75 ರಷ್ಟು ಪ್ರಾಕೃತಿಕ ಬೆಂಬಲವಿದ್ದು, ಶೇ.25 ರಷ್ಟು ಮಾತ್ರವೇ ಮಾನವನ ಶ್ರಮವಿರುತ್ತದೆ. ಆದ್ದರಿಂದಲೇ ನಮ್ಮದು ಬಹುಪಾಲು ಕೃಷಿ ಪ್ರಧಾನವಾದ ಸಂಪದ್ಭರಿತ ರಾಷ್ಟ್ರ. ಈ ಸಾರ್ವಭೌಮತೆಯನ್ನು ವಶಕ್ಕೆ ಪಡೆಯಲು ಬಹುರಾಷ್ಟ್ರೀಯ ಕಂಪನಿಗಳು ಹುನ್ನಾರ ನಡೆಸಿವೆ. ದೇಶೀ ಬೆಳೆಗಳನ್ನು ನಾಶ ಮಾಡಿ ಕುಲಾಂತರಿ ವ್ಯವಸ್ಥೆಯನ್ನು ತರುವ ಮೂಲಕ ನಮ್ಮ ಕೃಷಿ ವ್ಯವಸ್ಥೆಯನ್ನು ನಿಯಂತ್ರಣ ಮಾಡಲು ಯೋಜನೆಯೇ ರೂಪಿಸಿವೆ. ಅನ್ನ ಹಾಕುವ ರೈತರನ್ನು ಗ್ರಾಹಕರನ್ನಾಗಿ ಮಾರ್ಪಾಡು ಮಾಡುವ ದೊಡ್ಡ ಸಂಚು ನಡೆದಿದೆ ಎಂದು ಅವರು ವಿವರಿಸಿದರು.

ಹಸಿರು ಕ್ರಾಂತಿಯಿಂದಾದ ಹಾನಿಯಿಂದ ಇನ್ನೂ ಚೇತರಿಸಿಕೊಳ್ಳಲು ಆಗಿಲ್ಲ. ಈಗ 3ನೇ ಕೃಷಿ ಕ್ರಾಂತಿ ತರಲು ಹೊಂಚು ಹಾಕುತ್ತಿದ್ದಾರೆ. ಇದನ್ನು ನಾವು ವಿರೋಧಿಸಬೇಕು. ನಮ್ಮ ಧ್ವನಿ ಹಾಗೂ ಪ್ರತಿಭಟನೆಗಳ ಸಾಮಥ್ರ್ಯ ಹೆಚ್ಚಾದರೆ ಸಂವಿಧಾನಾತ್ಮಕವಾಗಿಯೂ ಮಹತ್ವ ದೊರೆಯಲಿದ್ದು, ಸರ್ಕಾರಗಳಿಗೆ ಚಳವಳಿಗಳ ಮೂಲಕವೇ ಅರ್ಥ ಮಾಡಿಸೋಣ ಎಂದು ನಿರ್ಧಾರ ಕೈಗೊಂಡರು.

ರೈತ ಸಂಘದ ಬಡಗಲಪುರ ನಾಗೇಂದ್ರ ಮಾತನಾಡಿ, ಸರ್ಕಾರಿ ವಿಜ್ಞಾನಿಗಳು ಮಾರಾಟವಾಗಿದ್ದಾರೆ. ವೈದ್ಯರು ವ್ಯಾಪಾರಿಗಳಾಗಿದ್ದಾರೆ. ಆರೋಗ್ಯ ಮತ್ತು ವಿಜ್ಞಾನ ಕ್ಷೇತ್ರವೇ ಹಣಗಳಿಕೆಗೆ ಮೀಸಲಾಗಿದೆ. ಹಳಿತಪ್ಪಿರುವ ವ್ಯವಸ್ಥೆ ಸರಿಮಾಡುವವರು ಯಾರು ಎಂಬುದೇ ಪ್ರಶ್ನೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

‘ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ತರಲು ಹೊರಟಿರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿರುವ ಗ್ರಾಮಾಂತರದ ಹ್ಯಾಂಡ್ ಪೋಸ್ಟ್‍ನನಲ್ಲಿನ ದೊಡ್ಡ ಹೊಸೂರಿನ ಎರಡನೇ ದಿನದ ಸತ್ಯಾಗ್ರಹವನ್ನು ಮಣ್ಣಿನ ಮಡಿಕೆಯೊಳಕ್ಕೆ ಧಾನ್ಯಗಳನ್ನು ಸುರಿಯುವ ಮೂಲಕ ಉದ್ಘಾಟಿಸಲಾಯಿತು.

ರಾಜಕೀಯ ಹಾಗೂ ವ್ಯಾಪರದಂತೆ ಕೃಷಿಯಲ್ಲಿಯೂ ಸಂಸ್ಕøತಿ ಕಣ್ಮರೆಯಾಗಿದೆ. ಪುಟ್ಟ ಮಕ್ಕಳಿಗೆ ಡಯಾಬಿಟೀಸ್ ಅಂಟಿಕೊಂಡಿದೆ. ನಾಲ್ಕು ವರ್ಷದ ಹಣ್ಣುಮಕ್ಕಳು ಋತುಮತಿಯಾಗುತ್ತಿದ್ದಾರೆ. ಮತ್ತೊಂದು ಕಡೆ ಅಪೌಷ್ಠಿಕತೆ ಕಾಡುತ್ತಿದೆ. ಈಗ ಅನ್ನ ತಿನ್ನುವವರೆಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಕಾಲ ಬಂದಿದೆ. ಇಲ್ಲವಾದರೆ ಆಹಾರ ಕ್ಷೇತ್ರ ಅಧೋಗತಿ ತಲುಪಲಿದೆ ಎಚ್ಚರಿಸಿದರು.

ಭೂಮಿಗೂ ನಮಗೂ ಭಾವನಾತ್ಮಕ ಸಂಬಂಧವಿದ್ದು, ಕೃಷಿ ಸಂಸ್ಕøತಿ ಆಧಾರಿತ ಉದ್ಯೋಗ ತಂದುಕೊಟ್ಟಿದೆ. ನಮ್ಮ ಸಂಸ್ಕøತಿ ಉಳಿಯಬೇಕೆಂದರೆ ಭೂಮಿಯನ್ನು ಕಾಪಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ದೊಡ್ಡ ಹೊಸೂರು ಸತ್ಯಾಗ್ರಹ ದಾಖಲೆಯಾಗಿ ಉಳಿಯಲಿದೆ. ಸತ್ಯಾಗ್ರಹಕ್ಕೆ ತನ್ನದೇ ಆದ ಶಕ್ತಿ ಇದ್ದು, ಅದಕ್ಕೆ ಸಾಕ್ಷಿಯಾಗಿ ಮಹಾತ್ಮಗಾಂಧಿ ನಮ್ಮೆದುರಿಗಿದ್ದಾರೆ ಎಂದು ರೈತರನ್ನು ಹುರಿದುಂಬಿಸಿದರಲ್ಲದೆ, ಎಲ್ಲಾ ರಾಜಕೀಯ ಪಕ್ಷಗಳು ಬಂಡವಾಳ ಶಾಹಿಗಳ ಪರವಿರುವುದರಿಂದ ನಾವು ಸ್ಥಳೀಯ ಮಟ್ಟದಿಂದಲೇ ಚಳಚಳಿಗಳನ್ನು ಕಟ್ಟಬೇಕು ಎಂದು ಸಲಹೆ ನೀಡಿದರು.

ಜೆಡಿಯು ರಾಜ್ಯಾಧ್ಯಕ್ಷ ಮಹಿಮಾ ಪಟೇಲ್ ಮಾತನಾಡಿ, ನಮ್ಮ ದೇಶದ ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಪರಿಸರದ ಮೇಲೆ ಅವ್ಯಾಹತವಾಗಿ ದಾಳಿ ನಡೆಯುತ್ತಿದೆ. ಕೃಷಿ, ಕಲೆ, ಸಾಹಿತ್ಯ, ಆಡಳಿತ, ಸಂಸ್ಕøತಿ ಒಂದಕ್ಕೊಂದು ಅಂತರ ಸಂಬಂಧ ಹೊಂದಿದ್ದು, ಈ ವ್ಯವಸ್ಥೆಯನ್ನು ಸರಿ ಮಾಡಬೇಕಾದರೆ ಮಸನೋಬು ಫುಕುವೋಕ, ಜೆ.ಸಿ.ಕುಮಾರ್, ಮಹಾತ್ಮಗಾಂಧಿ ಅವರ ತತ್ವದಡಿಯಲ್ಲಿ ಹೋರಾಟಗಳು ಮುನ್ನಡೆಯಬೇಕು ಎಂದರು.

ನಮ್ಮ ದೇಶದಲ್ಲಿ ಒಂದು ಲಕ್ಷಕ್ಕೂ ಅಧಿಕ ರೀತಿಯ ಭತ್ತದ ತಳಿಗಳಿದ್ದವು. ಅವೆಲ್ಲವೂ ಈಗ ನಾಶವಾಗಿ ಕುಲಾಂತರಿ ಭತ್ತ ರಾರಾಜಿಸುತ್ತಿದೆ. ಜಪಾನ್ ಹಾಗೂ ಚೀನಾದಲ್ಲಿ ಕುಲಾಂತರಿ ಮನುಷ್ಯರನ್ನು ಸೃಷ್ಟಿ ಮಾಡಲಾಗಿದೆ. ಇದು ಪ್ರಕೃತಿ ವಿರುದ್ಧವಾದುದು. ಹೀಗೇ ಮುಂದುವೆರೆದರೆ 2050ರ ಹೊತ್ತಿಗೆ ಭೂಮಂಡಲ ವಿನಾಶವಾಲಿದೆ ಎಂದು ನಾಸಾ ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಪರಿಸರಕ್ಕೆ ಪೂರಕವಾದ ನೈಸರ್ಗಿಕ ಕೃಷಿ ಮಾಡಬೇಕು. ನಾವು ತಿನ್ನುವ ಆಹಾರ ಉತ್ತಮವಾಗಿದ್ದರೆ ಮನಸ್ಥಿತಿ ಮತ್ತು ಆರೋಗ್ಯ ಉತ್ತಮವಾಗಿರುತ್ತದೆ. ಸಮಾಜದ ಬಗ್ಗೆ ಕಾಳಜಿ ವಹಿಸಬೇಕಾದ ಸಾಹಿತಿಗಳು ಮರ್ಯಾದೆ ಇಲ್ಲದಂತೆ ವರ್ತಿಸುತ್ತಿದ್ದು, ಸಣ್ಣಪುಟ್ಟ ರಾಜಕಾರಣಿಗಳಿಗೆ ಆ ಸ್ಥಾನ ಬಿಟ್ಟುಕೊಟ್ಟಿದ್ದಾರೆ ಎಂದು ಚಾಟಿ ಬೀಸಿದರು.

ಈ ಸಂದರ್ಭದಲ್ಲಿ ಅಖಿಲ ಭಾರತ ಕೃಷಿ ಕಾರ್ಮಿಕ ಸಂಘದ ಎಸ್.ಎನ್ ಸ್ವಾಮಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ಹೋರಾಟಗಾರರಾದ ಶಾಂತಕೃಷ್ಣ, ತನುಜ, ನೇತ್ರಾವತಿ, ಶಾರದಾ, ಬಿ.ಮರುಳಯ್ಯ, ಕೃಷಿ ವಿಜ್ಞಾನಿ ಡಾ.ಮಂಜುನಾಥ್, ಪರಿಸರವಾದಿ ಸಿ.ಯತಿರಾಜು ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತರು ಹಾಜರಿದ್ದರು.

Leave a Reply

Your email address will not be published. Required fields are marked *