
ತುಮಕೂರು : ತುಮಕೂರಿನಲ್ಲಿ ಉಷ್ಣಾಂಶವು 38 ಡಿಗ್ರಿ ಸೆಲ್ಸಿಯಸ್ ಮುಟ್ಟಿದ್ದು, ಬಿಸಿಲ ಬೇಗೆಗೆ ಜನ, ಪ್ರಾಣಿ ಪಕ್ಷಿಗಳು ತತ್ರರಿಸಿದ್ದಾರೆ.
ಬೆಳಗಿನ 8 ಗಂಟೆಗೆ ಬಿಸಿಲು ಚರ್ಮ ಸುಡುವಂತಹ ತಾಪದ ಜೊತೆಗೆ ಹೊರಗೆ ಬರಲು ಯೋಚಿಸುವಂತಾಗಿದೆ, ಹತ್ತು ಗಂಟೆಗೆಲ್ಲಾ 32 ರಿಂದ 34 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿರುತ್ತದೆ, ಸೂರ್ಯ ಮೇಲೇರಿದಂತೆ ಉಷ್ಣಾಂಶದಲ್ಲೂ ಏರಿಕೆ ಕಾಣಿಸಿಕೊಂಡು ಸಾಕಷ್ಟು ನೀರು ಕುಡಿದರು, ಬಾಯಾರಿಕೆಯ ಜೊತೆಗೆ ಬಳಲಿಕೆ ಕಂಡು ಬರುತ್ತದೆ.
ಮಧ್ಯಾಹ್ನ 2 ಗಂಟೆಯ ವೇಳೆಗೆ 38 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮುಟ್ಟಲಿದ್ದ್ದು, ಈ ವೇಳೆಯಲ್ಲಿ ಹೊರಗೆ ಓಡಾಡಲು ಆಗದಂತಹ ಬಿಸಿ ಮತ್ತು ಮೈಯೆಲ್ಲಾ ಉರಿ ಉರಿ ಆಗುವಂತಹ ಭಾಸವಾಗುತ್ತದೆ.
ಮನೆ, ಕಛೇರಿಗಳಲ್ಲಿ ದಿನವಿಡಿ ಪ್ಯಾನ್ ಮತ್ತು ಏರ್‍ಕೂಲರ್‍ಗಳನ್ನು ಹಾಕಿಯೇ ಇರುತ್ತಾರೆ. ಬಿಸಿಲ ಧಗೆ ಮತ್ತು ಬಾಯಾರಿಕೆಯನ್ನು ತಣಿಸಿಕೊಳ್ಳಲು ಜನರು ತಂಪು ಪಾನಿಯಗಳ ಮೊರೆ ಹೋದರೆ, ಪ್ರಾಣಿ ಪಕ್ಷಗಳು ನೀರಿನಲ್ಲಿ ಸ್ನಾನ ಮಾಡುವ ದೃಶ್ಯಗಳು ಅಲ್ಲಲ್ಲಿ ಕಂಡು ಬರುತ್ತಿವೆ.
ಇಂತಹ ಏರು- ಉರಿ ಬಿಸಿಲಿನಲ್ಲಿ ಚುನಾವಣೆ ಬಂದಿದ್ದು, ಅಭ್ಯರ್ಥಿಗಳು ಈ ಬಿಸಿಲಿನಲ್ಲಿ ಹೇಗೆ ಪ್ರಚಾರ ಮಾಡುತ್ತಾರೆ, ಕಾರ್ಯಕರ್ತರು, ಬೆಂಬಲಿಗರಿಗೆ ನೀರು ಒದಗಿಸುವುದೇ ಒಂದು ದೊಡ್ಡ ತಲೆ ನೋವಾಗಲಿದೆ ಎನ್ನಲಾಗುತ್ತಿದೆ. ಅರ್ಧ ಲೀಟರ್ ಬಾಟಲ್ ನೀರಿಗೆ ಚುನಾವಣಾ ಸಂದರ್ಭದಲ್ಲಿ ಬಾರಿ ಬೇಡಿಕೆ ಬಂದಿದೆ.
ಹಳ್ಳಿಗಳಲ್ಲಿ ಜನರ ಜೊತೆಗೆ ಜಾನುವಾರುಗಳು ನೀರು, ನೆರಳಿಗಾಗಿ ಹಾತೊರೆಯುವ ದೃಶ್ಯಗಳು ಕಂಡು ಬರುತ್ತವೆ, ಮಧ್ಯಾಹ್ನ 12ಗಂಟೆಯ ನಂತರ ಇಡೀ ವಾತವರಣವೇ ಬಿಸಿ ಗಾಳಿಯಾಗಿರುತ್ತದೆ. ಇನ್ನೂ ಒಂದು ವಾರ ಹೆಚ್ಚಿನ ತಾಪಮಾನ ಇರಲಿದೆ ಎಂದು ಹವಮಾನ ವರದಿಗಳು ಹೇಳಿದ್ದು, ಮಳೆ ಬೀಳದಿದ್ದರೆ ಉಷ್ಣಾಂಶವು ಮತ್ತಷ್ಟು ಹೆಚ್ಚಿ 40 ಡಿಗ್ರಿ ಸೆಲ್ಸಿಯಸ್ ದಾಟುವ ಸೂಚನೆಗಳಿವೆ.