ಗುಂಪಿಗೆ ಸೇರದ ಪದವಾಗಿ ಉಳಿದ ಮೊಗಳ್ಳಿ-ಎಸ್.ಗಂಗಾಧರಯ್ಯ

ತುಮಕೂರು : ಕನ್ನಡದ ಶ್ರೇಷ್ಠ ಲೇಖಕ ಮೊಗಳ್ಳಿ ಗಣೇಶ್. ಸೃಜನಶೀಲವಾಗಿ ಮಹಾದೇವರವರು ಸಾಧನೆ ಮಾಡಿದ್ದರೆ. ಸೃಜನೇತರವಾಗಿಯೂ ಮೊಗಳ್ಳಿ ಸಾಧಿಸಿರುವರು. ಮೊಗಳ್ಳಿಯವರ ಸೃಜನೇತರ ಶಕ್ತಿಯನ್ನು ಯಾರೂ ಗುರುತಿಸಲಿಲ್ಲ. ಅವರು ಬದುಕಿದ್ದಾಗ ಅವರ ಸಾಹಿತ್ಯ ಕುರಿತು ಚರ್ಚೆಯಾಗಿದ್ದರೆ ಚೆನ್ನಾಗಿತ್ತು. ಅದರೆ, ಸಾಂಸ್ಕೃತಿಕ ಲೋಕದಲ್ಲಿ ಗುಂಪಿಗೆ ಸೇರದ ಪದವಾದರು ಮೊಗಳ್ಳಿ. ಇಲ್ಲಿನ ಪಟ್ಟುಗಳು ಅವರಿಗೆ ಗೊತ್ತಿರಲಿಲ್ಲ. ಆದರೂ ಜಟ್ಟಿ ಅವರು. ತನ್ನ ವ್ಯಕ್ತಿತ್ವವನ್ನು ಎಲ್ಲಿಯೂ ಸರೆಂಡರ್ ಮಾಡಿದ್ದು ನೋಡಲಿಲ್ಲ ಎಂದು ಲೇಖಕ ಎಸ್ ಗಂಗಾಧರಯ್ಯ ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಕರ್ನಾಟಕ ಲೇಖಕಿಯರ ಸಂಘದ ತುಮಕೂರು ಜಿಲ್ಲಾ ಶಾಖೆ ಮತ್ತು ತುಮಕೂರಿನ ರೈಲ್ವೆ ಸ್ಟೇಷನ್ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ, ಚಕೋರ ಉಪನ್ಯಾಸ ಮಾಲಿಕೆ – 13ರ ಅಂಗವಾಗಿ ಹಮ್ಮಿಕೊಂಡಿದ್ದ ಮೊಗಳ್ಳಿ ಗಣೇಶ ಬದುಕು- ಬರಹ ವಿಷಯದ ಕುರಿತು ಮಾತನಾಡಿದರು.

ತಮಗೂ ಮತ್ತು ಗೆಳೆಯ ಮೊಗಳ್ಳಿರವರಿಗೂ 40 ವರ್ಷದ ಗೆಳೆತನ. ತಾನು, ಅಬ್ದುಲ್ ರಶೀದ್, ಮೊಗಳ್ಳಿ ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕಾಲದಿಂದಲೂ ಗೆಳೆಯರು. ಆಗ ಮೈಸೂರು ಸಾಂಸ್ಕೃತಿಕ ನಗರ ಮಾತ್ರವಲ್ಲ, ಚಳವಳಿಗಳ ನಗರವೂ ಆಗಿತ್ತು. ರೈತ ಚಳವಳಿ ಮತ್ತು ದಲಿತ ಚಳವಳಿ ಪೀಕ್ ನಲ್ಲಿ ಇದ್ದ ಕಾಲ. ಚಳವಳಿಗಳು ಮತ್ತು ರಾಮದಾಸ್ ಅವರಂಥ ಗುರುಗಳು ನಮ್ಮ ಆಲೋಚನಾ ಕ್ರಮ ರೂಪಿಸಿದರು. ನಾವು ವಿದ್ಯಾರ್ಥಿಗಳೆ ಗೋಡೆ ಪತ್ರಿಕೆ ತರುತ್ತಿದ್ದೆವು. ಮೊಗಳ್ಳಿ ‘ದಲಿತ’ ಗೋಡೆ ಪತ್ರಿಕೆ ತರುತ್ತಿದ್ದರು. ಚಳವಳಿಯ ಶಕ್ತಿ ಮೊಗಳ್ಳಿಯಲ್ಲಿ ಇತ್ತು ಎಂದರು.

ಕನ್ನಡ ಭಾಷೆ ಶ್ರೀಮಂತಗೊಳಿಸಿದವರಲ್ಲಿ ಮೊಗಳ್ಳಿ ಗಣೇಶ್ ಕೂಡಾ ಒಬ್ಬರು. ಅತ್ಯಂತ ಚೆಂದದ ಭಾಷೆ ಅವರಿಗೆ ದಕ್ಕಿತ್ತು. ಇನ್ನೂ ಚೆನ್ನಾಗಿ ಬರೆಯಬಲ್ಲೆ ಎಂಬ ಅತ್ಮವಿಶ್ವಾಸ ಇತ್ತು. ಇನ್ನೂ ಅದ್ಭುತವಾಗಿ ಬರೆಯುವ ಶಕ್ತಿ ಇದ್ದ ಹಾಗೆ ದೈಹಿಕವಾಗಿ ಅಗಲಿದರು. ಮೊಗಳ್ಳಿಗೆ ನಾಜೂಕು ಮಾತು ಗೊತ್ತಿರಲಿಲ್ಲ. ನೇರಾ ನೇರ ಹೇಳ್ತಾ ಇದ್ದರು ಅವರ ಸೊಲ್ಲು ತಕರಾರು ಕೃತಿಗಳಿಂದ, ಅಂಕಣಗಳಿಂದ ಶತೃಗಳು ಹೆಚ್ಚಾದರು. ಕೊನೆವರೆಗೂ ಅಸ್ಪೃಶ್ಯನಂತೆ ಕಂಡರು. ಇಲ್ಲಿ ಅವರಿಗೊಂದು ನುಡಿನಮನವನ್ನೂ ಹಮ್ಮಿಕೊಳ್ಳಲಿಲ್ಲ. ಮೊಗಳ್ಳಿಯ ಅತ್ಮಕಥೆ ‘ನಾನೆಂಬುದು ಕಿಂಚಿತ್ತು’.ಕನ್ನಡದ ಶ್ರೇಷ್ಠ ಅತ್ಮಕತೆ. ಆದರೆ, ವಿಮರ್ಶಾಲೋಕ ಅದನ್ನು ಮುಖ್ಯವಾಗಿ ತೆಗೆದುಕೊಳ್ಳಲೇ ಇಲ್ಲ ಎಂದು ವಿಷಾದಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ .ಎನ್ .ಮುಕುಂದರಾಜ್ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸವನ್ನು ಅಕಾಡೆಮಿ ಮಾಡ್ತಾ ಇದೆ. ಸಂತೆಗಳಲ್ಲಿ, ಜೈಲ್ ಗಳಲ್ಲಿ, ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ.
ಕಳೆದ 70,80 ರ ದಶಕದಿಂದ ಈಚೆಗೆ ,ಈ ಕಾಲದಲ್ಲಿ ಬರೆಯುತ್ತಿರುವ ದಲಿತ ಲೇಖಕರು ಅತ್ಯಂತ ಪ್ರತಿಭಾವಂತರು ,ಸೃಜನಶೀಲರು.ಅಗಾಧವಾದುದನ್ನು ಬರೆಯುತ್ತಿರುವರು. ಅವರಲ್ಲಿ ಮೊಗಳ್ಳಿ ಗಣೇಶ್ ತುಂಬಾ ಮಹತ್ವದ ಕಥೆಗಾರ ಎಂದರು.

ಡಾ. ಬಾಲಗುರುಮೂರ್ತಿ, ಚಕೋರ ಸಂಚಾಲಕ ಡಾ. ನಾಗಭೂಷಣ ಬಗ್ಗನಡು ಮತ್ತು ಮಲ್ಲಿಕಾ ಬಸವರಾಜು ಇದ್ದರು.

Leave a Reply

Your email address will not be published. Required fields are marked *