ತುಮಕೂರು : ಮೌಲ್ಯರಹಿತ ಶಿಕ್ಷಣದಿಂದ ಮಕ್ಕಳು ಹಿರಿಯರನ್ನು ಅಸಡ್ಡೆ ಮನೋಭಾವದಿಂದ ಕಾಣುವ ಪರಿಸ್ಥಿತಿ ಸಮಾಜದಲ್ಲಿ ನಿರ್ಮಾಣವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮತ್ತು ಹಿರಿಯ ನಾಗರಿಕರಿಗಾಗಿ ಶ್ರಮಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಗುರುವಾರ ನಗರದ ಬಾಲಭವನ ಸಭಾಂಗಣದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಿಗೆ ಚಿಕ್ಕಂದಿನಿಂದಲೇ ಮೌಲ್ಯಯುತ ಶಿಕ್ಷಣವನ್ನು ನೀಡಬೇಕು ಎಂದು ಅಭಿಪ್ರಾಯಪಟ್ಟರು.
ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಜೀವನ ಪರ್ಯಂತ ದುಡಿಯುವ ತಂದೆ-ತಾಯಿಯರನ್ನು ಮಕ್ಕಳು ಗೌರವಯುತವಾಗಿ ನಡೆಸಿಕೊಳ್ಳಬೇಕು. ವಯೋಸಹಜ ಖಾಯಿಲೆಗಳಿಂದ ಬಳಲುವ ವೃದ್ಧ ತಂದೆ-ತಾಯಿಯರ ಚಿಕಿತ್ಸೆ, ಆರೈಕೆ ಮಾಡುವುದು ಮಕ್ಕಳ ಜವಾಬ್ದಾರಿ. ಮಕ್ಕಳು ನಾನು ವೈದ್ಯ, ಇಂಜಿನಿಯರ್, ಬ್ಯಾಂಕ್ ಉದ್ಯೋಗಿ, ಪ್ರಾಧ್ಯಾಪಕ, ಆಸ್ತಿವಂತನೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದಕ್ಕಿಂತ ನನ್ನ ತಂದೆ-ತಾಯಿಗೆ ಒಳ್ಳೆಯ ಮಗ/ಮಗಳು ಎಂದು ಹೇಳಿಕೊಳ್ಳುವಂತಾಗಬೇಕು ಎಂದು ತಿಳಿಸಿದರು.
ಮಕ್ಕಳು ಆಸ್ತಿಗಾಗಿ ತಮ್ಮ ಹೆತ್ತ ತಂದೆ-ತಾಯಿಯರ ಮೇಲೆ ಹಲ್ಲೆಯುಂಟು ಮಾಡುವ ಪ್ರಕರಣಗಳು ನ್ಯಾಯಾಲಯಕ್ಕೆ ಬರುವ ಸಂಖ್ಯೆ ಹೆಚ್ಚಾಗುತ್ತಿದೆ. ಹಿರಿಯ ನಾಗರಿಕರು ತಮ್ಮ ಇಳಿ ವಯಸ್ಸಿನಲ್ಲಿ ಘನತೆ ಹಾಗೂ ಗೌರವದಿಂದ ಬದುಕುವ ವಾತಾವರಣವನ್ನು ನಿರ್ಮಾಣ ಮಾಡುವುದು ಕಿರಿಯರ ಕರ್ತವ್ಯ. ಹಿರಿಯ ನಾಗರಿಕರ ಹಕ್ಕುಗಳಿಗೆ ಚ್ಯುತಿಬಾರದಂತೆ ನಾವು ನಡೆದುಕೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ನಾಗರಿಕರು ನ್ಯಾಯಾಲಯಕ್ಕೆ ಸಲ್ಲಿಸುವ ದಾವೆ ಅರ್ಜಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು. ಅವರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡುವ ನಿಟ್ಟಿನಲ್ಲಿ ಅವರ ಹಕ್ಕು ಹಾಗೂ ರಕ್ಷಣೆಗೆ ಕಾನೂನು ಪರಿಹಾರ ನೀಡಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಬದ್ಧವಾಗಿದೆ ಎಂದು ಹೇಳಿದರು.
ಹಿರಿಯ ನಾಗರಿಕರ ಹಾಗೂ ಪಾಲಕ ಜೀವನ ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅವರ ಹಕ್ಕು ಹಾಗೂ ಸರ್ಕಾರದ ಸೌಲಭ್ಯಗಳು ನಿರೀಕ್ಷಿತ ಮಟ್ಟದಲ್ಲಿ ತಲುಪುತ್ತಿಲ್ಲ ಎಂದು ಅವರು ವಿμÁದ ವ್ಯಕ್ತಪಡಿಸಿದರು.
ಕಾಯ್ದೆಯು ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಿಸುವುದರ ಜೊತೆಗೆ, ಮಕ್ಕಳಿಂದ ಅಥವಾ ಕುಟುಂಬಸ್ಥರಿಂದ ನಿರ್ಲಕ್ಷ್ಯಕ್ಕೊಳಗಾಗದಂತೆ ಕಾಪಾಡುತ್ತದೆ. ಹಿರಿಯ ನಾಗರಿಕರು ತಮ್ಮ ಜೀವಿತಾವಧಿಯಲ್ಲಿ ಗಳಿಸಿರುವ ಚರ ಹಾಗೂ ಸ್ಥಿರಾಸ್ತಿಯನ್ನು ಅಂತ್ಯಕಾಲದವರೆಗೂ ಯಾರಿಗೂ ವರ್ಗಾಯಿಸಬಾರದು. ಆಸ್ತಿಯನ್ನು ಮಕ್ಕಳಿಗೆ ವರ್ಗಾಯಿಸುವ ಸಂದರ್ಭ ಬಂದಾಗ ಆಸ್ತಿ ವಿಲೇವಾರಿಯಾದ ನಂತರ ಮಕ್ಕಳು ನೋಡಿಕೊಳ್ಳಲು ನಿರ್ಲಕ್ಷ್ಯವಹಿಸಿದಲ್ಲಿ ಅವರ ಹೆಸರಿಗೆ ಮಾಡಿರುವ ಖಾತೆ ರದ್ದುಪಡಿಸುವ ಹಾಗೂ ಮರು ನೋಂದಣಿ ಮಾಡುವ ಷರತ್ತನ್ನು ಹಕ್ಕು ಪತ್ರದಲ್ಲಿ ಸೇರಿಸಬೇಕು ಎಂದು ಸಲಹೆ ನೀಡಿದರು.
ಗೃಹ ಸಚಿವರ ವಿಶೇಷ ಕರ್ತವ್ಯಾಧಿಕಾರಿ ಡಾ|| ನಾಗಣ್ಣ ಮಾತನಾಡಿ, ಸ್ವಾತಂತ್ರ್ಯ ಪೂರ್ವದಲ್ಲಿ ಸಾಕ್ಷರತಾ ಪ್ರಮಾಣ ಕೇವಲ ಶೇಕಡಾ 12ರಷ್ಟಿದ್ದರೂ, ಮಕ್ಕಳು ತಂದೆ–ತಾಯಿ, ಅತ್ತೆ–ಮಾವರನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳುತ್ತಿದ್ದರು. ಪ್ರಸ್ತುತ ಭಾರತದ ಸಾಕ್ಷರತಾ ಪ್ರಮಾಣ ಶೇಕಡಾ 85ರಷ್ಟು ಹೆಚ್ಚಾಗಿದ್ದರೂ ಮಾನವೀಯ ಮೌಲ್ಯಗಳು ಮತ್ತು ಸಂಸ್ಕಾರಗಳು ಕುಗ್ಗುತ್ತಿರುವುದು ಆತಂಕಕಾರಿ ವಿಚಾರ ಎಂದು ವಿμÁದ ವ್ಯಕ್ತಪಡಿಸಿದರು.
ಪ್ರಸ್ತುತ ದಿನಗಳಲ್ಲಿ ವೃದ್ಧಾಶ್ರಮಗಳ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಿವೆ. ಸಣ್ಣ-ಪುಟ್ಟ ವಿಷಯಗಳಿಗೆ ಹಿರಿಯರನ್ನು ಬಯ್ಯುವುದು, ಅವಮಾನಿಸುವುದು, ಕೆಲವೊಮ್ಮೆ ಹಲ್ಲೆ ಮಾಡುವಂತಹ ಘಟನೆಗಳು ನಡೆಯುತ್ತಿರುವುದು ದುಃಖದ ಸಂಗತಿ. ಇದು ಶಿಕ್ಷಣದ ನಿಜವಾದ ಉದ್ದೇಶವನ್ನು ವಿಫಲಗೊಳಿಸುವಂತಹ ವಿಚಾರ ಎಂದರು. ಮಕ್ಕಳಿಗೆ ಪುಸ್ತಕದ ಜ್ಞಾನ ಮಾತ್ರವಲ್ಲ, ಸಂಸ್ಕಾರ ಮತ್ತು ಹಿರಿಯರ ಗೌರವ ನೀಡುವ ಪಾಠವನ್ನು ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.
ಪ್ರಸ್ತುತ ದಿನಗಳಲ್ಲಿ ಹಿರಿಯರನ್ನು ಕಡೆಗಣಿಸುವವರ ಸಂಖ್ಯೆ ಹೆಚ್ಚಾಗುತ್ತಿದೆ. ತಂದೆ, ತಾಯಿ, ಅಜ್ಜ, ಅಜ್ಜಿ ಅಲ್ಲದೆ, ಪ್ರತಿ ಮನೆಯ ಹಿರಿಯರಾದ ಅಮೂಲ್ಯ ಜೀವಗಳಿಗೆ ನಾವೆಲ್ಲರೂ ರಕ್ಷಕರಾಗಬೇಕು. ಹಿರಿಯರೂ ಸಹ ಮಗ-ಸೊಸೆ, ಮಗಳು-ಅಳಿಯ, ಕಿರಿಯರೊಂದಿಗೆ ಹೊಂದಾಣಿಕೆಯಿಂದ ಇರಬೇಕು. ವೃದ್ಧರು ತಮ್ಮ ಮೊಮ್ಮಕ್ಕಳಿಗೆ ಶ್ರವಣಕುಮಾರ, ವಿವೇಕಾನಂದರಂತಹ ಮಹನೀಯರ ಕಥೆಗಳನ್ನು ಹೇಳಿ ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸಿದ್ದರಾಮಣ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿ.ಕೃ. ಶ್ರೀನಿವಾಸ ಶರ್ಮ, ಪುಟ್ಟಬೋರಯ್ಯ, ಎಂ.ಸಿ.ಲಲಿತ, ಪುಟ್ಟನರಸಯ್ಯ, ಇಕ್ಬಾಲ್ ಹುಸೇನ್ ಸೇರಿದಂತೆ ಹಿರಿಯ ನಾಗರಿಕ ಕ್ಷೇತ್ರದಲ್ಲಿ ಸಾಧನೆಗೈದ ಐವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕ ಮುರಳಿಧರ್ ಎಂ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ದಿನೇಶ್, ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.