ತುಮಕೂರು: ತುಮಕೂರು ದಸರಾದಲ್ಲಿ ಅಂಬಾರಿ ಹೊತ್ತಿದ್ದ ಆನೆ ಲಕ್ಷ್ಮಣ ಇಬ್ಬರು ಲಕ್ಷ್ಮೀ ಆನೆಗಳೊದಿಗೆ ಗಜ ಗಾಂಭೀರದಿಂದ ಹೆಜ್ಜೆ ಹಾಕುವುದರ ಮೂಲಕ ವೈಭವಯುತ ಜಂಬೂ ಸವಾರಿ ಮೆರವಣಿಗೆಯು ನಗರದ ಮೆರುಗನ್ನು ಮತ್ತಷ್ಟು ಹೆಚ್ಚಿಸುವಲ್ಲಿ ಯಶಸ್ವಿಯಾಯಿತು.

ತುಮಕೂರು ದಸರಾ ಉತ್ಸವದ ಅಂಗವಾಗಿ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಬುಧವಾರ ಮಧ್ಯಾಹ್ನ ನಗರದ ಬಿ.ಜಿ.ಎಸ್. ವೃತ್ತದ ಬಳಿ ಸಾಂಪ್ರದಾಯಿಕವಾಗಿ ನಂದೀಧ್ವಜಕ್ಕೆ ಪೂಜೆ ನೆರವೇರಿಸಿ ಚಾಲನೆ ನೀಡಿದರು, ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆ ಎಂದರೆ ಅಂಬಾರಿ ಹೊತ್ತಿದ್ದ ಲಕ್ಷ್ಮಣ ಆನೆ. ಮೈಸೂರು ದಸರಾ ಸಂಪ್ರದಾಯವನ್ನು ನೆನಪಿಸುವಂತೆ ಲಕ್ಷ್ಮಣನನ್ನು ಬಣ್ಣ-ಬಣ್ಣದ ವಸ್ತ್ರ ಹಾಗೂ ಹೂಗಳಿಂದ ಅಲಂಕರಿಸಿ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯನ್ನು ಕುಳ್ಳಿರಿಸಲಾಗಿತ್ತು.

ದುಬಾರೆಯಿಂದ ಬಂದಿದ್ದ ಲಕ್ಷ್ಮಣನ ಪಕ್ಕದಲ್ಲಿ ಸಾಗಿದ ಎರಡು ಲಕ್ಷ್ಮೀ ಆನೆಗಳು ಗಾಂಭೀರ್ಯದಿಂದ ಮೆರವಣಿಗೆಯ ಸೊಬಗನ್ನು ಇಮ್ಮಡಿಗೊಳಿಸಿದವು. ತುಮಕೂರಿನಲ್ಲಿ 3ನೇ ಬಾರಿ ಜರುಗುತ್ತಿರುವ ಈ ಜಂಬೂಸವಾರಿಯನ್ನು ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಕಣ್ತುಂಬಿಕೊಂಡಿತು.

ನಗರದಲ್ಲಿ ಸಂಭ್ರಮದ ವಾತಾವರಣವನ್ನು ಸೃಷ್ಟಿಸಿದ್ದ ಜಂಬೂಸವಾರಿ ಮೆರವಣಿಗೆಯಲ್ಲಿ ಲಕ್ಷ್ಮೀ ಆನೆಗಳ ಗಾಂಭೀರ್ಯ, ಲಕ್ಷ್ಮಣನ ಧೈರ್ಯ, ಇವುಗಳ ನಡುವೆ ಶ್ರೀ ಚಾಮುಂಡೇಶ್ವರಿ ದೇವಿಯ ಮೆರವಣಿಗೆಯು ನಿಜಕ್ಕೂ “ಮೈಸೂರು ದಸರಾ ಎಷ್ಟೊಂದು ಸುಂದರ” ಎಂಬ ಹಾಡಿನ ಸಾಲುಗಳನ್ನು ಮೆಲುಕು ಹಾಕುವಂತೆ ಮಾಡಿತು. ಮೆರವಣಿಗೆಯನ್ನು ವೀಕ್ಷಿಸಲು ದಾರಿಯುದ್ದಕ್ಕೂ ಅಲ್ಲಲ್ಲಿ ಗ್ಯಾಲರಿಗಳನ್ನು ನಿರ್ಮಿಸಲಾಗಿತ್ತು. ಅನೇಕರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ಜಂಬೂಸವಾರಿಯ ದೃಶ್ಯಗಳನ್ನು ಸೆರೆ ಹಿಡಿದು ಅಮೂಲ್ಯ ನೆನಪುಗಳನ್ನು ತಮ್ಮದಾಗಿಸಿಕೊಂಡರು.
ಜಂಬೂಸವಾರಿ ಭವ್ಯ ಮೆರವಣಿಗೆಯಲ್ಲಿ ತುಮಕೂರು ತಾಲ್ಲೂಕು ಕಚೇರಿಯ ಗಣಪತಿ, ಮಂಡಿಪೇಟೆಯ ಶ್ರೀ ಭದ್ರಕಾಳಿ ಹಾಗೂ ಶ್ರೀ ರಾಜರಾಜೇಶ್ವರಿ ಗಂಗಾಭವಾನಿ, ಚಿಕ್ಕಪೇಟೆಯ ಶ್ರೀ ಕೋಟೆ ಆಂಜನೇಯಸ್ವಾಮಿ, ಶ್ರೀ ಕನ್ನಿಕಾಪರಮೇಶ್ವರಸ್ವಾಮಿ, ವಿಶ್ವಕರ್ಮ ಕಾಳಿಕಾಂಬ, ಬ್ರಹ್ಮಕುಮಾರಿ ಈಶ್ವರಿ, ಅಂಕಾಲೇಶ್ವರಿ ಹಾಗೂ ನಾಲ್ಕು ಗಾಲಿ ಬಾವಿ ಗಣೇಶ, ದಿಬ್ಬೂರಿನ ಶ್ರೀ ಮುಳಕಟ್ಟಮ್ಮ, ವಿನಾಯಕ ನಗರದ ಶ್ರೀ ಆದಿಶಕ್ತಿ ಅಮ್ಮ, ಮಾರಿಯಮ್ಮ ನಗರದ ಮಾರಿಯಮ್ಮ ದೇವಿ, ಶ್ರೀ ವೀರಭದ್ರಸ್ವಾಮಿ ಸೇರಿದಂತೆ 33ಕ್ಕೂ ಹೆಚ್ಚು ಗ್ರಾಮ ದೇವತೆಗಳು ಹೂಗಳಿಂದ ಅಲಂಕರಿಸಲ್ಪಟ್ಟ ಸಾರೋಟು(ಬೆಳ್ಳಿ ರಥ)ಗಳಲ್ಲಿ ಸಾಗಿದ್ದು, ಜನರಲ್ಲಿ ಅದ್ವಿತೀಯ ಭಕ್ತಿ ಭಾವ ಮೂಡಿಸಿತು.
ಜಂಬೂಸವಾರಿ ಮೆರವಣಿಗೆಯಲ್ಲಿ ಸಾಲಾಗಿ ಸಾಗಿದ ದೇವರ ಉತ್ಸವ ಮೂರ್ತಿಗಳಿಗೆ ಗಣ್ಯರು ಪುಷ್ಪಾರ್ಚನೆ ಅರ್ಪಿಸಿದರು.
ಮೆರವಣಿಗೆ ಮಾರ್ಗದಲ್ಲಿ ಮಹಿಳೆಯರ ಪೂರ್ಣಕುಂಭ ಕಳಶ, ಪೊಲೀಸ್ ಅಶ್ವದಳ, ನಂದಿಧ್ವಜ, ಸೋಮನಕುಣಿತ, ಗೊರವರ ಕುಣಿತ, ತಮಟೆ, ಹಗಲು ವೇಷ, ಹುಲಿ ವೇಷ, ಯಕ್ಷಗಾನ, ವೀರಗಾಸೆ, ಅರೆವಾದ್ಯ, ಗಾರುಡಿ ಗೊಂಬೆ, ಕೀಲು ಕುದುರೆ, ಡೊಳ್ಳು ಕುಣಿತ, ತಾಳ ಮದ್ದಳೆ ಸೇರಿದಂತೆ ನೂರಾರು ಕಲಾ ತಂಡಗಳು ಕಲಾ ಪ್ರದರ್ಶನ ನೀಡುತ್ತಾ ಸಾಗಿದವು. ವಿಶೇಷವಾಗಿ ಗಾರುಡಿ ಗೊಂಬೆಗಳ ಉದ್ದನೆಯ ಪ್ರತಿರೂಪಗಳು ಮಕ್ಕಳ ಗಮನ ಸೆಳೆದವು. ಡೊಳ್ಳಿನ ದನಿಗೆ ಹೆಜ್ಜೆ ಹಾಕಿದ ವೀರರು ಭಕ್ತರನ್ನು ಆಕರ್ಷಿಸಿದರು. ದಾರಿಯುದ್ದಕ್ಕೂ ಮಕ್ಕಳಿಂದ ವೃದ್ಧರಾದಿಯಾಗಿ ಮೆರವಣಿಗೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು.
ನೂರಾರು ಕಲಾತಂಡಗಳ ಕಲಾ ವೈಭವ, ಜಿಲ್ಲೆಯ ವಿವಿಧ ದೇವರ ಉತ್ಸವಮೂರ್ತಿಗಳ ರಥಯಾತ್ರೆ, ಗಜಪಡೆಯ ಸೊಬಗು ಇವೆಲ್ಲವೂ ಸೇರಿ ಈ ವರ್ಷದ ತುಮಕೂರು ದಸರಾ ಜಂಬೂಸವಾರಿಯು ಜನಮನದಲ್ಲಿ ಅಜರಾಮರ ನೆನಪು, ನಗರದ ಬೀದಿಗಳನ್ನು ಜೀವಂತಗೊಳಿಸಿದ ಈ ಮೆರವಣಿಗೆ ನಾಡಹಬ್ಬದ ನಿಜವಾದ ಭಾವವನ್ನು ಮೂಡಿಸಿತು.
ಶಮೀ ಪೂಜೆ ಸಂಪನ್ನ :-

ಜಂಬೂ ಸವಾರಿ ಮೆರವಣಿಗೆಯು ನಗರದ ಬಿ.ಜಿ.ಎಸ್. ವೃತ್ತದಿಂದ ಚರ್ಚ್ ಸರ್ಕಲ್, ಡೀಸಿ ಕಚೇರಿ, ಅಮಾನಿಕೆರೆ ರಸ್ತೆ, ಕೋತಿ ತೋಪು, ಶ್ರೀ ಶಿವಕುಮಾರ ಸ್ವಾಮೀಜಿ ವೃತ್ತದ ಮಾರ್ಗವಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನವನ್ನು ತಲುಪಿತು.
ನಂತರ ವಿವಿಧ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಉಪಮುಖ್ಯಮಂತ್ರಿ ಪರಮೇಶ್ವರ ಅವರು ಕದಳಿ ಛೇದನ ಮಾಡುವ ಮೂಲಕ ಶಮೀ ಪೂಜೆ ಸಂಪನ್ನಗೊಂಡಿತು.
ರಾಜ್ಯ ಕಾಡು ಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಮಹೇಶ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಟಿ.ಬಿ. ಜಯಚಂದ್ರ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರಗೌಡ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ನಿಕೇತ್ರಾಜ್ ಎಂ., ಉಪಮುಖ್ಯಮಂತ್ರಿಗಳ ಧರ್ಮಪತ್ನಿ ಕನ್ನಿಕಾ ಪರಮೇಶ್ವರಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜಾ, ಪಾಲಿಕೆ ಆಯುಕ್ತೆ ಶುಭ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ತಹಶೀಲ್ದಾರ್ ರಾಜೇಶ್ವರಿ ಸೇರಿದಂತೆ ವಿವಿಧ ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.