ತುಮಕೂರು : ಮಡಿವಾಳ ಮಾಚಿದೇವರ ಜಯಂತುತ್ಸವದ ಅಂಗವಾಗಿ ಮಡಿವಾಳ ಜಾಗೃತಿ ವೇದಿಕೆ ಟ್ರಸ್ಟ್‍ವತಿಯಿಂದ ಬರುವ ಏಪ್ರಿಲ್ 14ರಂದು ಬೆಂಗಳೂರಿನಲ್ಲಿ ಮಡಿವಾಳ ಸಮಾಜದ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದೆ.
ನಗರದ ಮಡಿವಾಳ ಸಂಘದ ಕಚೇರಿಯಲ್ಲಿ ಟ್ರಸ್ಟ್ ಅಧ್ಯಕ್ಷ ಮಂಜುನಾಥ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿರುವ ಮಡಿವಾಳ ಸಮಾಜದ ಬಡ ಕುಟುಂಬಗಳಿಗೆ ಅನುಕೂಲವಾಗಲೆಂದು ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಈ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವ್ಯಾಪಕ ಪ್ರಚಾರ ಮಾಡಲಾಗುತ್ತಿದೆ. ಸಾಮೂಹಿಕ ವಿವಾಹಕ್ಕಾಗಿ ವಧು, ವರರ ಹೆಸರು ನೋಂದಣಿ ಆರಂಭವಾಗಿದೆ ಎಂದು ಹೇಳಿದರು.
ಸಾಮೂಹಿಕ ವಿವಾಹದಲ್ಲಿ ಮದುವೆಯಾಗುವ ಜೋಡಿಗಳು ತಂದೆ, ತಾಯಿಯ ಅನುಮತಿ ಪಡೆದಿರಬೇಕು, ವಧುವಿಗೆ ಕನಿಷ್ಟ 18 ವರ್ಷ, ವರನಿಗೆ ಕನಿಷ್ಟ 21 ವರ್ಷ ಆಗಿರಬೇಕು ಎಂಬುದೂ ಸೇರಿದಂತೆ ವಿವಿಧ ಷರತ್ತುಗಳಿಗೆ ಬದ್ಧವಾಗಿರಬೇಕು. ಮಡಿವಾಳ ಸಮಾಜದ ಕುಟುಂಬಗಳ ಸಾಂಪ್ರದಾಯಕ ಶಾಸ್ತ್ರಗಳನ್ನು ವಿವಾಹದಲ್ಲಿ ಅನುಸರಿಸಲಾಗುವುದು. ವಿವಾಹಕ್ಕೆ ನೋಂದಣಿ ಮಾಡಿಸಿದ ವಧುವಿಗೆ ಚಿನ್ನದ ಮಾಂಗಲ್ಯ, ಕಾಲುಂಗುರು, ಕಾಲು ಚೈನು, ರೇಷ್ಮೆ ಸೀರೆ, ವರನಿಗೆ ಕೈಗಡಿಯಾರ, ಬಟ್ಟೆ ಉಚಿತವಾಗಿ ನೀಡಲಾಗುವುದು. ವಧು-ವರನ ಜೊತೆ ಬರುವ ಎಲ್ಲಾ ಬಂಧುಬಳಗದವರಿಗೂ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ಏಪ್ರಿಲ್ 14ರಂದು ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಆದಿಚುಂಚನಗಿರಿ ಸಂಸ್ಥಾನದ ಡಾ.ನಿರ್ಮಲಾನಂದನಾಥ ಸ್ವಾಮೀಜಿ, ಮಡಿವಾಳ ಸಮಾಜದ ಮಠಾಧೀಶರಾದ ಮೂಡಬಿದರೆ ಮಠದ ಮುಕ್ತಾನಂದ ಸ್ವಾಮೀಜಿ, ಚಿತ್ರದುರ್ಗ ಮಠದ ಬಸವ ಮಾಚಿದೇವ ಸ್ವಾಮೀಜಿ, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಹೇಳಿದರು.
ಮಡಿವಾಳ ಸಂಘದ ರಾಜ್ಯ ಅಧ್ಯಕ್ಷ ನಂಜಪ್ಪ ಮಾತನಾಡಿ, ಈಗ ಮದುವೆಗಳು ದುಬಾರಿಯಾಗುತ್ತಿವೆ. ಮಡಿವಾಳ ಬಡ ಕುಟುಂಬಗಳು ತಮ್ಮ ಮಕ್ಕಳ ಮದುವೆ ಮಾಡಲು ಕಷ್ಟಸಾಧ್ಯವಿರುವ ಪರಿಸ್ಥಿತಿಯಲ್ಲಿ ಸಾಮೂಹಿಕ ವಿವಾಹ ಪ್ರೋತ್ಸಾಹಿಸಬೇಕು. ಎಷ್ಟೇ ಜೋಡಿಗಳು ಹೆಸರು ನೋಂದಾಯಿಸಿಕೊಂಡರೂ ಎಲ್ಲರಿಗೂ ಅವಕಾಶ ನೀಡಲಾಗುವುದು. ಆಯಾ ಜಿಲ್ಲಾ ಸಂಘಗಳಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬಹುದು ಎಂದು ತಿಳಿಸಿದರು.
ಎಸ್.ಸಿ.ಗೆ ಸೇರಿಸಲು ಒತ್ತಾಯ
ಪ್ರಧಾನ ಕಾರ್ಯದರ್ಶಿ ಬಿ.ಆರ್. ಪ್ರಕಾಶ್ ಮಾತನಾಡಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದಿರುವ ಮಡಿವಾಳ ಸಮಾಜದವರಿಗೆ ಸರ್ಕಾರದ ಸವಲತ್ತುಗಳು ನ್ಯಾಯಯುತವಾಗಿ ದೊರೆಯುತ್ತಿಲ್ಲ. ಪ್ರಸ್ತುತ 2ಎ ವರ್ಗದಲ್ಲಿ ಮಡಿವಾಳ ಸಮಾಜವಿದೆ. 2ಎನಲ್ಲಿ ಬಲಾಢÀ್ಯ ಜಾತಿಗಳಿದ್ದು, ಅವರೊಂದಿಗೆ ಪೈಪೋಟಿ ನಡೆಸಿ ಸವಲತ್ತು ಪಡೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕು ಎಂದು ಹಲವು ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ, ಈವರೆಗಿನ ಯಾವ ಸರ್ಕಾರಗಳೂ ನಮ್ಮ ಬೇಡಿಕೆಗೆ ಸ್ಪಂದಿಸಿಲ್ಲ ಎಂದರು.
ಮಡಿವಾಳರನ್ನು ಎಸ್ಸಿ ವರ್ಗಕ್ಕೆ ಸೇರಿಸಲು ಆ ವರ್ಗದಲ್ಲಿ ಹಾಲಿ ಇರುವ ಸಮುದಾಯಗಳು ವಿರೋಧ ಮಾಡುತ್ತಿವೆ. ಸರ್ಕಾರಗಳೂ ನಮ್ಮ ಬಗ್ಗೆ ಕಾಳಜಿ ವಹಿಸುತ್ತಿಲ್ಲ, ಇನ್ನು ಮುಂದೆ ನಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು. ಮೈಸೂರಿನಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಈ ತಿಂಗಳ 27ಕ್ಕೆ ಸಭೆ ನಡೆಸಿ ಪಾದಯಾತ್ರೆ ದಿನಾಂಕವನ್ನು ನಿರ್ಧಾರ ಮಾಡುವುದಾಗಿ ತಿಳಿಸಿದರು.
ಜಿಲ್ಲಾ ಮಡಿವಾಳರ ಸಂಘದ ಅಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಸಾಮೂಹಿಕ ವಿವಾಹದ ಅವಕಾಶವನ್ನು ಜಿಲ್ಲೆಯ ನಮ್ಮ ಸಮಾಜದವರು ಬಳಸಿಕೊಳ್ಳಬೇಕು. ಸಾಲಾಸೋಲ ಮಾಡಿ ದುಂದು ವೆಚ್ಚದ ಮದುವೆ ಮಾಡಬೇಡಿ. ಸಾಮೂಹಿಕ ವಿವಾಹದಲ್ಲಿ ಭಾಗವಹಿಸಲು ಜಿಲ್ಲಾ ಸಂಘದಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದರು.
ಜಿಲ್ಲಾ ಸಂಘದ ಗೌರವಾಧ್ಯಕ್ಷ ಕೆಂಪನರಸಯ್ಯ, ಮುಖಂಡ ಶಾಂತಕುಮಾರ್, ಸೇರಿದಂತೆ ತಾಲ್ಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.