ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ : ಜಿಲ್ಲೆಯಲ್ಲಿ ಶೇ.71.56 ಮತದಾನ

ತುಮಕೂರು : ಜಿಲ್ಲೆಯಲ್ಲಿ ಇಂದು ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ ಶೇ.71.56ರಷ್ಟು ಮತದಾನವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಶೇ. 71.56 ಮತದಾನ : –

 ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಯಲ್ಲಿ 21226 ಪುರುಷ ಹಾಗೂ 14599 ಮಹಿಳಾ ಮತದಾರರು ಸೇರಿ ಒಟ್ಟು 35825 ಮತದಾರರು ಮತ ಚಲಾಯಿಸಿದ್ದು, ಜಿಲ್ಲೆಯಲ್ಲಿ ಶೇ.71.56ರಷ್ಟು ಮತದಾನವಾಗಿದೆ.

 ಪಾವಗಡ ತಾಲ್ಲೂಕಿನಲ್ಲಿ 3460 (2367 ಪುರುಷ, 1093 ಮಹಿಳೆಯರು), ಮಧುಗಿರಿ ತಾಲ್ಲೂಕು- 3129 (1994 ಪುರುಷ, 1135 ಮಹಿಳೆ), ಶಿರಾ ತಾಲ್ಲೂಕು-3971 (2405 ಪುರುಷ, 1566 ಮಹಿಳೆ), ಚಿಕ್ಕನಾಯಕನಹಳ್ಳಿ ತಾಲ್ಲೂಕು-2297 (1370 ಪುರುಷ, 927 ಮಹಿಳೆ), ತಿಪಟೂರು ತಾಲ್ಲೂಕು-3065 (1754 ಪುರುಷ, 1311 ಮಹಿಳೆ), ತುರುವೇಕೆರೆ ತಾಲ್ಲೂಕು-2063 (1190 ಪುರುಷ, 873 ಮಹಿಳೆ), ಕುಣಿಗಲ್ ತಾಲ್ಲೂಕು-2017 (1156 ಪುರುಷ, 861 ಮಹಿಳೆ), ಗುಬ್ಬಿ ತಾಲ್ಲೂಕು-3029 (1762 ಪುರುಷ, 1267 ಮಹಿಳೆ), ತುಮಕೂರು ನಗರ-7075 (3851 ಪುರುಷ, 3224 ಮಹಿಳೆ), ತುಮಕೂರು ಗ್ರಾಮಾಂತರ-3568 (2058 ಪುರುಷ, 1510 ಮಹಿಳೆ) ಹಾಗೂ  ಕೊರಟಗೆರೆ-2151 (1319 ಪುರುಷ, 832 ಮಹಿಳೆ) ಮತದಾರರು ಮತ ಚಲಾಯಿಸಿದ್ದಾರೆ. 

 ಭಾರತ ಚುನಾವಣಾ ಆಯೋಗವು ಘೋಷಿಸಿದ್ದ ವೇಳಾಪಟ್ಟಿಯಂತೆ ಜಿಲ್ಲೆಯ 80 ಮತಗಟ್ಟೆಗಳಲ್ಲಿ ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತದಾನದಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಚ್ಚಲಾಯಿತು. 

ಅಭ್ಯರ್ಥಿಗಳ ವಿವರ :-

 ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ಶಶಿ ಹುಲಿಕುಂಟೆಮಠ್, ಭಾರತೀಯ ಜನತಾ ಪಾರ್ಟಿಯಿಂದ ಕೆ.ಎಂ. ಸುರೇಶ(ಸೋಮೇಶ್ವರ), ಸರ್ವ ಜನತಾ ಪಾರ್ಟಿಯಿಂದ ಜಿ.ಸಿ. ಪಟೇಲ್, ಪಕ್ಷೇತರರಾಗಿ ಕಪನಿಗೌಡ, ಚಿಕ್ಕರಾಜು ಎಸ್. ಯಾದವ್, ಲಕ್ಷ್ಮಯ್ಯ ಆರ್.(ಆರ್.ಎಲ್.), ಲಕ್ಷ್ಮೀಕಾಂತ ಎಸ್. ಯಾದವ್, ಶಶಿ ಹುಲೀಕಟ್ಟಿ, ಸೈಯದ್ ಅಫಾಖ್ ಅಹಮದ್, ಅಡ್ವೊಕೇಟ್ ಬರೀದ್ ಸೇರಿದಂತೆ 10 ಮಂದಿ ಚುನಾವಣಾ ಕಣದಲ್ಲಿದ್ದರು. 

 ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸುವ ಉದ್ದೇಶದಿಂದ ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ವೆಬ್‍ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಮತದಾನಕ್ಕಾಗಿ ಜಿಲ್ಲೆಯಲ್ಲಿ 57 ಮುಖ್ಯ, 23 ಆಕ್ಸಿಲರಿ ಸೇರಿದಂತೆ ಒಟ್ಟು 80 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಪ್ರತೀ ಮತಗಟ್ಟೆಗೆ ತಲಾ ಒಂದು ಪಿ.ಆರ್.ಓ., ಒಂದು ಎಪಿಆರ್‍ಓ, ಇಬ್ಬರು ಪಿಓ, ತಲಾ ಒಬ್ಬರು ಮೈಕ್ರೋ ಅಬ್ಸರ್‍ವರ್ ಸೇರಿದಂತೆ 400 ಸಿಬ್ಬಂದಿ ಹಾಗೂ ಅಗತ್ಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅಲ್ಲದೆ, ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಎಫ್‍ಎಸ್‍ಟಿ ಮತ್ತು ಸೆಕ್ಟರ್ ಅಧಿಕಾರಿಗಳ ತಂಡವನ್ನು ನೇಮಿಸಲಾಗಿತ್ತು.

 ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 28,720 ಪುರುಷ ಹಾಗೂ 21,340 ಮಹಿಳಾ ಮತದಾರರು ಸೇರಿ ಒಟ್ಟು 50,060 ಅರ್ಹ ಮತದಾರರಿದ್ದರು. 

 ಚುನಾವಣೆಯ ಮತ ಎಣಿಕೆಯು ಅಕ್ಟೋಬರ್ 27ರಂದು ಬೆಂಗಳೂರಿನ ಡಾ: ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. 

Leave a Reply

Your email address will not be published. Required fields are marked *