ತುಮಕೂರು: ಹಲವು ದಶಕಗಳಿಂದ ತುಮಕೂರು ಪ್ರಮುಖ ವ್ಯಾಪಾರ ಕೇಂದ್ರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ವರ್ತಕರು ನಗರದ ಬೆಳವಣಿಗೆ ಹಾಗೂ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ತಾವು ಚಿಕ್ಕವರಿದ್ದಾಗ ಮಂಡಿಪೇಟೆಯಲ್ಲಿ ನಡೆಯುತ್ತಿದ್ದ ವ್ಯಾಪಾರ ಚಟುವಟಿಕೆಗಳು ಹಾಗೂ ಅಲ್ಲಿನ ವರ್ತಕರು ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ತುಮಕೂರಿನ ಬೆಳವಣಿಗೆಗೆ ಹೇಗೆ ಪೂರಕವಾಗಿದ್ದವು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅಭಿನಂದಿಸಿದರು.
ಭಾನುವಾರ ನಗರದ ಆರ್.ಟಿ.ಸಿ. ಕನ್ವೆನ್ಸನ್ ಹಾಲ್ನಲ್ಲಿ ನಡೆದ ಧಾನ್ಯ ವ್ಯಾಪಾರಿಗಳ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಡಾ.ಜಿ. ಪರಮೇಶ್ವರ್, ‘ಸಿರಿಧಾನ್ಯ ಸಂಪದ’ ಶತಮಾನೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿದರು. ಒಂದು ಸಂಸ್ಥೆ ಶತಮಾನ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿ ಸಮಾಜಮುಖಿ ಚಟುವಟಿಕೆಗಳ ಮೂಲಕ ಜನರ ವಿಶ್ವಾಸ ಗಳಿಸುವುದು ಸಾಮಾನ್ಯ ಸಂಗತಿಯಲ್ಲ. 1926ರಲ್ಲಿ ಪ್ರಾರಂಭವಾದ ಧಾನ್ಯ ವ್ಯಾಪಾರಿಗಳ ಸಂಘವು ನೂರು ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಬರಗಾಲದಲ್ಲಿ ಅನ್ನದಾನ:
1965-66ರ ಅವಧಿಯಲ್ಲಿ ದೇಶ ತೀವ್ರ ಬರಗಾಲವನ್ನು ಎದುರಿಸಿದಾಗ ಧಾನ್ಯ ವ್ಯಾಪಾರಿಗಳ ಸಂಘವು ಬಡವರಿಗೆ ನೆರವಾಗಲು ಮುಂದಾಗಿತ್ತು. ಆಹಾರ ಧಾನ್ಯಗಳನ್ನು ಸಂಗ್ರಹಿಸಿ, ಅವುಗಳನ್ನು ಬಡವರಿಗೆ ವಿತರಿಸುವುದು ಹಾಗೂ ಅನ್ನದಾನದ ಮೂಲಕ ಹಸಿದವರಿಗೆ ನೆರವಾಗುವಂತಹ ಮಾನವೀಯ ಕಾರ್ಯಗಳನ್ನು ಸಂಘ ಕೈಗೊಂಡಿತ್ತು. ಸಂಕಷ್ಟದ ಸಂದರ್ಭಗಳಲ್ಲಿ ಸಮಾಜದ ನೆರವಿಗೆ ಧಾವಿಸುವ ಸಂಘದ ಈ ಸೇವೆ ಶ್ಲಾಘನೀಯವಾಗಿದೆ. ಸಿದ್ಧಗಂಗಾ ಮಠದ ಪೂಜ್ಯ ಶ್ರೀಗಳು ಇಂಜಿನಿಯರಿಂಗ್ ಕಾಲೇಜು ಪ್ರಾರಂಭಿಸುವ ಸಂದರ್ಭದಲ್ಲಿ ಧಾನ್ಯ ವ್ಯಾಪಾರಿಗಳ ಸಂಘವು ಮಹತ್ವದ ಸಹಕಾರ ನೀಡಿತ್ತು. ವ್ಯಾಪಾರದಿಂದ ನಾಲ್ಕಾಣೆಯಂತೆ ಹಣ ಸಂಗ್ರಹಿಸಿ, ಅಂದಿನ ಕಾಲದಲ್ಲಿ ಸುಮಾರು ಎರಡು ಲಕ್ಷ ರೂಪಾಯಿಗಳನ್ನು ನೀಡುವ ಮೂಲಕ ಇಂಜಿನಿಯರಿಂಗ್ ಕಾಲೇಜಿನ ಸ್ಥಾಪನೆಗೆ ನೆರವಾಗಿತ್ತು. ಅಂದಿನ ಎರಡು ಲಕ್ಷ ರೂಪಾಯಿಗಳ ಕೊಡುಗೆ ಇಂದಿನ ಮೌಲ್ಯದಲ್ಲಿ ಬಹಳ ದೊಡ್ಡ ಮೊತ್ತಕ್ಕೆ ಸಮಾನವಾಗಿದೆ ಎಂದು ಉಲ್ಲೇಖಿಸಿದರು.
ರೈತರು ಮತ್ತು ವರ್ತಕರ ಹಿತ ಕಾಪಾಡುವಲ್ಲಿ ಎಪಿಎಂಸಿಗಳ ಪಾತ್ರ:
ಕೃಷಿ ಉತ್ಪನ್ನಗಳ ಮಾರಾಟದಲ್ಲಿ ರೈತರಿಗೆ ನ್ಯಾಯಯುತ ಬೆಲೆ ದೊರೆಯಬೇಕು ಹಾಗೂ ವ್ಯಾಪಾರಿಗಳಿಗೂ ನ್ಯಾಯಯುತ ವ್ಯಾಪಾರಕ್ಕೆ ಅವಕಾಶ ಇರಬೇಕು ಎಂಬ ಉದ್ದೇಶದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ವ್ಯವಸ್ಥೆಯನ್ನು ರೂಪಿಸಲಾಯಿತು. ರೈತರು ಬೆಳೆದ ಧಾನ್ಯ ಮತ್ತು ಇತರ ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡುವಾಗ ಅವರ ಹಿತಾಸಕ್ತಿಗಳನ್ನು ರಕ್ಷಿಸುವುದರ ಜೊತೆಗೆ ವ್ಯಾಪಾರಿಗಳ ಹಿತವನ್ನೂ ಸಮತೋಲನಗೊಳಿಸುವುದು ಈ ವ್ಯವಸ್ಥೆಯ ಉದ್ದೇಶವಾಗಿದೆ. ರಾಜ್ಯದಲ್ಲಿ ಹಲವು ಎಪಿಎಂಸಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಮಾರುಕಟ್ಟೆಗಳು ಲಾಭದಲ್ಲಿದ್ದರೆ ಎಂದು ಡಾ. ಪರಮೇಶ್ವರ್ ತಿಳಿಸಿದರು.
ತಾವು ಚಿಕ್ಕವರಿದ್ದಾಗ ತಂದೆಯವರು ಸಿದ್ದಗಂಗಾ ಮಠಕ್ಕೆ ಕರೆದುಕೊಂಡು ಹೋಗಿ ಶಿವಕುಮಾರ ಸ್ವಾಮೀಜಿಗಳವರ ಆಶೀರ್ವಾದ ಪಡೆಯುವಂತೆ ಮಾಡಿದ್ದರು. ಅಂದು ಪಡೆದ ಶ್ರೀಗಳ ಆಶೀರ್ವಾದವು ನನ್ನ ಜೀವನದ ಬೆಳವಣಿಗೆಗೆ ಪ್ರೇರಣೆಯಾಗಿದೆ. ಪೂಜ್ಯರ ಆಶೀರ್ವಾದದಿಂದಲೇ ಇಂದು ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಜನರ ಮುಂದೆ ನಿಲ್ಲಲು ಸಾಧ್ಯವಾಗಿದೆ ಎಂದು ಹೇಳಿದರು.
ಅಧಿಕಾರ ಶಾಶ್ವತವಲ್ಲ. ಅಧಿಕಾರದಲ್ಲಿರುವ ಸಂದರ್ಭದಲ್ಲಿ ಜನರಿಗೆ ಮತ್ತು ನಾಡಿಗೆ ಸಾಧ್ಯವಾದಷ್ಟು ಉತ್ತಮ ಕೆಲಸಗಳನ್ನು ಮಾಡಬೇಕು. ತುಮಕೂರನ್ನು ರಾಜ್ಯದ ಪ್ರತಿಷ್ಠಿತ ಜಿಲ್ಲೆಗಳಲ್ಲಿ ಒಂದಾಗಿ ಬೆಳೆಸಬೇಕು ಎಂಬುದು ತಮ್ಮ ಆಶಯವಾಗಿದೆ. ತುಮಕೂರಿನಲ್ಲಿ ಶಿಕ್ಷಣ ಸಂಸ್ಥೆಗಳ ಬೆಳವಣಿಗೆಗೂ ತಮ್ಮಿಂದಾದ ಕೊಡುಗೆ ನೀಡಲು ಪ್ರಯತ್ನಿಸಿರುವುದಾಗಿ ತಿಳಿಸಿದ ಅವರು, ತಾವು ಉನ್ನತ ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಶ್ರೀದೇವಿ ಇಂಜಿನಿಯರಿಂಗ್ ಕಾಲೇಜು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿರುವುದನ್ನು ಡಿಸಿಎಂ ಜಿ.ಪರಮೇಶ್ವರ ಅವರು ಸ್ಮರಿಸಿದರು.
ಕೈಗಾರಿಕಾ ಅಭಿವೃದ್ಧಿಯ ಮಹತ್ವಾಕಾಂಕ್ಷೆ:
ತುಮಕೂರನ್ನು ಪ್ರಮುಖ ಕೈಗಾರಿಕಾ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಸುಮಾರು 20,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಹಬ್ ಅಭಿವೃದ್ಧಿಪಡಿಸುವ ಯೋಜನೆ ರೂಪಿಸಲಾಗಿದೆ. ಇದು ಏμÁ್ಯದ ಪ್ರಮುಖ ಕೈಗಾರಿಕಾ ಕೇಂದ್ರಗಳಲ್ಲಿ ಒಂದಾಗುವ ಸಾಮಥ್ರ್ಯ ಹೊಂದಿದೆ. ಈ ಯೋಜನೆಯಡಿ ಇನ್ನಷ್ಟು ದೊಡ್ಡ ಕೈಗಾರಿಕೆಗಳು ಸ್ಥಾಪನೆಯಾಗಲು ಕಾಲಾವಕಾಶ ಬೇಕಾಗಿದ್ದು, ಅಗತ್ಯ ಮೂಲಸೌಕರ್ಯ ಮತ್ತು ಸಂಪರ್ಕ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವುದು ಮುಖ್ಯವಾಗಿದೆ. ಈಗಾಗಲೇ ಹಲವು ಕೈಗಾರಿಕೋದ್ಯಮಿಗಳು ತುಮಕೂರಿನಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಕೆಲವರು 500ರಿಂದ 1,000 ಎಕರೆವರೆಗೆ ಭೂಮಿ ಒದಗಿಸುವಂತೆ ಬೇಡಿಕೆ ಇಟ್ಟಿದ್ದಾರೆ. ಇತ್ತೀಚೆಗೆ ಉದ್ಯಮಿಯೊಬ್ಬರು ಗ್ರೀನ್ ಹೈಡೋಜನ್ ಘಟಕ ಹಾಗೂ ಡೇಟಾ ಸೆಂಟರ್ ಸ್ಥಾಪಿಸಲು ಸುಮಾರು 80,000 ಕೋಟಿ ರೂ. ಹೂಡಿಕೆ ಮಾಡುವ ಉದ್ದೇಶದೊಂದಿಗೆ 2,000 ಎಕರೆ ಭೂಮಿ ಒದಗಿಸುವಂತೆ ಪ್ರಸ್ತಾಪಿಸಿದ್ದಾರೆ ಎಂದು ತಿಳಿಸಿದರು.
ಸಿದ್ಧಗಂಗಾ ಮಠಾಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ರೈತರು ಮತ್ತು ಗ್ರಾಹಕರ ನಡುವೆ ಸೇತುವೆಯಾಗಿ ವರ್ತಕರು ಕಾರ್ಯ ಮಾಡುತ್ತಿದ್ದಾರೆ. ವ್ಯಾಪಾರವಹಿವಾಟಿನ ಪದ್ದತಿ ಬದಲಾಗಿದೆ. ಮಾಲ್ಗಳು, ಆನ್ಲೈನ್ ವ್ಯವಹಾರಗಳು ಹೆಚ್ಚಾಗಿವೆ. ಹೋಬಳಿ ಮಟ್ಟದಲ್ಲೂ ಎಪಿಎಂಸಿಗಳು ಆರಂಭವಾಗಿ ಸಮಸ್ಯೆಯಾಗಿ ವರ್ತಕರು ಕಷ್ಟದಲ್ಲಿದ್ದಾರೆ ಎಂದರು.
ಶ್ರೀಮಠದ ಪೂಜ್ಯರಿಗೆ ಪರಮ ಭಕ್ತರಾಗಿ ಪೂಜ್ಯರಿಗೆ ಬೆನ್ನೆಲುಬಾಗಿ ಇಲ್ಲಿನ ವರ್ತಕರು ಸಹಕರಿಸಿದ್ದಾರೆ. ವ್ಯಾಪಾರ ವೃತ್ತಿ ಜೊತೆಗೆ ಸಮಾಜಸೇವೆಯನ್ನೂ ಮಾಡಿಕೊಂಡು ಬರುತ್ತಿರುವ ಧಾನ್ಯ ವ್ಯಾಪಾರಿಗಳ ಸಂಘದವರು ತುಮಕೂರಿನ ಬೆಳವಣಿಗೆಗೂ ಕಾರಣರಾಗಿದ್ದಾರೆ ಎಂದು ಶ್ಲಾಘಿಸಿದರು.
ಸಿಂಹಗದ್ದೆ ಬಸ್ತಿಮಠದ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಮಾಡನಾಡಿ, ಧಾನ್ಯಗಳುನ್ನು ಸಂಗ್ರಹಿಸಿ ನಾಡಿಗೆ ನೀಡುತ್ತಿರುವ ವರ್ತಕರು ಆಹಾರ ಭದ್ರತೆಗೂ ನೆರವಾಗಿದ್ದಾರೆ. ಬರಗಾಲದಲ್ಲಿ ಬಡವರಿಗೆ ಸಹಾಯ ಮಾಡಿ ಸಮಾಜಕ್ಕೆ ನೆರವಾಗಿದ್ದಾರೆ ಎಂದು ವರ್ತಕರ ಸಂಘದ ಪದಾಧಿಕಾರಿಗಳ ಸೇವೆ ಪ್ರಶಂಸಿಸಿದರು.
ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ತುಮಕೂರು ನಗರದ ಅಭಿವೃದ್ಧಿಗೆ ವರ್ತಕರ ಸಂಘದ ಕೊಡುಗೆ ದೊಡ್ಡ ಪ್ರಮಾಣದಲ್ಲಿದೆ. ಇಂದು ಬದಲಾಗುತ್ತಿರುವ ವಾಣಿಜ್ಯ ವ್ಯವಹಾರದಲ್ಲಿ ವರ್ತಕರೂ ತಮ್ಮ ವ್ಯವಹಾರ ಪದ್ದತಿಯನ್ನು ಆಧುನೀಕರಣಗೊಳಿಸಿಕೊಳ್ಳಬೇಕು. ಮಾರುಕಟ್ಟೆ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ತಿಳಿದು ಆಧುನಿಕ ವ್ಯಾಪಾರ ಪದ್ದತಿ ಬಗ್ಗೆ ಮುಂದಿನ ಪೀಳಿಗೆ ಮಾರ್ಗದರ್ಶನ ನೀಡಲು ಸಂಘ ಕಾರ್ಯಕ್ರಮ ರೂಪಿಸಬೇಕು.ಎಂದು ಸಲಹೆ ಮಾಡಿದರು.
ಸಂಘದ ಶತಮಾನೋತ್ಸವ ಸಮಾರಂಭದ ಅಂಗವಾಗಿ 70 ವರ್ಷ ಮೀರಿದ ಸದಸ್ಯರು ಹಾಗೂ ಸಂಘದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಂಘದ ಅಧ್ಯಕ್ಷ ಬಿ.ಎಲ್. ಚಂದ್ರಕೀರ್ತಿ ಸಮಾರಂಭದ ಅಧ್ಯಕ್ಷತೆವಹಿಸಿದ್ದರು. ಉಪಾಧ್ಯಕ್ಷ ಸಿ.ಎಸ್. ನಂಜುಂಡಪ್ಪ, ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಹೆಚ್.ಎಂ. ದಿವ್ಯಾನಂದಮೂರ್ತಿ, ಜಿಎಂಎ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಟಿ.ಎಸ್. ರವಿಕುಮಾರ್, ಗ್ರೈನ್ ಮರ್ಚೆಂಟ್ಸ್ ಛಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ. ಬಾಲಾಜಿ, ಪಶುಪತಿನಾಥ ದೇವಸ್ಥಾನ ಸಮಿತಿ ಅಧ್ಯಕ್ಷ ಎನ್.ಜೆ. ರುದ್ರಪ್ರಕಾಶ್ ಅತಿಥಿಗಳಾಗಿ ಭಾಗವಹಿಸಿದ್ದರು.
ಸಂಘದ ಕಾರ್ಯದರ್ಶಿ ಕೆ.ವಿ. ಬೆಟ್ಟಯ್ಯ, ಜಂಟಿ ಕಾರ್ಯದರ್ಶಿ ಆರ್. ನಾಗಪ್ರಕಾಶ್, ಖಜಾಂಚಿ ನಟರಾಜ್ ಐವಾರ್, ನಿರ್ದೇಶಕರಾದ ಜಿ.ಹೆಚ್. ಪರಮಶಿವಯ್ಯ, ಟಿ.ಎಂ. ಚನ್ನಪ್ಪ, ಎ.ಆರ್. ಶ್ರೀನಾಥ್, ಹೆಚ್.ಎಸ್. ಸುರೇಶ್ಕುಮಾರ್, ಟಿ.ಹೆಚ್. ಪ್ರಸನ್ನಕುಮಾರ್, ಜಿ.ಸಿ. ಬಸವರಾಜು, ಜಿ.ಎಸ್. ಅರುಣಾಚಲಂ, ಎಂ.ಜಿ. ನಾಗೇಂದ್ರ, ಆರ್.ಎನ್. ಜ್ವಾಲನಪ್ಪ, ಸಿ. ಸರವಣನ್, ವ್ಯವಸ್ಥಾಪಕ ಸಿ.ಎನ್. ಉದಯ್ಕುಮಾರ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
.