ಕುಡಿತ-ಸಾವಿನ ನಡುವೆಯೂ ಅಂತಃಕರಣ ಕಲಕುವ “ಶಬರಿ” ಸಿನಿಮಾ, ಚಂದ ನಟಿಸಿರುವ ನಾಯಕಿ ಕೃತಿಕಾಗೌಡ-ಬೇಬಿ ರಾಣಿ

‘ಶಬರಿ’ ಚಿತ್ರ ವಿಮರ್ಶೆ

ನನಗೆ ತುಂಬಾ ಬೇಕಾದವರೊಬ್ಬರು ಕಳೆದ ಎರಡೂವರೆ ವರ್ಷದಿಂದ ಕ್ಯಾನ್ಸರ್ ಕಾಯಿಲೆಯಿಂದ ಹೊರ ಬರಲು ಪ್ರಯತ್ನಿಸುತ್ತಿದ್ದಾರೆ, ಇವರು ಕ್ಯಾನ್ಸರ್ ಗೆ ತುತ್ತಾಗಿರುವುದರಿಂದ ಅವರು ಅನುಭವಿಸುವ ಸಂಕಟ, ನೋವು ಎಲ್ಲಾವನ್ನು ಹತ್ತಿರದಿಂದ ನಾನು ಕಣ್ಣಾರೆ ಕಂಡು ಹಲವಾರು ಸಲ ಜೋರಾಗಿ ಅತ್ತಿದ್ದೇನೆ.

ಅದೇನೋ ಗೊತ್ತಿಲ್ಲ ಇಂದು ಬಿಡುಗಡೆಯಾದ ‘ಶಬರಿ’ ಸಿನಿಮಾದಲ್ಲಿ ಇಬ್ಬರು ಕ್ಯಾನ್ಸರ್ ನಿಂದ ಸಾವನ್ನಪ್ಪುವುದನ್ನು ಕಂಡು ನನ್ನ ಕಣ್ಣಾಲಿಗಳು ಒದ್ದೆಯಾದವು.

ಶಬರಿ ಸಿನಿಮಾವು ಒಂದು ಜೀಪಿನ ಕಥೆಯೊಂದಿಗೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ, ಮಗನಿಗೆ ಜೀಪೆಂದರೆ ತುಂಬಾ ಪ್ರೀತಿ, ಮೊಸಣೆ ತುಪ್ಪದಿಂದ ಉಳುಕು ತೆಗೆಯುವ ಮೊಸಳೆ ಮಹದೇವನ ಮಗ ರಾಮನಿಗೆ ಜೀಪೆಂದರೆ ಪಂಚ ಪ್ರಾಣ, ಆದರೆ ಆತನ ಬಡತನದಿಂದ ಪ್ಲಾಸ್ಟಿಕ್ ಜೀಪನ್ನು ಸಹ ಕೊಡಿಸಲಾಗಿರುವುದಿಲ್ಲ, ಆತನ ಮಗ ರಾಮು ಪಕ್ಕದ ಮನೆಯ ಗೆಳೆಯನ ಜೀಪು ಕಿತ್ತುಕೊಂಡು ಬಂದು ಆಟವಾಡುತ್ತಿರುತ್ತಾನೆ, ಮನೆಯ ಗೋಡೆ ಮೇಲೆಲ್ಲಾ ಜೀಪಿನ ಚಿತ್ತಾರಗಳನ್ನು ಬಿಡಿಸಿರುತ್ತಾನೆ.

ಒಮ್ಮೆ ಊರ ಗೌಡನಿಗೆ ಕಾಲು ಉಳುಕಿದಾಗ ಮೊಸಳೆ ತುಪ್ಪ ಸವರಿ ವಾಸಿ ಮಾಡಿದಾಗ ಸಾಹುಕಾರ ತಮ್ಮ ಹಳೆಯ ಜೀಪನ್ನು ಮೊಸಳೆ ಮಹದೇವನಿಗೆ ಕೊಡುಗೆ ನೀಡುತ್ತಾನೆ, ಈ ಜೀಪಿನ ಮೇಲೆ ಆ ಊರಿನ ಇನ್ನೊಬ್ಬ ಗೌಡನ ಕಣ್ಣು ಬೀಳುತ್ತದೆ, ಆತ ದುಡ್ಡು ಎಷ್ಟಾದರು ಸರಿ ಜೀಪು ಕೊಡುವಂತೆ ಕೇಳಿದಾಗ, ಅದು ಮಗನಿಗಾಗಿ ಎಂದು ಹೇಳಿ ಬರುವಾಗಲೇ ಹೊಗೆ ಸೊಪ್ಪು ಹಾಕುತ್ತಿದ್ದ ಮೊಸಳೆ ಮಹದೇವ ಕ್ಯಾನ್ಸರ್ ಗೆ ತುತ್ತಾಗುತ್ತಾನೆ, ಗಂಡನ ಕ್ಯಾನ್ಸ ರ್ ಆಸ್ಪತ್ರೆ ಖರ್ಚಿಗೆ ಅರ್ಜುನ ಎಂದು ಹೆಸರಿಟ್ಟಿದ್ದ ಜೀಪನ್ನು ಊರ ಗೌಡನಿಗೆ ರಾಮುವಿನ ತಾಯಿ ಮಾರುತ್ತಾಳೆ. ಗಂಡ ಕ್ಯಾನ್ಸ ರ್ ನಿಂದ ಸಾಯುತ್ತಾನೆ, ಬಟ್ಟೆ ಒಗೆಯಲು ಹೋಗಿದ್ದಾಗ ರಾಮುವಿನ ತಾಯಿಯೂ ನೀರಿಗೆ ಬಿದ್ದು ಸಾಯುತ್ತಾಳೆ. ಆಗ ರಾಮು ತಬ್ಬಲಿಯಾದರೂ ತಾಯಿ ಮಾರಿದ್ದ ಜೀಪಿನ ಮೇಲೆಯೇ ಧ್ಯಾನ.

ರಾಮುಗೆ ಅರ್ಜುನ ಎಂಬ ಜೀಪಿನ ಮೇಲೆಯೇ ಸದಾ ಧ್ಯಾನ ಇರುವುದರಿಂದ ರಾಮುವಿನ ಕುಡುಕ ಗೆಳೆಯರು ಊರ ಗೌಡರ ಮಗಳನ್ನೇ ಪ್ರೀತಿಯ ಬಲೆಗೆ ಬೀಳಿಸಿಕೊಳ್ಳುವಂತಹ ಉಪಾಯ ಹೇಳಿಕೊಡುತ್ತಾರೆ, ಗೌಡರ ಮಗಳು ಸೀತಾ ಚಿಕ್ಕವಳಿದ್ದಾಗ ಮೂರ್ಚೆ ರೋಗ ಬಂದು ಬಿದ್ದಾಗ ರಾಮು ಕೈಗೆ ಕಬ್ಬಿಣ ಕೊಟ್ಟು ಬದುಕಿಸುತ್ತಾನೆ, ಇದೇ ಸೀತಾಳ ಮನಸ್ಸಿನಲ್ಲಿ ಉಳಿದಿದ್ದರಿಂದ ಅವಳೂ ರಾಮುವನ್ನು ಪ್ರೀತಿಸಿ ಮದುವೆಯಾಗುತ್ತಾಳೆ, ರಾಮು ಮದುವೆಯಾಗುವ ಸಂದರ್ಭದಲ್ಲಿ ನನಗೆ ಅರ್ಜುನ ಜೀಪನ್ನು ಕೊಡುಗೆಯಾಗಿ ನೀಡಿದರೆ ಸೀತಾಳನ್ನು ಮದುವೆಯಾಗುವುದಾಗಿ ಷರತ್ತು ಹಾಕುತ್ತಾನೆ, ಆಗ ಮದುವೆಯ ನಂತರ ಜೀಪನ್ನು ನೀಡುವುದಾಗಿ ಹುಡುಗಿಯ ತಂದೆ ಹೇಳುತ್ತಾನೆ.

ಮದುವೆಯಾದ ಮೇಲೆ ನಾಯಕ ನಟಿ ಸೀತಾ ತನ್ನ ಗಂಡ ರಾಮುವಿಗೆ ಮದುವೆಗೆ ಹಣ ಕಡಿಮೆಯಾಗಿದ್ದರಿಂದ ಜೀಪನ್ನು ಅಡವಿಡಲಾಗಿದೆ ಎಂದು ಸುಳ್ಳು ಹೇಳುತ್ತಾಳೆ, ಗಂಡ ರಾಮು ನಾನು ಮದುವೆಯಾಗಿದ್ದೇ ಆ ಜೀಪಿಗಾಗ ಎಂದು ಸೋಬ್ನವನ್ನು ಮಾಡಿಕೊಳ್ಳದೆ ಹೆಂಡಿತಿಯನ್ನು ಜೀಪಿಗಾಗಿ ಗೋಳು ಹೊಯ್ದುಕೊಳ್ಳುತ್ತಾನೆ, ಈ ಮಧ್ಯೆ ನಾಯಕಿ ನಟಿ ಸೀತಾಳು ಅಡಿಗೆ ಮಾಡುವಾಗ ಸೀರೆಗೆ ಬೆಂಕಿ ಹತ್ತಿಕೊಳ್ಳುತ್ತದೆ, ಇದರಿಂದ ಗಾಬರಿಯಿಂದ ಹೆದರಿ ಮೂರ್ಚೆ ರೋಗ ಬಂದು ಸುಟ್ಟು ಸಾವನ್ನಪ್ಪುತ್ತಾಳೆ.

ತದ ನಾಯಕನಿಗೆ ತಿಳಿಯುತ್ತದೆ ಸೀತಾ ನಾಯಕನ ಹುಟ್ಟು ಹಬ್ಬಕ್ಕೆ ಕೊಡುಗೆ ನೀಡಲು ಜೀಪನ್ನು ಸೀಗರಿಸಿ ನಿಲ್ಲಿಸಿದ್ದಾಳೆಂದು, ಇದರಿಂದ ಮನ ನೊಂದ ನಾಯಕ ಮನೆಯನ್ನು ಅಡವಿಟ್ಟು ಜೀಪಿನೊಂದಿಗೆ ಅಲೆಮಾರಿಯಂತೆ ಹೊರಟು ಬಿಡುತ್ತಾನೆ, ಹೀಗೆ ಹೋಗುವಾಗ ಮಾರ್ಗ ಮಧ್ಯೆ ಹಣಕ್ಕಾಗಿ ಕಿಡ್ನಾಫ್ ಆಗಿದ್ದ ಬಾಲಕಿ ಶಬರಿ ಅಕಷ್ಮಿಕವಾಗಿ ರಾಮುವಿನ ಜೀಪಿಗೆ ಬಂದು ಬಚಾವಾಗುತ್ತಾಳೆ. ಇಲ್ಲಿಂದ ರಾಮುವಿಗೂ-ಶಬರಿಗೂ ತಂದೆ, ಮಗಳಂತಹ ಗಾಢವಾದ ಪ್ರೀತಿ ಬೆಳೆದು ಮಗು ಶಬರಿ ಮತ್ತು ರಾಮುವಿನ ನಡುವೆ ಬಿಟ್ಟಿರಲಾರದ ಭಾಂದವ್ಯ ಬೆಳೆಯುತ್ತದೆ, ಕೊನೆಗೆ ಶಬರಿಗೆ ಕ್ಯಾನ್ಸರ್ ಎಂದು ತಿಳಿದಾಗ ಆ ಮಗುವಿನ ತಂದೆಯಲ್ಲದಿದ್ದರೂ ಶಬರಿಯನ್ನು ರಾಮು ಉಳಿಸಿಕೊಳ್ಳಲು ತಮ್ಮ ಪ್ರೀತಿಯ ಜೀಪನ್ನು (Jeep No-CTG-6210) ಮಾರುವಾಗ ನಾನು ಸಾಯುವಾಗ ನಿನ್ನ ಮಡಿಲಲ್ಲೇ ಸಾಯೋದು ಎಂದು ದುಃಖಿಸುತ್ತಾನೆ.

ಜೀಪು ಮಾರಿ ಬರುವಾಗ ಈತನೇ ಶಬರಿಯನ್ನು ಕಿಡ್ನಾಪ್ ಮಾಡಿದ್ದಾನೆಂದು ಪೊಲೀಸರು ಹಿಡಿದು ಲಾಕಪ್ಪಿಗೆ ಹಾಕಿ ಚಚ್ಚುತಾರೆ, ಈತ ನಿರಪರಾಧಿ ಎಂದು ಹೊರಬರುವ ವೇಳೆಗೆ ಶಬರಿಯ ತಂದೆ-ತಾಯಿ ಶಬರಿಯನ್ನು ಆಸ್ಪತ್ರೆಯಿಂದ ಕರೆ ತಂದಿದ್ದು, ಶಬರಿ ಸಾವನ್ನಪ್ಪಿರುವುದನ್ನು ಕಂಡು ತುಂಬಾ ದುಃಖಿತನಾಗಿ ಶಬರಿ ಹೂತ ಸ್ಮಶಾನಕ್ಕೆ ಹೋಗಿ ಸಮಾಧಿ ಮೇಲೆ ಬಿದ್ದು ಹೊರಳಾಡಿ ಅಳುತ್ತಾ ರಸ್ತೆಗೆ ಬಂದಗ ಕಾರೊಂದು ರಾಮುವಿಗೆ ಡಿಕ್ಕಿ ಹೊಡೆದು ಅಲ್ಲೇ ನಿಂತಿದ್ದ ಆತನ ಪ್ರೀತಿಯ ಜೀಪು ಅರ್ಜುನನ ಬಂಪರ್ ಮೇಲೆ ಬಿದ್ದು ಪ್ರಾಣ ಬಿಡುತ್ತಾನೆ.

ಈ ಸಿನಿಮಾದಲ್ಲಿ ಸೀತಾಳ ಪಾತ್ರ ಮಾಡಿರುವ ಕೃತಿಕಾಗೌಡ ಕೇವಲ ಒಂದು ಗಂಟೆಯ ಸನ್ನಿವೇಶದಲ್ಲಿ ಸೊಗಸಾಗಿ ನಟಿಸಿದ್ದು, ಪಾತ್ರಕ್ಕೆ ಜೀವ ತುಂಬಿ ಮೊದಲ ಸಿನಿಮಾವಾಗಿದ್ದರೂ ಪ್ರಬುದ್ಧ ನಟಿಯಂತೆ ನಟಿಸಿರುವುದರಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಚಿತ್ರ ಮಂದಿರ ಹೊರ ಬಂದಾಗಲೂ ಸೀತೆಗೆ ಬಾಳು ಸಿಗಲಿಲ್ಲ, ಆಕೆ ಬೆಂಕಿಗೆ ಆಹುತಿಯಾಗಿದ್ದು ಕಾಡುವುದಲ್ಲದೆ, ರಾಮುವಿನಿಂದ ಜೀಪಿನ ಕೀ ವಾಪಸ್ಸು ಪಡೆಯುವಾಗ, ರಾಮುವಿನ ಗೆಳೆಯರಿಗೆ ಚೋಕ್ ಕೊಡುವ ದೃಶ್ಯ ಮತ್ತು ತನ್ನ ತಂದೆ-ತಾಯಿಯರು ತಾನು ಪ್ರೀತಿಸಿದ ಹುಡುನಿಗೆ ಮದುವೆ ಮಾಡಿ ಕೊಡಲು ಒಪ್ಪಿದಾಗ ಕುಣಿಯುವ ದೃಶ್ಯ, ಬೆಂಕಿಯಲ್ಲಿ ಬೆಂದು ಶವವಾಗಿ ಮಲಗಿರುವ ದೃಶ್ಯಗಳು ಸಿನಿಮಾದ ನಂತರವೂ ಕಾಡಿ, ನಿರ್ದೇಶಕರು ಒಂದು ಜೀಪಿಗಾಗಿ ಪ್ರೀತಿಸಿದ ಹುಡುಗಿಯನ್ನು ಸಾಯಿಸಿರುವುದು ಸರಿಯಲ್ಲ ಎನ್ನಿಸುತ್ತದೆ.

ಇನ್ನ ಶಬರಿ ಪಾತ್ರದಾರ ಬೇಬಿ ರಾಣಿ ಈ ಸಿನಿಮಾದ ನಿಜವಾದ ನಾಯಕಿಯಾಗಿದ್ದು ಶಬರಿ ಪಾತ್ರಕ್ಕೆ ಜೀವ ತುಂಬಿದ್ದಾರೆ, ಅವಳ ನಟನೆ ಪ್ರೇಕ್ಷಕರ ಮನಸ್ಸಿಗೆ ನಾಟುತ್ತದೆ, ರಾಮು, ಮತ್ತು ಶಬರಿಗೆ ಭಾಷೆಯ ತೊಡಕು ನವಿರಾದ ನಗುವನ್ನು ತರಿಸುತ್ತದೆ, ಆದರೆ ತಂದೆ-ಮಗಳು ಅಲ್ಲದಿದ್ದರೂ ರಾಮು ಆಗಾಗ ಶಬರಿಯನ್ನು ಬಿಟ್ಟು ಹೋಗಲು ಪ್ರಯತ್ನಿಸಿದರೂ ಮತ್ತೆ ಮತ್ತೇ ರಾಮುವಿಗೆ ಸಿಗುತ್ತಿದ್ದರಿಂದ ಅವರಿಬ್ಬರಲ್ಲಿ ಅಗಾಧವಾದ ತಂದೆ-ಮಗಳಂತಹ ಪ್ರೀತಿ ಹುಟ್ಟಿರುತ್ತದೆ ಆ ವೇಳೆಗೆ ಶಬರಿಗೆ ಕ್ಯಾನ್ಸರ್ ಬಂದು ಸಾವನ್ನಪ್ಪುವುದು ಮನ ಕಲಕುತ್ತದೆ, ಸಿನಿಮಾ ಮುಗಿದು ಬಂದು ಹೊರ ಬಂದಾಗ ಇಬ್ಬರು ಮಹಿಳೆಯರು ದುಃಖಿಸುತ್ತಾ ಶಬರಿಯನ್ನು ಕ್ಯಾನ್ಸರ್ ನಿಂದ ಬದುಕಿಸಬೇಕೆಂದು ಮಾತನಾಡುತ್ತಿದ್ದರು.

ನಾಯಕ ನಟ ರಮೇಶ್ ಸಮರ್ಥ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಟಿಸಿದ್ದು, ಫೈಟಿಂಗ್ ಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ, ಇನ್ನುಳಿದಂತೆ ಮಂಡ್ಯ ಭಾಷೆ ನವಿರಾಗಿ ಇಷ್ಟವಾದರೆ, ಸನಿಮಾದಲ್ಲಿ ಮಂಡ್ಯ ಜಿಲ್ಲೆಯ ಸಾಮಾಜಿಕ ಜಾಲ ತಾಣಗಳಲ್ಲಿ ರೀಲ್ಸ್ ಮಾಡುವವರನ್ನೇ ಹಾಕಿಕೊಂಡು ಸಿನಿಮಾ ಮಾಡಲಾಗಿದೆ.

ಸಿನಿಮಾದಲ್ಲಿ ಕುಡಿತವನ್ನು ಹೆಚ್ಚು ವಿಜೃಂಭಿಸಿದ್ದು, ನಾಯಕನ ತಂದೆ-ತಾಯಿ, ನಾಯಕಿ, ನಾಯಕ ಮತ್ತು ಶಬರಿಯನ್ನೂ ನಿರ್ದೇಶಕ ಸಾಯಿಸಿದ್ದು ಅಷ್ಟಾಗಿ ಇಷ್ಟವಾಗುವುದಿಲ್ಲ, ಇವರೆಲ್ಲಾ ಪ್ರೀತಿಗೋಸ್ಕರ ಒಬ್ಬರನೊಬ್ಬರು ತಬ್ಬಿಕೊಂಡಿದ್ದು, ಆ ಪ್ರೀತಿಯನ್ನು ಇವರನ್ನೆಲ್ಲಾ ಸಾಯಿಸುವ ಮೂಲಕ ಪ್ರೀತಿಯನ್ನೂ ಸಾಯಿಸಿದ್ದಾರೆ ನಿರ್ದೇಶಕ ಒರಟ ಶ್ರೀ, ಅದೇಕೆ ಒರಟ ಶ್ರೀಗೆ ಪ್ರೀತಿಯ ಮೇಲೆ ಅಷ್ಟೊಂದು ಸಿಟ್ಟು ಗೊತ್ತಾಗಲಿಲ್ಲ. ಸಂಗೀತ ನಿರ್ದೇಶಕ ಹೇಮಂತಕುಮಾರ್ ಅವರ ಎರಡು ಹಾಡುಗಳು ಕೇಳುವಂತಿವೆ, ಮೆಲುಕು ಹಾಕುವಂತಿಲ್ಲ. ಒಟ್ಟಿನಲ್ಲಿ ತಂದೆ-ತಾಯಂದಿರು ಮಕ್ಕಳ ಆಸೆ ಪೂರೈಯಸಲು ಎಷ್ಟೆಲ್ಲಾ ಕಷ್ಟ ಪಡುತ್ತಾರೆ, ಮಕ್ಕಳು ಚಿಕ್ಕವರಲ್ಲಿ ಇಷ್ಟಪಟ್ಟಿದ್ದನ್ನು ಸಾಯುವ ತನಕ ಅದನ್ನು ಕಾಪಾಡಿಕೊಳ್ಳಲು ಎಷ್ಟೊಂದು ಕಷ್ಟ, ದುಃಖ, ದುಮ್ಮಾನ ಪಡಬೇಕಾಗುತ್ತದೆ ಎಂಬುದನ್ನು ನವಿರಾಗಿ ಹಾಸ್ಯವಾಗಿ ಮತ್ತು ಲವಲವಿಕೆಯಿಂದ ತೋರಿಸಿದ್ದು, ಸಿನಿಮಾದ ಸ್ಕ್ರೀನ್ ಫ್ಲೇ ಚೆನ್ನಾಗಿ ಮೂಡಿ ಬಂದಿದ್ದು, ಸಂಸಾರ ಸಮೇತವಾಗಿ ಚಿತ್ರ ಮಂದಿರಕ್ಕೆ ಹೋಗಿ ನೋಡಬುದಾದ ಸಿನಿಮಾ ಶಬರಿಯಾಗಿದ್ದು, ಸೀತಾಳ ಪಾತ್ರದಾರಿ ಕೃತಿಕಾಗೌಡ, ಶಬರಿ ಪಾತ್ರದಾರಿ ರಾಣಿ ಸಿನಿಮಾದ ಆಚೆಗೂ ಪ್ರೇಕ್ಷಕನ ಮನಸ್ಸಿನಲ್ಲಿ ಅವರ ನಟನೆಯಿಂದ ಉಳಿಯಲಿದ್ದಾರೆ.

ಬೈರವಿ ನಿರ್ಮಾಣದ ಈ ಸಿನಿಮಾವನ್ನು ಒರಟ ಶ್ರೀ ನಿರ್ದೇಶಿಸದ್ದು, ಹೀರೋ: ಸಮರ್ಥ್ ರಮೇಶ್ (ಇದೇ ಮೊದಲ ಸಿನಿಮಾ, ಇವರ ತಂದೆಯೇ ನಿರ್ಮಾಪಕರು)ಹೀರೋಯಿನ್: ಕೃತಿಕಾ ಗೌಡ, ಜೊತೆಗೆ ಬಾಲ ಕಲಾವಿದೆ ಧನ್ವಿ, ಎಂ.ಕೆ. ಮಠ, ನೀನಾಸಂ ಅಶ್ವತ್, ಯೋಗೇಶ್ ವೀರ್ ಇದ್ದಾರೆ.
-ವೆಂಕಟಾಚಲ.ಹೆಚ್.ವಿ.
ತುಮಕೂರು.
ಮೊ.ನಂ. 9141431674

Leave a Reply

Your email address will not be published. Required fields are marked *