
ತುಮಕೂರು : ತುಮಕೂರು ಗ್ರಾಮಾಂತರ ಬಿಜೆಪಿಯ ರಾಜಕಾರಣಿಯೊಬ್ಬರು ಮಂತ್ರಿಯಾಗಲು ನನಗೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಆರೋಪಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ, ರಾಜೀನಾಮೆ ಪತ್ರವನ್ನು ಇ-ಮೇಲ್ ಮೂಲಕ ರಾಜ್ಯಾಧ್ಯಕ್ಷರಿಗೆ ಕಳಿಸಿರುವುದಾಗಿ ತಿಳಿಸಿದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿ ಬಿಜೆಪಿಯನ್ನು ಹಾಳು ಮಾಡುತ್ತಿರುವ ಸಂಸದ ಜಿ.ಎಸ್.ಬಸವರಾಜು, ಸಚಿವ ಮಾಧುಸ್ವಾಮಿಯವರನ್ನು ಸೋಲಿಸಲು ಕೆ.ಎಸ್.ಕಿರಣ್‍ಕುಮಾರ್ ಅವರನ್ನು ಕಾಂಗ್ರೆಸ್‍ಗೆ ಕಳುಹಿಸಿದ್ದಾರೆ ಎಂದು ಶಿವಣ್ಣನವರು ನೇರವಾಗಿ ಆರೋಪಿಸಿದರು.
ಇವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರಿಂದ ಬಿಜೆಪಿ ಕಾರ್ಯಕರ್ತರು ಬೀದಿಗೆ ಭೀಳುವಂತಾಗಿದೆ, ಜಿಲ್ಲೆಯಲ್ಲಿ ಬಿಜೆಪಿಯನ್ನು ಹಾಳು ಮಾಡಲು ಒಬ್ಬರ ಮೇಲೆ ಒಬ್ಬರನ್ನು ಎತ್ತಿ ಕಟ್ಟುತ್ತಿದ್ದಾರೆ ಎಂದ ಶಿವಣ್ಣನವರು, ಬಿಜೆಪಿಗೆ ಬಂದವರು ಪಕ್ಷದ ಪ್ರಾಮಾಣಿಕ ಕಾರ್ಯಕರ್ತರನ್ನು ಹೊರ ದಬ್ಬಿ, ದೇವಸ್ಥಾನದಲ್ಲಿ ಕೂತು ವ್ಯವಹಾರ ಮಾಡುತ್ತಿದ್ದಾರೆ, ಇದನ್ನೆಲ್ಲಾ ನೋಡಿಕೊಂಡು ಕಣ್ಣು ಮುಚ್ಚಿ ಕುಳಿತುಕೊಳ್ಳಲು ಆಗುವುದಿಲ್ಲ, ಹೋರಾಟಕ್ಕಾಗಿ ಹುಟ್ಟಿದ್ದೇನೆ, ಹೋರಾಟ ಮಾಡುತ್ತೇನೆ ಎಂದರು.
ಚುನಾವಣೆಗೆ ಸ್ಪರ್ಧಿಸುವುದು ಖಚಿತ, ಅದು ಪಕ್ಷೇತರರಾಗಿಯೋ, ಅಥವಾ ಯಾವುದಾದರೂ ಪಕ್ಷ ಸೇರ್ಪಡೆಯಾಗಿ ಸ್ಪರ್ಧಿಸುವುದೋ ಎಂಬುದನ್ನು ಒಂದೆರಡು ದಿನದಲ್ಲಿ ನನ್ನ ಅಭಿಮಾನಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬ್ರಹ್ಮಾಂಡ ಭ್ರಷ್ಟಚಾರ ನಡೆದಿದ್ದು, ಚುನಾವಣೆ ಮುಗಿದ ನಂತರ ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ ಎಂದರು.
ನನಗೆ ಭ್ರಷ್ಟಚಾರ, ಸ್ವಜನಪಕ್ಷಪಾತ ತಿಳಿದಿಲ್ಲ, ನನಗೆ ಯಾವುದೇ ಜಾತಿ ಇಲ್ಲ, ಇದರಿಂದ ನನ್ನನ್ನು ಎಲ್ಲರೂ ಪ್ರೀತಿಸುತ್ತಾರೆ, ಈ ಹಿನ್ನಲೆಯಲ್ಲಿ ನಾನು ಚುನಾವಣೆಗೆ ನಿಲ್ಲುವುದು ಖಚಿತ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಯಸಿಂಹರಾವ್, ಪುಟ್ಟಸ್ವಾಮಿ, ಧನಿಯಾಕುಮಾರ್, ಶಾಂತರಾಜು, ಚೌಡೇಶ್, ಶಬ್ಬೀರ್ ಅಹ್ಮದ್, ನರಸಿಂಹಯ್ಯ, ರಾಜಕುಮಾರ್ ಮುಂತಾದವರಿದ್ದರು.