ಬಿಸಿ ಊಟ ನೌಕರರಿಗೆ ಪಿಂಚಣಿ ನೀಡಲು ಮನವಿ

ತುಮಕೂರು : 20 ವರ್ಷ ಬಿಸಿಯೂಟ ಯೋಜನೆಯ ಅಭಿವೃದ್ಧಿಗೆ ದುಡಿದ 6000 ಮಹಿಳೆಯರನ್ನು ನಿವೃತ್ತಿ ಹೆಸರಿನಲ್ಲಿ ಕೆಲಸದಿಂದ ಯಾವುದೇ ಸೌಲಭ್ಯ ನೀಡದೇ ಕೈಬಿಡಲಾಗಿದೆ. ಇವರಿಗೆ ನಿವೃತ್ತಿ ವೇತನ ಅಥವಾ ಇಡಿಗಂಟು ನೀಡಿ ಬಿಡುಗಡೆ ಮಾಡಲು ಮತ್ತು ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಜಿ. ಪಂ. ಸಿಇಒಗೆ ಮನವಿ ಸಲ್ಲಿಸಿತು.

ಸಿಐಟಿಯುನ ಅಧ್ಯಕ್ಷೆ ನಾಗರತ್ನ ಮಾತನಾಡಿ ಒಂಟಿ ಮಹಿಳೆಯರು, ವಿಚ್ಚೇದಿತರು, ಕಡು ಬಡವರಾಗಿರುವ ಮಹಿಳೆಯರನ್ನು 60 ವರ್ಷದ ನೆಪದಲ್ಲಿ ಖಾಲಿ ಕೈಯಲ್ಲಿ ಮನೆಗೆ ಕಳುಹಿಸಿದರೆ ಮುಂದಿನ ಜೀವನದ ಪ್ರಶ್ನೆ ಏನು? 6000 ನೌಕರರಿಗೆ ನಿವೃತ್ತಿ ವೇತನ 1 ಲಕ್ಷ ರೂ ನೀಡಬೇಕು ಹಾಗೂ ನಿವೃತ್ತಿ ಹೊಂದಿದ ಎಲ್ಲ ಬಿಸಿಯೂಟ ಮಹಿಳೆಯರಿಗೆ ಪಿಂಚಣಿ ನೀಡಬೇಕು. 2022 ಮಾ. 31 ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸಲು ಹೊರಡಿಸಿರುವ ಸುತ್ತೋಲೆಯನ್ನು ಬದಲಾಯಿಸಿ 2022 ಏ.10 ಕ್ಕೆ ಮರು ಆದೇಶ ನೀಡಬೇಕು, ರಾಜ್ಯದಲ್ಲಿ ಶಿಕ್ಷಣ ಇಲಾಖೆಯ ಶಿಫಾರಸ್ಸಿನಂತೆ ರೂ.6000 ಮತ್ತು ರೂ.5000 ಹೆಚ್ಚಳ ಮಾಡಬೇಕು, ಬಜೆಟ್ನಲ್ಲಿ ಈ ನೌಕರರಿಗೆ ಹೆಚ್ಚಳ ಮಾಡಿದ ರೂ. 1000 ವೇತನವನ್ನು ಜ. 2023 ರಿಂದ ಅನ್ವಯಿಸಿ ಜಾರಿಮಾಡಬೇಕು ಎಂದು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ವರಲಕ್ಷ್ಮಿ ಮಾತನಾಡಿ, ಬಿಸಿಯೂಟ ಯೋಜನೆಯನ್ನು ಖಾಯಂ ಮಾಡಬೇಕು. ಖಾಯಂ ಮಾಡುವ ತನಕ 45 ಮತ್ತು 46ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರೆಂದು ಗುರುತಿಸಬೇಕು, ಬಿಸಿಯೂಟ ಯೋಜನೆಯನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಕೊಡಬಾರದು, ಕೆಲಸದ ಅವಧಿಯನ್ನು 4 ಗಂಟೆಯಿಂದ 6 ಗಂಟೆಗೆ ಅಕ್ಷರದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು, ಶಾಲೆಗಳಲ್ಲಿ ಗ್ರೂಪ್ “ಡಿ” ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾ ಸ್ವಚ್ಛತೆ, ಕೈತೊಟ ನಿರ್ವಹಣೆ, ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ ನೌಕರರಿಗೆ ಶಾಲಾ ಸಿಬ್ಬಂದಿಗಳೆಂದು ನೇಮಿಸಿ ನೇಮಕಾತಿ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.

ಬೇಸಿಗೆ ಮತ್ತು ದಸರಾ ರಜೆಗಳ ವೇತನವನ್ನು ಕಡ್ಡಾಯವಾಗಿ ನೀಡಬೇಕು, ಶಾಲಾ ಅವಧಿಯ ನಂತರ ನರೆಗಾ ಯೋಜನೆ ಅಡಿ ಶಾಲಾ ಕೈತೋಟದ ಕೆಲಸ ಇವರಿಗೆ ನೀಡಿ ಈ ಯೋಜನೆಯಿಂದ ವೇತನ ನೀಡಬೇಕು, ಬಿಸಿಯೂಟ ನೌಕರರನ್ನು ನೇರವಾಗಿ ಶಿಕ್ಷಣ ಇಲಾಖೆಯ ಅಡಿಯಲ್ಲಿಯೇ ಮೇಲ್ವಿಚಾರಣೆ ನಡೆಸಬೇಕು, ಅಪಘಾತದಲ್ಲಿ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು, ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು ಎಂದು ಒತ್ತಾಯಿಸಿದರು. ಶಾಲಾ ಮುಖ್ಯ ಶಿಕ್ಷಕರು ಮತ್ತು ಅಡುಗೆಯವರ ನಡುವೆ ಇರುವ ಸಾದಿಲ್ವಾರು ಜಂಟಿ ಖಾತೆಯನ್ನು ಶಾಲಾ ಶಿಕ್ಷಕರು ಮತ್ತು ಎಸ್.ಡಿ.ಎಮ್.ಸಿ. ಸಮಿತಿಯೊಂದಿಗೆ ನೀಡಲು ಆದೇಶ ಹೊರಡಿಸಿದೆ ಇದರಿಂದ ಅಡುಗೆ ನೌಕರರ ಮೇಲೆ ಹೆಚ್ಚಿನ ದಬ್ಬಾಳಿಕೆ ನಡೆಯುತ್ತಿದೆ. ಸರ್ಕಾರ ಮರುಪರಿಶೀಲನೆ ಮಾಡಿ ಈ ಹಿಂದೆ ಇರುವ ಜಂಟಿ ಖಾತೆಯ ಪ್ರಕಾರ ಮುಖ್ಯ ಅಡುಗೆಯವರು ಹಾಗೂ ಮುಖ್ಯಶಿಕ್ಷಕರ ಜಂಟಿ ಖಾತೆಯನ್ನು ಪುನ: ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ಖಜಾಂಚಿ ನಾಗರತ್ನಮ್ಮ, ಸಿಐಟಿಯುನ ಜಯಲಕ್ಷ್ಮಮ್ಮ, ಬಿ.ರಾಜಮ್ಮ, ಜಯಮ್ಮ, ಲಕ್ಷ್ಮಮ್ಮ, ಮಂಜಮ್ಮ, ಅನುಸೂಯಮ್ಮ, ಸರಸ್ವತಮ್ಮ, ನೇತ್ರಾವತಿ, ಕಮಲ ಮತ್ತಿತರರಿದ್ದರು.

Leave a Reply

Your email address will not be published. Required fields are marked *