ತುಮಕೂರು : ಜಿಲ್ಲೆಯ ತುರುವೇಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಸಕಾಲದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಆದರೆ ಸರ್ಕಾರಿ ಆಸ್ಪತ್ರೆಗೆ ಚಕರ್ ಹಾಕಿ ವೈದ್ಯರು ತೆರೆದಿರುವ ಕ್ಲಿನಿಕ್‍ಗಳಲಿ ಹಾಜರಾತಿ ಅನ್ನುವಂತೆ ಡ್ಯೂಟಿ ಮಾಡುತ್ತಿದ್ದಾರೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರಿಗೆ ದೂರಿನ ಸುರಿಮಲೆಯೇ ಅಲ್ಲಿ ಸುರಿಯಿತು.
ಎಕ್ಸರೇ, ಇಸಿಜಿ ಯಂತ್ರಗಳು ಕೆಟ್ಟುಹೋಗಿವೆ. ಲಭ್ಯವಿರುವ ಬೆರಳೆಣಿಕೆಯಷ್ಟು ವೈದ್ಯರು ಕ್ಲಿನಿಕ್‍ಗಳನ್ನು ತೆರೆದು ರೋಗಿಗಳನ್ನು ತಮ್ಮ ಕ್ಲಿನಿಕ್‍ಗಳಿಗೆ ಶಿಫಾರಸ್ಸು ಮಾಡುತ್ತಿದ್ದಾರೆಂದು ತಾಲ್ಲೂಕು ಆಸ್ಪತ್ರೆಯ ವೈಫಲ್ಯಗಳ ಬಗ್ಗೆ ಸಾರ್ವಜನಿಕರು ಜಿಲ್ಲಾಧಿಕಾರಿ ಬಳಿ ದೂರುಗಳ ಸುರಿಮಳೆಗೈದರು.
ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ್ ಅವರು ನವೆಂಬರ್ 12ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿ ಜಿಲ್ಲೆಯಲ್ಲಿರುವ ಆಸ್ಪತ್ರೆ, ವಿದ್ಯಾರ್ಥಿನಿಲಯ, ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕೆಂದು ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುರುವೇಕೆರೆ ತಾಲ್ಲೂಕು ಆಸ್ಪತ್ರೆಗೆ ಬುಧವಾರ ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆ ಸೇವೆಯ ಬಗ್ಗೆ ಸಾರ್ವಜನಿಕರು ದೂರುಗಳನ್ನು ಹೇಳಿಕೊಂಡರು.
ತಾಲ್ಲೂಕು ಆಸ್ಪತ್ರೆಯಲ್ಲಿ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಗಮನಿಸಿದ ಜಿಲ್ಲಾಧಿಕಾರಿಗಳು ಕೂಡಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಆಸ್ಪತ್ರೆ ಸಮಸ್ಯೆಗಳ ಚಿತ್ರಣದ ಬಗ್ಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಆಸ್ಪತ್ರೆಯಲ್ಲಿ ಖಾಲಿ ಇರುವ ಹುದ್ದೆಗಳ ಮಾಹಿತಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ: ರಂಗನಾಥ್ ಅವರಿಂದ ಮಾಹಿತಿ ಪಡೆದ ಅವರು ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡಲು ಸುಸಜ್ಜಿತ ಕಟ್ಟಡವಿದ್ದರೂ ವೈದ್ಯರ ಕೊರತೆ ಎದ್ದುಕಾಣುತ್ತಿದೆ. ಕೂಡಲೇ ಹುದ್ದೆಗಳ ನೇಮಕಾತಿಗಾಗಿ ಕ್ರಮಕೈಗೊಳ್ಳುವ ಬಗ್ಗೆ ಪತ್ರ ಸಿದ್ಧಪಡಿಸಲು ನಿರ್ದೇಶನ ನೀಡಿದರು.
ಆಸ್ಪತ್ರೆಯಲ್ಲಿರುವ ಔಷಧಿ ವಿತರಣಾ ಕೊಠಡಿ, ಚುಚ್ಚುಮದ್ದು ಕೊಠಡಿ, ಡಯಾಲಿಸಿಸ್ ಕೇಂದ್ರ, ಪುರುಷರ ವಾರ್ಡ್‍ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಕ್ಕಳ ತಜ್ಞರಿಲ್ಲ, ಸ್ತ್ರೀರೋಗ ತಜ್ಞರಿಲ್ಲ, ಗರ್ಭಿಣಿ ಸ್ತ್ರೀಯರ ಹೆರಿಗೆಗಾಗಿ ತಾಲ್ಲೂಕಿನ ಜನರು ದೂರದ ತುಮಕೂರು, ತಿಪಟೂರಿಗೆ ಹೋಗುವ ಪರಿಸ್ಥಿತಿ ಇದೆ ಎಂದು ಪಟ್ಟಣ ಪಂಜಾಯಿತಿ ಸದಸ್ಯ ಚಿದಾನಂದ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತಾ ತಾಲ್ಲೂಕಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ವೈದ್ಯರ ಕೊರತೆಯನ್ನು ಪರಿಹರಿಸಬೇಕೆಂದು ಮನವಿ ಮಾಡಿದರು.
ಒಳರೋಗಿಯಾಗಿ ದಾಖಲಾದ ರೋಗಿಗಳಿಗೆ ಸ್ಥಳೀಯವಾಗಿ ಆಸ್ಪತ್ರೆಯಲ್ಲಿಯೇ ಆಹಾರ ಪದಾರ್ಥಗಳನ್ನು ಸಿದ್ಧಪಡಿಸಿ ನೀಡಬೇಕು. ಹೊರಗಿನಿಂದ ತರಿಸಬಾರದು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗೆ ತಾಕೀತು ಮಾಡಿದರು.
ಚಿಕಿತ್ಸೆಗಾಗಿ ವೈದ್ಯರನ್ನೇ ಕಾಯುತ್ತಿದ್ದ ರೈತರನ್ನು ಮಾತನಾಡಿಸಿ ಮಳೆ-ಬೆಳೆ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆದರು. ಗೃಹಲಕ್ಷ್ಮಿ ಯೋಜನೆಯಡಿ ಸರ್ಕಾರದಿಂದ ನೀಡಲಾಗುತ್ತಿರುವ ಮಾಹೆಯಾನ 2000 ರೂ.ಗಳ ಹಣ ಖಾತೆಗೆ ಜಮೆಯಾಗುತ್ತಿರುವ ಬಗ್ಗೆ ಮಹಿಳೆಯರಿಂದ ಮಾಹಿತಿ ಪಡೆದರಲ್ಲದೆ, ಬೆಳೆ ನಷ್ಟ ಹೊಂದಿರುವ ರೈತರು ಪರಿಹಾರಕ್ಕಾಗಿ ಕೃಷಿ ಇಲಾಖೆಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು ಎಂದು ತಿಳಿಸಿದರು. ರೈತರೊಬ್ಬರು ಕೃಷಿ ಸಾಲವನ್ನು ತೀರಿಸಬೇಕೆಂದು ಬ್ಯಾಂಕಿನವರು ಒತ್ತಾಯಿಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಸ್ಪಂದಿಸಿದ ಜಿಲ್ಲಾಧಿಕಾರಿಗಳು ರೈತರು ಕೃಷಿಗಾಗಿ ಪಡೆದಿರುವ ಸಾಲದ ಮೊತ್ತವನ್ನು ಮರು ಪಾವತಿಸಬೇಕೆಂದು ಬ್ಯಾಂಕುಗಳು ಒತ್ತಡ ಹೇರಬಾರದೆಂದು ಈಗಾಗಲೇ ಬ್ಯಾಂಕುಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.