ತುಮಕೂರು: ಸ್ವಾಭಿಮಾನಕ್ಕೆ ಹೆಸರಾದ ಈಡಿಗ ಸಮಾಜದವರು ಯಾರಿಗೂ ಕೈ ಚಾಚುವುದಿಲ್ಲ, ತಮ್ಮ ದುಡಿಮೆಯಲ್ಲಿ ಕೈ ನೀಡಿ ಕೊಡುವ ಸಮಾಜ. ಎಲ್ಲಾ ಸಮಾಜಗಳೂ ದೇಶದ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ, ಆರ್ಯ ಈಡಿಗ ಸಮಾಜದ ಕೊಡುಗೆಯೂ ದೊಡ್ಡದಿದೆ ಎಂದು ಕೇಂದ್ರ ಜಲಶಕ್ತಿ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.
ಜಿಲ್ಲಾ ಆರ್ಯ ಈಡಿಗರ ಸಂಘ, ಬ್ರಹ್ಮರ್ಷಿ ನಾರಾಯಣ ಗುರು ಜಿಲ್ಲಾ ಜಯಂತೋತ್ಸವ ಸಮಿತಿ, ಜಗದ್ಗುರು ನಾರಾಯಣ ಗುರು ಸಮಾಜ ಟ್ರಸ್ಟ್, ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಹಕಾರದಲ್ಲಿ ಶನಿವಾರ ನಗರದ ಡಾ.ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಚಿವರು, ನಾರಾಯಣ ಗುರು, ಬುದ್ಧ, ಬಸವಣ್ಣ, ಅಂಬೇಡ್ಕರ್ ಅಂತಹವರು ಮಾನವ ಕಲ್ಯಾಣಕ್ಕಾಗಿ ದೇವರ ಮತ್ತೊಂದು ರೂಪದಲ್ಲಿ ಅವತರಿಸಿ ಬಂದ್ದಿದ್ದಾರೆ ಎಂಬ ಭಾವನೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿಯವರ ದೂರದೃಷ್ಟಿಯ ಚಿಂತನೆಗಳು ದೇಶದ ಪ್ರಗತಿಗೆ ಪೂರಕವಾಗಿವೆ. ಅದರ ಪರಿಣಾಮ ದೇಶದಲ್ಲಿ ಅಭಿವೃದ್ಧಿ ಕೆಲಸಗಳು ಭರದಿಂದ ಸಾಗುತ್ತಿವೆ. ತಮ್ಮನ್ನು ಆಯ್ಕೆ ಮಾಡಿದ ಜಿಲ್ಲೆಯ ಜನರ ಋಣ ತೀರಿಸುತ್ತೇನೆ, ಕೆಲವೇ ವರ್ಷಗಳಲ್ಲಿ ತುಮಕೂರು ಜಿಲ್ಲೆಯ ಅಭಿವೃದ್ಧಿ ಚಿತ್ರಣವೇ ಬದಲಾಗುತ್ತದೆ ಎಂದು ಹೇಳಿದರು.
ಸಮಾಜದ ಅಸಮಾನತೆ ದೂರಾಗಬೇಕು, ಮನುಷ್ಯರೆಲ್ಲರೂ ಒಂದೇ ಎಂಬ ಭಾವನೆ ಮೂಡಬೇಕು ಎಂಬ ಸಂದೇಶ ಸಾರಿದ ಮಹರ್ಷಿ ನಾರಾಯಣ ಗುರುಗಳು ಧ್ವನಿ ಇಲ್ಲದ ಸಮಾಜದ ಧ್ವನಿಯಾಗಿ ಮೂಡಿಸಿದರು. ಅವರ ತತ್ವ, ಆದರ್ಶಗಳನ್ನು ಅನುಸರಿಸಿಕೊಂಡು ಆದರ್ಶ ಸಮಾಜ ನಿರ್ಮಾಣಕ್ಕೆ ಎಲ್ಲರೂ ಸಹಕರಿಸಬೇಕು ಎಂದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಕರಾಳ ಜಾತಿ ವ್ಯವಸ್ಥೆಯ ಕಾಲದಲ್ಲಿ ನಾರಾಯಣ ಗುರುಗಳು ಎಲ್ಲಾ ಜಾತಿಯವರು ಸಮಾನರು ಎಂಬ ಸಂದೇಶ ಸಾರಿದ್ದರು. ಆಗಿನ ಕಠಿಣ ಕಟ್ಟುಪಾಡುಗಳ ವಿರುದ್ಧ ಜನಜಾಗೃತಿ ಮೂಡಿಸಿ ಸ್ವಾಭಿಮಾನಿ ಸಮಾಜ ನಿರ್ಮಾಣಕ್ಕೆ ನಾಂದಿಯಾಗಿದ್ದರು. ಇವರು ಒಂದು ಜಾತಿಗೆ ಸೀಮಿತವಲ್ಲ, ಎಲ್ಲಾ ಸಮಾಜದ ಗೌರವಕ್ಕೆ ಪಾತ್ರರು. ಈಗಲೂ ಅಂತಹ ಕರಾಳ ಆಚರಣೆಗಳು ಕೆಲವು ಕಡೆ ಮುಂದುವರೆದಿವೆ, ಇವು ಬದಲಾಗಬೇಕು ಎಂದರು.
ಈಡಿಗ ಸಮುದಾಯದವರು ಕುಲಕಸುಬು ನಂಬಿಕೊಂಡು ಬಾಳುವುದು ಕಷ್ಟವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಿ ಅವರು ಸಮಾಜದ ಉನ್ನತ ಸ್ಥಾನ ಪಡೆಯಲು ಸಹಕರಿಸಬೇಕು. ವಿದ್ಯೆಯಿಂದ ಸಾಮಾಜಿಕ ಗೌರವ, ಹಣ, ಸ್ಥಾನಮಾನ ದೊರೆಯುತ್ತದೆ. ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಈಡಿಗ ಸಮಾಜದ ಮುಖಂಡರು ಸಮಾಜ ಸಂಘಟನೆ ಮಾಡುತ್ತಾ ಅಶಕ್ತರಿಗೆ ನೆರವಾಗಬೇಕು ಎಂದು ಹೇಳಿದರು.
ಸಮಾರಂಭದ ದಿವ್ಯ ಸಾನಿಧ್ಯವಹಿಸಿದ್ದ ಸೋಲೂರಿನ ಆರ್ಯ ಈಡಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ವಿಖ್ಯಾತನಂದ ಸ್ವಾಮೀಜಿ ಮಾತನಾಡಿ, ಆದÀರ್ಶ ಸಮಾಜ ನಿರ್ಮಾಣಕ್ಕೆ ನಾರಾಯಣ ಗುರುಗಳು ನೀಡಿರುವ ಸಂದೇಶ ಎಲ್ಲಾ ಕಾಲದಲ್ಲೂ ಸಲ್ಲುವಂತಾದ್ದು, ದೇವಸ್ಥಾನ, ಪ್ರತಿಷ್ಠಾನ ಇಲ್ಲದ ವರ್ಗದವರಿಗೆ ಧ್ವನಿಯಾಗಿ ಜಾಗೃತಿ ಮೂಡಿಸುವ ಪ್ರಯತ್ನದಲ್ಲಿ ಗುರುಗಳು ಶ್ರೇಷ್ಠರಾಗಿದ್ದಾರೆ ಎಂದು ತಿಳಿಸಿದರು.
ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಸೇವಾ ಸಾಧಕರಿಗೆ ಈ ಸಂದರ್ಭದಲ್ಲಿ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕೊರಟಗೆರೆ ಜಮೀನ್ದಾರರಾದ ಮಾಧು ಸಾಹುಕಾರ್, ಜಿಲ್ಲಾ ಆರ್ಯ ಈಡಿಗ ಸಂಘದ ಉಪಾಧ್ಯಕ್ಷ ಆರ್.ನಾರಾಯಣಸ್ವಾಮಿ, ಉದ್ಯಮಿ ನ್ಯಾತೇಗೌಡ, ಕರಾಟೆ ಗುರು ಕರಾಟೆ ಕೃಷ್ಣಪ್ಪ, ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್, ಉದ್ಯಮಿ ಟಿ.ಕೆ.ರವಿ, ಮಾಜಿ ಸೈನಿಕ ಪಿ.ಎಂ.ಸಂತೋಷ್ಕುಮಾರ್ ಅವರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ತೀರ್ಥಹಳ್ಳಿಯ ನಿಟ್ಟೂರು ಮಠದ ಪೀಠಾಧ್ಯಕ್ಷರಾದ ರೇಣುಕಾನಂದ ಸ್ವಾಮೀಜಿ ಸಮಾರಂಭದ ಸಾನಿಧ್ಯವಹಿಸಿದ್ದರು. ಜಿಲ್ಲಾ ಆರ್ಯ ಈಡಿಗ ಸಂಘದ ಎಂ.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಸಂಸ್ಥಾಪಕರಾದ ಅಜಯ್ಕುಮಾರ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್ಗೌಡ, ಜೆ.ಪಿ.ಎನ್.ಪಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ್, ನಾರಾಯಣಗುರು ಜಯಂತೋತ್ಸವ ಸಮಿತಿ ಅಧ್ಯಕ್ಷ ಮಲ್ಲಸಂದ್ರ ಶಿವಣ್ಣ, ಸಂಘದ ಉಪಾಧ್ಯಕ್ಷರಾದ ಆರ್.ನಾರಾಯಣಸ್ವಾಮಿ, ಖಜಾಂಚಿ ಹೆಚ್.ಎಂ.ಕುಮಾರ್, ಜಂಟಿ ಕಾರ್ಯದರ್ಶಿಗಳಾದ ಓ.ಎಲ್.ಪುರುಷೋತ್ತಮ್, ರವೀಂದ್ರಕುಮಾರ್, ನಾರಾಯಣ್, ಮುಖಂಡರಾದ ಕೆ.ವೇದಮೂರ್ತಿ, ಎಂ.ಜಿ.ಶ್ರೀನಿವಾಸಮೂರ್ತಿ ಸೇರಿದಂತೆ ವಿವಿಧ ಮುಖಂಡರು ಭಾಗವಹಿಸಿದ್ದರು.
ಇದಕ್ಕೂ ಮೊದಲು ನಗರದ ಬಿಜಿಎಸ್ ವೃತ್ತದಿಂದ ನಾರಾಯಣಗುರುಗಳ ಮೂರ್ತಿ ಹಾಗೂ ವಿಖ್ಯಾತನಂದ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿಯವರನ್ನು ಅಲಂಕೃತ ರಥದಲ್ಲಿ ಮೆರವಣಿಗೆಯಲ್ಲಿ ಕರೆತರಲಾಯಿತು. ಶಾಸಕ ಸುನಿಲ್ಕುಮಾರ್ ಅವರು ಮೆರವಣಿಗೆ ಉದ್ಘಾಟಿಸಿದರು. ಶಾಸಕ ಜಿ.ಬಿ.ಜ್ಯೋತಿಗಣೇಶ್ ಸೇರಿದಂತೆ ಈಡಿಗ ಸಮಾಜದ ಮುಖಂಡರು ಭಾಗವಹಿಸಿದ್ದರು. ಪೂರ್ಣಕುಂಭ, ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಅದ್ದೂರಿ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.