ಚಂದನ್‍ಶೆಟ್ಟಿ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದ ಡಿಸಿಎಂ

ತುಮಕೂರು : ಕನ್ನಡದ ರ್ಯಾಪರ್ ಚಂದನ್‍ಶೆಟ್ಟಿ ಹಾಡಿಗೆ ಉಪಮುಖ್ಯಮಂತ್ರಿ ಡಾ: ಜಿ. ಪರಮೇಶ್ವರ ಅವರು ಹೆಜ್ಜೆ ಹಾಕಿ ಸಂಭ್ರಮಿಸಿದರು.

ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ದಸರಾ ಉತ್ಸವದ 9ನೇ ದಿನವಾದ ಸೋಮವಾರ ಅಮರಶಿಲ್ಪಿ ಚಕಣಾಚಾರಿ ಸಾಂಸ್ಕøತಿಕ ವೈಭವ ಮಹಾವೇದಿಕೆಯಲ್ಲಿ ಸಂಜೆ ಜರುಗಿದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು ಚಂದನ್‍ಶೆಟ್ಟಿ ಅವರ ರ್ಯಾಪ್ ಸಾಂಗಿಗೆ ಸ್ಟೆಪ್ ಹಾಕಿ ಎಲ್ಲರ ಗಮನ ಸೆಳೆದರು.

ಚಂದನ್‍ಶೆಟ್ಟಿ ಜೊತೆಯಾಗಿ ರ್ಯಾಂಪ್ ವಾಕ್ ಮಾಡಿ ಪ್ರೇಕ್ಷಕರತ್ತ ಕೈಬೀಸಿ ಶುಭ ಕೋರಿದರು. ಪ್ರೇಕ್ಷಕರು ಪರಮೇಶ್ವರ್ ಅವರ ಭಾವಚಿತ್ರವನ್ನು ಪ್ರದರ್ಶಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು.

ಚಂದನ್‍ಶೆಟ್ಟಿ ಅವರ “ಪೊಗರು ಅಣ್ಣನಿಗೆ ಪೊಗರು”, “ಕರಾಬು ಬಾಸು ಕರಾಬು”, ಕೋಲು ಮಂಡೆ ಜಂಗುಮ ದೇವ” ಹಾಡುಗಳ ಲಯಕ್ಕೆ ತಕ್ಕಂತೆ ಹುಡುಗರು ಕುಣಿದು ಕುಪ್ಪಳಿಸಿದರು. 

ಇದಕ್ಕೂ ಮುನ್ನ ವೀಣಾವಿದ್ಯಾಮೂರ್ತಿ ಮತ್ತು ತಂಡದವರಿಂದ “ದೇವಿಶಕ್ತಿ” ಪ್ರದರ್ಶನ ನೆರೆದಿದ್ದವರನ್ನು ಭಕ್ತಿಭಾವ ಲೋಕಕ್ಕೆ ಕರೆದೊಯ್ಯಿತು. 

ಹಿರಿಯರನ್ನು ಗೌರವಿಸಿ-ರಚ್ಚು ಕಿವಿ ಮಾತು :

ನಂತರ ದಸರಾ ಉತ್ಸವಕ್ಕೆ ಆಗಮಿಸಿದ್ದ ಕನ್ನಡದ ಖ್ಯಾತ ನಟಿ ಡಿಂಪಲ್ ಕ್ವೀನ್ ರಚಿತಾರಾಮ್ ಅವರು ಡಿಸಿಎಂ ಪರಮೇಶ್ವರ್ ಹಾಗೂ ಕನ್ನಿಕಾಪರಮೇಶ್ವರಿ ದಂಪತಿಯನ್ನು ಕೈ ಹಿಡಿದು ವೇದಿಕೆಗೆ ಕರೆ ತಂದು ಮಾತನಾಡುತ್ತಾ, ಮೊದಲ ಬಾರಿ ತುಮಕೂರು ದಸರಾ ಉತ್ಸವಕ್ಕೆ ಬಂದಿದ್ದೇನೆ. ಇಲ್ಲಿನ ಸಂಭ್ರಮ ನೋಡಿ ನನಗೆ ಬಹಳ ಖುಷಿಯಾಗುತ್ತಿದೆ ಎಂದು ತಮ್ಮ ಸಂತಸವನ್ನು ಹಂಚಿಕೊಂಡರು. 

ದೇವಿಯು ತುಮಕೂರಿನ ಜನತೆಗೆ ಉತ್ತಮ ಆರೋಗ್ಯ, ನೆಮ್ಮದಿ ನೀಡಲಿ. ನಾವೆಲ್ಲಾ ಪರರಿಗೆ ಒಳಿತನ್ನೇ ಬಯಸೋಣ, ಹಿರಿಯರನ್ನು ಗೌರವಿಸೋಣ, ಹೆತ್ತವರನ್ನು ನೋಯಿಸದೆ ಚಾಮುಂಡೇಶ್ವರಿ ದೇವಿಯ ಕೃಪೆಗೆ ಪಾತ್ರರಾಗೋಣ ಎಂದು ತಿಳಿಸಿದ ಅವರು, ತಂದೆ-ತಾಯಿಯರು ಹೆಮ್ಮೆ ಪಡುವಂತೆ ಮಕ್ಕಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು. 

ಏಕ್ ಲವ್ ಯಾ ಚಲನಚಿತ್ರದ “ಮೀಟ್ ಮಾಡಾನ ಇಲ್ಲ ಡೇಟ್ ಮಾಡನಾ”, ರನ್ನ ಚಲನಚಿತ್ರದ “ತಿತಲಿ-ತಿತಲಿ” ಹಾಡಿಗೆ ಹೆಜ್ಜೆ ಹಾಕಿದ ರಚ್ಚು ಡ್ಯಾನ್ಸಿಗೆ ಅಭಿಮಾನಿಗಳೂ ಸಹ ನಿಂತಲ್ಲೇ ಕುಣಿದು ಸಂಭ್ರಮಿಸಿದರು. 

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಮತ್ತಿತರರು ಉಪಸ್ಥಿತರಿದ್ದರು. 

Leave a Reply

Your email address will not be published. Required fields are marked *