ಅಮುಲ್ ಉತ್ಪನ್ನಗಳನ್ನು ಮಾರಾಟ ಖಂಡಿಸಿ ಪ್ರತಿಭಟನೆ

ತುಮಕೂರು:ಕರ್ನಾಟಕದಲ್ಲಿ ಗುಜರಾತ್‌ನ ಅಮುಲ್ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿ ರುವ ರಾಜ್ಯ ಸರಕಾರದ ಕ್ರಮವನ್ನು ಖಂಡಿಸಿ,ತುಮಕೂರು ಗ್ರಾಮಾಂತರ ಕಾಂಗ್ರೆಸ್ ವತಿಯಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ್ ಹಾಲಪ್ಪ,ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿ ಜಿ.ಹೆಚ್.ಷಣ್ಮುಖಪ್ಪ ಅವರ ನೇತೃತ್ವದಲ್ಲಿ ಮಲ್ಲಸಂದ್ರದಲ್ಲಿರುವ ತುಮುಲ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ಮಲ್ಲಸಂದ್ರ ಡೈರಿ ಬಳಿ ಸಮಾವೇಶಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು, ಸರಕಾರದ ನಡೆಯ ವಿರುದ್ದ ಘೋಷಣೆ ಕೂಗಿದರು.ಈ ವೇಳೆ ಮಾತನಾಡಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರುಳೀಧರ ಹಾಲಪ್ಪ,ಕರ್ನಾಟಕದಲ್ಲಿ ನಂದಿನಿ ಸಂಸ್ಥೆಯು ಸದೃಢವಾಗಿದೆ.ವಾರ್ಷಿಕವಾಗಿ ಸಾವಿರಾರು ಕೋಟಿ ರೂಪಾಯಿ ವ್ಯವಹಾರ ನಡೆಸುತ್ತಿದೆ. ಹಾಲು ಉತ್ಪಾದಕರು ಸೇರಿದಂತೆ ಮಾರಾಟಗಾರರು, ಗ್ರಾಹಕರು 1 ಕೋಟಿಗೂ ಹೆಚ್ಚು ಜನ ಇದರ ಪ್ರಯೋಜನ ಪಡೆಯುತ್ತಿದ್ದಾರೆ.ಈ ಸಂಸ್ಥೆಯು ಲಾಭದಲ್ಲಿಯೂ ಸಹ ಇದೆ. ಹೀಗಿರುವಾಗ ನಮ್ಮ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಅಮುಲ್ ಸಂಸ್ಥೆಯೊAದಿಗೆ ವಿಲೀನಗೊಳಿಸುವುದು,ಅಮುಲ್ ಸಂಸ್ಥೆಯು ಕರ್ನಾಟಕದಲ್ಲಿ ಹಾಲು,ಮೊಸರು ಹಾಗೂ ಇತರೆ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಅವಕಾಶ ಮಾಡಿಕೊಂಡಿರುವುದರಿಂದ ಮುದೊಂದು ದಿನ ನಂದಿನ ಸಂಸ್ಥೆ ನಷ್ಟದಲ್ಲಿದೆ ಎಂದು ಕಾರಣ ಕೊಟ್ಟು ಮುಚ್ಚುವ ಹುನ್ನಾರ ಅಡಗಿದೆ ಎಂದರು.


ಕರ್ನಾಟಕದ ರೈತರು, ಕೃಷಿಕಾರ್ಮಿಕರು ಅತೀವೃಷ್ಟಿ,ಅನಾವೃಷ್ಟಿಯಿಂದ ವ್ಯವಸಾಯ ಉತ್ಪನ್ನಗಳ ಬೆಲೆ ಕುಸಿತದಿಂದ ನಷ್ಟವಾದ ಸಂದರ್ಭದಲ್ಲಿ ಸಾಲ ಜಾಸ್ತಿಯಾಗಿ ರೈತರ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭ ಬಂದಾಗ ರೈತರು, ಕೃಷಿಕಾರ್ಮಿಕರು ಹಾಲು ಉತ್ಪಾದನೆ ಮಾಡಿ ಡೈರಿಗೆ ಹಾಕಿ ಜೀವನ ನಡೆಸಲು ಭದ್ರತೆ ಒದಗಿಸಿದೆ. ಕೆ.ಎಂ.ಎಫ್ ರೈತರಿಂದ ಕಡಿಮೆ ಬೆಲೆಗೆ ಹಾಲನ್ನು ಖರೀದಿಸಿ ಗ್ರಾಹಕರಿಗೆ ಕಡಿಮೆ ಬೆಲೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನ ಮಾರಾಟ ಮಾಡಿ ದೇಶ ವಿದೇಶಗಳಲ್ಲಿ ಸ್ಪರ್ಧೆ ಮಾಡಿ ಲಾಭಗಳಿಸಿದೆ. ಅಮುಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಮುನ್ನಡೆಸಿದಾಗ ಗ್ರಾಹಕರು ಹೆಚ್ಚಿನ ಬೆಲೆ ತೆರಬೇಕಾಗುತ್ತದೆ.ಹಾಗಾಗಿ ನಂದಿನಿ ಮತ್ತು ಅಮುಲ್ ಸಂಸ್ಥೆಗಳ ವಿಲೀನಕ್ಕೆ ಸರಕಾರ ಎಂದಿಗೂ ಅವಕಾಶ ಮಾಡಿಕೊಡಬಾರದೆಂದು ಮುರುಳೀಧರ ಹಾಲಪ್ಪ ಆಗ್ರಹಿಸಿದರು.

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಹೆಚ್.ಷಣ್ಮುಖಪ್ಪ ಮಾತನಾಡಿ,ಗುಜರಾತ್ ನ ಅಮುಲ್ ಪ್ರವೇಶದಿಂದ ನಂದಿನಿಯ ಬೇಡಿಕೆ ಇನ್ನಷ್ಟು ಕುಸಿದು ಕೆಎಂಎಫ್ ಹಾಲಿನ ಸಂಗ್ರಹ ಕಡಿಮೆಯಾಗಲಿದೆ. ಗ್ರಾಮೀಣ ಭಾಗದಲ್ಲಿ ಕೃಷಿಕರ ಪ್ರಮುಖ ಆದಾಯದ ಮೂಲವಾದ ಹೈನುಗಾರಿಕೆಗೆ ಹೊಡೆತ ಬೀಳುತ್ತದೆ.ಇತ್ತೀಚಿನ ದಿನಗಳಲ್ಲಿ ಗೊಬ್ಬರ, ಹಿಂಡಿ, ಬೂಸ, ಮೇವಿನ ಬೆಲೆಯು ಗಗನಕ್ಕೇರಿದೆ ಇದರ ನಡುವೆ ಈ ವಿಲೀನ ಪ್ರಕ್ರಿಯೆಯು ರೈತರನ್ನ ಮತ್ತಷ್ಟು ಸಂಕಷ್ಟಕ್ಕೆ ದೂಡಲಿದೆ.ನಂದಿನಿಗೆ ನಷ್ಟವಾದರೆ ಕರ್ನಾಟಕದ ಕೋಟ್ಯಂತರ ರೈತಾಪಿ ಕುಟುಂಬಗಳು ಬೀದಿಗೆ ಬರುತ್ತವೆ. ಆದ್ದರಿಂದ ನಮ್ಮ ಕರ್ನಾಟಕದ ಹೆಮ್ಮೆಯ ನಂದಿನಿ ಸಂಸ್ಥೆಯನ್ನು ಗುಜರಾತ್ ನ ಅಮುಲ್ ಸಂಸ್ಥೆಯೊಂದಿಗೆ ವಿಲೀನಗೊಳಿಸಬಾರದೆಂದು ಒತ್ತಾಯಿಸಿದರು.

ಈ ಸಂಬಂಧ ಮನವಿಯನ್ನು ತುಮುಲ್ ಅಧ್ಯಕ್ಷರಾದ ಮಹಾಲಿಂಗಯ್ಯ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಅವರಿಗೆ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ರೇವಣಸಿದ್ಧಯ್ಯ,ತುಮಕೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷರುಗಳಾದ ಕೆಂಪಣ್ಣ,ನರಸಿಂಹಮೂರ್ತಿ,ಮಹಿಳಾ ಘಟಕದ ಯಶೋದ, ರತ್ನಮ್ಮ,ಮುಖಂಡರುಗಳಾದ ಮಂಜುನಾಥ್, ಮರಿಚೆನ್ನಮ್ಮ, ರಮೇಶ್,ಜಗದೀಶ್,ಸದಾನಂದಗೌಡ, ಸುರೇಶ್, ಪ್ರಕಾಶ್ , ಬಾಬು, ಶಿವಣ್ಣ, ಜುಂಜಪ್ಪ ಹಾಗೂ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *