ತುಮಕೂರು:ಜನಪದ ಕಲೆಗಳನ್ನು ಪ್ರದರ್ಶಿಸುವ ವ್ಯಕ್ತಿಗಳಲ್ಲಿ ಬಡತನವಿದ್ದರೂ, ಕಲೆಗಳಲ್ಲಿ ಶ್ರೀಮಂತಿಕೆ ಇದೆ ಎಂದು ಹಂಪಿ ವಿವಿ ಕುಲಪತಿ ಪ್ರೊ.ಡಿ.ವಿ.ಪರಮಶಿವಮೂರ್ತಿ ತಿಳಿಸಿದ್ದಾರೆ.
ನಗರದ ಬಿ.ಹೆಚ್.ರಸ್ತೆಯಲ್ಲಿರುವ ಶ್ರೀಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸ್ವರಸಿಂಚನ ಸುಗಮ ಸಂಗೀತ, ಜಾನಪದ ಕಲಾ ಸಂಘ(ರಿ)ದವತಿಯಿಂದ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪಡೆದ ಜೋಗಿ ಸಿದ್ದಪ್ಪ ಅವರೊಂದಿಗೆ ಮಾತು, ಮಂಥನ-ಗಾಯನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ನೆಲಮೂಲದ ಕಲಾವಿದರು ತಾವು ಬಡವರಾಗಿದ್ದರೂ, ತಾವು ನಂಬಿರುವ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಬಹುತೇಕ ಜನಪದ ಕಲೆಗಳು ಬಡವರಲ್ಲಿಯೇ ಬೇರೂರಿರುವುದನ್ನು ಕಾಣಬಹುದಾಗಿದೆ.ಕೆಲವು ಜನಪದ ಕಲೆಗಳು ಅಧುನಿಕತೆಗೆ ಸಿಲುಕಿ ವೇಷ, ಭೂಷಣಗಳಲ್ಲಿ ಬದಲಾವಣೆ ಕಂಡುಕೊಂಡಿದ್ದರೂ,ಅರ್ಜುನ ಜೋಗಿ ಯಂತಹ ಕಲೆಗಳು ಅಧುನಿಕತೆಯ ನಡುವೆಯೂ ತನ್ನ ತನವನ್ನು ಉಳಿಸಿಕೊಂಡಿರುವುದು ವಿಶೇಷ.ಖಾಸಗಿ ವಾಹನಗಳ ಅಬ್ಬರಕ್ಕೆ ಮಾರು ಹೋಗಿ ಜನಪದ ಕಲೆಗಳು ಜನಪ್ರಿಯತೆ ಕವಚ ತೊಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.ಆದರೆ ಜನಪದ ಕಲೆ ಕಲಾವಿದರಿಗೆ ಕಲೆಯ ಜೊತೆಗೆ ಬದುಕು ಹೌದು ಎಂಬುದನ್ನು ಸರಕಾರಗಳು ಅರ್ಥಮಾಡಿಕೊಳ್ಳಬೇಕು.ತಮ್ಮ ಕುಟುಂಬ ನಂಬಿರುವ ಕಲೆಗಳಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಅರಿತು ಯುವಕರು ಇದರಿಂದ ವಿಮುಖರಾಗುತ್ತಿದ್ದಾರೆ.ಈ ಕಾರಣದಿಂದ ಹಲವಾರು ಜನಪದೀಯ ಕಲೆಗಳು ಅಳಿವಿನ ಅಂಚಿಗೆ ಬಂದು ನಿಂತಿವೆ.ಹಾಗಾಗಿ ಇಂತಹ ಕಲೆಗಳನ್ನು ಪ್ರದರ್ಶಿಸುವ ಕಲಾವಿದರಿಗೆ ಅರ್ಥಿಕ ಶಕ್ತಿ ತುಂಬುವ ಕೆಲಸವನ್ನು ಜನಸಾಮಾನ್ಯರು ಮತ್ತು ಸರಕಾರಗಳು ಮಾಡಬೇಕಿದೆ ಎಂದು ಡಿ.ವಿ.ಪರಮಶಿವಮೂರ್ತಿ ತಿಳಿಸಿದರು.
ಕರಾವಳಿಯ ಯಕ್ಷಗಾನ ಕಲೆ ಸಾಗರದಾಚೆಗೂ ತಲುಪಿದೆ.ಅದನ್ನು ವ್ಯವಸ್ಥಿತವಾಗಿ ಬೆಳೆಸುವ ಜಾಲವಿದೆ.ಆದರೆ ನಮ್ಮ ದೊಡ್ಡಾಟ,ಸಣ್ಣಾಟಗಳು ಕುಂಟುತಾ ಸಾಗಿವೆ.ಇಂತಹ ಕಲೆಗಳು ಕಲಾವಿದರಿಗೆ ಬದುಕಿನ ಜೊತೆಗೆ, ಸಂಸ್ಕøತಿಯ ಸಂವಾಹಕಗಳಾಗಿವೆ.ಇಂತಹ ಕಲಾವಿದರು ನೆಮ್ಮದಿಯ ಬದುಕು ನಡೆಸುವಂತ ಸ್ಥಿತಿಯನ್ನು ಸರಕಾರ ನಿರ್ಮಾಣ ಮಾಡಬೇಕಿದೆ.ಇಂದು ಅನೇಕ ಜನಪದ ವಾದ್ಯಗಳನ್ನು ವಸ್ತುಪ್ರದರ್ಶನದಲ್ಲಿ ನೋಡಬೇಕಾದ ಸ್ಥಿತಿ ಇದೆ.ಅದೇ ಪರಿಸ್ಥಿತಿ ಕಲೆಗಳು ಬಾರದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕಾಗಿದೆ ಎಂದು ಪ್ರೊ.ಡಿ.ವಿ.ಪರಮಶಿವಮೂರ್ತಿ ನುಡಿದರು.
ಜಾನಪದ ಅಕಾಡೆಮಿ ಸದಸ್ಯ ಹಾಗೂ ಜಾನಪದ ವಿದ್ವಾಂಸ ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ ಅಕಾಡೆಮಿಯ ವೃತ್ತಿ ಗಾಯನ ವಿಭಾಗದಲ್ಲಿ ಬರುವ ಮಂಟೆಸ್ವಾಮಿಯ ನೀಲಗಾರರು,ಚೌಡಿಕೆಯವರು, ಗೋರವರು, ಕಾರ್ಣಿಕರಿಗೆ ಧಾರ್ಮಿಕ ಬೆಂಬಲವಿದೆ.ಆದರೆ ಅರ್ಜುನ ಜೋಗಿ ಕಲಾವಿದರಿಗೆ ಯಾವುದು ಇಲ್ಲ.ಅಲೆಮಾರಿ ಪರಂಪರೆಯ ಅರ್ಜುನಜೋಗಿಯ ಪರಂಪರೆಯವರಾದ ಇವರು,ಕಾಲಭೈರವನ ಆರಾಧಕರು,ತಮ್ಮ ಗಂಡು ಮಕ್ಕಳಿಗೆ ಜೋಗಿಯ ದೀಕ್ಷೆ ನೀಡುವುದು ವಾಡಿಕೆ.ಎಲ್ಲೋ ಜೋಗಪ್ಪ ನಿನ್ನ ಅರಮನೆ ಎಂದರೂ,ಅವರಿಗೆ ಇರಲು ಒಂದು ಗುಡಿಸಲು ಇಲ್ಲ.ಅಳಿವಿನಂಚಿನಲ್ಲಿರುವ ಈ ಕಲೆಗಳನ್ನು ಉಳಿಸುವ ಕೆಲಸದ ಜೊತೆಗೆ, ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಿ ಎಂದು ತಿಳಿಸಿದರು.
ಪ್ರಸ್ತಾವಿಕ ನುಡಿಗಳನ್ನಾಡಿದ ಸ್ವರಸಿಂಚನ ಸುಗಮ ಸಂಗೀತ, ಜಾನಪದ ಕಲಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕೆಂಕೆರೆ,ಎಲೆ ಮರೆಯ ಕಾಯಿಯಂತೆ ತಾವಾಯಿತು, ತಮ್ಮ ಕಲೆಯಾಯಿತು ಎಂದು ಬದುಕಿದ್ದ ಜೋಗಿ ಸಿದ್ದಪ್ಪ ನಂತವರನ್ನು ಗುರುತಿಸಿ ಅಕಾಡೆಮಿ ಪ್ರಶಸ್ತಿ ನೀಡುವ ಮೂಲಕ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ.ಪ್ರಶಸ್ತಿಗಾಗಿ ಸಾವಿರಾರು ಅರ್ಜಿಗಳು, ಹತ್ತಾರು ಮಂತ್ರಿಗಳ ಶಿಫಾರಸ್ಸು ಪತ್ರವಿದ್ದರೂ ಅವರುಗಳನ್ನೆಲ್ಲಾ ಬದಿಗೊತ್ತಿ ನಿಜವಾದ ಕಲಾವಿದರಿಗೆ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ.ಒಂದು ರಾಜ್ಯಮಟ್ಟದ ಪ್ರಶಸ್ತಿ ಬಂದರೂ ಜಿಲ್ಲೆಯ ಜನ ಅವರನ್ನು ಗುರುತಿಸಿ ಅಭಿನಂದಿಸದಿರುವುದು ಬೇಸರ ತರಿಸಿದೆ.ಹಾಗಾಗಿ ಇಂದು ನಮ್ಮ ಸಂಸ್ಥೆಯ ಮೂಲಕ ಗೌರವಿಸುವುದರ ಜೊತೆಗೆ, ಅವರನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ನಂತರ ನಡೆದ ಸಂವಾದದಲ್ಲಿ ಮಾತನಾಡಿದ ಜೋಗಿ ಸಿದ್ದಪ್ಪ, ನಮ್ಮ ತಾತ, ಮುತ್ತಾತ್ತನಿಂದ ಬಂದ ಕಲೆಯನ್ನು ನಾವು ಮುಂದುವರೆಸಿಕೊಂಡು ಬಂದಿದ್ದೇವೆ.12 ವರ್ಷಗಳ ಅರಣ್ಯವಾಸ ಮುಗಿಸಿದ, ಅಜ್ಞಾತ ವಾಸಕ್ಕೆ ಹೋಗುವ ಮುನ್ನ ಅರ್ಜುನ ಜೋಗಿಯ ವೇಷ ತೊಟ್ಟಿದ್ದು, ಅಜ್ಞಾತ ವರ್ಷದ ನಂತರ ಅದನ್ನು ನಮ್ಮ ಸಮುದಾಯಕ್ಕೆ ಹಸ್ತಾಂತರಿಸಿದ.ಅದನ್ನು ನಾವು ಇಂದಿಗೂ ಮುಂದುವರೆಸಿಕೊಂಡು ಬಂದಿದ್ದೇವೆ.ನಮಗೆ ಪಾಂಡವರ ಚರಿತ್ರೆಯನ್ನು ಸಾರುವುದೇ ಕಾಯಕ.ಎಲ್ಲೋ ಇದ್ದ ನನ್ನನ್ನು ಗುರುತಿಸಿ, ಪ್ರಶಸ್ತಿ ನೀಡಿದ್ದಕ್ಕೆ ಜಾನಪದ ಅಕಾಡೆಮಿಯ ಎಲ್ಲರಿಗೂ ಚಿರಋಣಿ ಎಂದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಚಿಂತಕಿ ಡಾ.ಬಿ.ಸಿ.ಶೈಲಾನಾಗರಾಜು,ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ,ಎಂ.ಎಸ್.ರವಿಕುಮಾರ್ ಅವರುಗಳು ಸಂವಾದ ನಡೆಸಿಕೊಟ್ಟರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಜಗದೀಶಕುಮಾರ್ ವಹಿಸಿದ್ದರು.
ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರು, ಜೋಗಿ ಸಿದ್ದಪ್ಪ ಅವರ ಸಹೋದರ ತಿಪ್ಪೇಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರರಿದ್ದರು.ಹಿರಿಯ ಜನಪದ ಕಲಾವಿದರುಗಳಿಂದ ಗೀತಗಾಯನ ನಡೆಯಿತು.