ತುಮಕೂರು: ಬೇಡಿಕೆಗೆ ಅನುಗುಣವಾಗಿ ವಿದ್ಯುತ್ ಪೂರೈಕೆ ಮಾಡಲು ನೂತನ ಯೋಜನೆ ಹಾಗೂ ತಂತ್ರಜ್ಞಾನಗಳು ಅಗತ್ಯ ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪಿ.ಜಿ.ಸೆಮಿನಾರ್ ಸಭಾಂಗಣದಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ವಿಭಾಗದ ಎನರ್ಜಿಕ್ಲಬ್ ವತಿಯಿಂದ ಏರ್ಪಡಿಸಲಾಗಿದ್ದ ವಿದ್ಯುತ್‍ಚಾಲಿತ ವಾಹನಗಳ ಬಳಕೆ ಮತ್ತು ಅದರ ಅನ್ವಯಿಕಗಳು’ ಕುರಿತು ನವದೆಹಲಿಯ ಎಐಸಿಟಿಇ ಪ್ರಾಯೋಜಿತ ಎರಡನೇ ದಿನದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯುತ್ ಬೇಡಿಕೆ ಪೂರೈಸಲು ಹೊಸ ಮಾರ್ಗಗಳ ಬಗ್ಗೆ ಗಮನಹರಿಸಬೇಕಿದೆ ಎಂದರು.
ಈಗಿನ ನೂತನ ಆವಿಷ್ಕಾರ, ವಿದ್ಯುತ್ ಶಕ್ತಿಯ ಸದ್ಬಳಕೆ ಇದರ ಮೂಲಕ ಮನುಕುಲಕ್ಕೆ ಆಗುತ್ತಿರುವ ಪ್ರಯೋಜನಗಳ ಬಗ್ಗೆ, ವಿದ್ಯಾರ್ಥಿಗಳು ಹಾಗೂ ಯುವಕರು ಇದರ ಬಗ್ಗೆ ಆಸಕ್ತಿ ವಹಿಸಿ ಹೊಸ ಹೊಸ ಆವಿಷ್ಕಾರಗಳನ್ನು ಕಂಡುಹಿಡಿಯಬೇಕೆಂದರು.
ಹಲವು ವರ್ಷಗಳಿಂದ ವಿದ್ಯುತ್ ಕೊರತೆಯಿಂದ ಕಂಗೆಟ್ಟಿದ್ದ ಭಾರತ ಕಳೆದ ಕೆಲವು ವರ್ಷಗಳಿಂದ ಮಿಗತೆ ವಿದ್ಯುತ್ ಉತ್ಪಾದನೆಯನ್ನು ಸಾಧಿಸುತ್ತಿದೆ. ಸೋಲಾರ್ ಹಾಗೂ ವಾಯು ವಿದ್ಯುತ್ ಕ್ಷೇತ್ರಗಳಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿದೆ ಎಂದರು.
ಎಲ್‍ಇಡಿ ದೀಪ ಯೋಜನೆ ಸೇರಿದಂತೆ ಹಲವು ಹೆಜ್ಜೆಗಳು ವಿದ್ಯುತ್ ಕ್ಷೇತ್ರದಲ್ಲಿ ದೇಶವನ್ನು ಮುನ್ನುಗ್ಗುವಂತೆ ಮಾಡಿವೆ. ಅಸಾಂಪ್ರದಾಯಿಕ ಇಂಧನ ಉತ್ಪಾದನೆ, ವಿದ್ಯುತ್‍ಚಾಲಿತ ವಾಹನಗಳೂ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಂಶೋಧನ ಯೋಜನೆಗಳು ನಡೆಯುತ್ತಿವೆ ಎಂದು ಹೇಳಿದರು.
ನಮ್ಮ ಬದುಕಿಗೆ ಮೂಲವಾಗಿರುವ ಗಾಳಿ, ನೀರು, ಬೆಳಕುಗಳೇ ಮರುಬಳಕೆಯಾಗುವ ಇಂಧನಕ್ಕೆ ಕೂಡ ಮೂಲವಾಗಿರುವುದು ಅಚ್ಚರಿಯ ಸಂಗತಿ. ಜಲಚಕ್ರಗಳು, ಗಾಳಿಯಂತ್ರಗಳು, ಸೋಲಾರ್ ಪ್ಯಾನಲ್‍ಗಳು ಭವಿಷ್ಯದ ಇಂಧನಕ್ಷೇತ್ರದ ಬಹುಪಾಲನ್ನು ಪೂರೈಸಲಿವೆ. ಈ ಮೂಲಗಳಿಂದ ಉತ್ಪಾದಿಸಿದ ಇಂಧನಗಳು ಪ್ರಕೃತಿಸಂಪತ್ತನ್ನು ಉಳಿಸುವುದಲ್ಲದೆ, ಮಾಲಿನ್ಯವನ್ನೂ ಕಡಮೆಯಾಗಿಸುತ್ತವೆ. ಉರುವಲು ಒಲೆಯನ್ನು ಕಡಮೆಗೊಳಿಸಿ, ಅಡುಗೆ ಅನಿಲವನ್ನು ಬಳಸಲು ಆರಂಭಿಸಿದ್ದು ಮಾಲಿನ್ಯ ತಡೆಯ ಒಂದು ಮೆಟ್ಟಿಲು. ವಿದ್ಯುತ್ ಬಳಸುವ ಇಂಡಕ್ಷನ್ ಒಲೆ ಇನ್ನೊಂದು ಮೆಟ್ಟಿಲಾಗಲಿದೆ. ಜೈವಿಕ ಇಂಧನಗಳ ಬಳಕೆ ಕೂಡ ಸ್ವಚ್ಛ ಇಂಧನದ ಪಾಲಿಗೆ ಅತಿ ದೊಡ್ಡ ಕೊಡುಗೆಯಾಗಲಿದೆ ಎಂದು ತಿಳಿಸಿದರು.
ಹೊಸದಾಗಿ ಪರಿಚಯವಾಗಿರುವ ಎಲೆಕ್ಟ್ರಿಕಲ್ ಬೈಕ್ ಮತ್ತು ಕಾರುಗಳು, ಮನೆಗಳಲ್ಲಿ ಬಳಸುವ ವಿದ್ಯುತ್, ವಾಹನಗಳಿಗೆ ಬಳಸುವ ಪೆಟ್ರೋಲ್, ಡೀಸೆಲ್, ನೀರು, ಕಲ್ಲಿದ್ದಲು, ಗಾಳಿ ಮುಖಾಂತರ ಉತ್ಪಾದನೆಯಾಗುವ ವಿದ್ಯುತ್ ಬಗ್ಗೆ ಅತ್ಯುತ್ತಮವಾಗಿ ಈ ಕಾರ್ಯಾಗಾರದಲ್ಲಿ ಕಲಿತಿರುವುದಾಗಿ ವಿದ್ಯಾರ್ಥಿಗಳು ತಿಳಿಸಿದ್ದಾರೆ ಎಂದರು.
ಇದೇ ವೇಳೆ ಎರಡು ದಿನಗಳ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಮುರಳೀಧರ ಹಾಲಪ್ಪ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥ ಡಾ.ಎಲ್.ಸಂಜೀವ್‍ಕುಮಾರ್, ಎನರ್ಜಿಕ್ಲಬ್ ಸಂಯೋಜಕ ಪ್ರೊ.ಎನ್. ಪ್ರದೀಪ್, ಡಾ.ಅಶೋಕ್ ಮೆಹ್ತಾ, ಡಾ.ಆರ್.ಪ್ರಕಾಶ್, ರಮೇಶ್, ಅರುಣ್‍ಕುಮಾರ್ ಮುಂತಾದವರು ಹಾಜರಿದ್ದರು.