ತುಮಕೂರು: 2300 ವರ್ಷಗಳ ಹಿಂದೆ ಅಶೋಕ ಬರೆಸಿದ ಮೊಟ್ಟಮೊದಲ ಉಪಲಬ್ಧ ಲಿಪಿಯ ಇತಿಹಾಸದಿಂದ ಗೋಚರಿಸುವುದು ಜ್ಞಾನ ವಿಸ್ತಾರವಾದಂತೆಲ್ಲ ಲಿಪಿಯ ಅವಶ್ಯಕತೆ ಹೆಚ್ಚಾಯಿತೆಂದು ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಅಧ್ಯಕ್ಷ ಡಾ. ದೇವರಕೊಂಡಾ ರೆಡ್ಡಿ ತಿಳಿಸಿದರು.
ತುಮಕೂರು ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ಬುಧವಾರ ಆಯೋಜಿಸಿದ್ದ ಶಾಸನ ಡಿಪ್ಲೋಮಾ ತರಗತಿಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಪಾರಂಪರಿಕವಾಗಿ ಬರುವ ವಿದ್ಯೆಯನ್ನು ಕೈಬಿಟ್ಟು ಅಕ್ಷರ ಜ್ಞಾನದ ಹಿಂದೆ ಬಿದ್ದಿರುವ ಯುಗದಲ್ಲಿ ನಿರುದ್ಯೋಗದ ಸಮಸ್ಯೆ ತಾಂಡವವಾಡುತ್ತಿದೆ. ಪ್ರಯತ್ನಪೂರ್ವಕವಾಗಿ ಕಲಿಯುವ ಅಕ್ಷರವನ್ನು ಎಂದಿಗೂ ವಿದ್ಯೆಯೊಂದಿಗೆ ಬೆರೆಸಬಾರದು. ಕುಲಕಸುಬಿನ ವಿದ್ಯೆ ಮಾಯವಾಗಿ ಕಾಂಚಾಣದ ಹಸಿವು ಹೆಚ್ಚಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಜ್ಞಾನ ನೀಡುವ ಪವಿತ್ರ ಕೇಂದ್ರವಾಗಬೇಕು. ಪ್ರಾಧ್ಯಾಪಕರು ವಿಷಯ ಕುರಿತು ಆಳವಾದ ಜ್ಞಾನ ಹೊಂದಿರಬೇಕು. ವಿದ್ಯಾರ್ಥಿಗಳಿಗೆ ಪರಿಣಾಮಕಾರಿಯಾಗಿ ವಿಷಯ ಮುಟ್ಟಿಸಬೇಕು ಎಂದರು.
ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ. ಎಂ. ಕೊಟ್ರೇಶ್ ಮಾತನಾಡಿ, ಶಾಸನಗಳಲ್ಲಿ ಇತಿಹಾಸದ ಸಾಧನೆಗಳು, ಅಭಿವೃದ್ಧಿ, ಸಮೃದ್ಧಿ, ಚಿಕಿತ್ಸೆ, ಆಹಾರ ಪದ್ಧತಿ, ಸ್ಥಾಪನೆಗಳು, ಆಡಳಿತ, ಪ್ರಜಾಪ್ರಭುತ್ವದ ಕುರಿತು ಮಾಹಿತಿ ಲಭ್ಯವಾಗಲಿದೆ ಎಂದು ತಿಳಿಸಿದರು.
ವಿವಿಯ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕ ಪ್ರೊ. ಎಲ್. ಪಿ. ರಾಜು, ಸಹ ಪ್ರಾಧ್ಯಾಪಕರಾದ ಡಾ. ಚಿಕ್ಕಣ್ಣ, ಡಾ. ಪ್ರಿಯಾ ಠಾಕೂರ್, ಸಹಾಯಕ ಪ್ರಾಧ್ಯಾಪಕ ಶ್ರೀನಿವಾಸ ಉಪಸ್ಥಿತರಿದ್ದರು.