ದೇವರಿಗೆ ಹಂದಿ ಕಾಯಲು ಬಿಟ್ಟು-ಕರನೆ ಕುಂಡಿ ತೋರಿಸಿ ಜಾತಿ ಪ್ರಮಾಣ ಪತ್ರ ಮಾಡಿಸಿದ ನನ್ನಪ್ಪ

ನನ್ನ ಅಪ್ಪ ಕಣ್ಮರೆಯಾಗಿ ಈ ಜನವರಿ 17ಕ್ಕೆ 28 ವರ್ಷಗಳಾಗುತ್ತವೆ, 1997ರ ಜನವರಿ 17ರಂದು ಇಹಲೋಕ ತ್ಯಜಿಸಿದ ಅಪ್ಪ ನನ್ನನ್ನು ಕಾಡುತ್ತಲೇ ಇರುತ್ತಾರೆ.

ಯಾಕೆಂದರೆ ಅವರು ಅಕ್ಷರವನ್ನು ಕಲಿತವರಾಗಿರಲಿಲ್ಲ, ಆದರೆ ಅವರಲ್ಲಿದ್ದ ಬುದ್ದಿವಂತಿಕೆ ನನಗೆ ಬರಲಿಲ್ಲವಲ್ಲ ಎಂಬುದು ಕಾಡುತ್ತದೆ. ಅವರೆಂದೂ ಓದು-ಬರಹ ಕಲಿಯದಿದ್ದರೂ ನಾನು ಓದು-ಬರಹ ಕಲಿತ್ತಿಲ್ಲ ಎಂದು ಕೊರಗಿದ್ದನ್ನೇ ನೋಡಿಲ್ಲ, ಅವರು ಯಾರಾದರೂ ನಾನು ಅಷ್ಟು ಓದಿದ್ದೇನೆ, ಇಷ್ಟು ಓದಿದ್ದೇನೆ ಅಂದರೆ ಅವರ ಬುರುಡೆಗೆ ಬಿಸಿನೀರು ಬಿಟ್ಟಂಗೆ ಚಾಲೆಂಜ್ ಮಾಡುತ್ತಿದ್ದರು, ನೀನ್ಯಾವ ಸಾಟದ ಮೇಗಳು ಓದಿದ್ದೀಯ, ನೋಡಾನ ರಾಮಾಯಣದ ಈ ಕತೆಯ ನಾಯಕ ಯಾರು ಹೇಳು ಅಂದರೆ ಓದಿದವನ್ನು ಅಲ್ಲಿಗೆ ಗಪ್‍ಚಿಪ್.
ಒಮ್ಮೆ ಯಾವುದೋ ಪತ್ರ ಬರೆಸಲು ಊರ ಸಾವಕಾರರ ಹತ್ತಿರ ಹೋಗಿ ಕೇಳಿದಾಗ, ನಿನಗ್ಯಾಕ ಪತ್ರ ಬರೆದುಕೊಡಬೇಕು, ಅಲ್ಲೆಲ್ಲಾರ ಹಂದಿ ಮೇಸಕಂಡು ಇರು ಅಂದ್ರಂತೆ, ಆಗ ನಮ್ಮಪ್ಪ ಲೇ ಸಾವಕಾರ ಪತ್ರ ಬರಕೊಡಲ್ಲ ಅನ್ನು, ಇಲ್ಲ, ನೋಡು ನಿನ್ನ ಎದೆಯಾಗೆ ಮಡಿಕೋ ಈ ಊರಿನಾಗೆ ಯಾವನೂ ಓದಿರಬಾರದು ಆ ರೀತಿ ನನ್ನ ಮಕ್ಕಳನ್ನ ನಾನು ಓದಿಸಲಿಲ್ಲ ಅಂದ್ರೆ ನಾನು ನಮ್ಮಪ್ಪಂಗೆ ಹುಟ್ಟಿಲ್ಲ ಕಣಯ್ಯ ಅಂದು ವಲ್ಲಿ ಬಟ್ಟೆ ಕೊಡಿಕೊಂಡು ಬಂದ ನಮ್ಮಪ್ಪ, ನಮ್ಮಣ್ಣನ್ನ ಕರೆದು ಎಡೆದಿಮ್ಮೀಲಿ ಎರಡು ಬಾರಿಸಿ ಧರಧರನೆ ಸ್ಕೂಲ್‍ ತಕ್ಕ ಎಳೆದುಕೊಂಡು ಹೋಗಿ, ರೀ ಮೇಷ್ಟ್ರೇ ಇವನ್ನ ಸ್ಕೂಲ್‍ಗೆ ಸೇರಿಸಕಳ್ಳಿ ಇವನೇನಾದರೂ ಓದಲಿಲ್ಲ ಅಂದ್ರೆ ನನಗೆ ಹೇಳ್ರೀ ಐತೆ ಅಂತ ಮನೆಗೆ ಬಂತಂತೆ.

ಸ್ಕೂಲಿನಿಂದ ಬಂದ ನಮ್ಮಣ್ಣನಿಗೆ ಸೇಂದಿ ಕುಡಿದು ಬಂದು ಮರದಡಿ ಮಲಗಿದ್ದ ನಮ್ಮಪ್ಪ, ಹತ್ತಿರ ಕರೆದು ಸ್ಕೂಲಲ್ಲಿ ಏನ್ ಮಾಡವ್ರೇ ಓದ್ಲಾ ಅಂತ ಮಗ್ಗುಲಲ್ಲಿ ಕೂರಿಸಿಕೊಂಡು ಓದುವಂತೆ ಹೇಳಿದರಂತೆ, ಒಂದಷ್ಟು ತಪ್ಪು ತಪ್ಪು ಓದಿದಾಗ ಸುಟ್ಟ ಎಡೆದಿಮ್ಮಿ ತಗಂಡು ಹೊಡೆದು ಯಾವನ್ಲಾ ಅವನು ಹೇಳಿಕೊಟ್ಟೋನು, ಬೆಳಿಗ್ಗಿಗೆ ಬಂತೀನಿ ನಡಿ ಅಂದ್ರಂತೆ.

ಒಳ್ಳೆ ಮಧ್ಯಾಹ್ನ 12 ಗಂಟೆಗೆ ಸ್ಕೂಲ್ ಹತ್ತಿರ ಹೋದ ನಮ್ಮಪ್ಪ ಮೇಸ್ಟರಿಗೆ, ನೀನ್ಯಾವ ಸೀಮೆ ಮೇಸ್ಟ್ರಯ್ಯ, ಎಲ್ಲಿ ಓದಿಸು ನನ್ನ ಮಗನ್ನ ಅಂತ ಬೆಂಚ್ ಮೇಲೆ ನಿಲ್ಸಿ ಓದಸಿದ್ರಂತೆ, ಅಟೊತ್ತಿಗೆ ನಮ್ಮಣ್ಣ ಮುಂದಿನ ತರಗತಿ ಹುಡುಗ್ರ ಹತ್ತಿರ ಪಾಠ ಹೇಳಿಸಿಕಂಡು ಚೆನ್ನಾಗಿ ಓದಂಗೆ ಬಾಯಿ ಪಾಠನೇ ಮಾಡಿದ್ರಂತೆ, ನಮ್ಮಣ್ಣ ಚೆನ್ನಾಗಿ ಓದಿದನ್ನು ಕಂಡ ನಮ್ಮಪ್ಪ, ರಾತ್ರಿ ಹಿಂಗೆ ಓದಾಕೆ ಏನಗಿತ್ತು ಅಂತ ತಿಗದ ಮ್ಯಾಲೆ ಒಂದು ಬಾರಿಸಿ ಬಂತಂತೆ.

ಈ ಗತಿ ನನ್ನ, ನನ್ನ ತಮ್ಮನ್ನ ಸ್ಕೂಲ್‍ಗೆ ಸೇರಿಸಿದಾಗಲೂ ನಮಗೂ ಆಗಿದ್ದರಿಂದ ನಮ್ಮಪ್ಪನಿಗೆ ಹೆದರಿಕೊಂಡು ಚೆನ್ನಾಗಿ ಓದೋದು, ಬರೆಯೋದು ಕಲಿತು ಶಾಲೆಗೆ ಮೊದಲು ಅನ್ನುವಂತಾಯಿತು, ಹಂದಿ ಮೇಯಿಸಲು ಹೋಗಿದ್ದ ನಮ್ಮಪ್ಪ ಯಾವಾಗಲಾದರೂ ದಿಢೀರನೆ ಸ್ಕೂಲ್ ಒಳಕ್ಕೆ ಬಂದು ನನ್ನ ಮತ್ತು ನನ್ನ ತಮ್ಮನನ್ನು ಬೆಂಚ್ ಮೇಲೆ ನಿಲ್ಲಿಸಿ ಪಾಠ ಓದ್ಸಿ ಮೇಷ್ಟ್ರೇ ಅಂತ ದೇವದಂತೆ ಬಂದು ಕೋಲು ಹಿಡಿದು ನಿಂತು ಬಿಡುತ್ತಿದ್ದರು, ನಾವು ಗಡ ಗಡ ನಡುಗುತ್ತಾ ಒಂದು ತಪ್ಪಿಲ್ಲದೆ ಓದುತ್ತಿದ್ದೆವು, ತಪ್ಪು ಓದಿದರೆ ನಮ್ಮಪ್ಪ ಎಲ್ಲಾ ಮಕ್ಕಳ ಎದುರಿಗೆ ಹೊಡೆದು ಅವಮಾನ ಮಾಡಿಬಿಡೋದು, ಈ ಹೆದರಿಕೆಯಿಂದ ದಿನಾ ಬುಡ್ಡಿ ಬೆಳಕಲ್ಲಿ ನಾನು, ನನ್ನ ತಮ್ಮ ಜೋರಾಗಿ ಓದಿಕಂಡು, ಬರಕಂತ ಇದ್ದೀವಿ, ಬರಲಿಲ್ಲ ಅಂದ್ರೆ ರಾಯರ ತಿಮ್ಮರಾಯಪ್ಪನವರ ತಂದೆಯ ಬಳಿ ದೇವಸ್ಥಾನಕ್ಕೋಗಿ ಒಂದೈದಾರು ಸಲ ಓದಿಸ್ಕಂಡು ಬರುತ್ತಿದ್ದೆವು.

ಈಗ ಅನ್ನಿಸುತ್ತದೆ ನಮ್ಮಪ್ಪ ಅಂತಹ ಕಠಿಣ ನಿಲುವು ತಗೊಳ್ಳದೆ ಇದ್ರೆ ನಮ್ಮಣ್ಣ ವೈದ್ಯರಾಗುತ್ತಿರಲಿಲ್ಲ, ನನ್ನ ತಮ್ಮ ವಕೀಲನಾಗುತ್ತಿರಲಿಲ್ಲ, ನಾನು ಪತ್ರಕರ್ತನಾಗುತ್ತಿರಲಿಲ್ಲವೇನೋ ಎಲ್ಲೋ ನಾವು ಅಲೆಮಾರಿ ಜನಾಂಗವಾಗಿದ್ದರಿಂದ ಹಂದಿ ಮೇಯಿಸ್ಕಂಡು ಇರುತ್ತಿದ್ದೆವು ಅನ್ನಿಸುತ್ತದೆ.

ಒಮ್ಮೆ ನಮ್ಮ ದೊಡ್ಡಪ್ಪನ ಮಗ ಪುಲ್ಲುಗುರಿ ಅಂತ ಇದ್ದ, ಅವನು ಹಂದಿಗಳನ್ನು ಕದಿಯುವುದರಲ್ಲಿ ಮಹಾನ್ ಕಳ್ಳ, ಅದೇ ರೀತಿ ನಮ್ಮ ಗೂಡಿನಲ್ಲಿ ಕೂಡಿದ್ದ ಒಂದ್ಹತ್ತು ಹಂದಿಗಳನ್ನು ಹೊಡೆದುಕೊಂಡು ಹೊರಟ್ಟಿದ್ದ, ಇತರೆ ಹಂದಿಗಳು ಗಾಬರಿಗೆ ಗೊಟರ್ ಗೊಟರ್ ಎಂದು ಚೀರಾಡಿದ್ದನ್ನು ಕೇಳಿ ಎದ್ದ ನಮ್ಮಪ್ಪ, ನಮ್ಮಮ್ಮನನ್ನು ಎಬ್ಬರಿಸಿ ತೆಂಗಿನ ಗರಿ ಬೆಂಕಿ ಅಚ್ಚುವಂತೆ ಹೇಳಿದರು.

ಅಲ್ಲಿದ್ದ ಹೆಜ್ಜೆ ಗುರುತುಗಳನ್ನು ನೋಡಿದ ನಮ್ಮಪ್ಪ ಎಲಾ ಪುಲ್ಲುಗುರಿ ನನ್ನ ಹಂದೀನೇ ಕಂದಿದ್ದೀಯ ಎಂದು ಅಲ್ಲಿ ಬಿದ್ದಿದ್ದ ತೆಂಗಿನ ಗರಿಯ ಎಡೆ ಮಟ್ಟೆಯನ್ನು ಲಟಲಟನೇ ಮುರಿದು ಹಲ್ಲನ್ನು ಮಸೆಯುತ್ತಾ ಸಿಂಹ ಕಿರುಚಿದಂತೆ ಲೇ ಪುಲ್ಲುಗುರಿ ನೀನು ಯಾವ ಸೀಮೇಲೆ ನೀನು ಅಡಗಿರು ಇವತ್ತು ನಿನ್ನ ಎದೆ ಬಗೆದು ರಕ್ತ ಕುಡಿಯಲಿಲ್ಲಂದ್ರೆ ನಮ್ಮಪ್ಪನಿಗೆ ಹುಟ್ಟಿಲ್ಲ ಅಂದುಕೋ ಎಂದು ನಮ್ಮಪ್ಪ ಕೂಗುತ್ತಾ ಶರವೇಗದಲ್ಲಿ ಓಡಿ ಬರುತ್ತಿವುದನ್ನು ಹಾಗೂ ವಡ್ಡರ ತಿಮ್ಮಣ್ಣ, ಕೆಂಚಣ್ಣ, ಅವರನ್ನು ಕೂಗುತ್ತಿರುವುದಕ್ಕೆ ವಡ್ಡರಟ್ಟಿಯ ವಡ್ಡರೆಲ್ಲಾ ಯಂಕಟಯ್ಯ ಕೂಸುತಾ ಉಂಡಾಡು ಅಂತ ಎಲ್ಲಾರೂ ಬೆಂಕಿ ಹಿಡಿದು ಪುಲ್ಲುಗುರಿ ಹಂದಿಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ದಾರಿಗೆ ಬಂದಾಗ ಪುಲ್ಲುಗುರಿ ಹಂದಿಗಳನ್ನು ಬಿಟ್ಟು ಬದುಕಿದರೆ ಸಾಕು ಅಂತ ಹೊಲಗಳಲ್ಲಿ ಎದ್ದೇನೋ-ಬಿದ್ದೆನೋ ಅಂತ ಓಡಿ ಹೋಗಿದ್ದ, ಹಂದಿಗಳು ಗೊಟರು ಹಾಕಿಕೊಂಡು ಗೂಡಿಗೆ ಬಂದಾಗ ನಮ್ಮಮ್ಮ ನಮ್ಮಪ್ಪನಿಗೆ ಕೂಗಿ ಹೇಳಿದಾಗ, ನಮ್ಮಪ್ಪ ಹಿಂತಿರುಗಿ ಬಂದು ಹಂದಿಗಳನ್ನೆಲ್ಲಾ ಎಣಿಸಿ ಅವುಗಳ ಮೈದಡವಿ ಮುದ್ದಾಡಿ ನನ್ನ ದೇವರುಗಳು ಕಣಪ್ಪ ಬಂದುಬಿಟ್ಟವು ಅಂತ ಬೆಳಿಗ್ಗೆ ದೇವರಿಗೆ ಪೂಜೆ ಮಾಡಿಸಲು ಸರಿ ರಾತ್ರೀಲೇ ತೆಂಗಿನಕಾಯಿ ಸುಲಿದು ಇಟ್ಟು ರಾತ್ರಿಯೆಲ್ಲಾ ಪುಲ್ಲುಗುರಿಗೆ ನಮ್ಮಪ್ಪನ ಸೃತಿಪಟಲದಲ್ಲಿದ್ದ ಬೈಗುಳಗಳ ಮೂಲಕ ಬೈದಿದ್ದೆ ಬೈದಿದ್ದು.

ಬೆಳಿಗ್ಗೇನೆ ದೇವಸ್ಥಾನಕ್ಕೆ ಹೋದ ನಮ್ಮಪ್ಪ ಪೂಜಾರಿ ಗರುಡಚಾರಿಯವರನ್ನು ಸ್ವಾಮಿ ಇವತ್ತು ಯಾವ ನನ್ನ ಮಗನೂ ಅಪ್ಪಣೆ ಕೇಳಂಗಿಲ್ಲ, ಮೊದಲು ನಾನು ಕೇಳಿದ ಮ್ಯಾಲೆ ನನಗೆ ಅಪ್ಪಣೆಯಾದ ಮೇಲೆ ಬೇರೆ ನನ್ಮಕ್ಕಳು ಕೇಳಿ ಅಂತ ಮಂಗಳಾರತಿ ಮಾಡಿಸಿ ಅಪ್ಪಣೆ ಕೇಳಲು ಕೂತ ನಮ್ಮಪ್ಪ.

ನೋಡಪ್ಪ ಇನ್ನ ಮ್ಯಾಲೆ ನನ್ನ ಹಂದೀನ ಕಾಪಾಡೋ ಜವಾಬ್ದಾರಿ ನಂದು ಅನಂಗಿದ್ರೆ ಬಲಗಡೇಲಿ ಅಪ್ಪಣೆ ಕೊಡು, ಇಲ್ಲಂದ್ರೆ ನಿನ್ನ ಹಂದಿ ಕಾಪಾಡೋ ಜವಾಬ್ದಾರಿ ನಿಂದೆಯಾ ಅನ್ನಂಗಿದ್ರೆ ಎಡಗಡೇಲಿ ಅಪ್ಪಣೆ ಕೊಡು ಅಂತ ಅಡ್ಡಬಿದ್ದು ಅಪ್ಪಣೆ ಕೇಳಲು ಕೂತು ಬಿಡ್ತು.

ದೇವಸ್ಥಾನಕ್ಕೆ ಬಂದಿದ್ದ ಇತರೆ ಊರವರು, ಮೇಲ್ಜಾತಿಯವರು ನಮ್ಮಪ್ಪ ಅಪ್ಪಣೆ ಕೇಳುತ್ತಿದ್ದರೆ ಅವರೆಲ್ಲಾ ಗಪ್ಪುಚಿಪ್ಪಾಗಿ ಕೂತಿದ್ದರು, ಯಾಕೆಂದರೆ ದೇವರ ಮ್ಯಾಲಿನ ಸೀರೆ, ಟವಲ್, ಬಂಗಾರದ ಒಡವೆ ಎಲ್ಲಾ ನಮ್ಮಪ್ಪನ ವಂಶಸ್ಥರದ್ದೇ ಆಗಿದ್ದರಿಂದ ನಮ್ಮಪ್ಪ ದೇವರು ನಂದೇ ಅಂತ ಬಂದವರ ಬಾಯಿ ಮುಚ್ಚಿಸಿ ಬಿಡುತ್ತಿತ್ತು.

ಐದಾರು ನಿಮಿಷವಾದ್ರು ದೇವರು ಅಪ್ಪಣೆ ಕೊಡದೆ ಇದ್ದಾಗ, ಅಹಾ …! ಇವತ್ತು ಪೂಜಾರ್ರು ಒಳ್ಳೆ ರಸಾಯನ ಮಾಡಿಬಿಟ್ಟವ್ರೆ ಭೂದೇವಿ, ಶ್ರೀದೇವಿ ಜೊತೆ ಚೆನ್ನಾಗಿ ತಿಂದು ಮಲಗಿದ್ದೀಯಾ ರೀ ಪೂಜಾರ್ರೇ ಜೋರಾಗಿ ಮಂಗಳಾರತಿ ಮಾಡ್ರೀ ಅಂತ ನಮ್ಮಪ್ಪ ಎದ್ದು ನಿಂತು ಗಂಟೆ ಬಾರಿಸುತ್ತಾ ಇತರರಿಗೆ ಜಾಗಟೆ, ಗಂಟೆ ಜೋರಾಗಿ ಬಾರಿಸಲು ಹೇಳುತ್ತಿದ್ದರು.

ಮಹಾಮಂಗಳಾರತಿಯಾದ ಕೂಡಲೇ ದೇವರ ಮೇಲಿನ ಬಲಗಡೆಯ ಎರಡು ಹೂಗಳು ತುಪಾರನೇ ಬಿದ್ದ ಕೂಡಲೇ ಆಹಾ ನನ್ನ ಸ್ವಾಮಿ ಮಲಗಿದ್ದೋನು ಎದ್ದು ಅಪ್ಪಣೆ ಕೊಟ್ಟು ಬಿಟ್ಟ ಎಂದು ಎದ್ದು ಅಡ್ಡ ಬಿದ್ದು ಗರುಡ ಚಾರ್ಯರಿಗೆ ಜೇಬಿನಲ್ಲಿದ್ದ ಹತ್ತು ರೂಪಾಯಿ ಕೊಟ್ಟು ಬತೀನಿ ಸ್ವಾಮಿ ಆಂತ ದೇವಸ್ಥಾನದ ಬಾಗಿಲು ದಾಟಿದ ಕೂಡಲೇ ದೇವಸ್ಥಾನದಲ್ಲಿದ್ದ ದೊಡ್ಡ ದೊಡ್ಡ ಕುಳಗಳು, ಸಾವಕಾರರು, ಯಂಕಟಯ್ಯ ಓದ್ನಾ ನೋಡ್ರೋ ಅಂತ ನಿಟ್ಟುಸಿರು ಬಿಟ್ಟರು.

ಒಮ್ಮೆ ನಮ್ಮಣ್ಣ ವೈದ್ಯಕೀಯ ಓದುವಾಗ ಜಾತಿ ಪ್ರಮಾಣ ಪತ್ರ ಬೇಕು ಅಂತ ಪತ್ರ ಬರೆದಿದ್ದರು, ಹನ್ನೊಂದು ಗಂಟೆಗೆ ಗ್ರಾಮ ಪಂಚಾಯಿತಿಗೆ ಹೋದ ನಮ್ಮಪ್ಪ, ಕೆಂಪಗೆ ಮಿರ ಮಿರ ಬೋಳು ತಲೆ ಬಿಟ್ಟುಕೊಂಡು ಕುಳಿತ್ತಿದ್ದ ಬ್ರಾಹ್ಮರ ಸೆಕ್ರೆಟರಿಗೆ ಜಾತಿಪ್ರಮಾಣ ಪತ್ರ ಮಾಡಿಸಲು ಬರೆದುಕೊಡಲು ಕೇಳಿದಾಗ, ನಿನಗ್ಯಾಕಯ್ಯ ಆಟೊಂದು ಹಂದಿ ಸಾಕಿದ್ದೀಯ ಬರೆದುಕೊಡಲ್ಲ ಹೋಗು, ಹೋಗು ಬೆಳಿಗ್ಗೆ ಬೆಳಿಗ್ಗೆ ಸೇಂದಿ ಕುಡಿದು ಬಂದಿದ್ದೀಯ ಅಂತ ರ್ಯಾಂಗ್ ಆಗಿ ಬಿಟ್ಟ, ಇಲ್ಲ ಸಾಮೋರ ಕುಡಿದು ಬಂದಿಲ್ಲ, ನಿಮಗೆ ಒಳ್ಳೇದು ಆಗಲಿ ಬ್ರಾಹ್ಮರನ್ನ ಬೈಯಾ ಬಾರದು ಬರೆದುಕೊಡಿ ಅಂತ ಸೆಲ್ಲಪ್ಪನ ಅಂಗಡೀಲಿ ತಂದಿದ್ದ ಹಾಳೆ ಸೆಕ್ರೆಟರಿ ಮುಂದೆ ಇಟ್ಟಾಗ, ಸೆಕ್ರೆಟರಿ ಹಾಳೆಯನ್ನ ಹರಿದು ಬಿಸಾಕಿ ಬಿಟ್ಟ.
ನಮ್ಮಪ್ಪ ಏನೂ ಮಾತನಾಡದೆ ಬಂದು ಬಿಡ್ತು, ಸಂಜೆ ನಾನು ಸ್ಕೂಲ್‍ನಿಂದ ಬಂದು ಬರಕಂತ ಕೂತಿದ್ದೆ, ಲೇ ಕೂಚುಭಟ್ಟ ಓದಿದ್ದು ಸಾಕು ಬಾರಲಾ ಒಂದು ನಾಲ್ಕು ತೆಂಗಿನ ಗರಿ ತಂಬಾ ಅಂತು, ಯಾಕಪ್ಪ ಅಂದೆ, ಸುಮ್ನ ತಾರಲೇ ಅಂತು. ತಂದ ಮ್ಯಾಲೆ ಬೆಂಕಿಪಟ್ನ ತತ್ತಾ ಅಂತು, ನನ್ನ ರೋಡಿಗೆ ನಿಲ್ಲಸಿ ಆ ಬೋಡ ಬ್ರಾಹ್ಮಣ ಸೆಕ್ರೆಟರಿ ಬಂದ್ರೆ ಹೇಳು ಅಂತ ಹೇಳ್ತು.

ನಾನು ಸೆಕ್ರೆಟರಿ ಬರುವುದನ್ನೇ ನೋಡ್ತಾ ಇದ್ದೆ, ಬಸ್‍ಸ್ಟಾಂಡ್ ಹತ್ತಿರ ಬರೋದನ್ನು ನೋಡಿ ಹೇಳಿದಾಗ ನಮ್ಮಪ್ಪ ಸೋಗೆ ಗರಿಗೆ ಬೆಂಕಿ ಹಾಕಿ ಕಾಯಿಸ್ತಾ ನಿಂತಿತ್ತು. ನಮ್ಮದೇ ಮನೆ ಊರಿಗೆ ಮೊದಲ ಮನೆಯಾಗಿದ್ದರಿಂದ ಬಂದವರೆಲ್ಲಾ ನಮ್ಮ ಮನೆ ಮುಂದೇನೆ ಹೋಗಬೇಕಿತ್ತು, ಸೆಕ್ರೆಟರಿ ನಮ್ಮ ಮನೆ ಮುಂದೆ ಬಂದ ಕೂಡಲೇ ನಮ್ಮಪ್ಪ ಪಂಚೆ ಎತ್ತಿ ಕರ್ರಗಿರುವ ಕುಂಡಿಗಳನ್ನು ಆತನಿಗೆ ತೋರಿಸಿ ಸ್ವಾಮಿ ಹ್ಯಂಗೆವೆ ಅಹಾ ಈಗ ನಿಮ್ಮ ಮನೆ ಮುಂದೆ ಬಂದು ಬೆಂಕಿ ಹಾಕಿ ಹಿಂಗೆ ಬರೀ ಕಚ್ಚೆಯಲ್ಲಿ ನಿಂತು ಬಿಡ್ತೀನಿ ಸ್ವಾಮಿ, ನಿಮ್ಮ ಹೆಂಡ್ತಿ ಮಕ್ಕಳು ಈ ಅವತಾರ ನೋಡ್ಲಿ, ನಿಮ್ಮ ಹೆಂಡ್ತಿ ಕೇಳಿದ್ರೆ ಬೆಳಿಗ್ಗೆ ಅದೇನೋ ಬರಕೊಡಲ್ಲ ಅಂದ್ರಲ್ಲ ಅದನ್ನೆ ಹೇಳ್ತೀನಿ ಅಂತು.

ಸೆಕ್ರೇಟರಿ ಚೀ ಚೀ ಥೂ ಥೂ ಏನು ಕೊಳಕ ಮನುಷ್ಯನಯ್ಯ ಅಂತ ಓಡಿ ಬಿಟ್ಟ, ಐದು ನಿಮಿಷದಲ್ಲಿ ಒಬ್ಬ ಹುಡುಗ ಓಡಿ ಬಂದು ಸೆಕ್ರಟರಿ ಕೊಟ್ರು ಅಂತ, ಒಂದು ಪತ್ರ ಕೊಟ್ಟ, ನನಗೆ ಓದ್ಲಾ ಅಂದಾಗ ಇಂತಹವರ ಮಗನು ಇಂತಹ ಜಾತಿಗೆ ಸೇರಿದ್ದು ಇವರ ವಿದ್ಯಾಭ್ಯಾಸಕ್ಕೆ ಜಾತಿ ಮತ್ತು ಆದಾಯಪತ್ರವನ್ನು ನೀಡುವುದು ಇವರು ಬಡವರಾಗಿರುವುದರಿಂದ ಇವರಿಗೆ ಯಾವುದೇ ಆದಾಯವಿರುವುದಿಲ್ಲ ಎಂದು ಬರೆದು ಕಳಿಸಿದ್ದರು.
ಇನ್ನ ತಹಶೀಲ್ದಾರ್ ಕಛೇರಿಗೆ ಹೋಗುವಾಗ ನನ್ನನ್ನು ಕರೆದುಕೊಂಡು ಹೋಗೋದು ನಮ್ಮಪ್ಪ. ಕೌಂಟರಲ್ಲಿ ಕೊಟ್ಟರೆ ಸಂಜೆತನಕ ಕಾಯಬೇಕು, ಅದ್ಕೆ ತಹಶೀಲ್ದಾರ್ ಬಾಗಿಲಲ್ಲಿ ಪೇಟ ಧರಿಸಿ ನಿಂತಿರುತ್ತಿದ್ದ ವ್ಯಕ್ತಿಯನ್ನು ಕರೆದು ಜೇಬಿಗೆ ಹತ್ತು ರೂಪಾಯಿ ಇಟ್ಟುಬಿಡೋದು, ಆಗಿನ ಕಾಲಕ್ಕೆ ಹತ್ತು ರೂಪಾಯಿ ಅಂದ್ರೆ ಇಂದಿಗೆ ಬಹುಶಃ ಇನ್ನೂರು ರೂಪಾಯಿ ಅಂದುಕೊಳ್ಳಿ. ಅದಾದ ಐದು ನಿಮಿಷಕ್ಕೆ ತಹಶೀಲ್ದಾರ್ ಬಾಗಿಲಲ್ಲಿ ನಿಂತಿದ್ದೋನಿಗೆ ಕಣ್ಣು ಮಿಟಿಕಿಸಿ ನೂಕಿ ತಹಶೀಲ್ದಾರ್ ಕೂತಿರುವ ಕುರ್ಚಿ ಎದುರಿಗೆ ಹೋಗಿ ಅಡ್ಡಬಿದ್ದು ಸ್ವಾಮಿ ನಾನು ಮೂಡಾತ್ಮ, ನನಗೆ ಓದಾಕೆ- ಬರೆಯಾಕೆ ಬರಲ್ಲ, ನನ್ನ ಮಗ ಅದೇನೋ ಡಾಕ್ಟ್ರುಕೆ ಓದಾಕೆ ಹೋಗಾನೆ ಅದೇನೋ ಬರದವ್ನೆ ಸೆಕ್ರೆಟರಿಗೆ ತೋರಿಸಿದ್ದಕೆ ಇದನ್ನು ಬರೆದು ಕೊಟ್ಟಿದ್ದಾರೆ ಅಂತ ಅವರ ಮುಂದಕ್ಕೆ ಇಕ್ಕೋದು.

ತಹಶೀಲ್ದಾರ್ ಓದಿ ಅಲ್ಲೇ ಅರ್ಜಿ ತರಿಸಿ ಹೆಬ್ಬಟ್ಟು ಒತ್ತಿಸಿ, ಶಿರಸ್ತೆದಾರರನ್ನು ಕರೆಸಿ ಅಲ್ಲೇ ಬರೆಸಿ ಸಹಿ-ಶೀಲು ಹಾಕಿ ಒಂದು 15 ನಿಮಿಷದಲ್ಲಿ ಜಾತಿ-ವರಮಾನ ಪತ್ರ ಆಗಿ ಹೋಗೋದು. ಖುದ್ದಾಗಿ ತಹಶೀಲ್ದಾರೇ ನಮ್ಮಪ್ಪನ ಕೈಗೆ ಕೊಟ್ಟು ಮಗನ್ನ ಚೆನ್ನಾಗಿ ಓದ್ಸು ಅನ್ನೋರು.
ಇನ್ನೊಂದು ಪ್ರಕರಣ ನಮ್ಮೂರ ಸಾವಕಾರು ಗ್ರಾಮ ಪಂಚಾಯತಿ ಸದಸ್ಯರಾಗಿದ್ರು, ಪಂಚಾಯಿತಿಯಿಂದ ಸೈಟ್‍ಗಳನ್ನು ಮಂಜೂರು ಮಾಡಿಸುವಾಗ ಬಡವರಿಗೆ ಮಂಜೂರು ಮಾಡಿಸದೆ ಬರೀ ಲಿಂಗಾಯಿತರಿಗೆ ಮಂಜೂರು ಮಾಡಿಸಿದ್ರು, ನಮ್ಮಪ್ಪ ಹಲವಾರು ಸಲ ಅರ್ಜಿ ಕೊಟ್ಟರೂ ಸೈಟ್ ಕೊಟ್ಟಿರಲಿಲ್ಲ, ಈ ಬಾರಿಯೂ ಕೊಟ್ಟಿರಲಿಲ್ಲ. ಬೆಳಿಗ್ಗೇನೆ ಅವರ ಮನೆಗೆ ಹೋದ ನಮ್ಮಪ್ಪ, ಅವರ ಮಗಳು ಭಾಗಮ್ಮನ್ನು ಕರೆದು ಸಾವಕಾರ್ರು ಇದ್ರಿ ಕರಿಯಮ್ಮ ಅಂದಿದೆ.

ಅಯ್ಯೋ ಏನಕ್ಕೋ ಯಂಕಟಯ್ಯ ಬಂದಿದೆ ಅಂತ ಅವರಪ್ಪನ್ನ ಕರಕಂಡು ಬಂದಿದೆ. ಸಾವಕಾರನ್ನ ನೋಡಿದ ಕೂಡಲೇ ನಿನಗೆ ಸಾವಕಾರ ಅನ್ನೋ ಬಿರುದುಬ್ಯಾರೆ, ನಿನಗೆ ಎಷ್ಟು ಜನ ಗಂಡು ಮಕ್ಕಳು ಒಬ್ನೆ ಅಲ್ವೆ, ನಿನಗ್ಯಾಕೆ ಎರಡು ಮನೆ ಸಂಜೆಯೊಳಗೆ ನೀವೆಲ್ಲಾ ಹೊಸ ಮನೆಗೆ ಹೋಗಿದ್ರೆ ಸರಿ, ನಾನು ಸಂಜೆಗೆ ಹಂದಿಗಳನ್ನು ಹೊಡಕಂಡು ಬಂದು ದನಿನ ಮನೆಗೆ ಕೂಡಿ, ನಾವು ಗಂಟು ಮೂಟೆ ಕಟ್ಟಿಕೊಂಡು ಬಂದು ಈ ಮನೇಲಿ ವಾಸ ಮಾಡ್ತೀವಿ ಸ್ವಾಮಿ, ಅಮೇಲೆ ಬ್ಯಾಜಾರು, ಗಲಾಟೆ ಮಾಡಿದ್ರೆ ಸುಮ್ಮನಿರಲ್ಲ ಅಂತ, ಭಾಗಮ್ಮ ಕಾಫಿ ಕೊಡಿಲ್ಲಿ ಕುಡಿಯಾನ ಸಾವಾಕಾರ್ರು ನಮ್ಮ ದುಡ್ಡಲ್ಲಿ ಸಾವಕಾರ್ರು ಆಗಿರೋದು, ಅನ್ನುವ ಹೊತ್ತಿಗೆ ಭಾಗಮ್ಮ ಯಂಕಟಯ್ಯ ಹೋದ್ರೆ ಸಾಕು ಅಂತ ಕಾಫಿ ತಂದು ಕೊಡ್ತು, ಕಾಫಿ ಕುಡ್ದು ಹೊರಡುವಾಗಲೂ ಭಾಗಮ್ಮನಿಗೆ ನೀವೆಲ್ಲಾ ಹೊಸಮನಿಗೆ ಹೋಗಿರ್ರೀ ಸಂಜೆಗೆ ಹಂದಿ, ಮಕ್ಕಳು ಜೊತೆ ಬಂತೀವಿ ಕಣವ್ವ ಸಾವಕಾರ್ರಿಗೆ ಹೇಳು ಅಂತ ಬಂತು.

ಸಂಜೆ ವೇಳೆಗೆ ನಮ್ಮಪ್ಪನಿಗೆ ಸೈಟು ಮಂಜೂರು ಪತ್ರ ಮನೆ ಹತ್ರಕ್ಕೆ ತಂದು ಕೊಟ್ರು.

ಈಗ ನಾವು ಇಷ್ಟೆಲ್ಲಾ ಓದಿದ್ದರೂ ತಮ್ಮ ಎದುರಾಳಿಯನ್ನು ಹೇಗೆ ಎದುರಿಸಬೇಕು, ಪ್ರತಿಭಟನೆ ಹೇಗೆ ಮಾಡಬೇಕು ಎಂಬುದು ಹೊಳೆಯುವುದಿಲ್ಲ, ಅಷ್ಟು ಧೈರ್ಯವೂ ಬರುವುದಿಲ್ಲ. ಬರೀ ನಾಲ್ಕೂವರೆ ಅಡಿ ಇದ್ದ ನಮ್ಮಪ್ಪ ಯಾರಿಗೂ ಹೆದರುತ್ತಿರಲಿಲ್ಲ, ಆ ಸಮಯಕ್ಕೆ ಯಾವ ತಂತ್ರ ಉಪಯೋಗಿಸಬೇಕು ಅದನ್ನು ತಟ್ಟಂತ ಉಪಯೋಗಿಸಿ ಎದುರಾಳಿಗಳನ್ನೇ ಪೇಚಿಗೆ ಸಿಕ್ಕಿಸಿ, ಎದರುಸಿ ಉಚ್ಚೆ ಹೊಯ್ದುಕೊಳ್ಳುವಂತೆ ಮಾಡುತ್ತಿದ್ದ ನಮ್ಮಪ್ಪನ ಬುದ್ದಿವಂತಿಕೆ ನಮಗೆ ಕನಿಷ್ಠ ಒಂದು ನಯಾಪೈಸೆಯಷ್ಟೂ ಬಂದಿಲ್ಲ.

ನಮ್ಮಪ್ಪನ ಟಾಲೆಂಟು, ಬುದ್ದವಂತಿಕೆ, ಜಾಣ್ಮೆಯನ್ನು ಬರೆಯುತ್ತಾ ಹೋದರೆ ಒಂದು ಚಿಕ್ಕ ಕಾದಂಬರಿಯೇ ಆಗುತ್ತದೆ, ಅಪ್ಪ ಇಲ್ಲದ 28 ವರ್ಷಗಳು ಕಳೆದು ಹೋಗಿವೆ, ನಮ್ಮಪ್ಪ ಮಾಡುತ್ತಿದ್ದ ದೇವರ ಪೂಜೆ, ಹರೆಕೆ, ಊರವರನ್ನು ಒಂದೇ ನಿಲುವಿನಲ್ಲಿ ಕಟ್ಟಿ ಹಾಕುತ್ತಿದ್ದ ರೀತಿ, ಯಾವುದೇ ಅಧಿಕಾರಿಯಾಗಲಿ ಒಂದೇ ಕ್ಷಣದಲ್ಲಿ ಕರಗಿ ಕೆಲಸ ಮಾಡಿಕೊಡುವಂತಹ ಮಾತು, ಜಗಳಕ್ಕೆ ನಿಂತರೆ ನಮ್ಮಪ್ಪನ ಬಾಯಿಗೆ ಹದರಿ ಪತರಗುಡುತ್ತಿದ್ದು ಎದುರಾಳಿಗಳು, ಈಗ ಬರೀ ನೆನಪು, ಆ ನೆನಪುಗಳು ಸಿನಿಮಾ ರೀಲಿನಂತೆ ಆಗಾಗ ಓಡುತ್ತಲೇ ಇರುತ್ತವೆ ನನ್ನ ದೃಷ್ಠಿಯಲ್ಲಿ ನಮ್ಮಪ್ಪ ಗ್ರೇಟ್ ಯಾಕೆಂದರೆ ಅಕ್ಷರ ಕಲಿಯದ ಅಪ್ಪ ನಮಗೆ ಅಕ್ಷರ ಕಲಿಸಿ ಈ ಸಮಾಜದಲ್ಲಿ ಉತ್ತಮರಾಗುವಂತೆ, ಪ್ರಜ್ಞೆಯನ್ನು ಕೊಟ್ಟು ನೀನು ಈ ಸಮಾಜದಲ್ಲಿ ಒಳ್ಳೆಯವನಾಗು ಎಂದು ಕಲಿಸಿದ ಅಪ್ಪನಿಗೆ ಇಗೋ ನಮಸ್ಕಾರಗಳು ಸದಾ ನೀನೇ ನನಗೆ ಆದರ್ಶ ಗುರು—–

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *