ಅಂತಿಮ ಮತದಾರರ ಪಟ್ಟಿ ಪ್ರಕಟ : ಜಿಲ್ಲೆಯಲ್ಲಿ 20.94ಲಕ್ಷ ಮತದಾರರು

ತುಮಕೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 (SIR-2026 ) ಪ್ರಕ್ರಿಯೆಯಡಿ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲಾಗಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 20,94,762 ಮತದಾರಿದ್ದಾರೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು, ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕು ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯ ಎನ್‍ಐಸಿ ವೆಬ್‍ಸೈಟ್ ಹಾಗೂ ಮುಖ್ಯ ಚುನಾವಣಾಧಿಕಾರಿಗಳ ವೆಬ್‍ಸೈಟ್‍ನಲ್ಲಿ ಪ್ರಚುರಪಡಿಸಲಾಗಿದೆ. ಅಂತಿಮ ಮತದಾರರ ಪಟ್ಟಿಯಲ್ಲಿ ಯಾವುದೇ ನ್ಯೂನತೆಗಳಿದ್ದಲ್ಲಿ, ಹೆಸರು ಬಿಟ್ಟು ಹೋಗಿದ್ದರೆ, ತಿದ್ದುಪಡಿಗಳಿದ್ದಲ್ಲಿ ನಿರಂತರ ಪರಿಷ್ಕರಣೆಯಡಿ ನಿಗದಿತ ನಮೂನೆ-6, 7 ಮತ್ತು 8ರಲ್ಲಿ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ 10,36,724 ಪುರುಷ, 10,57,981 ಮಹಿಳೆಯರು ಹಾಗೂ 57 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 20,94,762 ಮತದಾರರಿದ್ದು,  18-19 ವರ್ಷದೊಳಗಿನ 15,754 ಪುರುಷರು, 14,543 ಮಹಿಳೆಯರು ಹಾಗೂ 4 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 30,301 ಯುವ ಮತದಾರರು ಈ ಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನಮೂನೆ-7ರಂತೆ ಮತದಾರರ ಪಟ್ಟಿಯಿಂದ 7,248 ಮತದಾರರನ್ನು ಕೈಬಿಡಲಾಗಿದ್ದು, ಈ ಪೈಕಿ 162 ಮರಣ ಹೊಂದಿದ, 25 ಗೈರು, 63 ಈಗಾಗಲೇ ನೋಂದಣಿಯಾದ, 4777 ಸ್ಥಳಾಂತರಗೊಂಡ  ಹಾಗೂ 2221 ಇತರೆ ಸೇರಿದಂತೆ ಒಟ್ಟು 7,248 ಮತದಾರರನ್ನು ಕೈಬಿಡಲಾಗಿದೆ ಎಂದು ಮಾಹಿತಿ ನೀಡಿದರು.  

ಸಭೆಯಲ್ಲಿ ಮಾನ್ಯತೆ ಪಡೆದ ರಾಷ್ಟ್ರ ಹಾಗೂ ರಾಜ್ಯ ರಾಜಕೀಯ ಪಕ್ಷಗಳ ಪದಾಧಿಕಾರಿಗಳಿಗೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯ ಹಾರ್ಡ್ ಕಾಪಿ ಮತ್ತು ಸಾಫ್ಟ್ ಕಾಪಿಯನ್ನು ವಿತರಿಸಲಾಯಿತು.

ಸಾರ್ವಜನಿಕರು ಸಂಬಂಧಿಸಿದ ಮತಗಟ್ಟೆಗಳಲ್ಲಿ ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳಬೇಕು. ಪಟ್ಟಿಯಲ್ಲಿ ಯಾವುದೇ ನ್ಯೂನತೆಗಳು ಕಂಡು ಬಂದಲ್ಲಿ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆನ್‍ಲೈನ್ https://voters.eci.gov.in  ಅಥವಾ Voter Helpline App(VHA) ಮೂಲಕ ಅಥವಾ ಆಫ್‍ಲೈನ್ ಮೂಲಕ ಸಂಬಂಧಪಟ್ಟ ಮತಗಟ್ಟೆ ಮಟ್ಟದ ಅಧಿಕಾರಿ (BLO)  ಗಳಿಗೆ ಸಲ್ಲಿಸಲು ಅವಕಾಶವಿದ್ದು, ಸದುಪಯೋಗಪಡಿಸಿಕೊಳ್ಳಬೇಕೆಂದು  ಅವರು ತಿಳಿಸಿದರು. 

ಸಭೆಯಲ್ಲಿ ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಚುನಾವಣಾ ಶಾಖೆಯ ನಾಗಭೂಷಣ್ ಸೇರಿದಂತೆ ಮತ್ತಿತರರು ಹಾಜರಿದ್ದರು. 

Leave a Reply

Your email address will not be published. Required fields are marked *