3000 & 60006 ಲವ್ವರ್ಸ್ ನ ತಂಟೆಗೆ ಬಂದರೆ ತಟ್ಟಿ ಬಿಡುತ್ತೇನೆ——-

ರಸ್ತೆ ಬದಿಯಲ್ಲಿ ನಾನು ಟಿವಿಎಸ್ ಎಲೆಕ್ಟ್ರಿಕ್ ಐಕ್ಯೂಬ್ ದ್ವಿಚಕ್ರ ನಿಲ್ಲಿಸಿಕೊಂಡು ಯಾರೋ ಬರುವವರಿದ್ದರು ಕಾಯುತ್ತಾ ಇದ್ದೆ, ನನ್ನ ಪಕ್ಕದಲ್ಲಿ ಹಾದು ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರನೊಬ್ಬ ಸ್ವಲ್ಪ ದೂರ ಹೋದವನೇ ಹಿಂತಿರುಗಿ ಬಂದು ನನ್ನ ವಾಹನವನ್ನು ಮೇಲೆ ಕೆಳಗೆ ನೋಡಲಾರಂಭಿಸಿದ.

ನಾನು ಏನು ಅಂತ ಕೇಳಿದೆ, ಪರವಾಗಿಲ್ಲ ಸಾ, ಎಷ್ಟು ಕೊಟ್ರೀ ಅಂದ, ಒಂದೂವರೆ ಲಕ್ಷ ಅಂದೆ ಹೌದಾ ಸಾ ಈ ಫಾನ್ಸಿ ನಂಬರ್‍ಗೆ ಒಂದೂವರೆ ಲಕ್ಷ ಕೊಟ್ರಾ, ಕೊಡಬೇಕಾದ್ದೇ, ನಮ್ಮಂತಹ ಬೇವರ್ಸಿಗಳಿಗೆಲ್ಲಿ ಇಂತಹ ನಂಬರ್ ಸಿಗುತ್ತೇ ಸಾರ್ ಅಂದ, ಏನಯ್ಯ ನೀನು ನಾನು ಗಾಡಿಗೆ ಕಣಯ್ಯ ಒಂದೂವರೆ ಲಕ್ಷ ಕೊಟ್ಟಿರೋದೆ ಅಂದೆ, ಹಂಗಾರೆ ಈ ಮೂರು ಸಾವಿರಕ್ಕೆ ಎಷ್ಟು ಕೊಟ್ರೀ ಅಂದ, ಯಾವ ಮೂರು ಸಾವಿರಕ್ಕೆ ಅಂದೆ, ಪರವಾಗಿಲ್ಲ ಸಾ, ಯಾವ ಮೂರು ಸಾವಿರಕ್ಕೆ ಅಂತ ಕೇಳಿತ್ತೀರ, ನೋಡಿ ಸಾ ಅಂತ ನನ್ನ ವಾಹನದ ನಂಬರ್ ತೋರಿಸಿದ.

ಏ ಹೋಗಯ್ಯ ನಾನು ಒಂದು ನಯಾ ಪೈಸೆ ಕೊಟ್ಟಿಲ್ಲ, ಅದೇ ಆರ್.ಟಿ.ಓ. ಆಫೀಸಿಂದ ಕೊಟ್ಟಿರೋದು ಅಂದೆ, ಪರವಾಗಿಲ್ಲ ಸಾ ಸರಿಯಾಗೆ ಪುಂಗುತ್ತೀರ, ಕಾಸಿಲ್ಲದೆ ಇಂತಹ ಫಾನ್ಸಿ ನಂಬರ್ ಆರ್.ಟಿ.ಓ.ದವರು ಕೊಡಲು ಸಾಧ್ಯವೇ ಇಲ್ಲ ಚಾಲೇಂಜಾ ಸಾರ್ ಅಂದ, ನಾನು ಯಾವನಿಗೂ ದುಡ್ಡು ಕೊಟ್ಟಿಲ್ಲ ಕಣಯ್ಯ, ನಾನು ಯಾವ ಚಾಲೆಂಜ್ ಮಾಡಲ್ಲ ಅಂದೆ, ಸಾ ನೀವೇನು ಕೆಲಸ ಮಾಡೋದು ಅಂದ, ನಾನೊಬ್ಬ ಅಲೆಮಾರಿ ಕಣಯ್ಯ ಅಂದೆ.

ಅವನಿಗೆ ಇನ್ನಾ ತಲೆ ಕೆಟ್ಟು ಅಲೆಮಾರಿ ಅನ್ನೋದು ಒಂದು ಕೆಲಸ ಇದೆಯಾ ಸಾರ್, ಅಯ್ಯೋ ನಾನು ಪತ್ರಕರ್ತ ಕಣಯ್ಯ ಅಂದೆ, ಮತ್ತೆ ಅಂಗಾತ ಹೇಳಿ, ನೀವು ಹೋಗಿ ಆರ್.ಟಿ.ಓ.ದವರಿಗೆ ನೀವು ಬೀಜ ಹೊಡೊತ್ತೀರ ಅಂತ ನಿಮ್ಮನ್ನ ಖುಷಿ ಪಡಿಸೋಕೆ ಇಂತಹ ನಂಬರ್ ಕೊಟ್ವರೆ, ಬಡ್ಡಿ ನನ್ಮಕ್ಕಳು ನಾವು ದುಡ್ಡು ಕೊಡುತ್ತೇವೆ ಅಂದ್ರೂ ಕೊಡಲ್ಲ, ತಿರುಪೆ ಎತ್ತ ಬೇಕು, ಬೇವರ್ಸಿ ನನ್ಮಳು ಅಂತಂದು 3000 ಸಾವಿರವನ್ನು ‘ಮೂರು ಸೊನ್ನೆ’ ಅಂತ ಎಷ್ಟು ಚೆನ್ನಾಗಿ ಹೇಳಬಹುದು ಸಾರ್, ನಮಗೆ ಮೂರು ನಾಮನಾದರೂ ಬೇಡ್ವೇ(ಮೂರು ಒಂದು 111) ಸಾ ಯು ಆರ್ ಲಕ್ಕಿ, ಅದೃಷ್ಠವಂತರು ಅಂತ ಕೈ ಕುಲುಕಿದ.

ನಾನು ನನ್ನ ಪತ್ರಿಕೆ ಮೈತ್ರಿನ್ಯೂಸ್ ಪತ್ರಿಕೆ ಪ್ರಾರಂಭಿಸುವಾಗ ಟೈಟಲ್ ಹೆಸರು ಒಂದನ್ನೇ ಬರೆದಿದ್ದೀಯ ಅಂತ ಆಗಿನ ಜಿಲ್ಲಾಧಿಕಾರಿಗಳ ಜೊತೆ ಆರೇಳು ತಿಂಗಳು ಜಗಳ, ಮುಸುಕಿನ ಗುದ್ದಾಟದ ನಂತರ ದೆಹಲಿಗೆ ಕಳಿಸಿದರು, ಟೈಟಲ್ ಬಂದ ಮೇಲೆ ನನ್ನ ಸಹಪಾಟಿ ಪತ್ರಕರ್ತರು ನೀನು ಆರ್.ಎನ್.ಐ ನಂಬರ್ ತರಿಸಿಕೊಳ್ಳೋದರಲ್ಲಿ ಹಣ್ಣುಗಾಯಿ-ನೀರುಗಾಯಿ ಆಗುತ್ತೀಯ ನಮಗೆ ದೆಹಲಿಯಲ್ಲಿ ಆರ್.ಎನ್.ಐ. ಕಛೇರಿಯ ಎಂ.ಡಿ.ಯೇ ಗೊತ್ತು ಒಂದೇ ವಾರದಲ್ಲಿ ತರಿಸಿ ಕೊಡುತ್ತೇವೆ ಅಂತ ಡೀಲ್ ಮಾಡಲು ಬಂದರು.

ನೋಡ್ರಯ್ಯ ನಾನು ಯಾವನಿಗೂ ದುಡ್ಡಲ್ಲ, ಒಂದು ಕಾಫಿನೂ ಕೊಡ್ಸಲ್ಲ ಅಂತ ಎದುರು ನಿಂತು ಚಾಲೆಂಜ್ ಮಾಡಿದೆ, ನೋಡಾನ ಹ್ಯಂಗೆ ಆರ್.ಎನ್.ಐ. ನಂಬರ್ ಬರುತ್ತೋ ಅಂತ ಮೀಸೆ ತಿರುವಿದರು, ನಾನು, ಆರ್.ಎನ್.ಐ.ನವರು ಕೇಳಿದ ಎಲ್ಲಾ ದಾಖಲಾತಿ, ಪತ್ರಿಕೆಯ ಸಂಚಿಕೆಗಳನ್ನು ಕಳಿಸಿಕೊಟ್ಟೆ, ಹದಿನೈದೆ ದಿನದಲ್ಲಿ RNI NO.KAR/KAN/2014/60006. ನಂಬರ್ ಬಂದಿತು.

ನಂಬರ್ ಬಂದ ಕೂಡಲೇ ಆರ್.ಎನ್.ಐ. ನಂಬರ್ ಹಾಕಿ ಸಂಚಿಕೆ ತಂದ ಕೂಡಲೇ ಆರ್.ಎನ್.ಐ. ನಂಬರ್ ನೋಡಿದ ಡೀಲ್ ಗೆ ಬಂದಿದ್ದವರು ದಂಗಾಗಿ ಹೋದ್ರು, ಅಣ್ಣ ಏನಣ್ಣ ಇಂತಹ ಫಾನ್ಸಿ, ಮೆಮೊರೆಬಲ್ ನಂಬರ್ ತರಿಸಿದ್ದೀಯ ಅಂದ್ರು, ನಾನೇ ಡೆಲ್ಲಿಗೆ ಹೋಗಿದ್ದೆ, ಅಲ್ಲಿ ನನಗೆ ಇಂಗ್ಲೀಷ್ ಪತ್ರಿಕೆಯ ಸಂಪಾದರೊಬ್ಬರು ಆರ್.ಎನ್.ಐ. ನಂಬರ್ ಕೊಡಿಸಿದ್ರು ಅಂತ ಪುಂಗಿದೆ, ಎಷ್ಟಕ್ಕೆ ಅಂದ್ರು, ಒಂದು ರೂಪಾಯಿಯೂ ಇಲ್ಲ ಎಂದೆ, ಅಣ್ಣ ನೀನು ಸೈಲೆಂಟಾಗೆ ಮಾಡ್ತೀಯ, ನಿನ್ನ ಹತ್ತಿರ ಹುಷಾರಾಗಿರಬೇಕೆಂದರು.

ಒಂದೆರಡು ತಿಂಗಳು ಪತ್ರಿಕೆಯನ್ನು ತಂದ ಮೇಲೆ ಬೆಂಗಳೂರಿನಿಂದ ಒಬ್ಬರು ಪೋನ್ ಮಾಡಿ ಈ RNI NO.KAR/KAN/2014/60006. ನಂಬರಿನ ಟೈಟಲ್ ನನಗೆ ಬೇಕೇ ಬೇಕು ಎಷ್ಟು ರೇಟು ಹೇಳಣ್ಣ ಅಂತ ಹಿಂದೆ ಬಿದ್ದ, ಐದಾರು ಸಲ ಪೋನ್ ಮಾಡಿದ ಆತ, ಒಂದಿನ ನನ್ನ ಹುಡುಕಿಕೊಂಡು ತುಮಕೂರಿಗೆ ಬಂದು ಬಿಟ್ಟ, ನಾನು ಆತನಿಗೆ ಕಾಫಿ ಕುಡಿಸಿ ಕೂಲಾಗಿ ನಿನ್ನಂತಹವನು ಕೋಟಿ ಕೊಡುತ್ತೇನೆ ಅಂದ್ರೂ ಟೈಟಲ್ ಕೊಡಲ್ಲ, ಆರ್.ಎನ್.ಐ. ನಂಬರ್ ಕೊಡಲ್ಲ ಅಂದೆ, ಆತ ನೋಡಣ್ಣ ನಿನ್ನ ಜೀವನ ಪೂರ್ತಿ ಚೆನ್ನಾಗಿರಬಹುದು ಅಷ್ಟು ದುಡ್ಡು ಕೊಟ್ಟೆ ಬಿಡುವ ಅಂದ.

ನಾನು ಅವನನ್ನು ದುರುಗುಟ್ಟಿ ನೋಡಿದೆ, ಸುಮ್ಮನೆ ಹೋದ್ರೆ ಸರಿ, ನಾನೇನು ವ್ಯಾಪಾರ ಮಾಡೋದಕ್ಕೆ ಟೈಟಲ್ ತರಿಸಲ್ಲ ಅಂದೆ, ಮತ್ತೆ ಕೆಲವರು ಟೈಟಲ್ ತರಿಸಿ ವ್ಯಾಪಾರ ಮಾಡಿಕೊಂಡೆ ಜೀವನ ಮಾಡ್ತಾರಲ್ಲ ಅಂದ, ನಾನು ವ್ಯಾಪಾರ ಮಾಡ್ತೀನಿ ಅಂತ ಹೇಳಿದ್ದೀನಾ!

ಅಯ್ಯೋ ತಲೆ ಸರಿ ಇದೆಯೇ ನಿಮಗೆ, ಎಲ್ಲಾ ದುಡ್ಡು ಅಂತ ಸಾಯುತ್ತಾರೆ, ಆದರೆ ಅದ್ಯಾವುದೋ ಟೈಟಲ್ ಇಟ್ಟುಕೊಂಡು ಅದೇನು ಕಿಸಿತ್ತೀರೋ ಗೊತ್ತಿಲ್ಲ, ನಾನು ಮತ್ತೆ ಇಂತಹ ಟೈಟಲ್ ತಗೊಂಡು ನೀನೇನು ಕಿಸಿಯೋದಕ್ಕೆ ಬಂದಿದ್ದೀಯ ಅಂದೆ, ನೀವು ಹೀಗೆ ಬಿಪಿ ಜಾಸ್ತೀ ಮಾಡಿಕೊಂಡೇ ಮಾತನಾಡೋದು ಅಂದ, ಹೌದು ನನ್ನ ಪ್ರೀತಿಯ ಯಾವುದನ್ನೇ ಆಗಲಿ ಬೇರೆಯವರು ಬಯಸಿದ್ರೆ ಯಾಮಲೋಕ ದಾರಿ ತೋರಿಸ ಬೇಕಾಗುತ್ತೇ, ಯಾವನ್ನಯ್ಯ ನಿನ್ನ ಬೆಂಗಳೂರಿನಿಂದ ಬಾ ಅಂದೋನು ಅಂದೆ, ಅವನು ಆ ಪಾಪಿ ನಂಬರ್ ನಿಮಗೆ ಸಿಗಬೇಕಾ ಒಳ್ಳೆ ನಾಗರ ಹಾವು ತರಹ ಬುಸ್ ಗುಡ್ತೀರಾ ಹೋಗ್ಲಿ ನಾನೆ ದುಡ್ಡು ಕೊಡ್ತೀನಿ ಮತ್ತೊಮ್ಮೆ ಕಾಫಿ ಕುಡಿಯಿರಿ ಅಂದ.

ಏನ್ರೀ ಯಾವುದೋ ಒಂದು ಟೈಟಲ್ ನಂಬರ್ ನೇ ಹುಡುಗಿ ತರಹ ತಬ್ಬಿಕೊಳ್ಳುತ್ತೀರಲ್ಲ, ಒಳ್ಳೆ ತಲೆ ಕೆಟ್ಟಿರೋರು ನೀವು ಅಂದ, ಏ ಹುಡುಗೀರ ಕಳೆಕೋ ಬಹುದು, ಈ ಟೈಟಲ್, ಈ ನಂಬರ್ ಕಳಕೊಂಡರೆ ಮತ್ತೆ ಸಿಗಲ್ಲ ಮೊದಲು ರೈಟ್ ಹೇಳು ಅಂದ ಕೂಡಲೇ ಆತ ತಲೆ ಕೆರೆದುಕೊಂಡು ಎಲ್ಲಿ ಮಾಯವಾದನೋ ಇಲ್ಲಿವರೆಗೂ ಆತನ ಅಡ್ರಸ್ ಇಲ್ಲ.

ಇವನಂತೆಯೇ RNI NO.KAR/KAN/2014/60006.ನಂಬರ್ ಇರುವುದಕ್ಕೆ ನನ್ನ ಪತ್ರಿಕೆಯನ್ನು ಕೊಡುತ್ತೀರ ಅಂತ ಎಷ್ಟು ಜನ ಕೇಳಿದರೋ, ಈಗ ನನ್ನ ಪತ್ರಿಕೆ ಟೈಟಲ್ ಕೇಳುವುದು ನಿಂತು ಹೋಯಿತು ಅನ್ನುವ ವೇಳೆಗೆ ನಾನು ಕೊಂಡ ವಾಹನಕ್ಕೆ 3000 ಎಂಬ ನಂಬರ್ ಲಕ್ಕಿ ನಂಬರ್ ಆಗಿ ಬಂದ ಕೂಡಲೇ ಟಿವಿಎಸ್ ಶೋ ರೂಂನವರು ನನ್ನ ಹೆಸರನ್ನೇ ಕರೆಯದೆ ಸಾರ್ ಮೂರು ಸಾವಿರ ಬನ್ನಿ ಅನ್ನ ತೊಡಗಿದರು, ವಾಹನ ಡೆಲಿವರಿ ಕೊಡುವಾಗಲೂ ಮೂರು ಸಾವಿರ ತಗೊಳ್ಳಿ ಕೀ, ಮೊನ್ನೆ ಸರ್ವಿಸ್ ಗೆ ಪೋನ್ ಮಾಡಿದ ಕೂಡಲೇ ಏ ಮೂರು ಸಾವಿರ ಪೋನ್ ಮಾಡಿದ್ದಾರೆ ಅಂತ ಲಗುವಾಗಿ ಇಡೀ ಶೋ ರೂಂನವರು ನಗಾಡಿದರು.

ಅವರ ಪ್ರೀತಿಗೆ ಸ್ವೀಟ್ ತಗೊಂಡು ಕೊಟ್ಟರೆ ಮೂರು ಸಾವಿರ ಕೊಟ್ಟಿರೋದು, ಮೂರು ಸಾವಿರ ಕೊಟ್ಟಿರೋದು ಅಂತ ಸ್ವೀಟ್ ಹಂಚಿದರು.

ಇದೇ ಸಂದರ್ಭದಲ್ಲಿ ತುಮಕೂರಿನಲ್ಲಿ ದಸರಾ ಪ್ರಾರಂಭವಾಗಿ ನನ್ನನ್ನು ದಸರಾ ಕವಿಗೋಷ್ಠಿಗೆ ಆಯ್ಕೆ ಮಾಡಿದ್ದನ್ನು ನನ್ನ ಕಿರಿಯ ಗೆಳೆಯರು ಏ ಗುರುಗಳು ಕವಿಗೋಷ್ಠಿಗೆ ಆಯ್ಕೆ ಮಾಡಿದ್ದಾರೆಂದು ನನ್ನ ಗೆಳೆಯರು, ಹಿರಿಯರು ಚಿಂತಕರು, ಗುರುಗಳನ್ನೆಲ್ಲಾ ನನ್ನ ಬಗ್ಗೆ ಸಂದರ್ಶನ ಮಾಡಿ ಯೂ-ಟೂಬಿನಲ್ಲಿ ಅಫ್ ಲೋಡ್ ಮಾಡಿ ಮುಜುಗರ ಉಂಟು ಮಾಡಿದ್ದಾರೆ, ಅವರ ಪ್ರೀತಿಗೆ ಬೆಲೆ ಕಟ್ಟಲಾಗದು, ಒಂದೆರಡು ದಿನ ಎಲ್ಲಿ ಬೈಯ್ಯುತ್ತಾರೋ ಅಂತ ದೂರವೆ ಇದ್ದ ಅವರು ಅಮೇಲೆ ಸಾ ನಿಮ್ಮ ಪರಿಚಯ ಚೆನ್ನಾಗಿದೆಯೇ ಅಂತ ಮೆಲು ಧ್ವನಿಯಲ್ಲಿ ಕೇಳಿದಾಗ ಬಾಚಿ ತಬ್ಬಿಕೊಂಡೆ, ನನಗಿಂತ ಅವರೇ ಕಣ್ಣಾಲಿಗಳ ತುಂಬಿಕೊಂಡರು, ಬರ್ರೋ ಊಟ ಕೊಡಿಸುತ್ತೇನೆ ಅಂದ್ರು ಬೇಡ ನಿಮ್ಮ ಪ್ರೀತಿ ಸಾಕು ಅಂದ್ರು.

 ಈಗ ದ್ವಿಚಕ್ರ ವಾಹನಕ್ಕೆ 3000 ಸಾವಿರ ನಂಬರ್ ಬಂದಿರುವುದರಿಂದ ನನಗಿಂತ ನನ್ನ ವಾಹನವೇ ಹದಿನೆಂಟರ ಚೆಲುವೆಯಂತಹ ಆಕರ್ಷಕವಾಗಿ ಕಾಣುತ್ತಾ ಇದೆ. ಹತ್ತಿರ ಬಂದು ಎಷ್ಟು ಕೊಟ್ರಿ ಇಂತಹ ನಂಬರಿಗೆ ಅಂತಹ ಇನ್ನೂ ಕೇಳುತ್ತಲೇ ಇದ್ದಾರೆ, ಇನ್ನೂ ವಾಹನವನ್ನೇ ಕೊಡ್ತೀರ ಅಂತ ಯಾರು ಕೇಳಿಲ್ಲ. 

ಅದೃಷ್ಠ ಎಂಬುದರಲ್ಲಿ ನನಗೆ ನಂಬಿಕೆಯಿಲ್ಲ, ನಾನು ದೇವರು, ದೇವಸ್ಥಾನಗಳಿಗೆ ಹೋಗುವವನಲ್ಲ, ನಾನು ಮನುಷ್ಯ ಪ್ರೀತಿಯಲ್ಲಿ ದೇವರನ್ನು ಕಾಣುತ್ತಿರುವವನು. ನನ್ನಂತಹವನಿಗೆ ಇಂತಹ ನಂಬರ್ ಗಳು ಸಿಕ್ಕರೂ ನಾನೇನು ಆಕಾಶಕ್ಕೆತ್ತರಕ್ಕೆ ಜಿಗಿಯುವುದಿಲ್ಲ, ಅದನ್ನು ತೋರಿಸಿಕೊಂಡು ಬೀಗುವುದಿಲ್ಲ, ಏಕೆಂದರೆ ಇಲ್ಲಿ ಎಲ್ಲವೂ ನಶ್ವರವಾಗಿರುವಾಗ ಯಾವುದೋ ನಂಬರ್ ನಮಗೆ ಅದೃಷ್ಠ ತರುತ್ತದೆ ಎಂಬುದು ನಮ್ಮ ಬೌದ್ಧಿಕ ದಾರಿದ್ರ್ಯ, ನಾವೆಷ್ಟೇ ಬಡವರಾಗಿರಲ್ಲಿ, ಶ್ರೀಮಂತರಾಗಿರಲಿ ದುಃಖಿತರ ಕಣ್ಣೀರನ್ನು ಸ್ವಲ್ಪವಾದರೂ ಒರೆಸಬೇಕು, ತೀರ ಅನಾರೋಗ್ಯದವರ ಕೈ ಹಿಡಿದು ನಿಮಗೆ ಏ£ನೂ ಆಗಿಲ್ಲ ನಾವಿದ್ದೇವೆ ಎಂಬ ಧೈರ್ಯದ ಮಾತು ಹೇಳಿ ಅವರ ತಲೆ ಸವರಿದರೆ ಅವರು ತೋರುವ ಪ್ರೀತಿಗಿಂತ ಈ ಜಗತ್ತಿನಲ್ಲಿ ಮತ್ತೇನು ಇಲ್ಲ.

ಪ್ರೀತಿ, ಸ್ನೇಹವು ಹಣ, ಆಸ್ತಿ, ಹಂತಸ್ತಿಗೆ ಸಿಗುವುದಿಲ್ಲ ಅದು ಮನುಷ್ಯನ ಹೃದಯದ ತುಡಿತದಿಂದ ಮನುಷ್ಯತ್ವ ಬಂದಾಗ ಮಾತ್ರ ಸಿಗಲು ಸಾಧ್ಯ.

ಕೊನೆಯದಾಗಿ ನನ್ನ ಪತ್ರಿಕೆಯ ಆರ್.ಎನ್.ಐ. ನಂಬರ್ 60006 ಮತ್ತು ನನ್ನ ವಾಹನದ ನಂಬರ್ 3000 ಆಗಿದ್ದು ಈ ಎರಡೂ ನಂಬರ್ ನಲ್ಲಿ ಮೂರು ಸೊನ್ನೆಗಳಿರುವುದರಿಂದ ಇವು ನನ್ನ ಲವ್ವರ್ಸ್ ಇದ್ದ ಹಾಗೆ ಈ ಲವ್ವರ್ಸ್ ನ್ನು ಕಳೆದುಕೊಳ್ಳಲು ಯಾರಿಗೆ ತಾನೆ ಮನಸ್ಸು ಒಪ್ಪುತ್ತದೆ… ಈಗ ಹೇಳಿ, ಮುಂದೆ ಈ ಲವ್ವರ್ಸ್ ನ ಯಾರಾದರೂ ಕೇಳಿದ್ರೆ ತಟ್ಟಿ ಬಿಡ್ತೀನಿ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *