ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿ ನಗರಕ್ಕೆ ಆಗಮನ15-16ರಂದು ಸ್ವಾಮಿಯ ವೈಭವದ ಶೋಭಾಯಾತ್ರೆ, ಕಲ್ಯಾಣೋತ್ಸವ

ತುಮಕೂರು: ಲೋಕಲ್ಯಾಣಾರ್ಥ ಆರ್ಯವೈಶ್ಯ ಶ್ರೀರಾಮ ಸೇವಾ ಸಮಿತಿ ಈ ತಿಂಗಳ 15 ಮತ್ತು 16ರಂದು ನಗರದಲ್ಲಿ ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿಯ ಶೋಭಾಯಾತ್ರೆ ಹಾಗೂ ಕಲ್ಯಾಣೋತ್ಸವವನ್ನು ವೈಭವದಿಂದ ಹಮ್ಮಿಕೊಂಡಿದೆ.

ಗುರುವಾರ ನಗರದ ಚಿಕ್ಕಪೇಟೆಯ ಕನ್ಯಕಾ ಪರಮೇಶ್ವರಿ ದೇವಸ್ಥಾನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಆರ್ಯವೈಶ್ಯ ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಅಮರ್‍ನಾಥ್, ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿ ಶೋಭಾಯಾತ್ರೆ ಮತ್ತು ಕಲ್ಯಾಣೋತ್ಸವದ ಅಂಗವಾಗಿ ಈ ತಿಂಗಳ 15 ಮತ್ತು 16ರಂದು ನಗರದ ಅಮಾನಿಕೆರೆ ಗಾಜಿನಮನೆ ಆವರಣದಲ್ಲಿ ವಿವಿಧ ಪೂಜಾ, ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು.

15ರಂದು ಬೆಳಿಗ್ಗೆ ತೆಲಂಗಾಣದ ಭದ್ರಾಚಲಂನಿಂದ ಶ್ರೀ ಸೀತಾರಾಮಚಂದ್ರಸ್ವಾಮಿಯವರನ್ನು ಕರೆತರಲಾಗುವುದು. ಗಾಜಿನ ಮನೆಯಲ್ಲಿ ಅಂದು ಬೆಳಿಗ್ಗೆ 7 ಗಂಟೆಗೆ ಗಣಪತಿಪೂಜೆ, ಗಂಗಾಪೂಜೆ, ಧ್ವಜಪೂಜೆ, ಚಪ್ಪರಪೂಜೆ, ಕಳಶ ಪ್ರತಿಷ್ಠಾಪನೆ, ಯಾಗಶಾಲಾ ಪ್ರವೇಶ, ದೈವಾನಂದಿ, ಪುಣ್ಯಾಹ, ಗೋಪೂಜೆ, ಅಶ್ವಪೂಜೆ, ಗಜಪೂಜೆ, ನವಗ್ರಹಪೂಜೆ, ಅರಿಶಿನ ಮತ್ತು ಬಳೆಶಾಸ್ತ್ರ, ಗಣಹೋಮ ಇತರೆ ಹೋಮ ಹವನಾದಿಗಳು ನೆರವೇರಲಿವೆ. ಬೆಳಿಗ್ಗೆ 10 ಗಂಟೆಗೆ ಶ್ರೀರಾಮತಾರಕ ಹೋಮ, ಹನುಮಾನ್ ಚಾಲೀಸ್ ಪಠಣ, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ ಎಂದರು.

ಭದ್ರಾಚಲಂನಿಂದ ಆಗಮಿಸುವ ಪುಷ್ಪಾಲಂಕೃತ ಚೈತನ್ಯ ರಥದಲ್ಲಿ ಶ್ರೀ ಸೀತಾರಾಮಚಂದ್ರಸ್ವಾಮಿ ಮತ್ತು ಪರಿವಾರ ದೇವರುಗಳು ಹಾಗೂ ಕನ್ಯಕಾ ಪರಮೇಶ್ವರಿ ಅಮ್ಮನವರ ಶೋಭಾಯಾತ್ರೆಯು ಅಂದು ಸಂಜೆ 5 ಗಂಟೆಗೆ ಟೌನ್‍ಹಾಲ್ ವೃತ್ತದಿಂದ ಭಕ್ತಸಾಗರದ ನಡುವೆ ಸಂಭ್ರಮದಿಂದ ನಡೆಯಲಿದೆ. ಮಂಗಳವಾದ್ಯ, ವಿವಿಧ ಕಲಾತಂಡಗಳ ಪ್ರದರ್ಶನ, ಭಜನಾ ತಂಡಗಳ ಕೀರ್ತನೆಗಳೊಂದಿಗೆ ಬಾಣಬಿರುಸುಗಳ ಆಕರ್ಷಕ ಪ್ರದರ್ಶನದೊಂದಿಗೆ ಶೋಭಾಯಾತ್ರೆಯು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಗಾಜಿನಮನೆ ಆವರಣ ತಲುವುದು ಎಂದು ಅಮರ್‍ನಾಥ್ ಹೇಳಿದರು.

ದಿನಾಂಕ 16 ನೇ ಭಾನುವಾರದಂದು ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ, 9 ಗಂಟೆಗೆ ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿ ದೇವಸ್ಥಾನದ ಹೃತ್ವಿಕವರ್ಗದವರಿಂದ ಶ್ರೀ ಸೀತಾರಾಮಚಂದ್ರಸ್ವಾಮಿ ಕಲ್ಯಾಣೋತ್ಸವ ನೆರವೇರಲಿದೆ. ಈ ವೇಳೆ 108 ದಂಪತಿ ಪೂಜಾಕೈಂಕರ್ಯದಲ್ಲಿ ಭಾಗವಹಿಸುವರು. ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ. ಸಂಜೆ 6 ಗಂಟೆಗೆ ಕಾರ್ತಿಕ ದೀಪೋತ್ಸವ ಹಾಗೂ ಕೃತಜ್ಞತಾ ಸಮರ್ಪಣೆ ಕಾರ್ಯಕ್ರಮ. ನಂತರ ನೀಲಾಲಯ ನೃತ್ಯ ಕೇಂದ್ರ ತಂಡದಿಂದ ಸಂಪೂರ್ಣ ರಾಮಾಯಣ ನೃತ್ಯರೂಪಕ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.

ಸುಮಾರು ಹತ್ತು ವರ್ಷಗಳ ಪ್ರಯತ್ನದ ಫಲವಾಗಿ ಭದ್ರಾಚಲಂ ಶ್ರೀ ಸೀತಾರಾಮಚಂದ್ರಸ್ವಾಮಿಯವರನ್ನು ನಗರಕ್ಕೆ ಕರೆತರಲು ಸಾಧ್ಯವಾಗುತ್ತಿದೆ. ಎರಡು ದಿನಗಳ ಈ ವಿಶೇಷ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಇದಕ್ಕಾಗಿ 2 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಎರಡು ದಿನವೂ ದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ಅಮರ್‍ನಾಥ್ ಹೇಳಿದರು.

ಗೌರವಾಧ್ಯಕ್ಷರಾದ ಸಿ.ಎ. ಸೋಮೇಶ್ವರಗುಪ್ತ, ಕಾರ್ಯದರ್ಶಿ ಹರಿಕುಮಾರ್, ಸಮಿತಿ ಸಹಕಾರ್ಯದರ್ಶಿ ಹಾಗೂ ಆಚರಣಾ ಸಮಿತಿ ಚೇರ್ಮನ್ ಗೋಪಾಲಕೃಷ್ಣ, ಅನಿಲ್‍ಕುಮಾರ್, ಗುರುಪ್ರಸಾದ್, ಪ್ರದೀಪ್, ಗೋಪಾಲ್, ಅಶ್ವಥ್‍ನಾರಾಯಣ್, ನಾಗರಾಜು, ಲೋಕೇಶ್ ಜಿ.ಕೆ., ವಿ.ಪಿ.ಕೃಷ್ಣಮೂರ್ತಿ, ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *